ಮಧ್ಯಪ್ರಾಚ್ಯ ಮತ್ತೆ ಧಗಧಗ, ಇಸ್ರೇಲ್ & ಇತರ ದೇಶಗಳ ನಡುವೆ ಕಿರಿಕ್ ಶುರು?
ಮಧ್ಯಪ್ರಾಚ್ಯ ಅನ್ನೋದು ಕೊತಕೊತ ಕುದಿಯುವ ಕುಲುಮೆ ರೀತಿ ಆಗಿದ್ದು, ಪದೇ ಪದೇ ಇಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅದರಲ್ಲೂ ಗಾಜಾ ಪಟ್ಟಿಯಲ್ಲಿ ಯುದ್ಧ ಶುರುವಾದ ನಂತರ ನರಕದ ರೀತಿ ವಾತಾವರಣ ನಿರ್ಮಾಣ ಆಗಿದೆ. ಇಂತಹ ಪರಿಸ್ಥಿತಿಯಲ್ಲೇ ದಿಢೀರ್ ಮತ್ತೊಂದು ವಿಚಾರ ಮಧ್ಯಪ್ರಾಚ್ಯ ಭಾಗದಲ್ಲಿ ಬೆಂಕಿಯನ್ನೇ ಹೊತ್ತಿಸಿಬಿಟ್ಟಿದೆ. ಹಾಗಾದ್ರೆ ಮತ್ತೊಂದು ಮಹಾಯುದ್ಧ ಶುರುವಾಗುತ್ತಾ? ಏನಿದು ಹೊಸ ಕಿರಿಕ್?
ಅಂದಹಾಗೆ ವೆಸ್ಟ್‌ಬ್ಯಾಂಕ್ ಭಾಗದಲ್ಲಿ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಯಲ್ಲಿ ಹಲವರನ್ನ ಅರೆಸ್ಟ್ ಮಾಡಲಾಗಿದೆ. ಈ ಬಗ್ಗೆ ಇದೀಗ ಹೊಸ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಮಧ್ಯಪ್ರಾಚ್ಯ ಈಗ ಮತ್ತೆ ಧಗಧಗ ಅಂತಿದೆ. ಅದರಲ್ಲೂ ಒಂದೇ ದಿನ ಇಸ್ರೇಲಿ ಪಡೆಗಳು ಮಾಜಿ ಕೈದಿಗಳು ಸೇರಿ ಒಟ್ಟು 40 ಪ್ಯಾಲೆಸ್ಟೀನಿಯನ್ ಪ್ರಜೆಗಳನ್ನ ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಚಾರ ಈಗ ಭಾರಿ ದೊಡ್ಡ ಗಲಾಟೆಗೆ ಕಾರಣವಾಗಿದೆ. ಏಕೆಂದರೆ ಇಸ್ರೇಲ್ ಈಗ ಉಗ್ರರಿಗೆ ಘೋರ ಶಿಕ್ಷೆಯನ್ನು ಜಾರಿಗೆ ತರಲು ಹೊರಟಿರುವ ನಡುವೆ ಸಾಕಷ್ಟು ಜನರನ್ನು ಬಂಧಿಸಿರುವುದು ಹಲವು ಆರೋಪ & ಪ್ರತ್ಯಾರೋಪಕ್ಕೆ ವೇದಿಕೆ ಒದಗಿಸಿದೆ.

ಈವರೆಗೂ 20,500 ಜನರ ಬಂಧನ?
ಇದೀಗ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೆಬ್ರಾನ್, ನಬ್ಲಸ್, ತುಲ್ಕರೆಮ್ & ರಾಮಲ್ಲಾ ಭಾಗದಲ್ಲಿ ವಾಸ ಇರುವ ಹಲವರನ್ನು ಬಂಧಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ. ಈ ಮೂಲಕ ಸದ್ಯ ಅಕ್ಟೋಬರ್ 7, 2023 ರಿಂದ ವೆಸ್ಟ್‌ಬ್ಯಾಂಕ್ ಭಾಗದಲ್ಲಿ ಸುಮಾರು 20,500 ಜನರನ್ನು ಬಂಧನ ಮಾಡಲಾಗಿದೆ. ಈ ಮೂಲಕ ಗಾಜಾ ಪಟ್ಟಿಯಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ, ಅಲ್ಲದೆ ಮಧ್ಯಪ್ರಾಚ್ಯ ಕೂಡ ಧಗಧಗ ಹೊತ್ತಿ ಉರಿಯುತ್ತಿದೆ. ಹಾಗೇ ಜನರು ಕೂಡ ಭಯದಲ್ಲೇ ದಿನದೂಡುವ ಪರಿಸ್ಥಿತಿ ಇದೀಗ ನಿರ್ಮಾಣ ಆಗಿದೆ.
ಆಹಾರ ಇಲ್ಲದೆ ಪರದಾಡುತ್ತಿರುವ ಜನ?
ಒಟ್ನಲ್ಲಿ ಮಧ್ಯಪ್ರಾಚ್ಯ ಧಗಧಗ ಹೊತ್ತಿ ಉರಿಯುತ್ತಿದ್ದು, ಪ್ರತಿಕ್ಷಣ ಕೂಡ ಯುದ್ಧದ ಬೀಕರತೆ ಹೆಚ್ಚಾಗುತ್ತಲೇ ಇದೆ. ಈ ಪೈಕಿ ಗಾಜಾ ಯುದ್ಧ ಶುರುವಾದ ನಂತರ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದ್ದು, ಯಾವ ಕ್ಷಣದಲ್ಲಿ ಏನಾಗುತ್ತೋ? ಅನ್ನೋ ಆತಂಕ ಕೂಡ ಮನೆ ಮಾಡಿದೆ. ಹಾಗೇ ಇನ್ನೊಂದು ಕಡೆ ಗಾಜಾ ಪಟ್ಟಿಯಲ್ಲಿ ಸಾಮಾನ್ಯ ಜನರು ದಿನದಿಂದ ದಿನಕ್ಕೆ ನಿತ್ಯ ಬಳಸುವ ವಸ್ತುಗಳು ಇಲ್ಲದೆ, ಸರಿಯಾಗಿ ಆಹಾರ ಸಿಗದೆ ಪರದಾಡುತ್ತಿರುವ ಆರೋಪ ಕೂಡ ಕೇಳಿಬರ್ತಿದೆ. ಹೀಗಿದ್ದರೂ ಯುದ್ಧ ನಿಲ್ಲುವ ಯಾವುದೇ ಮುನ್ಸೂಚನೆ ಈವರೆಗೂ ಸಿಕ್ಕಿಲ್ಲ.












Click it and Unblock the Notifications