ಗಾಜಾ ಆಸ್ಪತ್ರೆ ಮೇಲಿನ ದಾಳಿ ಖಂಡಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್- ಇಸ್ರೇಲ್‌ಗೆ ತಿರುಗುಬಾಣವಾಯ್ತಾ ಅತಿಯಾದ ರಣೋತ್ಸಾಹ?
ವಾಷಿಂಗ್ಟನ್, ಅಕ್ಟೋಬರ್ 18: ಗಾಜಾ ಆಸ್ಪತ್ರೆಯಲ್ಲಿ ಸಂಭವಿಸಿದ ಮಾರಣಾಂತಿಕ ಸ್ಫೋಟದಿಂದ ತಾನು ಆಕ್ರೋಶಗೊಂಡಿದ್ದೇನೆ ಮತ್ತು ದುಃಖಿತನಾಗಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಗಾಜಾ ಆಸ್ಪತ್ರೆಯಲ್ಲಿ ಸಂಭವಿಸಿದ ಸ್ಪೋಟ ಪ್ರಕರಣದ ಕುರಿತು ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಭದ್ರತಾ ಸಲಹೆಗಾರರಿಗೆ ತಿಳಿಸಿದ್ದೇನೆ ಎಂದು ಬೈಡನ್ ಮಂಗಳವಾರ ತಿಳಿಸಿದ್ದಾರೆ.

ಈ ಸ್ಪೋಟವು ಇಸ್ರೇಲ್ ನಡೆಸುತ್ತಿರುವ ಯುದ್ಧ ಅಪರಾಧದ ಭಾಗವಾಗಿದೆ ಎಂದು ಹಮಾಸ್ ಸಂಘಟನೆ ಹೇಳಿದೆ. ಆದರೆ, ಇದು ಪ್ಯಾಲೆಸ್ತೀನ್‌ನಲ್ಲಿ ಇಸ್ಲಾಮಿಕ್ ಜಿಹಾದ್ ನಡೆಸುತ್ತಿರುವ ಉಗ್ರಗಾಮಿಗಳಿಂದ ಸಂಭವಿಸಿದೆ ಎಂದು ಇಸ್ರೇಲ್ ಆರೋಪಿಸಿದೆ.
'ಗಾಜಾದ ಅಲ್-ಅಹ್ಲಿ ಅರಬ್ ಆಸ್ಪತ್ರೆಯಲ್ಲಿ ಭೀಕರ ಸ್ಪೋಟ ಸಂಭವಿಸಿದೆ. ಇದರ ಪರಿಣಾಮವಾಗಿ ವ್ಯಾಪಕ ಪ್ರಾಣಹಾನಿಯಾಗಿದೆ. ಇದರಿಂದ ನಾನು ಆಕ್ರೋಶಗೊಂಡಿದ್ದೇನೆ ಮತ್ತು ತೀವ್ರ ದುಃಖಿತನಾಗಿದ್ದೇನೆ' ಎಂದು ಬೈಡನ್ ಹೇಳಿದ್ದಾರೆ.
ಈ ಘಟನೆ ಕುರಿತು ಜೋರ್ಡಾನ್ ರಾಜ ಅಬ್ದುಲ್ಲಾ- 2 ಮತ್ತು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಬೈಡನ್ ದೂರವಾಣಿ ಮೂಲಕ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

'ನಿಖರವಾಗಿ ಏನಾಯಿತು ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸಬೇಕಿದೆ. ಈ ಕುರಿತು ರಾಷ್ಟ್ರೀಯ ಭದ್ರತಾ ತಂಡಕ್ಕೆ ಬೈಡನ್ ನಿರ್ದೇಶಿಸಿದ್ದಾರೆ' ಎಂದು ಯುಎಸ್ ಸರ್ಕಾರ ತಿಳಿಸಿದೆ.
'ಈ ದುರಂತದಲ್ಲಿ ಕೊಲ್ಲಲ್ಪಟ್ಟ ಅಥವಾ ಗಾಯಗೊಂಡ ರೋಗಿಗಳಿಗಾಗಿ ನಾವು ಪ್ರಾರ್ಥಿಸುತ್ತೇವೆ' ಎಂದು ಯುಎಸ್ ತಿಳಿಸಿದೆ.
ಆಸ್ಪತ್ರೆ ಮೇಲಿನ ದಾಳಿಯಲ್ಲಿ 500 ಜನರ ಸಾವು
ಗಾಜಾ ಆಸ್ಪತ್ರೆ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಪರಿಣಾಮ 500 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್-ಅಹ್ಲಿ ಅಲ್-ಅರಬಿ ಆಸ್ಪತ್ರೆಯಲ್ಲಿ ಇಸ್ರೇಲ್ 'ಹತ್ಯಾಕಾಂಡ' ನಡೆಸಿದೆ ಎಂದು ಪ್ಯಾಲೆಸ್ತೀನ್ ಆರೋಗ್ಯ ಸಚಿವ ಮೈ ಅಲ್ಕೈಲಾ ಆರೋಪಿಸಿದ್ದಾರೆ.
ಸತತ 11 ದಿನಗಳ ಕಾಲ ಗಾಜಾದಲ್ಲಿ ಇಸ್ರೇಲ್ ದಾಳಿ ನಡೆಸುತ್ತಿದೆ. ಈ ವರೆಗೆ ನಡೆಸಿದ ದಾಳಿಯಲ್ಲಿ ಆಸ್ಪತ್ರೆ ದಾಳಿಯು ಹೆಚ್ಚು ಭೀಕರವಾಗಿದೆ. ಈ ದಾಳಿಯಲ್ಲಿ ಕನಿಷ್ಠ 500 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೈ ಅಲ್ಕೈಲಾ ಹೇಳಿದ್ದಾರೆ.
ಇದಕ್ಕೂ ಮೊದಲು ಪ್ರತಿಕ್ರಿಯಿಸಿದ ಗಾಜಾ ನಾಗರಿಕ ರಕ್ಷಣಾ ಮುಖ್ಯಸ್ಥರು ದಾಳಿಯಲ್ಲಿ 300 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಈ ಸಾವಿನ ಸಂಖ್ಯೆ 500ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ತಿಳಿಸಿದ್ದಾರೆ.
ಈ ಸ್ಫೋಟದಲ್ಲಿ ಹೆಚ್ಚಾಗಿ ಸ್ಥಳಾಂತರಗೊಂಡ ಜನರು ಸಾವನ್ನಪ್ಪಿದ್ದಾರೆ ಎಂದು ಹಮಾಸ್ ಹೇಳಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಅನಾಗರಿಕ ಭಯೋತ್ಪಾದಕರು ಗಾಜಾ ಆಸ್ಪತ್ರೆಯ ಮೇಲೆ ದಾಳಿ ಮಾಡಿದ್ದಾರೆಯೇ ಹೊರತು ಇಸ್ರೇಲ್‌ನ ಮಿಲಿಟರಿಯಲ್ಲ ಎಂದು ಹೇಳಿದ್ದಾರೆ.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಹಮಾಸ್ ಸಂಘಟನೆ, 'ಆಸ್ಪತ್ರೆಯ ಸ್ಪೋಟಕ್ಕೆ ನಮ್ಮ ಯಾವುದೇ ರಾಕೆಟ್‌ಗಳು ಕಾರಣವಲ್ಲ' ಎಂದು ಹೇಳಿದೆ. ಸ್ಪೋಟಗೊಂಡ ಸಮಯದಲ್ಲಿ ಗಾಜಾ ನಗರದಲ್ಲಿ ಅಥವಾ ಸುತ್ತಮುತ್ತ ಯಾವುದೇ ಚಟುವಟಿಕೆಯನ್ನು ನಾವು ಹೊಂದಿರಲಿಲ್ಲ ಎಂದು ತಿಳಿಸಿದೆ.












Click it and Unblock the Notifications