ಭಾರತ ವಿರೋಧಿ ‘ಮಾಲ್ಡೀವ್ಸ್’ ಮಕಾಡೆ: ಗೆದ್ದು ಬೀಗಿದ ಭಾರತ!
ಭಾರತ ಅಂದ್ರೆ ಇಡೀ ಜಗತ್ತೇ ತಲೆಬಾಗುತ್ತೆ ಭಾರತದ ಜೊತೆ ಸ್ನೇಹ ಮಾಡಲು ಪ್ರಪಂಚದ ಪ್ರತಿಯೊಂದು ದೇಶವೂ ಮುಂದೆ ಬರುತ್ತದೆ. ಆದರೆ ಭಾರತದ ಅನ್ನ ತಿಂದು, ಭಾರತಕ್ಕೇನೆ ಬೆನ್ನಿಗೆ ಚೂರಿ ಹಾಕಿದ್ದ ದೇಶಕ್ಕೆ ಈಗ ಸರಿಯಾದ ಪಾಠ ಕಲಿಸಿದಂತೆ ಆಗಿದೆ. ಭಾರತ ಶತ್ರು 'ಮಾಲ್ಡೀವ್ಸ್' ಮಕಾಡೆ ಮಲಗಿದ್ದು, ಆರ್ಥಿಕವಾಗಿ ಬೀದಿಗೆ ಬಿದ್ದ ನಂತರ ಭಾರತ ವಿರೋಧಿ ದೇಶ ಈಗ ಬುದ್ಧಿ ಕಲಿತಂತೆ ಕಾಣುತ್ತಿದೆ!
ಸಣ್ಣ ವಿಚಾರವನ್ನು ಕೆದಕಿ ಕೆದಕಿ ಮಾಲ್ಡೀವ್ಸ್ ದೊಡ್ಡದಾಗಿ ಮಾಡುತ್ತಿತ್ತು. ಹಾಗೇ ಮಾಲ್ಡೀವ್ಸ್ ಮಾಡುತ್ತಿರುವ ಈ ಕಿತಾಪತಿಯು ಭಾರತ & ಮಾಲ್ಡೀವ್ಸ್ ಸಂಬಂಧ ಕೂಡ ಹಾಳು ಮಾಡುತ್ತಿತ್ತು. ಹೀಗಿದ್ದಾಗಲೇ ಸುಮ್ಮನೆ ಇರದ ಮಾಲ್ಡೀವ್ಸ್‌ನ ಸೋ ಕಾಲ್ಡ್ ಹೊಸ ಅಧ್ಯಕ್ಷ ಉರಿಯುವ ಬೆಂಕಿಗೆ ಪೆಟ್ರೋಲ್ ಸುರಿಯುತ್ತಿದ್ದರು. ಪರಿಸ್ಥಿತಿ ಇಷ್ಟೆಲ್ಲಾ ಕೈಮೀರಿ ಹೋಗಿರುವಾಗಲೇ ಭಾರತ ಬಳಿ ಮತ್ತೆ ತಗ್ಗಿ & ಬಗ್ಗಿ ನಡೆಯುವ ಪರಿಸ್ಥಿತಿ ಮಾಲ್ಡೀವ್ಸ್‌ಗೆ ಬಂದಿದೆ. ಹಾಗಾದರೆ ಮಾಲ್ಡೀವ್ಸ್ & ಭಾರತದ ನಡುವೆ ಅಸಲಿಗೆ ನಡೆದಿದ್ದಾದರೂ ಏನು? ಸಂಧಾನ ಆಯ್ತಾ? ಮುಂದೆ ಓದಿ.

ಭಾರತದ ಕಾಲು ಹಿಡಿದ ಮಾಲ್ಡೀವ್ಸ್
ಅಂದಹಾಗೆ ಭಾರತದ ಜೊತೆ ಮಾಲ್ಡೀವ್ಸ್ ನಡೆಸಿದ ಮಾತುಕತೆ ಪ್ರಕಾರ, ನಾಗರಿಕ ಸೇವೆಗಳ ಸಿಬ್ಬಂದಿ ಒಳಗೊಂಡ ಭಾರತದ ತಂಡ ಮಾಲ್ದೀವ್ಸ್ ತಲುಪಿದೆಯಂತೆ. ಮಾಲ್ದೀವ್ಸ್‌ನಲ್ಲಿ ಇರುವ ಭಾರತದ ಸೇನಾ ಸಿಬ್ಬಂದಿಯನ್ನ ವಾಪಸ್ ಕರೆಸಿಕೊಳ್ಳಿ, ಇಲ್ಲವಾದರೆ ಪರಿಣಾಮ ಚೆನ್ನಾಗಿರಲ್ಲ ಅಂತಾ ಮಾಲ್ಡೀವ್ಸ್ ಆವಾಜ್ ಹಾಕುವಾಗಲೇ ಮತ್ತೆ ಬಂದು ಭಾರತದ ಕಾಲು ಹಿಡಿಯುತ್ತಿದೆ. ಅದರಲ್ಲೂ ಮಾರ್ಚ್ 10ರ ಗಡುವು ನೀಡಿ, ಸಂಪೂರ್ಣ ಸೇನೆಯನ್ನು ವಾಪಸ್ ಕರೆಸಿಕೊಳ್ಳಿ ಅಂತಾ ಮಾಲ್ಡೀವ್ಸ್ ಅಧ್ಯಕ್ಷ ಭಾರತಕ್ಕೆ ಎಚ್ಚರಿಕೆ ನೀಡಿದ್ದ. ಈಗ ನೋಡಿದರೆ ವರಸೆ ಪೂರ್ತಿ ಬದಲಾಗಿ, ಮತ್ತೆ ಭಾರತದ ಕಾಲು ಹಿಡಿಯುತ್ತಿದೆ ಮಾಲ್ಡೀವ್ಸ್. ಹಾಗಾದರೆ ಈಗ ಭಾರತದ ನಾಗರಿಕ ಸೇವೆಗಳ ಸಿಬ್ಬಂದಿ ಮಾಲ್ಡೀವ್ಸ್‌ಗೆ ಹೋಗಿದ್ದು ಯಾಕೆ?
ಕಿರಿಕ್ ಮಾಡಿ ಕಾಲು ಹಿಡಿದರು!
ಅಷ್ಟಕ್ಕೂ ಮಾಲ್ಡೀವ್ಸ್ ದ್ವೀಪರಾಷ್ಟ್ರ ಇಲ್ಲಿ ಅಷ್ಟಾಗಿ ತಂತ್ರಜ್ಞಾನ ಕೂಡ ಅಭಿವೃದ್ಧಿಯನ್ನು ಹೊಂದಿಲ್ಲ. ಹೀಗಾಗಿ ದ್ವೀಪ ರಾಷ್ಟ್ರದಲ್ಲಿ ಇರುವ 3 ವಿಮಾನಯಾನ ವೇದಿಕೆಗಳ ನಿರ್ವಹಣೆಯ ಜವಾಬ್ದಾರಿಯನ್ನ, ಭಾರತೀಯ ಸೇನೆ ಬದಲಾಗಿ ಬೇರೆ ತಂಡಕ್ಕೆ ವಹಿಸಲಾಗಿದೆ ಎನ್ನಲಾಗಿದೆ. ಇದಕ್ಕೂ ಮೊದಲು ಮಾಲ್ದೀವ್ಸ್‌ನಲ್ಲಿ ಇರುವ ವಿಮಾನಯಾನ ವೇದಿಕೆಗಳ ನಿರ್ವಹಣೆ ಹಾಗೂ ಕಾರ್ಯಾಚರಣೆ ವಿಚಾರಗಳನ್ನು ಭಾರತೀಯ ಸೇನೆ ನೋಡಿಕೊಳ್ಳುತ್ತಿತ್ತು. ಆದರೆ ಯಾವಾಗ, ಹೊಸ ಅಧ್ಯಕ್ಷರಾಗಿ ಮೊಹಮ್ಮದ್ ಮುಯಿಝು ಅಧಿಕಾರ ವಹಿಸಿಕೊಂಡರೋ ಅಲ್ಲಿಂದ ಶುರು ಆಗಿತ್ತು ಕಿರಿಕ್. ನಿಮ್ಮ ಸೇನೆ ವಾಪಸ್ ಕರೆಸಿಕೊಳ್ಳಿ ಎಂದಿತ್ತು ಮಾಲ್ಡೀವ್ಸ್.
ಹೀಗೆ ಮಾಲ್ಡೀವ್ಸ್ ಕಿತಾಪತಿ ಕಾರಣಕ್ಕಾಗಿ ಫೆಬ್ರುವರಿ 2ರಂದು ದೆಹಲಿಯಲ್ಲಿ ಎರಡೂ ದೇಶಗಳ ವಿದೇಶಾಂಗ ಸಚಿವಾಲಯದ ಅಧಿಕಾರಿಗಳ ಸಭೆ ನಡೆದಿತ್ತು. ಹೀಗೆ ಈ ಸಭೆಯಲ್ಲಿ ಭಾರತೀಯ ಸೇನೆ ಬದಲಾಗಿ ಭಾರತಿಯ ನಾಗರಿಕ ಸೇವೆ ಸಿಬ್ಬಂದಿಗೆ ವಿಮಾನ ನಿಲ್ದಾಣದ ಜವಾಬ್ದಾರಿಯನ್ನು ವಹಿಸಿಕೊಡಲಾಗಿತ್ತು. ಮಾಲ್ದೀವ್ಸ್‌ನಲ್ಲಿ ಭಾರತೀಯ ಸೇನೆಯ 88 ಸಿಬ್ಬಂದಿ ಇದ್ದು, ಭಾರತದ ನೆರವಿನಿಂದ ನಿರ್ಮಿಸಲಾಗಿರುವ ಮೂರು ವಿಮಾನಯಾನ ವೇದಿಕೆ ನಿರ್ವಹಣೆ ಮಾಡುತ್ತಿದ್ದಾರೆ ಮಾಲ್ಡೀವ್ಸ್ ಅಧಿಕಾರಿಗಳು.

ಭಾರಿ ಸಹಾಯ ಮಾಡಿತ್ತು ಭಾರತ
ಮಾಲ್ಡೀವ್ಸ್ ಹಲವು ಬಾರಿ ಸಂಕಷ್ಟದ ಸುಳಿಗೆ ಸಿಲುಕಿದ್ದಾಗ, ಭಾರತ ಸಹಾಯ ಮಾಡಿದೆ ಹಾಗೂ ಈಗ್ಲೂ ಮಾಡುತ್ತಿದೆ. ಆದರೂ ಸುಖಾಸುಮ್ಮನೆ ಮಾಲ್ಡೀವ್ಸ್ ಕಿರಿಕ್ ಜೋರು ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇಷ್ಟೆಲ್ಲದರ ಮಧ್ಯೆ ಮಾಲ್ಡೀವ್ಸ್ ಅಧ್ಯಕ್ಷ ಹೇಳಿಕೆ ಭಾರತ-ಮಾಲ್ಡೀವ್ಸ್ ದ್ವಿಪಕ್ಷಿಯ ಸಂಬಂಧ ಮೇಲೆ ಮತ್ತಷ್ಟು ಕರಿನೆರಳು ಚಾಚುತ್ತಿತ್ತು. ಹೀಗಿದ್ದಾಗ ದಿಢೀರ್ ಭಾರತದ ಬಳಿ ಮತ್ತೆ ತಲೆಬಾಗಿದೆ ಮಾಲ್ಡೀವ್ಸ್. ಈ ಮೂಲಕ ಮತ್ತೊಮ್ಮೆ ಭಾರತ ಜಾಗತಿಕ ಮಟ್ಟದಲ್ಲಿ ತಾನು ಅದೆಷ್ಟು ಬಲಶಾಲಿ? ಅನ್ನೋದನ್ನು ತೋರಿಸಿಕೊಟ್ಟಿದೆ.
ಭಾರತೀಯರು ಕೊಟ್ಟಿದ್ದಾರೆ ಭರ್ಜರಿ ಶಾಕ್!
ಅಷ್ಟಕ್ಕೂ 2024ರ ಜನವರಿ 1ರಿಂದ 28ರವರೆಗೂ ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಅಂತಾ ಬಂದಿದ್ದಾರೆ. ಈ ಪೈಕಿ ಭಾರತೀಯರ ಸಂಖ್ಯೆ 13,989 ಎನ್ನಲಾಗಿದೆ. ಈ ಮೂಲಕ ಮಾಲ್ಡೀವ್ಸ್‌ಗೆ ದೊಡ್ಡ ಆಘಾತ ಎದುರಾಗಿದೆ. ಇನ್ನು ಮಾಲ್ದೀವ್ಸ್‌ಗೆ ಭೇಟಿ ನೀಡಿದ ಪ್ರವಾಸಿಗರಲ್ಲಿ ರಷ್ಯಾ ಮೂಲದ ಪ್ರಜೆಗಳು 18,561ದ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇಟಲಿ ಮೂಲದವರು 18,111, ಚೀನಾ ಮೂಲದವರು 16,529 & ಬ್ರಿಟನ್ ಮೂಲದ ಒಟ್ಟು 14,588 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಕಳೆದ ವರ್ಷ ಎಷ್ಟಿತ್ತು ಸಂಖ್ಯೆ?
2023ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ದರಂತೆ. ಈ ಪೈಕಿ, ಭಾರತ ಮೂದಲ ಸುಮಾರು 2,09,198 ಪ್ರವಾಸಿಗರು ಮಾಲ್ಡೀವ್ಸ್ ದೇಶಕ್ಕೆ ಭೇಟಿ ನೀಡಿದ್ದರು. ಇನ್ನು ರಷ್ಯಾ ಮೂಲದ 2,09,146 & ಚೀನಾದಿಂದ 1,87,118 ಪ್ರವಾಸಿಗರು ತೆರಳಿದ್ದರಂತೆ. ಆದರೆ ಈ ಬಾರಿ ಸರಿಯಾಗಿ ಪೆಟ್ಟು ಬೀಳುವುದು ಗ್ಯಾರಂಟಿ ಎನ್ನಲಾಗಿದೆ. ಇನ್ನ 2021-2022ರಲ್ಲಿ ಭಾರತದ 2.11 ಲಕ್ಷ & 2.40 ಲಕ್ಷ ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕಾಗಿ, ಭೇಟಿ ನೀಡಿದ್ದರು ಎನ್ನಲಾಗಿದೆ. ಆದರೆ ಈಗ ದಿಢೀರ್ ಭಾರತ ಮೂಲದ ಪ್ರವಾಸಿಗರ ಸಂಖ್ಯೆಯಲ್ಲಿ ಕುಸಿತವು ಕಾಣುತ್ತಿರುವ ಕಾರಣಕ್ಕೆ ಮಾಲ್ಡೀವ್ಸ್ ಸರ್ಕಾರಕ್ಕೆ ಭಯ ಆರಂಭವಾಗಿದೆ. ಹೀಗಾಗಿ ಭಾರತದ ಜೊತೆಗೆ ಸಂಬಂಧ ವೃದ್ಧಿಗೆ ಮುಂದಾಗಿದೆ, ಈ ಮೂಲಕ ಕಾಲು ಹಿಡಿಯುತ್ತಿದೆ ಅಂತಿದ್ದಾರೆ ನೆಟ್ಟಿಗರು.
ಭಾರತ ಸೇನೆ ಹೊರಗೆ ಬರುತ್ತಾ?
ಮಾಲ್ಡೀವ್ಸ್ ಈಗಾಗಲೇ ಭಾರತ ವಿರೋಧ ಕಟ್ಟಿಕೊಂಡು ಸಾಕಷ್ಟು ಸಮಸ್ಯೆಗಳ ಎದುರಿಸುತ್ತಿದೆ. ಹೀಗೆ ಸಾಲು ಸಾಲು ಸಮಸ್ಯೆ ಎದುರಿಸುತ್ತಿದ್ದರೂ ದ್ವೀಪರಾಷ್ಟ್ರಕ್ಕೆ ಬುದ್ಧಿ ಬಂದಿಲ್ವಾ? ಅನ್ನೋ ಪ್ರಶ್ನೆ ಕಾಡುತ್ತಿತ್ತು. ಮಾಲ್ದೀವ್ಸ್‌ನಿಂದ ಮಾರ್ಚ್ 15ರ ಒಳಗಾಗಿ ಸೇನೆಯ ವಾಪಸ್ ಕರೆಸಿಕೊಳ್ಳಿ ಎಂದು ಭಾರತಕ್ಕೆ ಆಗ್ರಹಿಸಿತ್ತು ಮಾಲ್ಡೀವ್ಸ್. ಹೀಗಿದ್ದಾಗಲೇ ಭಾರತದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಲು, ಮಾಲ್ಡೀವ್ಸ್ ಮುಂದಾದಂತೆ ಕಾಣುತ್ತಿದೆ. ಇನ್ನು ಈ ಮೊದಲು ಉಗುರಲ್ಲಿ ಹೋಗೋದಕ್ಕೆ, ಕೊಡಲಿ ತಗೊಂಡ್ರಂತೆ ಅನ್ನೋ ಮಾತಿನಂತೆ ಮಾಲ್ಡೀವ್ಸ್ ಸುಖಾ ಸುಮ್ಮನೆ ಭಾರತದ ಜೊತೆಗೆ ಕಿರಿಕ್ ಮಾಡಿತ್ತು. ಆದ್ರೆ ಈಗ ತಗ್ಗಿಬಗ್ಗಿ ನಡೆಯುವುದನ್ನು ಕಲಿತಿದೆ. ಈ ಬುದ್ಧಿ ಮೊದಲೇ ಇದ್ದಿದ್ರೆ ಸರಿ ಇರ್ತಿತ್ತು ಅಂತಿದ್ದಾರೆ ಭಾರತೀಯರು.












Click it and Unblock the Notifications