Gaza Hospital Attack: ಗಾಜಾ ಆಸ್ಪತ್ರೆ ಮೇಲೆ 'ಅಮಾನುಷ' ದಾಳಿ- ಬೈಡನ್‌ಗೆ ಬಾಗಿಲು ಮುಚ್ಚಿದ ಅರಬ್ ನಾಯಕರು
ಜೆರುಸಲೇಂ, ಅಕ್ಟೋಬರ್ 18: ಗಾಜಾ ಆಸ್ಪತ್ರೆಯಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 500 ಕ್ಕೂ ಅಧಿಕ ಜನರು ಹತ್ಯೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಜೊತೆ ನಡೆಯಬೇಕಿದ್ದ ಅರಬ್ ನಾಯಕರ ಸಭೆ ರದ್ದುಗೊಂಡಿದೆ ಎಂದು ತಿಳಿದುಬಂದಿದೆ.
ಗಾಜಾ ಆಸ್ಪತ್ರೆ ಘಟನೆಯಿಂದ ಕೆರಳಿ ಕೆಂಡದಂತಾಗಿರುವ ಅರಬ್ ನಾಯಕರು ಬೈಡನ್ ಅವರ ಜೊತೆ ಮಾತುಕತೆ ನಡೆಸಲು ನಿರಾಕರಿಸಿದ್ದಾರೆ.

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಜೋರ್ಡಾನ್‌ನ ಅಮ್ಮನ್‌ನಲ್ಲಿ ಅರಬ್ ನಾಯಕರ ಜೊತೆ ಇಂದು ಮಾತುಕತೆ ನಡೆಸಬೇಕಿತ್ತು. ಇಸ್ರೇಲ್‌ಗೆ ಬೆಂಬಲ ನೀಡುವಂತೆ ಅರಬ್ ನಾಯಕರ ಮನವೊಲಿಸಲು ಬೈಡನ್ ಮುಂದಾಗಿದ್ದರು. ಆದರೆ, ಅವರ ಭೇಟಿಗೂ ಮುನ್ನವೇ ಇಸ್ರೇಲ್ ಅಮಾನುಷ ಯುದ್ಧ ಅಪರಾಧವೊಂದನ್ನು ಎಸಗುವ ಮೂಲಕ ಬೈಡನ್ ಅವರ ರಾಜತಾಂತ್ರಿಕ ಪ್ರಯತ್ನಗಳನ್ನು ಹಳಿತಪ್ಪಿಸಿದೆ.
ಇಂದು ಇಸ್ರೇಲ್‌ಗೆ ಆಗಮಿಸಲಿರುವ ಜೋ ಬೈಡನ್ ಅವರು ಜೋರ್ಡಾನ್‌ನ ರಾಜ ಅಬ್ದುಲ್ಲಾ, ಈಜಿಪ್ಟ್‌ನ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಮತ್ತು ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರೊಂದಿಗೆ ಮಾತುಕತೆ ನಡೆಸಬೇಕಿತ್ತು. ಆದರೆ, ಅಮ್ಮನ್‌ನಲ್ಲಿ ನಡೆಯಬೇಕಿದ್ದ ಸಭೆಯನ್ನು ರದ್ದುಗೊಳಿಸಲಾಗಿದೆ ಎಂದು ಜೋರ್ಡಾನ್ ವಿದೇಶಾಂಗ ಸಚಿವ ಅಯ್ಮಾನ್ ಸಫಾದಿ ಘೋಷಿಸಿದ್ದಾರೆ.

ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ನಡೆಸಿದ ದಾಳಿಯ ನಂತರ ಹಮಾಸ್ ಅನ್ನು ನಿರ್ಮೂಲನೆ ಮಾಡುವುದಾಗಿ ಇಸ್ರೇಲ್ ಘೋಷಿಸಿದೆ. ಇದನ್ನು ಬೈಡೆನ್ ಬೆಂಬಲಿಸುತ್ತಿದ್ದಾರೆ. ಹಮಾಸ್ ದಾಳಿಯಲ್ಲಿ ಒಟ್ಟು 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 200 ರಿಂದ 250 ಇಸ್ರೇಲಿಗಳನ್ನು ಒತ್ತೆಯಾಳುಗಳಾಗಿ ಗಾಜಾಕ್ಕೆ ಕರೆದೊಯ್ಯಲಾಗಿದೆ ಎಂದು ಹೇಳಲಾಗುತ್ತಿದೆ.
ಹಮಾಸ್ ವಿರುದ್ಧ ಪ್ರತಿಕಾರದ ದಾಳಿ ನಡೆಸುತ್ತಿರುವ ಇಸ್ರೇಲ್ ಮಂಗಳವಾರ ಗಾಜಾ ನಗರದ ಅಲ್ ಅಹ್ಲಿ ಆಸ್ಪತ್ರೆಗೆ ಬಾಂಬ್ ಹಾಕಿದೆ. ಇಸ್ರೇಲಿ ವೈಮಾನಿಕ ದಾಳಿಯನ್ನು ಹಲವು ರಾಷ್ಟ್ರಗಳು ಖಂಡಿಸುತ್ತಿವೆ.
ಎಲ್ಲಾ ಅರಬ್ಬರು ಮತ್ತು ಮುಸ್ಲಿಮರು ಇಸ್ರೇಲ್ ವಿರುದ್ಧ ಪ್ರತಿಭಟನೆಗಳನ್ನು ನಡೆಸಲು ಅರಬ್ ನಾಯಕರು ಕರೆ ನೀಡಿದ್ದಾರೆ.

ಇಸ್ರೇಲ್ ಗಾಜಾ ನಗರದ ಅಲ್-ಅಹ್ಲಿ ಅರಬ್ ಆಸ್ಪತ್ರೆಯ ಮೇಲೆ ಬಾಂಬ್ ದಾಳಿ ಮಾಡಿದೆ ಎಂದು ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಈಜಿಪ್ಟ್, ಜೋರ್ಡಾನ್ ಮತ್ತು ಟರ್ಕಿ ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಇಸ್ರೇಲ್ ಅಧ್ಯಕ್ಷ ನೆತಹ್ಯಾಹು, 'ಗಾಜಾದ ಆಸ್ಪತ್ರೆ ಸ್ಫೋಟವು ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್‌ನ ಕೃತ್ಯವಾಗಿದೆ. 21 ನೇ ಶತಮಾನದ ರಕ್ತಪಾತವನ್ನು ಮಾಧ್ಯಮಗಳು ಜಗತ್ತಿನಾದ್ಯಂತ ಪ್ರಸಾರ ಮಾಡುತ್ತಿದೆ. ಮುಗ್ಧರ ರಕ್ತವನ್ನು ಉದ್ದೇಶಪೂರ್ವಕವಾಗಿ ಚೆಲ್ಲಿದ ನೀಚ ಭಯೋತ್ಪಾದಕರಿಗೆ ನಾಚಿಕೆಯಾಗಬೇಕು' ಎಂದು ಇಸ್ರೇಲ್ ಪ್ರಧಾನಿ ಹೇಳಿದ್ದಾರೆ.
ಇಸ್ರೇಲ್ ವಿದೇಶಾಂಗ ಸಚಿವಾಲಯದ ಹೇಳಿಕೆಯ ಪ್ರಕಾರ, ಗಾಜಾದಲ್ಲಿ ಭಯೋತ್ಪಾದಕರು ರಾಕೆಟ್‌ಗಳ ಸುರಿಮಳೆಗೈದಿದ್ದಾರೆ. ರಾಕೆಟ್‌ಗಳು ಗಾಜಾದ ಅಲ್ ಅಹ್ಲಿ ಆಸ್ಪತ್ರೆಯ ಹತ್ತಿರ ಹಾರಿವೆ ಎಂದು ತಿಳಿಸಿದೆ.
ಆಸ್ಪತ್ರೆಯಲ್ಲಿ ನಡೆದ ಸ್ಫೋಟದ ನಂತರ ಯುಎಇ ಮತ್ತು ರಷ್ಯಾ ಬುಧವಾರ ಇಸ್ರೇಲಿ-ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಯುಎನ್ ಭದ್ರತಾ ಮಂಡಳಿಯ ತುರ್ತು ಸಭೆಗೆ ಕರೆ ನೀಡಿವೆ.












Click it and Unblock the Notifications