ಹಿಜ್ಬುಲ್ಲಾ ಶರಣಾಗುವವರೆಗೂ ದಾಳಿ ನಿಲ್ಲಿಸುವುದಿಲ್ಲ ಇಸ್ರೇಲ್?
ಇಸ್ರೇಲ್ ಮಿಲಿಟರಿ & ಹಿಜ್ಬುಲ್ಲಾ ನಡುವೆ ಘೋರ ಕದನ ನಡೆಯುತ್ತಿದೆ. ಒಬ್ಬರಾದ ನಂತರ ಒಬ್ಬರು ಹಿಜ್ಬುಲ್ಲಾ ಮುಖ್ಯಸ್ಥರ ಹತ್ಯೆಯಾಗುತ್ತಿದ್ದು, ಘೋರ ಕಾಳಗಕ್ಕೆ ಮಧ್ಯಪ್ರಾಚ್ಯ ಈಗ ಸಾಕ್ಷಿಯಾಗುತ್ತಿದೆ. ಕಳೆದ ಒಂದು ವಾರದಿಂದ ಲೆಬನಾನ್ & ಇಸ್ರೇಲ್ ನಡುವೆ ಮಹಾಯುದ್ಧ ನೆನಪಿಸುವ ತಿಕ್ಕಾಟ ನಡೆಯುತ್ತಿದೆ. ಇಂತಹ ಸಮಯದಲ್ಲೇ ಮತ್ತೊಂದು ಆಘಾತಕಾರಿ ಸುದ್ದಿ ಹಿಜ್ಬುಲ್ಲಾ ಮುಖಂಡರಿಗೆ ಸಿಕ್ಕಿದ್ದು, ಇಸ್ರೇಲ್ ಸೇನೆ ಮತ್ತೊಮ್ಮೆ ತೊಡೆ ತಟ್ಟಿದೆ!
ಮಧ್ಯಪ್ರಾಚ್ಯ ಜಾಗತಿಕವಾಗಿ ಬಹುಮುಖ್ಯ ಪ್ರದೇಶ, ಯಾಕಂದ್ರೆ ಜಗತ್ತಿನ ಬಹುಪಾಲು ತೈಲ ಅಂದ್ರೆ ಪೆಟ್ರೋಲ್ & ಡೀಸೆಲ್ ಮತ್ತಿತರ ಪ್ರಮುಖ ವಸ್ತುಗಳು ಸಪ್ಲೈ ಆಗುವುದು ಇಲ್ಲಿಂದ. ಹೀಗಿದ್ದಾಗ ಇಂತಹ ಮಧ್ಯಪ್ರಾಚ್ಯ ತಣ್ಣಗೆ ಇದ್ದರೆ ಮಾತ್ರ ಜಾಗತಿಕವಾಗಿ ಆರ್ಥಿಕತೆ ಸುಸ್ಥಿರ ಅಭಿವೃದ್ಧಿ ಕಾಣಲು ಸಾಧ್ಯ. ಆದರೆ ಇದೀಗ ಮಧ್ಯಪ್ರಾಚ್ಯ ಧಗಧಗ ಹೊತ್ತಿ ಉರಿಯುತ್ತಿದ್ದು ಸಾವಿರಾರು ಜನರು ಪ್ರಾಣ ಬಿಟ್ಟಿದ್ದಾರೆ. ಇಸ್ರೇಲ್ & ಇರಾನ್, ಲೆಬನಾನ್, ಸಿರಿಯಾ, ಗಾಜಾ ಪಟ್ಟಿ ನಡುವೆ ರಣಕಾಳಗ ನಡೆಯುತ್ತಿದೆ. ಅದರಲ್ಲೂ ಇದೀಗ ದಕ್ಷಿಣ ಲೆಬನಾನ್ ವಿರುದ್ಧ, ಭೀಕರ ದಾಳಿ ನಡೆಸುತ್ತಿರುವ ಇಸ್ರೇಲ್ ಹಿಜ್ಬುಲ್ಲಾ ಸಂಘಟನೆಗೆ ಮತ್ತೊಂದು ಶಾಕ್ ಕೊಟ್ಟಿದೆ.

ಇಸ್ರೇಲ್ ದಾಳಿ ಮತ್ತಷ್ಟು ಭೀಕರ?
ಹಿಜ್ಬುಲ್ಲಾ ಸಂಘಟನೆ ವಿರುದ್ಧ ಈ ಬಾರಿ ಘೋರ ದಾಳಿಗೆ ತೊಡೆತಟ್ಟಿ ಆಹ್ವಾನ ನೀಡಿರುವ ಇಸ್ರೇಲ್ ಸೇನೆ, ಈ ಬಾರಿ ಏನೇ ಆದರೂ ಯುದ್ಧ ನಿಲ್ಲಿಸಬಾರದು ಎಂಬ ನಿರ್ಧಾರ ಕೈಗೊಂಡ ರೀತಿ ಕಾಣುತ್ತಿದೆ. ಯಾಕಂದ್ರೆ ಇಸ್ರೇಲ್ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಈಗಿನ ಸ್ಥಿತಿ ಮತ್ತೊಂದು ಮಹಾಯುದ್ಧಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡುತ್ತಿದೆ. ಮತ್ತೊಂದು ಕಡೆ ಹಲವು ವರ್ಷಗಳಿಂದ ತಮ್ಮ ವಿರುದ್ಧ ನಿಂತಿದ್ದ ಹಿಜ್ಬುಲ್ಲಾ ಸಂಘಟನೆ ಸಂಪೂರ್ಣ ಶರಣಾಗಿ ಸೋಲು ಒಪ್ಪಿಕೊಳ್ಳುವವರೆಗೂ ಯುದ್ಧ ನಿಲ್ಲದು ಎಂದು ಇಸ್ರೇಲ್ ಗುಡುಗಿದೆ. ಈ ಮೂಲಕ ದಕ್ಷಿಣ ಲೆಬನಾನ್‌ನಲ್ಲಿ ಮತ್ತಷ್ಟು ರಕ್ತ ಹರಿಯುವುದು ಪಕ್ಕಾ ಆಗುತ್ತಿದೆ.
ಯುದ್ಧ ನಿಲ್ಲುವುದು ಯಾವಾಗ?
ಇಸ್ರೇಲ್ ಮಿಲಿಟರಿ ಯಾವಾಗ ಗಾಜಾ ಪಟ್ಟಿ ವಿರುದ್ಧ ದಾಳಿ ಆರಂಭ ಮಾಡಿತ್ತೋ, ಆಗಲೇ ನೋಡಿ ಹೊಸ ಆತಂಕ ಆವರಿಸಿದ್ದು. ಯಾಕಂದ್ರೆ ಇಸ್ರೇಲ್ ಮಿಲಿಟರಿ ಹೀಗೆ ಗಾಜಾ ಪಟ್ಟಿಯ ಮೇಲೆ ದಾಳಿ ಶುರು ಮಾಡಿದ ನಂತರ ಮಧ್ಯಪ್ರಾಚ್ಯದ ಹಲವು ದೇಶಗಳು ತಿರುಗಿಬಿದ್ದವು. ಈ ಬೆಳವಣಿಗೆ ನಡುವೆ, ಹಲವು ಶತ್ರುಗಳು ಇಸ್ರೇಲ್ ಮೇಲೆ ಎರಗಿ ಬಂದಿವೆ. ಲೆಬನಾನ್, ಇರಾನ್ ಸೇರಿದಂತೆ ಸಿರಿಯಾ ಕೂಡ ಇಸ್ರೇಲ್ ಮಿಲಿಟರಿ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ಹೀಗೆ, ಪರಿಸ್ಥಿತಿ ಸೂಕ್ಷ್ಮವಾಗಿರುವ ಸಮಯದಲ್ಲೇ ಕಾರ್ಯಾಚರಣೆ ನಡೆಸುತ್ತಿರುವ ಇಸ್ರೇಲ್ ಮಿಲಿಟರಿ ಇದೀಗ ಹಿಜ್ಬುಲ್ಲಾ ಕೇಂದ್ರ ಸಮಿತಿಯ ಉಪ ಮುಖ್ಯಸ್ಥ ನಬಿಲ್ ಕಾವುಕ್ ಹತ್ಯೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.












Click it and Unblock the Notifications