Libya Cyclone: 5000 ಜನರ ಜೀವ ತೆಗೆದ ಡೆಡ್ಲಿ ಸೈಕ್ಲೋನ್
ಡೆರ್ನಾ: ಲಿಬಿಯಾ ಥೇಟ್ ನರಕದ ರೀತಿ ಕಾಣುತ್ತಿದೆ, ಎಲ್ಲಿ ನೋಡಿದರೂ ತೂರಿ ಬಿದ್ದ ಮನೆಗಳ ಅವಶೇಷ. ಅಡ್ಡಾದಿಡ್ಡಿ ಬಿದ್ದಿರುವ ಕಾರು, ವಾಹನ. ಇನ್ನೂ ಹುಡುಕುತ್ತಾ ಹೋದರ ಕೈಗೆ, ಕಾಲಿಗೆ ಸಿಗುತ್ತಿರುವ ಮನುಷ್ಯರ & ಪ್ರಾಣಿಗಳ ಶವಗಳು. ಹೀಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 5000 ಜನರ ಜೀವ ತೆಗೆದಿದೆ ಡೆಡ್ಲಿ ಸೈಕ್ಲೋನ್. ಲಿಬಿಯಾ ದೇಶದ ಕರಾವಳಿ ತೀರದಲ್ಲಿ ಶವಗಳ ರಾಶಿಯೇ ಬಿದ್ದಿದೆ.
ಹೌದು ಲಿಬಿಯಾ ದೇಶದಲ್ಲಿ ಭೀಕರ ಚಂಡಮಾರುತ ಅಬ್ಬರಿಸಿದೆ. ಪೂರ್ವ ಕರಾವಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 5,200ಕ್ಕೆ ತಲುಪಿದೆ. ಈ ಮೂಲಕ ನೋಡ ನೋಡ್ತಿದ್ದಂತೆ ಸಾವಿರಾರು ಜನರನ್ನು ಪ್ರಕೃತಿ ವಿಕೋಪ ಬಲಿ ಪಡೆದಿದೆ. ಅದರಲ್ಲೂ 7000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಕಟ್ಟಡಗಳನ್ನು ಬೆದಕುತ್ತಿದ್ದರೆ ಮತ್ತಷ್ಟು ಶವಗಳು ಸಿಗುತ್ತಿವೆ. ಹೀಗಾಗಿ ಲಿಬಿಯಾ ದೇಶದ ಪೂರ್ವ ಕರಾವಳಿ ಭಾಗ ಸ್ಮಶಾನದ ರೀತಿಯೇ ಕಾಣುತ್ತಿದೆ.

ಇನ್ನೂ 10,000 ಜನರು ನಾಪತ್ತೆ
ಈಗಾಗಲೇ ರಕ್ಷಣಾ ತಂಡಗಳ ಸಿಬ್ಬಂದಿ ಬೀದಿ, ಕಟ್ಟಡ & ಸಮುದ್ರ ತೀರದಿಂದ ಶವ ಹೊರ ತೆಗೆಯುತ್ತಿದ್ದು, ಇನ್ನೂ ಸ್ಪಷ್ಟವಾಗಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಲೆಕ್ಕ ಸಿಗುತ್ತಿಲ್ಲ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗಿದೆ. ಅಷ್ಟಕ್ಕೂ ಇಲ್ಲಿ ಆಗಿದ್ದೇನು ಅಂದ್ರೆ, ಮೆಡಿಟರೇನಿಯನ್ ಚಂಡಮಾರುತ ಇದೇ ಭಾನುವಾರ ರಾತ್ರಿ ಡೆರ್ನಾ ಕರಾವಳಿಗೆ ಅಪ್ಪಳಿಸಿತ್ತು. ಪರಿಣಾಮ ಡ್ಯಾಂ ಹೊಡೆದು ಭಾರಿ ಸ್ಫೋಟದ ಶಬ್ದ ಕೇಳಿಸಿತ್ತು. ಇದಾದ ಬಳಿಕ ನಡೆದಿದ್ದು ಘೋರ ದುರಂತ. ಜೊತೆಗೆ 10,000 ಜನ ನಾಪತ್ತೆಯಾಗಿದ್ದು, ಕಾಣೆಯಾದವರ ಸುಳಿವಿಗೆ ಹುಡುಕಾಟ ನಡೆದಿದೆ.
ಸಾವಿನ ಸಂಖ್ಯೆ 15,000 ಮುಟ್ಟುತ್ತಾ?
ಲಿಬಿಯಾ ದೇಶದಲ್ಲಿ ಕಾಡುತ್ತಿರುವ ಭಯ ಒಂದೆರಡಲ್ಲ ಏಕೆಂದರೆ ಈಗಾಗಲೇ ಕಾಣೆಯಾದ 10,000 ಜನರು ಕೂಡ ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಸದ್ಯಕ್ಕೆ ಸಾವಿನ ಸಂಖ್ಯೆ 5,000ದ ಗಡಿ ದಾಟಿದ್ದು ಇನ್ನೂ 10,000 ಜನರ ಸುಳಿವು ಸಿಗುತ್ತಿಲ್ಲ. ಈ ಹಿನ್ನೆಯಲ್ಲಿ ಮುಂದಿನ ದಿನದಲ್ಲಿ ಸಾವಿನ ಸಂಖ್ಯೆ ಡಬಲ್ ಆಗುವ ಭಯವೂ ಇದೆ. ಹಾಗೇ ಲಿಬಿಯಾ ನಗರದಲ್ಲಿ ಬುಧವಾರ ತನಕ 2 ಸಾವಿರಕ್ಕೂ ಹೆಚ್ಚು ಶವ ಅವಶೇಷಗಳ ಅಡಿಯಿಂದ ಹೊರ ತೆಗೆಯಲಾಗಿದೆ. ಈ ನಗರದಲ್ಲಿ ಒಟ್ಟು 30 ಸಾವಿರಕ್ಕು ಹೆಚ್ಚು ಜನ ನಿರಾಶ್ರಿತರಾಗಿದ್ದು ವಿಶ್ವಸಂಸ್ಥೆ ಕೂಡ ಆತಂಕ ವ್ಯಕ್ತಪಡಿಸಿದೆ.

ನೆರವಿಗೆ ಬಂದ ವಿವಿಧ ದೇಶಗಳು
ತೈಲ ಸಂಪತ್ತು ಹೊಂದಿದ್ರೂ ಲಿಬಿಯಾ ಈಗ ಬಡರಾಷ್ಟ್ರವಾಗಿ ನರಳುತ್ತಿದೆ. ಇದೀಗ ದೇಶ ಭೀಕರ ಸೈಕ್ಲೋನ್ ಅಬ್ಬರಕ್ಕೆ ತತ್ತರಿಸಿದ್ದು, ಡೆರ್ನಾ ಹಾಗೂ ಇತರ ಪಟ್ಟಣಗಳಿಂದ 40,000 ಜನರ ಸ್ಥಳಾಂತರವಾಗಿದೆ. ಹಾಗೇ ವಿವಿಧ ದೇಶಗಳು ಲಿಬಿಯಾಗೆ ನೆರವಿನ ಹಸ್ತ ಚಾಚಿದ್ದು ಜನರ ರಕ್ಷಣೆಗೆ ಮುಂದೆ ಬಂದಿವೆ. ಆದರೆ ಎಲ್ಲಿ ನೋಡಿದರೂ ಲಿಬಿಯಾ ದೇಶ ಅಕ್ಷರಶಃ ನರಕದಂತೆ ಕಾಣುತ್ತಿದೆ. ಇಷ್ಟು ಸಾಲದು ಎಂಬಂತೆ ಸಾವಿನ ಸಂಖ್ಯೆ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಪರಿಹಾರ ಕಾರ್ಯಾಚರಣೆ ವೇಗವಾಗಿ ಸಾಗಿದೆ.
ಪ್ರಕೃತಿ ಎದುರು ಮನುಷ್ಯನ ಆಟ ನಡೆಯೋದಿಲ್ಲ ಅನ್ನೋದು ಮತ್ತೆ ಮತ್ತೆ ಸಾಬೀತಾಗಿದೆ ಈಗ ಮತ್ತೆ ಅದು ಮರುಕಳಿಸಿದೆ. ಇಷ್ಟಾದರೂ ಪ್ರಕೃತಿ ಮೇಲಿನ ದೌರ್ಜನ್ಯ ನಿಲ್ಲಿಸುತ್ತಿಲ್ಲ ಮನುಷ್ಯ. ಹೀಗೆ ದಿನದಿಂದ ದಿನಕ್ಕೆ ಭೂಮಿ ಮೇಲೆ ಪ್ರಕೃತಿ ವಿಕೋಪ ಹೆಚ್ಚಾಗುತ್ತಿರುವ ಪರಿಣಾಮ, ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಡ ದೇಶಗಳ ಪರಿಸ್ಥಿತಿ ಇಂತಹ ಸಂದರ್ಭದಲ್ಲಿ ಮತ್ತಷ್ಟು ಭೀಕರವಾಗುತ್ತಿದ್ದು, ವಿಶ್ವಸಂಸ್ಥೆ ಹಾಗೂ ಶ್ರೀಮಂತ ದೇಶಗಳು ನೆರವಿನ ಹಸ್ತ ಚಾಚುತ್ತಿವೆ. ಆದ್ರೂ ಇದಕ್ಕೆಲ್ಲ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಒತ್ತಾಯ ಕೂಡ ಕೇಳಿಬಂದಿದೆ.












Click it and Unblock the Notifications