Heavy Rain: 140 ವರ್ಷದಲ್ಲೇ ಇಂತಹ ಮಹಾಮಳೆ ಬಿದ್ದಿಲ್ಲ!
ಬೀಜಿಂಗ್: ಮಳೆ ರೌದ್ರಾವತಾರಕ್ಕೆ ಚೀನಾ ಬೆಚ್ಚಿಬಿದ್ದಿದೆ. ಅದರಲ್ಲೂ ಚೀನಾದ ರಾಜಧಾನಿ ಪ್ರವಾಹಕ್ಕೆ ಕೊಚ್ಚಿ ಹೋಗಿದೆ. ಜನರು ನರಳುತ್ತಿದ್ದು, ಚೀನಾ ಸರ್ಕಾರವು ಕೂಡ ಪರಿಸ್ಥಿತಿ ನಿಭಾಯಿಸಲು ಪರದಾಡುತ್ತಿದೆ. ಇದೇ ಹೊತ್ತಲ್ಲಿ ವಿಜ್ಞಾನಿಗಳು ಮತ್ತೊಂದು ಆಘಾತಕಾರಿ ವಿಚಾರ ತಿಳಿಸಿದ್ದು, ಚೀನಾ ಪ್ರಜೆಗಳು ಬೆಚ್ಚಿಬಿದ್ದಿದ್ದಾರೆ.
ಅಂದಹಾಗೆ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಕಳೆದ ಶನಿವಾರದಿಂದ ಇಲ್ಲಿಯವರೆಗೂ 744.8 ಮಿಲಿ ಮೀಟರ್ ಅಂದ್ರೆ 29.3 ಇಂಚು ಮಳೆ ಬಿದ್ದಿದೆ. ಇದು ಬರೋಬ್ಬರಿ 140 ವರ್ಷದಲ್ಲೇ ಅತ್ಯಧಿಕ ಮಳೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಡೊಕ್ಸುರಿ ಚಂಡಮಾರುತದ ಪರಿಣಾಮ ಚೀನಾ ನಲುಗಿದೆ. ದಕ್ಷಿಣ ಚೀನಾ ಪ್ರಾಂತ್ಯದಿಂದ ಉತ್ತರ ಚೀನಾದ ಕಡೆಗೆ ಸೈಕ್ಲೋನ್ ಚಲಿಸಿದ ಪರಿಣಾಮ ಬೀಜಿಂಗ್ ಹಾಗೂ ಹೆಬೈ ಸುತ್ತಮುತ್ತ 140 ವರ್ಷದಲ್ಲೇ ಅತ್ಯಧಿಕ ಮಳೆ ಬಿದ್ದಿದೆ.

ಭೀಕರ ಮಳೆಗೆ ಬಲಿಯಾದವರು ಎಷ್ಟು?
ಪ್ರವಾಹದ ಪರಿಣಾಮ ಹೇಗಿದೆ ಅಂದ್ರೆ ಚೀನಾದಲ್ಲಿ ಎಲ್ಲವೂ ಅಲ್ಲೋಲ ಕಲ್ಲೋಲವಾಗಿದೆ. ವಿದ್ಯುತ್ ಅಭಾವದ ಜೊತೆಗೆ ಕುಡಿಯುವ ನೀರಿನ ಪೂರೈಕೆ ಕೂಡ ನಿಂತು ಹೋಗಿದೆ. ಈ ಸಮಸ್ಯೆಗಳ ಜೊತೆಗೆ ರೈಲು, ವಿಮಾನ ಪ್ರಯಾಣ ಕೂಡ ಬಂದ್ ಆಗಿದೆ. ಹೆಬೈ ಪ್ರಾಂತ್ಯದ ಝುಝೌನಲ್ಲಿ ಭಾರಿ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಹಗಲು ರಾತ್ರಿ ಎನ್ನದ ಪರಿಸ್ಥಿತಿ ನಿಭಾಯಿಸಲು ಶ್ರಮಿಸುತ್ತಿದ್ದಾರೆ. ಚೀನಾ ರಾಜಧಾನಿ ಬೀಜಿಂಗ್ ಸುತ್ತಮುತ್ತ ಹಲವು ದಿನದಿಂದ ಭಾರಿ ಮಳೆ ಬೀಳುತ್ತಿದೆ. ಪರಿಣಾಮ 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಇನ್ನೂ ಹಲವರು ನಾಪತ್ತೆಯಾಗಿದ್ದು, ಹುಡುಕಾಟ ನಡೆಯುತ್ತಿದೆ.
ಮಳೆ ಬೀಳದ ಜಾಗದಲ್ಲಿ ಭಾರಿ ಮಳೆ?
ಅಷ್ಟಕ್ಕೂ ಚೀನಾ ರಾಜಧಾನಿ ಬೀಜಿಂಗ್‌ನಲ್ಲಿ ಪ್ರತಿವರ್ಷ ಕಡಿಮೆ ಬೀಳುವುದು ವಾಡಿಕೆ. ಆದ್ರೆ ಈ ಬಾರಿ ವರುಣ ದೇವ ಬೀಜಿಂಗ್ ಮೇಲೆ ವಕ್ರ ದೃಷ್ಟಿ ನೆಟ್ಟ ಪರಿಣಾಮ ಈ ಬೇಸಿಗೆಯಲ್ಲಿ ನಿರಂತರ ಮಳೆ ಬೀಳುತ್ತಿದೆ. ಪರಿಣಾಮ ಉತ್ತರ ಚೀನಾದ ಹಲವೆಡೆ ಪ್ರವಾಹ ಉಂಟಾಗಿ ಸಾವು ನೋವು ಸಂಭವಿಸಿದೆ. ಪ್ರವಾಹ ಭೀಕರತೆ ಕಂಡು ಚೀನಾ ಜನರು ಬೆಚ್ಚಿಬಿದ್ದಿದ್ದಾರೆ. ಹಾಗೇ ನಿಲ್ಲೋ ನಿಲ್ಲೋ ಮಳೆರಾಯ ಎಂದು ಬೇಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಸರ್ಕಾರ ಕೂಡ ಅಲರ್ಟ್ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

ಮತಪಟ್ಟವರ ಬಗ್ಗೆ ಸಂಪೂರ್ಣ ಮಾಹಿತಿ ಸಿಗದೇ ಇದ್ದರೂ ಈವರೆಗೆ 20 ಜನ ಪ್ರವಾಹಕ್ಕೆ ಬಲಿಯಾಗಿರುವ ಸಾಧ್ಯತೆ ಇದೆ. ಆದರೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರನ್ನು ಸೂಕ್ತ ಹಾಗೂ ಸುರಕ್ಷಿತ ಜಾಗಗಳಿಗೆ ಸ್ಥಳಾಂತರ ಮಾಡಿದೆ ಚೀನಾ ಸರ್ಕಾರ. ಬೀಜಿಂಗ್‌ನ ಪಶ್ಚಿಮದ ಪರ್ವತಗಳಲ್ಲಿ ಪ್ರವಾಹದಿಂದ 11 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಪ್ರವಾಹದಿಂದ 5 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಸಂಸ್ಥೆ ವರದಿ ಮಾಡಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಚೀನಾ ಸರ್ಕಾರ ಖಡಕ್ ಕ್ರಮ ಕೈಗೊಂಡಿದೆ.












Click it and Unblock the Notifications