Leave: ಕಾರ್ಪೊರೇಟ್ ವಲಯದಲ್ಲಿ ರಜೆ ಪಡೆಯುವುದರಲ್ಲಿ ಮಹಿಳೆಯರಿಗಿಂತ ಪುರುಷರೇ ಹೆಚ್ಚು: ವರದಿಯಲ್ಲೇನಿದೆ?
ಸಾಮಾನ್ಯಾಗಿ ಕಾರ್ಪೊರೇಟ್ ವಲಯದಲ್ಲಿ ಕುಟುಂಬ ಪಾಲನೆ ಮತ್ತು ಆರೈಕೆ ಎಂದರೆ ಅದು ಕೇವಲ ಮಹಿಳಾ ಉದ್ಯೋಗಿಗಳ ಜವಾಬ್ದಾರಿ, ಅವರೇ ಹೆಚ್ಚು ರಜೆ ತೆಗೆದುಕೊಳ್ಳುತ್ತಾರೆ ಎನ್ನುವ ಮಾತಿತ್ತು. ಆದರೆ ಇದೀಗ ಅಮೆರಿಕದ ಪ್ರಸಿದ್ಧ ವಿಮಾ ಸಂಸ್ಥೆ 'ದಿ ಸ್ಟ್ಯಾಂಡರ್ಡ್' ನಡೆಸಿದ ಸಮೀಕ್ಷೆಯೊಂದು ಹೆಚ್‌ಆರ್ ವಿಭಾಗಗಳ ಸಾಂಪ್ರದಾಯಿಕ ಲೆಕ್ಕಾಚಾರಗಳನ್ನು ಸಂಪೂರ್ಣವಾಗಿ ಉಲ್ಟಾಪಲ್ಟಾ ಮಾಡಿದೆ.
ಸಂಸ್ಥೆಯ ಹೆಚ್‌ಆರ್ ಅಧಿಕಾರಿಗಳು ಕೇವಲ ಶೇಕಡ 6ರಷ್ಟು ಪುರುಷರು ಮಾತ್ರ ಕುಟುಂಬದ ಆರೈಕೆಗೆ ರಜೆ ಪಡೆಯುತ್ತಾರೆ ಎಂದು ಭಾವಿಸಿದ್ದರೆ, ವಾಸ್ತವದಲ್ಲಿ ಬರೋಬ್ಬರಿ ಶೇಕಡಾ 71ರಷ್ಟು ಪುರುಷ ಉದ್ಯೋಗಿಗಳು ಮನೆಮಂದಿಯ ಆರೋಗ್ಯ ಮತ್ತು ಪಾಲನೆಗಾಗಿ ರಜೆ ಪಡೆದು ಜವಾಬ್ದಾರಿ ನಿಭಾಯಿಸುತ್ತಿರುವುದು ಬಹಿರಂಗವಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಉದ್ಯೋಗಿಗಳ ರಜೆ ಮತ್ತು ಹೆಚ್‌ಆರ್ ವಿಭಾಗದ ಗ್ರಹಿಕೆಗಳ ಕುರಿತು ಅಮೆರಿಕದ ಪ್ರಸಿದ್ಧ ವಿಮಾ ಸಂಸ್ಥೆ 'ದಿ ಸ್ಟ್ಯಾಂಡರ್ಡ್' (The Standard)ನ ನೂತನ ವರದಿಯೊಂದು ಭಾರಿ ಕುತೂಹಲಕಾರಿ ಮತ್ತು ಆಘಾತಕಾರಿ ಅಂಶಗಳನ್ನು ಹೊರಹಾಕಿದೆ. ಕುಟುಂಬ ಸದಸ್ಯರ ಆರೋಗ್ಯ ರಕ್ಷಣೆ ಮತ್ತು ಪಾಲನೆಗಾಗಿ ರಜೆ ಪಡೆಯುವ ವಿಷಯದಲ್ಲಿ ಹೆಚ್‌ಆರ್ ವಿಭಾಗದ ಅಂದಾಜುಗಳು ಮತ್ತು ಉದ್ಯೋಗಿಗಳ ವಾಸ್ತವ ನಡುವೆ ಬೃಹತ್ ಅಂತರವಿರುವುದು ಈ ಸಮೀಕ್ಷೆಯಿಂದ ಬಯಲಾಗಿದೆ.
ಸಮೀಕ್ಷೆಯ ಪ್ರಮುಖ ಅಂಶಗಳು
* ಸಂಸ್ಥೆಯ ಹೆಚ್‌ಆರ್ ಅಧಿಕಾರಿಗಳ ಪ್ರಕಾರ ಶೇಕಡಾ 60ರಷ್ಟು ಮಹಿಳಾ ಉದ್ಯೋಗಿಗಳು ಕುಟುಂಬ ಪಾಲನೆಗಾಗಿ ರಜೆ ತೆಗೆದುಕೊಳ್ಳುತ್ತಾರೆ ಮತ್ತು ಕೇವಲ ಶೇಕಡಾ 6ರಷ್ಟು ಪುರುಷರು ಮಾತ್ರ ಈ ರಜೆ ಪಡೆಯುತ್ತಾರೆ ಎಂದು ಭಾವಿಸಿದ್ದರು.
* ಆದರೆ ಉದ್ಯೋಗಿಗಳ ಸ್ವಯಂ ಸಮೀಕ್ಷೆಯ ವರದಿಯ ಪ್ರಕಾರ, ಬರೋಬ್ಬರಿ ಶೇಕಡಾ 71ರಷ್ಟು ಪುರುಷ ಉದ್ಯೋಗಿಗಳು ಕುಟುಂಬಸ್ಥರ ಆರೈಕೆಗಾಗಿ ರಜೆ ಪಡೆದಿರುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ ಮಹಿಳಾ ಉದ್ಯೋಗಿಗಳಲ್ಲಿ ಶೇಕಡಾ 48ರಷ್ಟು ಜನರು ಮಾತ್ರ ಈ ರಜೆ ಪಡೆದಿದ್ದಾರೆ.
ದೈಹಿಕ ಮತ್ತು ಮಾನಸಿಕ ಆರೋಗ್ಯ ರಜೆಯಲ್ಲೂ ಅಂತರ
ಹೆಚ್‌ಆರ್ ವಿಭಾಗದ ಲೆಕ್ಕಾಚಾರದಂತೆ ಶೇಕಡಾ 34ರಷ್ಟು ಮಹಿಳೆಯರು ಮತ್ತು ಶೇಕಡಾ 14ರಷ್ಟು ಪುರುಷರು ತಮ್ಮ ಸ್ವಂತ ದೈಹಿಕ ಆರೋಗ್ಯಕ್ಕಾಗಿ ರಜೆ ಪಡೆಯುತ್ತಾರೆನ್ನಲಾಗಿತ್ತು. ಆದರೆ ವಾಸ್ತವದಲ್ಲಿ ಪುರುಷ ಉದ್ಯೋಗಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ರಜೆ ಪಡೆದಿದ್ದಾರೆ.
ಮಾನಸಿಕ ಆರೋಗ್ಯ ರಜೆ (Mental Health Leave)
ಮಾನಸಿಕ ಒತ್ತಡ ಅಥವಾ ಆರೋಗ್ಯದ ಕಾರಣಕ್ಕೆ ಶೇಕಡಾ 44ರಷ್ಟು ಮಹಿಳೆಯರು ರಜೆ ತೆಗೆದುಕೊಳ್ಳುತ್ತಾರೆ ಎಂದು ಹೆಚ್‌ಆರ್ ವಿಭಾಗ ಭಾವಿಸಿತ್ತು (ಪುರುಷರು ಕೇವಲ ಶೇ. 9). ಆದರೆ ಉದ್ಯೋಗಿಗಳ ವರದಿಯಲ್ಲಿ ಶೇಕಡಾ 13ರಷ್ಟು ಪುರುಷರು ಮತ್ತು ಶೇಕಡಾ 5ರಷ್ಟು ಮಹಿಳೆಯರು ಈ ರಜೆ ಬಳಸಿಕೊಂಡಿದ್ದಾರೆ.
ಪಿಎಲ್ ರಜೆ
ಮಗುವಿನ ಜನನ ಅಥವಾ ಆರೈಕೆಯ ವಿಷಯದಲ್ಲಿ ಶೇಕಡಾ 88ರಷ್ಟು ಮಹಿಳೆಯರು ರಜೆ ಪಡೆಯುತ್ತಾರೆ ಎಂದು ಹೆಚ್‌ಆರ್ ಅಂದಾಜಿಸಿದ್ದರು. ಆದರೆ ಉದ್ಯೋಗಿಗಳ ವರದಿಯಂತೆ ಶೇಕಡಾ 33ರಷ್ಟು ಮಹಿಳೆಯರು ಹಾಗೂ ಶೇಕಡಾ 22ರಷ್ಟು ಪುರುಷರು ಈ ರಜೆ ಪಡೆದಿದ್ದಾರೆ.
ಉದ್ಯೋಗಸ್ಥರಲ್ಲಿ ಹೆಚ್ಚುತ್ತಿರುವ ಆರೈಕೆ ರಜೆ (Caregiver Leave)
ಇತರ ಸಂಶೋಧನಾ ಸಂಸ್ಥೆಯಾದ 'ಸ್ಪ್ಯಾರೋ' ನೀಡಿರುವ 2026ರ ವರದಿಯ ಪ್ರಕಾರ, 2020ರಿಂದ ಈಚೆಗೆ ಜಾಗತಿಕವಾಗಿ ಕುಟುಂಬ ಆರೈಕೆ ರಜೆಯ ಬಳಕೆಯು ಬರೋಬ್ಬರಿ ಶೇಕಡಾ 150ರಷ್ಟು ಹೆಚ್ಚಳ ಕಂಡಿದೆ. ಅಲ್ಲದೆ, ಸರಾಸರಿ ರಜೆಯ ಅವಧಿಯು 12.5 ದಿನಗಳಿಂದ 49.5 ದಿನಗಳಿಗೆ ಏರಿಕೆಯಾಗಿದೆ.
ಹೆಚ್‌ಆರ್ ವಿಭಾಗಗಳು ಪುರುಷ ಉದ್ಯೋಗಿಗಳ ಕುಟುಂಬ ಜವಾಬ್ದಾರಿಗಳನ್ನು ಮತ್ತು ರಜೆ ಅಗತ್ಯಗಳನ್ನು ನಿರ್ಲಕ್ಷಿಸುತ್ತಿವೆ ಎಂಬುದನ್ನು ಈ ಸಮೀಕ್ಷೆ ತೋರಿಸಿಕೊಟ್ಟಿದೆ. ಕಂಪನಿಗಳು ಲಿಂಗಾಧಾರಿತ ಹಳೆಯ ರೂಢಿಗತ ಕಲ್ಪನೆಗಳನ್ನು ಬದಿಗೊತ್ತಿ, ಪ್ರತಿಯೊಬ್ಬ ಉದ್ಯೋಗಿಯ ನಿಜವಾದ ಅಗತ್ಯಕ್ಕೆ ತಕ್ಕಂತೆ ರಜೆ ಸೌಲಭ್ಯಗಳನ್ನು ವಿನ್ಯಾಸಗೊಳಿಸುವುದು ಅಗತ್ಯವಾಗಿದೆ ಎಂಬುದು ಈ ವರದಿ ಒತ್ತಿ ಹೇಳುತ್ತಿದೆ.


Click it and Unblock the Notifications
