ಅಮೆರಿಕದ ಕದನ ವಿರಾಮ ಪ್ರಸ್ತಾವನೆ ತಿರಸ್ಕರಿಸಿದ ಇರಾನ್: ಶಾಶ್ವತ ಯುದ್ಧ ವಿರಾಮಕ್ಕೆ ಪಟ್ಟು
ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಅಮೆರಿಕ ಮಂಡಿಸಿದ್ದ ತಾತ್ಕಾಲಿಕ ಕದನ ವಿರಾಮದ ಪ್ರಸ್ತಾವನೆಯನ್ನು ಇರಾನ್ ಅಧಿಕೃತವಾಗಿ ತಿರಸ್ಕರಿಸಿದೆ. ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಬೇಕೆಂದು ಇರಾನ್ ಪಟ್ಟು ಹಿಡಿದಿದೆ ಎಂದು ವರದಿಯಾಗಿದೆ.
ಅಮೆರಿಕದ 15 ಅಂಶಗಳ ಪ್ರಸ್ತಾವನೆಗೆ ಪ್ರತಿಯಾಗಿ ಇರಾನ್ ತನ್ನದೇ ಆದ 10 ಅಂಶಗಳ ಪ್ರತಿ ಪ್ರಸ್ತಾವನೆಯನ್ನು ಪಾಕಿಸ್ತಾನದ ಮೂಲಕ ರವಾನಿಸಿದೆ. "ತಾತ್ಕಾಲಿಕ ಕದನ ವಿರಾಮವು ಶತ್ರುಗಳಿಗೆ ಮತ್ತೆ ಯುದ್ಧಕ್ಕೆ ಸಜ್ಜಾಗಲು ಸಮಯ ನೀಡಿದಂತಾಗುತ್ತದೆ. ನಮಗೆ ಬೇಕಿರುವುದು ಯುದ್ಧದ ಸಂಪೂರ್ಣ ಅಂತ್ಯ ಮತ್ತು ಅದು ಮತ್ತೆ ಮರುಕಳಿಸದಂತೆ ಆಗಬೇಕು," ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಇರಾನ್‌ನ ಪ್ರಮುಖ ಬೇಡಿಕೆಗಳು
* ಇರಾನ್ ಮೇಲಿನ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಬೇಕು.
* ಯುದ್ಧದಿಂದಾದ ಹಾನಿಗೆ ಪರಿಹಾರ ನೀಡಬೇಕು ಮತ್ತು ಪುನರ್ನಿರ್ಮಾಣಕ್ಕೆ ವ್ಯವಸ್ಥೆ ಮಾಡಬೇಕು.
* ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್‌ನ ಸಾರ್ವಭೌಮತ್ವವನ್ನು ಅಂಗೀಕರಿಸಬೇಕು.
* ತನ್ನ ನಾಯಕರ ಹತ್ಯೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ಅಮೆರಿಕ ಮತ್ತು ಇರಾನ್ ನಡುವಿನ ಈ ಬಿಕ್ಕಟ್ಟು ಬಗೆಹರಿಸಲು ಪಾಕಿಸ್ತಾನ ಪ್ರಮುಖ ಸಂಧಾನದ ಪಾತ್ರ ವಹಿಸುತ್ತಿದೆ. ಪಾಕಿಸ್ತಾನದ ಸೇನಾ ಮುಖ್ಯಸ್ಥರು ಎರಡೂ ದೇಶಗಳ ಉನ್ನತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ವರದಿ ಆಗಿದೆ.
ಅಮೆರಿಕವು ತನ್ನ ಪ್ರಸ್ತಾವನೆಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಕೈಬಿಡಬೇಕು ಮತ್ತು ಹಾರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸಬೇಕು ಎಂಬ ಶರತ್ತುಗಳನ್ನು ವಿಧಿಸಿತ್ತು. ಆದರೆ ಇವುಗಳನ್ನು "ತರ್ಕಬದ್ಧವಲ್ಲದ ಬೇಡಿಕೆಗಳು" ಎಂದು ಕರೆದಿರುವ ಇರಾನ್, ತನ್ನ ಹಿತಾಸಕ್ತಿಗಳಿಗೆ ಅನುಗುಣವಾಗಿ ಮಾತ್ರ ನಿರ್ಧಾರ ತೆಗೆದುಕೊಳ್ಳುವುದಾಗಿ," ಹೇಳಿದೆ.












Click it and Unblock the Notifications