ಭಾರತದ ಪತ್ರಕರ್ತರಿಗೆ ಚೀನಾ ನೆಲದಿಂದ ಗೇಟ್ ಪಾಸ್? ಕಾರಣ ಏನು?
ಬೀಜಿಂಗ್: ಅಕ್ಕಪಕ್ಕದ ದೇಶಗಳಾದರೂ ಭಾರತ ಮತ್ತು ಚೀನಾ ಮಧ್ಯೆ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೆ ಮತ್ತೆ ಪಕ್ಕಾ ಅಗುತ್ತಿದೆ. ಇದೀಗ ಚೀನಾ ತನ್ನ ನೆಲದಲ್ಲಿರುವ ಭಾರತದ ಕೊನೆಯ ಪತ್ರಕರ್ತನಿಗೂ ದೇಶ ಬಿಡುವಂತೆ ಆದೇಶ ನೀಡಿದೆ ಅನ್ನೋ ಮಾಹಿತಿ ಸಿಕ್ಕಿದೆ. ಇದು ಎರಡೂ ದೇಶಗಳ ನಡುವೆ ಗಡಿ ಗಲಾಟೆಯ ಮಧ್ಯೆ ಮತ್ತೊಂದು ಕಿಡಿ ಹೊತ್ತಿಸಿದೆ.
ಇಷ್ಟುದಿನ ಗಡಿ ವಿಚಾರದಲ್ಲಿ ಕಿರಿಕ್ ಮಾಡಿಕೊಳ್ಳುತ್ತಿದ್ದ ಭಾರತ & ಚೀನಾ ಮಧ್ಯೆ ಮಾಧ್ಯಮ ಸಮರ ತಾರಕಕ್ಕೇರಿದೆ. ಭಾರತದ ವಿರುದ್ಧ ನಿರ್ಧಾರ ತೆಗೆದುಕೊಳ್ಳಲು ಹೊರಟಿರುವ ಚೀನಾ, ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೊನೆಯ ಭಾರತೀಯ ಪತ್ರಕರ್ತನನ್ನೂ ಹೊರಗಡೆ ಕಳಿಸಲು ತೀರ್ಮಾನಿಸಿದೆ. ತಿಂಗಳ ಅಂತ್ಯಕ್ಕೆ ಚೀನಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೊನೆಯ ಭಾರತೀಯ ಪತ್ರಕರ್ತ ಕೂಡಾ ಚೀನಾ ಬಿಟ್ಟು ಭಾರತಕ್ಕೆ ವಾಪಸ್ ಬರಬೇಕಿದೆ. ಈ ಮೂಲಕ ಚೀನಾದ ಆದೇಶ ಎರಡೂ ರಾಷ್ಟ್ರಗಳ ಸ್ನೇಹ ಮತ್ತು ಸಂಬಂಧಕ್ಕೆ ಕೊಳ್ಳಿ ಇಟ್ಟಂತಾಗಿದೆ (India China Border Dispute).

ಜಗಳ ಶುರುವಾಗಿದ್ದೇ ವಿಪರ್ಯಾಸ!
2023ರ ಆರಂಭದಲ್ಲಿ ಚೀನಾದಲ್ಲಿ ನಾಲ್ವರು ಭಾರತೀಯ ಪತ್ರಕರ್ತರು ಇದ್ದರು. ಆದ್ರೆ ಇಬ್ಬರು ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಬಂದು ವಾಪಸ್ಸಾಗುವ ವೇಳೆ ನಿರ್ಬಂಧ ಹೇರಿದ್ದ ಚೀನಾ, ಅವರ ವೀಸಾ ರದ್ದು ಮಾಡಿತ್ತು. ಈ ಘಟನೆ ನಂತರ ಕಳೆದ ವಾರ ಮತ್ತೊಬ್ಬ ಪತ್ರಕರ್ತನೂ ಚೀನಾ ರಾಜಧಾನಿ ಬೀಜಿಂಗ್‌ನಿಂದ ವಾಪಸ್ ಬಂದಿದ್ದರು. ಇದೀಗ ಕೇವಲ ಒಬ್ಬ ಭಾರತೀಯ ಪತ್ರಕರ್ತ ಚೀನಾ ನೆಲದಲ್ಲಿದ್ದು, ಅವರೂ ಜೂನ್ ತಿಂಗಳ ಅಂತ್ಯಕ್ಕೆ ವಾಪಸ್ ಬರಲಿದ್ದಾರೆ. ಇದಕ್ಕೆಲ್ಲಾ ಕಾರಣ ಚೀನಾ ಸರ್ಕಾರದ ನಿರ್ಧಾರ ಅನ್ನೋ ಆರೋಪ ಕೇಳಿಬಂದಿದೆ. ಇಂಥ ಬೆಳವಣಿಗೆ ಭಾರತ & ಚೀನಾದ ಸ್ನೇಹಕ್ಕೆ ಕಿಚ್ಚು ಹಚ್ಚುತ್ತಿವೆ.
ಪಿಟಿಐ ಪತ್ರಕರ್ತ ಭಾರತಕ್ಕೆ ಬರಬೇಕಾ?
ಈಗ ಚೀನಾದಲ್ಲಿ ಇರುವುದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಸುದ್ದಿ ಸಂಸ್ಥೆ ಅಂದರೆ ಪಿಟಿಐನ ವರದಿಗಾರ ಮಾತ್ರ. ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಪಿಟಿಐ ರಿಪೋರ್ಟರ್. ಆದರೆ ಪಿಟಿಐ ಪತ್ರಕರ್ತ ಕೂಡ ಜೂನ್ ಕೊನೆಗೆ ಭಾರತಕ್ಕೆ ಮರಳಬೇಕಿದೆ. ಏಕೆಂದರೆ ವೀಸಾ ಅವಧಿ ಮುಕ್ತಾಯವಾಗುತ್ತಿದ್ದು, ವೀಸಾ ನವೀಕರಣಕ್ಕೆ ಚೀನಾದಿಂದ ಒಪ್ಪಿಗೆ ಸಿಕ್ಕಿಲ್ಲ ಎಂದು ಬ್ಲೂಮ್‌ಬರ್ಗ್ ವರದಿಯಲ್ಲಿ ತಿಳಿಸಲಾಗಿದೆ. ಹೀಗೆ ಜೂನ್ ತಿಂಗಳ ಅಂತ್ಯಕ್ಕೆ ಪಿಟಿಐ ವರದಿಗಾರ ಸ್ವದೇಶಕ್ಕೆ ವಾಪಸ್ ಆಗುವ ಮೂಲಕ ವಿಶ್ವದ 2ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾದಲ್ಲಿ ಭಾರತದ ಮಾಧ್ಯಮ ಪ್ರತಿನಿಧಿ ಇಲ್ಲದಂತಾಗುತ್ತದೆ.

ಚೀನಾಗೆ ಸಿಟ್ಟು ಬಂದಿದ್ದು ಏಕೆ?
ಹೌದು, ಇಂತಹ ನಿರ್ಧಾರದ ಹಿಂದಿರುವ ಬಲವಾದ ಕಾರಣ ಏನು? ಚೀನಾಗೆ ಇಷ್ಟೊಂದು ಸಿಟ್ಟು ಬರಲು ಕಾರಣ ಏನು? ಅನ್ನೋ ಪ್ರಶ್ನೆ ಮೂಡಿದೆ. ಚೀನಾದ ಪರ್ತಕರ್ತರಿಗೆ ಭಾರತ ಅನ್ಯಾಯ ಮಾಡುತ್ತಿದೆ, ಸೌಲಭ್ಯ ನೀಡಿಕೆಯಲ್ಲಿ ತಾರತಮ್ಯ ಮಾಡುತ್ತಿದೆ ಅನ್ನೋದು ಚೀನಾ ವಾದ. ಆದರೆ ಚೀನಾದ ಈ ಆರೋಪದಲ್ಲಿ ಯಾವುದೇ ಸತ್ಯ ಇಲ್ಲ ಎಂದು ಭಾರತ ಕೂಡ ಸ್ಪಷ್ಟವಾಗಿ ಹೇಳುತ್ತಿದೆ. ಬೀಜಿಂಗ್‌ನ ಈ ವಾದವನ್ನ ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಳ್ಳಿ ಹಾಕಿದ್ದಾರೆ. ಇಷ್ಟೆಲ್ಲದರ ನಡುವೆಯೂ ಚೀನಾ, ಭಾರತದ ಮಧ್ಯೆ ಮಾಧ್ಯಮಗಳ ವಿಚಾರಕ್ಕೆ ದೊಡ್ಡ ಕಿರಿಕ್ ನಡೆಯುತ್ತಿರುವುದು ವಿಪರ್ಯಾಸ.
ಕಿರಿಕ್ ಶುರುವಾಗಿದ್ದು ಹೇಗೆ ಗೊತ್ತಾ?
ಕೆಲ ಮಾಧ್ಯಮಗಳ ವರದಿ ಪ್ರಕಾರ ಚೀನಾದಲ್ಲಿ ಭಾರತೀಯ ಮಾಧ್ಯಮ ಸಂಸ್ಥೆಗಳು ಸ್ಥಳೀಯ ವರದಿಗಾರರನ್ನು ನೇಮಕ ಮಾಡಿಕೊಳ್ಳಲು ನಿರ್ಬಂಧವಿತ್ತು. ಜೊತೆಗೆ ಭಾರತೀಯ ಮೂಲದ ವರದಿಗಾರರು ವರದಿ ಮಾಡಲು ಹಲವು ನಿರ್ಬಂಧ ಹೇರಿತ್ತು. ಅದ್ರಲ್ಲೂ ಸರ್ಕಾರದ ಅನುಮತಿ ಇಲ್ಲದೆ ದೇಶದೊಳಗೆ ಪ್ರಯಾಣಿಸಲು ನಿರ್ಬಂಧವಿತ್ತು. ಅಲ್ಲದೆ ಭಾರತೀಯ ಮಾಧ್ಯಮಗಳು ಸ್ಥಳೀಯ ಚೀನಾ ಪ್ರಜೆಗಳನ್ನು ವರದಿಗಾರರನ್ನಾಗಿ ನೇಮಕ ಮಾಡಿಕೊಳ್ಳುವಾಗ 3ಕ್ಕಿಂತ ಹೆಚ್ಚು ಜನರನ್ನು ನೇಮಕ ಮಾಡಿಕೊಳ್ಳಬಾರದು ಎಂದು ಷರತ್ತು ವಿಧಿಸಿತ್ತು ಅನ್ನೋ ಆರೋಪವಿದೆ. ಇಷ್ಟೆಲ್ಲದರ ನಡುವೆ ಎರಡೂ ರಾಷ್ಟ್ರಗಳ ನಡುವೆ ಕಿರಿಕ್ ಶುರುವಾಗಿದೆ.
ಇಷ್ಟು ಮಾತ್ರವಲ್ಲದೆ ಚೀನಾ ಪ್ರಜೆಗಳನ್ನು ವರದಿಗಾರರನ್ನಾಗಿ ನೇಮಕ ಮಾಡಿದ್ದರೂ ಅಂಥ ಪತ್ರಕರ್ತರು ಕೂಡಾ ಚೀನಾ ಆಡಳಿತ ನೀಡುವ ವಾಹನ ಸೇವೆಯನ್ನೇ ಪಡೆದು ನಿಗದಿತ ಸ್ಥಳಕ್ಕೆ ಮಾತ್ರ ಪ್ರಯಾಣ ಮಾಡಬೇಕಿತ್ತು. ಆದರೆ ಭಾರತದಲ್ಲಿ ಈ ರೀತಿ ಯಾವುದೇ ನಿರ್ಬಂಧ ಇಲ್ಲ ಎಂದು ಬ್ಲೂಮ್‌ಬರ್ಗ್ ವರದಿ ತಿಳಿಸಿತ್ತು. ಇಷ್ಟೆಲ್ಲಾ ಕಿತ್ತಾಟದ ನಡುವೆ ಚೀನಾ, ಭಾರತದ ಮಧ್ಯೆ ಮಾಧ್ಯಮ ವಿಚಾರಕ್ಕೆ ಕಿಚ್ಚು ಹೊತ್ತಿದೆ. ಇದೀಗ ಈ ವಿಚಾರಕ್ಕೆ ವಿಶ್ವ ಸಮುದಾಯ ಬೇಸರ ವ್ಯಕ್ತಪಡಿಸುತ್ತಿದೆ.












Click it and Unblock the Notifications