ಯುದ್ಧದ ಬೆಂಕಿಯಲ್ಲಿ ಬೆಂದ ಜನ: ಬದುಕು ಉಳಿಸಿಕೊಳ್ಳಲು ಹರಸಾಹಸ...
ಯಾರದ್ದೋ ಲಾಭಕ್ಕೆ ಇನ್ಯಾರದ್ದೋ ಜೀವ & ಜೀವನ ಹಾಳಾಗಿ ಹೋಗುತ್ತಿದೆ. ಯಾರದ್ದೋ ತಪ್ಪಿಗೆ ಅಮಾಯಕ ಜನರ ಜೀವನ ಬೀದಿಗೆ ಬಿದ್ದಿದೆ. ಅಂದಹಾಗೆ ಇದು ಯಾವುದೋ ಬೇರೆ ಗ್ರಹದ ಪರಿಸ್ಥಿತಿ ಅಲ್ಲ, ಸೋ ಕಾಲ್ಡ್ ಮನುಷ್ಯ ಬದುಕುತ್ತಿರುವ ಭೂಮಿಯ ಮೇಲೆ ಇರುವ ಪ್ರಸ್ತುತ ನರಕವಾಗಿ ಬದಲಾಗಿರುವ ಯುದ್ಧ ಪೀಡಿತ ಗಾಜಾಪಟ್ಟಿ ಪರಿಸ್ಥಿತಿ. ತುತ್ತು ಅನ್ನಕ್ಕೆ & ಹನಿಹನಿ ನೀರಿಗೂ ಇಲ್ಲಿನ ಜನ ಪರದಾಡುತ್ತಿದ್ದಾರೆ.
ಹಮಾಸ್ ಉಗ್ರರು ದಾಳಿ ನಡೆಸಿ ಮಾಡಿದ ಕಿತಾಪತಿಗೆ ವಿರುದ್ಧವಾಗಿ ಇಸ್ರೇಲ್ ಸೇನೆ ಕಳೆದ ವರ್ಷ ಅಕ್ಟೋಬರ್ 7 ರಂದು, ಭೀಕರ ಯುದ್ಧ ಘೋಷಣೆ ಮಾಡಿತ್ತು. ಹೀಗೆ ಯುದ್ಧವನ್ನ ಘೋಷಣೆ ಮಾಡಿ 5 ತಿಂಗಳು ಮುಗಿದಿದ್ದರೂ ಯುದ್ಧ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಪರಿಸ್ಥಿತಿ ದಿನದಿಂದ ದಿನಕ್ಕೆ ಕೈಮೀರಿ ಹೋಗುತ್ತಿದ್ದು, ಯುದ್ಧ ಪೀಡಿತ ಗಾಜಾದಲ್ಲಿ ಈವರೆಗೆ ಒಟ್ಟು 31,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಆರೋಪವೂ ಇದೆ. ಇಸ್ರೇಲ್ ದಾಳಿ ವೇಳೆ ಇವರೆಲ್ಲಾ ಮೃತಪಟ್ಟಿದ್ದಾರೆ ಎಂಬ ಆರೋಪ ಇದಾಗಿದೆ.

ರಂಜಾನ್ ಹಬ್ಬದಲ್ಲೂ ಜನರಿಗೆ ಸಮಸ್ಯೆ
ಹೀಗಿದ್ದಾಗಲೇ, ಇಸ್ಲಾಂ ಧರ್ಮಿಯರಿಗೆ ಅತ್ಯಂತ ಪವಿತ್ರ ವ್ರತ & ಹಬ್ಬ ಎನಿಸಿಕೊಂಡಿರುವ ರಂಜಾನ್ ದಿನಗಳು ಆಗಮಿಸಿವೆ. ಈ ಸಮಯದಲ್ಲೂ ಯುದ್ಧ ನಿಲ್ಲದೆ ಮುಂದುವರಿದಿರುವುದು ಗಾಜಾ ಜನರಿಗೆ ಸಂಕಷ್ಟವನ್ನ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಈ ಬಗ್ಗೆ ಜಗತ್ತಿನಾದ್ಯಂತ ಬೇಸರ ಸೃಷ್ಟಿಯಾಗಿದ್ದು, ಆದಷ್ಟು ಬೇಗ ಯುದ್ಧ ನಿಲ್ಲಿಸಬೇಕು ಎಂಬ ಆಗ್ರಹ ಇದೀಗ ಕೇಳಿ ಬಂದಿದೆ. ಆದರೆ ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಸದ್ಯಕ್ಕೆ ಯುದ್ಧ ನಿಲ್ಲುವ ಲಕ್ಷಣ ಕಾಣ್ತಾ ಇಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಈ ಸ್ಥಿತಿ ಇನ್ನಷ್ಟು ಕೈಮೀರಿ ಹೋಗುವ ಮುನ್ಸೂಚನೆ ಸಿಗುತ್ತಿದೆ.
23 ಲಕ್ಷ ಜನರ ಕಥೆ ಏನು?
ಗಾಜಾಪಟ್ಟಿ ಜನರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಒಂದು ಕಡೆ ಉಗ್ರರ ಸರ್ಕಾರ ಹಮಾಸ್‌ಗೆ ಹೆದರಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ, ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ ಇಸ್ರೇಲ್‌ನ ಸೇನೆ ಈಗ ಗಾಜಾ ಸಾಮಾನ್ಯ ಜನರ ಪ್ರಾಣ ತೆಗೆಯುತ್ತಿದೆ ಎಂಬ ಗಂಭಿರ ಆರೋಪವನ್ನ ಮಾಡಲಾಗುತ್ತಿದೆ. ಆದರೆ ಇದ್ಯಾವುದಕ್ಕೂ ಇಸ್ರೇಲ್ ಕೇರ್ ಮಾಡುತ್ತಿಲ್ಲ. ಯಾಕಂದ್ರೆ ಈ ಬಾರಿ ಹಮಾಸ್ ಉಗ್ರರನ್ನ ಬುಡ ಸಮೇತ ಕಿತ್ತು ಹಾಕೋಕೆ, ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧಾರ ಮಾಡಿದ್ದಾರೆ. ಹೀಗಾಗಿ ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದು, ಸುಮಾರು 23 ಲಕ್ಷ ಜನರು ಈಜಿಪ್ಟ್ ಗಡಿ ಬಳಿ ಅತಂತ್ರರಾಗಿದ್ದಾರೆ.

ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರ ಪಡೆ ಇಸ್ರೇಲ್ ವಿರುದ್ಧ 5000 ರಾಕೆಟ್ ಉಡಾಯಿಸಿ ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ, ಬಾಂಬ್ ಹಿಡಿದು ಇಸ್ರೇಲ್ ಒಳ ನುಗ್ಗಿದ್ರು. ಈ ಘಟನೆ ಬಳಿಕ ಪರಿಸ್ಥಿತಿ ಕೈಮೀರಿ ಹೋಗಿತ್ತು. ಯುದ್ಧವು ಶುರುವಾಗಿ 5 ತಿಂಗಳು ಕಳೆದಿದ್ದು ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಾಗೇ ಇನ್ನೊಂದು ಕಡೆ ಉಕ್ರೇನ್ ಮತ್ತು ರಷ್ಯಾ ನಡುವೆ ಕೂಡ ಇದೇ ರೀತಿಯ ತಿಕ್ಕಾಟ ನಡೆಯುತ್ತಿದೆ. ಹೀಗಾಗಿ ಜಗತ್ತಿಗೂ ಟೆನ್ಷನ್ ಶುರುವಾಗಿದೆ. ಸುಖಾಸುಮ್ಮನೆ ಶುರುವಾದ ಯುದ್ಧ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.












Click it and Unblock the Notifications