Joe Biden Visit Israel: ಬುಧವಾರ ಇಸ್ರೇಲ್‌ಗೆ ಯುಎಸ್ ಅಧ್ಯಕ್ಷ ಜೋ ಬಿಡೆನ್ ಭೇಟಿ
ಇಸ್ರೇಲ್ ಹಮಾಸ್ ಉಗ್ರರ ನಡುವಿನ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದೆ. ಯುದ್ಧ ಆರಂಭವಾದ ದಿನದಿಂದಲೂ ಇಸ್ರೇಲ್ ಜೊತೆಗೆ ನಿಂತಿರುವ ಅಮೆರಿಕ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಯುದ್ದ ನೌಕೆ, ಯುದ್ಧ ವಿಮಾನಗಳನ್ನು ಕೂಡ ಇಸ್ರೇಲ್‌ಗೆ ಕಳುಹಿಸಿಕೊಟ್ಟಿದೆ, ಗಾಜಾ ಪ್ರದೇಶದಲ್ಲಿ ಸಂಪೂರ್ಣ ಮಿಲಿಟರಿ ಕಾರ್ಯಾಚರಣೆಗೆ ಇಸ್ರೇಲ್ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬಿಡನ್ ಬುಧವಾರ ಇಸ್ರೇಲ್‌ಗೆ ಭೇಟಿ ನೀಡಲು ಸಿದ್ಧರಾಗಿದ್ದಾರೆ.
ಬುಧವಾರ ಜೋ ಬಿಡೆನ್ ಅವರು ಇಸ್ರೇಲ್‌ಗೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಮಂಗಳವಾರ ಬೆಳಗ್ಗೆ ಇಸ್ರೇಲ್‌ನಲ್ಲಿ ಘೋಷಣೆ ಮಾಡಿದ್ದಾರೆ. ಯುದ್ಧದ ಸಂದರ್ಭದಲ್ಲಿ ಬಿಡೆನ್ ಇಸ್ರೇಲ್ ಭೇಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾತಿ ಮಹತ್ವ ಪಡೆದುಕೊಂಡಿದೆ.

ಇಸ್ರೇಲ್ ತನ್ನ ಪಡೆಗಳನ್ನು ಗಾಜಾ ಗಡಿಯುದ್ದಕ್ಕೂ ನಿಯೋಜನೆ ಮಾಡಿದೆ, ಹಮಾಸ್ ಉಗ್ರಗಾಮಿಗಳನ್ನು ನಾಶ ಮಾಡಲು ನೆಲದ ಆಕ್ರಮಣಕ್ಕಾಗಿ ಅಭ್ಯಾಸ ನಡೆಸುತ್ತಿದೆ. 11 ದಿನಗಳಲ್ಲಿ ಈ ಭೀಕರ ಯುದ್ಧದಲ್ಲಿ 4000 ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 1,400 ಮಂದಿ ಇಸ್ರೇಲ್‌ನವರಾದರೆ, 2,750 ಮಂದಿ ಪ್ಯಾಲೆಸ್ಟಿನ್‌ಗೆ ಸೇರಿದವರಾಗಿದ್ದಾರೆ.
ಗಾಜಾ ಪಟ್ಟಿಗೆ ಇಸ್ರೇಲ್ ದಿಗ್ಭಂದನ
ಇಸ್ರೇಲ್ ಗಾಜಾ ಪಟ್ಟಿಗೆ ಸಂಪೂರ್ಣವಾಗಿ ದಿಗ್ಬಂಧನ ವಿಧಿಸಿದೆ. ಭಾರಿ ಪ್ರಮಾಣದಲ್ಲಿ ವೈಮಾನಿಕ ದಾಳಿ ಮಾಡುವ ಮೂಲಕ ಗಾಜಾ ಪ್ರದೇಶದಲ್ಲಿ ಹಲವು ಕಟ್ಟಡಗಳು ಬೂದಿಯಾಗಿವೆ. ಗಾಜಾ ಪಟ್ಟಿಯ ಸದ್ಯದ ಪರಿಸ್ಥಿತಿ ಜಾಗತಿಕವಾಗಿ ಕಳವಳ ಹೆಚ್ಚಲು ಕಾರಣವಾಗಿದೆ. ಯುದ್ಧ ಪ್ರಾದೇಶಿಕ ಸಂಘರ್ಷಕವಾಗಿ ಬದಲಾಗಬಹುದು ಎನ್ನುವ ಆತಂಕ ಶುರುವಾಗಿದೆ.
ಗಾಜಾ ನಿವಾಸಿಗಳು ಮತ್ತು ಅವರಿಗೆ ಸಹಾಯ ಮಾಡುತ್ತಿರುವ ಗುಂಪುಗಳು, ಜನರೇಟರ್‌ಗಳಿಗೆ ನೀರು, ಆಹಾರ ಮತ್ತು ಇಂಧನಕ್ಕಾಗಿ ಮನವಿ ಮಾಡುವುದರಿಂದ ಯುನೈಟೆಡ್ ನೇಷನ್ಸ್ ಮತ್ತು ಇತರ ಸಂಸ್ಥೆಗಳಿಂದ ಸಹಾಯದ ಟ್ರಕ್‌ಲೋಡ್‌ಗಳು ಈಜಿಪ್ಟ್‌ನ ಗಾಜಾದ ಗಡಿಗೆ ಬಂದಿವೆ.
ಗಾಜಾ ಜನರಿಗೆ ಸಹಾಯಹಸ್ತ!
ಗಾಜಾದಲ್ಲಿನ ನಾಗರಿಕರನ್ನು ತಲುಪಲು ದಾನಿ ರಾಷ್ಟ್ರಗಳು ಮತ್ತು ಬಹುಪಕ್ಷೀಯ ಸಂಸ್ಥೆಗಳಿಂದ ಮಾನವೀಯ ನೆರವು ನೀಡುವ ಯೋಜನೆಯನ್ನು ಅಭಿವೃದ್ಧಿಪಡಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಒಪ್ಪಿಕೊಂಡಿವೆ ಎಂದು ಆಂಟೋನಿ ಬ್ಲಿಂಕೆನ್ ತಿಳಿಸಿದ್ದಾರೆ.
"ಜೋ ಬಿಡೆನ್ ಅವರು ಇಸ್ರೇಲ್ ಜೊತೆಗಿನ ಅಮೆರಿಕದ ಸ್ನೇಹವನ್ನು ಪುನರುಚ್ಚರಿಸಲಿದ್ದಾರೆ. ಕನಿಷ್ಠ 30 ಅಮೆರಿಕನ್ನರು ಸೇರಿದಂತೆ 1,400 ಕ್ಕೂ ಹೆಚ್ಚು ಜನರನ್ನು ಹಮಾಸ್ ಹತ್ಯೆ ಮಾಡಿದ ನಂತರ ಇಸ್ರೇಲ್ ಪ್ರತಿದಾಳಿಯನ್ನು ಅವರು ಸಮರ್ಥನೆ ಮಾಡಲಿದ್ದಾರೆ. ಇಸ್ರೇಲ್ ತನ್ನ ಜನರನ್ನು ಹಮಾಸ್ ಮತ್ತು ಇತರ ಭಯೋತ್ಪಾದಕರಿಂದ ರಕ್ಷಿಸಲು ಮತ್ತು ಭವಿಷ್ಯದಲ್ಲಿ ತನ್ನ ಮೇಲೆ ಆಗಬಹುದಾದ ದಾಳಿಯನ್ನು ತಡೆಯುವ ಹಕ್ಕು ಮತ್ತು ಕರ್ತವ್ಯವನ್ನು ಹೊಂದಿದೆ ಎಂದು ಹೇಳಲಿದ್ದಾರೆ.
ಒತ್ತೆಯಾಳುಗಳ ವೀಡಿಯೊ ಬಿಡುಗಡೆ ಮಾಡಿದ ಹಮಾಸ್
ಹಮಾಸ್ ಉಗ್ರರು ಸೋಮವಾರ ರಾತ್ರಿ ಇಸ್ರೇಲ್‌ನಿಂದ ಅಪಹರಿಸಿದ ಒತ್ತೆಯಾಳುಗಳಲ್ಲಿ ಒಬ್ಬನನ್ನು ತೋರಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ ಎಂದು ಬಿಬಿಸಿ ವರದಿಯಲ್ಲಿ ಹೇಳಿದೆ. ವೀಡಿಯೊದಲ್ಲಿ, ಮಹಿಳೆ ತನ್ನನ್ನು 21 ವರ್ಷದ ಮಾಯಾ ಶೆಮ್ ಎಂದು ಹೇಳಿಕೊಂಡಿದ್ದು ಮತ್ತು ಇಸ್ರೇಲ್‌ನ ಪಾರ್ಟಿಯಿಂದ ತನ್ನನ್ನು ಅಪಹರಿಸಿರುವುದಾಗಿ ತಿಳಿಸಿದ್ದು, ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾಳೆ.












Click it and Unblock the Notifications