ರಾತೋರಾತ್ರಿ ಅದೃಷ್ಟ ಬದಲಾಯಿಸಿದ ಲಕ್ಕಿ ಡ್ರಾ : ಹೊಟ್ಟೆಪಾಡಿಗಾಗಿ ಬಹ್ರೇನಿಗೆ ಹೋಗಿದ್ದ ಕನ್ನಡಿಗನೀಗ ಶ್ರೀಮಂತ
ಬದಲಾಗುತ್ತದೆ ಹೇಳುವುದಕ್ಕೆ ಬರಲ್ಲ. ಅದೃಷ್ಟ ಕೈ ಹಿಡಿದರೆ ರಾತ್ರಿ ಬೆಳಗಾಗುವುದರ ಒಳಗೆ ಭಿಕ್ಷುಕ ಪಟ್ಟಕ್ಕೆ ಏರಬಹುದು. ಅದೃಷ್ಟ ಕೆಟ್ಟರೆ ರಾಜ ಬಿದಿಗೂ ಬೀಳಬಹುದು. ಎಲ್ಲವೂ ಅದೃಷ್ಟ ಮತ್ತು ಸಮಯದ ಆಟ ಅಷ್ಟೇ. ಇದೀಗ ಇದೇ ಅದೃಷ್ಟ ಬಹ್ರೇನಿನಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಅರುಣಾ ಕೃಷ್ಣಪ್ಪ ಕಿದಿಯೂರ್ ಕೈ ಹಿಡಿದಿದೆ.

ಅದೃಷ್ಟ ತಂದುಕೊಟ್ಟ Lottery Ticket:
ಅರುಣಾ ಕೃಷ್ಣಪ್ಪ ಕಿದಿಯೂರ್ ಅಬುಧಾಬಿಯ ಪ್ರಸಿದ್ಧ ಬಿಗ್ ಟಿಕೆಟ್ ವೀಕ್ಲಿ ಇ-ಡ್ರಾದಲ್ಲಿ ಚಿನ್ನ ಗೆದ್ದಿದ್ದಾರೆ. ಈ ಲಾಟರಿ ಟಿಕೆಟಿನಲ್ಲಿ 24 ಕ್ಯಾರೆಟಿನ 200 ಗ್ರಾಂ ಚಿನ್ನದ ಬಾರ್ ಗೆದ್ದಿದ್ದಾರೆ. ಇದರ ಮೌಲ್ಯ ಸುಮಾರು 25 ಲಕ್ಷ ರೂ. ಈ ಬಾರಿ ಅಕ್ಟೋಬರ್ ಮೂರನೇ ವಾರದಲ್ಲಿ ನಡೆದ ಡ್ರಾದಲ್ಲಿ ಕಿದಿಯೂರ್ ಸೇರಿದಂತೆ 4 ಭಾರತೀಯರು ಚಿನ್ನ ಗೆದ್ದಿದ್ದಾರೆ.
ಬಿಗ್ ಟಿಕೆಟ್ ಡ್ರಾ ಎಂದರೇನು?
ಈ ಬಿಗ್ ಟಿಕೆಟ್ ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (airport) ನಡೆಯುವ ಜನಪ್ರಿಯ ಲಕ್ಕಿ ಡ್ರಾ ಆಗಿದೆ. ಇದರಲ್ಲಿ, ಜನ ಪ್ರತಿ ವಾರ ಮತ್ತು ಪ್ರತಿ ತಿಂಗಳು ಟಿಕೆಟ್ ಖರೀದಿಸಬಹುದು. ಈ ಟಿಕೆಟಿನಲ್ಲಿ ದೊಡ್ಡ ದೊಡ್ಡ ಬಹುಮಾನಗಳನ್ನು ಇಡಲಾಗುತ್ತದೆ. ವಾರದ ಇ-ಡ್ರಾದಲ್ಲಿ ಚಿನ್ನದ ಬಾರ್ ಗೆಲ್ಲುವ ಅವಕಾಶ ಇದ್ದರೆ, ತಿಂಗಳ ಡ್ರಾದಲ್ಲಿ ಕೋಟಿಗಳ ನಗದು ಬಹುಮಾನ ಇರುತ್ತದೆ.
ಸ್ನೇಹಿತರೊಂದಿಗೆ ಸೇರಿ ಟಿಕೆಟ್ ಖರೀದಿ :
ಗಲ್ಫ್ (gulf) ನ್ಯೂಸ್ ವರದಿಯ ಪ್ರಕಾರ, 45 ವರ್ಷದ ಅರುಣಾ ಕೃಷ್ಣಪ್ಪ ಕಿದಿಯೂರ್ ಕಳೆದ 23 ವರ್ಷಗಳಿಂದ ಬಹ್ರೇನಿನಲ್ಲಿದ್ದಾರೆ. ಅವರು ಬಹಳ ಸಮಯದಿಂದ ಬಿಗ್ ಟಿಕೆಟ್ ಖರೀದಿಸುತ್ತಿದ್ದರು. ಕಳೆದ 4 ತಿಂಗಳಿನಿಂದ, ಅವರು ಸ್ನೇಹಿತರೊಂದಿಗೆ ಸೇರಿ ಒಂದು ಗ್ರೂಪ್ ಮಾಡಿಕೊಂಡು ಟಿಕೆಟ್ ತೆಗೆದುಕೊಳ್ಳುವುದಕ್ಕೆ ಶುರು ಮಾಡುತ್ತಾರೆ. ಈ ಗ್ರೂಪ್ ಟಿಕೆಟ್ ಅವರ ಅದೃಷ್ಟ ಹೊಳೆಯುವಂತೆ ಮಾಡಿದೆ.
ಚಿನ್ನ ಗೆದ್ದ ಸುದ್ದಿ ನಂಬುವುದಕ್ಕೇ ಸಾಧ್ಯವಾಗಲಿಲ್ಲ :
ಸೋಮವಾರ ಡ್ರಾ ಫಲಿತಾಂಶ ಬಂದಾಗ ಅದರಲ್ಲಿ ಕಿದಿಯೂರ್ ಹೆಸರು ಇತ್ತು. ಚಿನ್ನ ಗೆದ್ದ ಸುದ್ದಿ ಕೇಳಿ ನನಗೆ ಆಶ್ಚರ್ಯವಾಯಿತು, ಜೊತೆಗೆ ಖುಷಿ ಕೂಡಾ ಆಯಿತು ಎನ್ನುವುದು ಅರುಣಾ ಮಾತು. ಈ ಚಿನ್ನದ ಬೆಲೆ 96,500 ದಿರ್ಹಮ್ ಅಂದರೆ ಸುಮಾರು 25 ಲಕ್ಷ ರೂಪಾಯಿಗಳು. ಸದ್ಯಕ್ಕೆ ಅವರು ಈ ಚಿನ್ನವನ್ನು ಏನು ಮಾಡಬೇಕು ಎನ್ನುವ ನಿರ್ಧಾರ ಮಾಡಲಿಲ್ಲವಂತೆ.
ಡ್ರಾದಲ್ಲಿ 4 ಭಾರತೀಯರು ವಿಜೇತರು :
ಈ ವಾರದ ಡ್ರಾದಲ್ಲಿ ಕಿದಿಯೂರ್ ಮಾತ್ರವಲ್ಲದೆ ಇನ್ನೂ 3 ಭಾರತೀಯರು 200 ಗ್ರಾಂ ಚಿನ್ನದ ಬಾರ್ ಗಳನ್ನು ಗೆದ್ದಿದ್ದಾರೆ. ಕೇರಳ ಮೂಲದ 51 ವರ್ಷದ ಜಿಜೋಯ್ ಕಳೆದ 20 ವರ್ಷಗಳಿಂದ ಶಾರ್ಜಾದಲ್ಲಿ ವಾಸಿಸುತ್ತಿದ್ದಾರೆ. ಅವರು ಕೂಡಾ ಸ್ನೇಹಿತರ ಜೊತೆ ಸೇರಿಕೊಂಡು ಟಿಕೆಟ್ ತೆಗೆದುಕೊಂಡಿದ್ದರು. ಇದೀಗ ಅವರೂ ಚಿನ್ನ ಗೆದ್ದಿದ್ದಾರೆ. ಅವರು ಬಹುಮಾನದ ಹಣವನ್ನು ಭಾರತದಲ್ಲಿರುವ ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ಬಳಸುವುದಾಗಿ ಹೇಳಿದ್ದಾರೆ.
ಮನೀಷಾ ಹರ್ಷಲ್ ಕಸತ್: ಮುಂಬೈ ಮೂಲದ ಮನೀಷಾ ಶಾರ್ಜಾದಲ್ಲಿ ವಾಸಿಸುತ್ತಿದ್ದು, ಕಳೆದ 3 ವರ್ಷಗಳಿಂದ ಡ್ರಾದಲ್ಲಿ ಭಾಗವಹಿಸುತ್ತಿದ್ದಾರೆ. ಈ ಬಾರಿ ಅವರು ಏಕಾಂಗಿಯಾಗಿ ಟಿಕೆಟ್ ಖರೀದಿಸಿ ಗೆದ್ದಿದ್ದಾರೆ. ಸದಾತುಲ್ಲಾ ಷರೀಫ್: ಬೆಂಗಳೂರಿನ ಸಿವಿಲ್ ಎಂಜಿನಿಯರ್ ಆಗಿರುವ ಸದಾತುಲ್ಲಾ ಕಳೆದ ಒಂದು ವರ್ಷದಿಂದ ದುಬೈನಲ್ಲಿದ್ದಾರೆ. ವಿಮಾನ ನಿಲ್ದಾಣದಲ್ಲಿ ಬಿಗ್ ಟಿಕೆಟ್ ಬಗ್ಗೆ ಅವರಿಗೆ ಮೊದಲಿನಿಂದಲೂ ಗೊತ್ತಿತ್ತು. ಇದೀಗ ಅವರೂ 200 ಗ್ರಾಂ ಚಿನ್ನ ಗೆದ್ದಿದ್ದು , ತಮ್ಮ ಅದೃಷ್ಟ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬಹಳ ವರ್ಷಗಳಿಂದ ಸಣ್ಣ ಕೆಲಸ ಮಾಡುತ್ತಿರುವ ವಲಸಿಗರಿಗೆ, ಈ ಚಿನ್ನ ಕೇವಲ ಹಣ ಮಾತ್ರ ಅಲ್ಲ ಕಠಿಣ ಪರಿಶ್ರಮ ಮತ್ತು ಭರವಸೆಯ ಫಲವಾಗಿದೆ. ಈ ಗೆಲುವು ಕೊಲ್ಲಿಯಲ್ಲಿ ವಾಸಿಸುತ್ತಿರುವ ಸಾವಿರಾರು ಭಾರತೀಯರಿಗೆ ದೊಡ್ಡ ಕನಸು ಕಾಣುವ ಹುಮ್ಮಸ್ಸು ನೀಡಿದೆ.


Click it and Unblock the Notifications
