Shubhanshu Shukla: ಭೂಮಿಯತ್ತ ಪ್ರಯಾಣ ಆರಂಭಿಸಿದ ಶುಭಾಂಶು ಶುಕ್ಲಾ ನೇತೃತ್ವದ ಆಕ್ಸಿಯಮ್-4 ತಂಡ
Shubhanshu Shukla: ಶುಭಾಂಶು ಶುಕ್ಲಾ ನೇತೃತ್ವದ ಆಕ್ಸಿಯಮ್-4 ತಂಡವು ಭೂಮಿಯತ್ತ ಪ್ರಯಾಣ ಆರಂಭಿಸಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) 18 ದಿನಗಳ ಯಶಸ್ವಿ ವಾಸವನ್ನು ಶುಕ್ಲಾ ತಂಡ ಮುಕ್ತಾಯಗೊಳಿಸಿದೆ. ಆ ನಂತರ ಸೋಮವಾರ ಸಂಜೆ 4:30ರ ( ಭಾರತೀಯ ಸಮಯದಂತೆ ) ಸೂಮಾರಿಗೆ ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಐಎಸ್‌ಎಸ್‌ನಿಂದ ಬೇರ್ಪಟ್ಟಿದೆ. ಈ ಬಾರಿಯ ಮಿಷನ್‌ನಲ್ಲಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶುಕ್ಲಾ ನೇತೃತ್ವದ ಡ್ರ್ಯಾಗನ್ ನೌಕೆಯು ಭೂಮಿಗೆ 250 ಕಿಲೋ ಪರಿಕರಗಳು ಮತ್ತು ಅನೇಕ ಪ್ರಯೋಗ ಮಾದರಿಗಳನ್ನು ತರಲಿದೆ. ಜುಲೈ 15ರಂದು ಸುಮಾರು ಮಧ್ಯಾಹ್ನ 3 ಗಂಟೆಗೆ ( ಭಾರತೀಯ ಸಮಯದಂತೆ ) ಕ್ಯಾಲಿಫೋರ್ನಿಯಾ ಕರಾವಳಿಯಲ್ಲಿ ನೌಕೆ ಲ್ಯಾಂಡ್ ಆಗಲಿದೆ. ಹಿಂತಿರುಗುವ ಪ್ರಯಾಣಕ್ಕೆ ಸುಮಾರು 22.5 ಗಂಟೆಗಳ ಸಮಯ ಬೇಕಾಗಲಿದೆ ಎಂದು ನಾಸಾ ತಿಳಿಸಿದೆ.

ಆಕ್ಸಿಯಮ್-4 ತಂಡದಲ್ಲಿ ಇಸ್ರೋನಿಂದ ಶುಭಾಂಶು ಶುಕ್ಲಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯಿಂದ ಸ್ಲಾವೋಸ್ ಉಜ್ನಾನ್‌ಸ್ಕಿ-ವಿಸ್ನೆವ್‌ಸ್ಕಿ (ಪೋಲೆಂಡ್), ಹಂಗೇರಿಯಿಂದ ಟಿಬೋರ್ ಕಪು ಮತ್ತು ಮಾಜಿ ನಾಸಾ ಬಾಹ್ಯಾಕಾಶಯಾನಿ ಪೆಗಿ ವಿಟ್ಸನ್ ಇದ್ದಾರೆ. ಸುಮಾರು ಎರಡು ವಾರಗಳ ಕಾಲ ವಿವಿಧ ವಿಜ್ಞಾನ ಪ್ರಯೋಗಗಳನ್ನು ಬಾಹ್ಯಾಕಾಶದಲ್ಲಿ ನಡೆಸಿದ್ದಾರೆ.
ಈ ಮಿಷನ್‌ನಲ್ಲಿ ಆರೋಗ್ಯ, ಕೃಷಿ, ಬಾಹ್ಯಾಕಾಶ ಸಂಶೋಧನೆ, ಮಾನಸಿಕ ಆರೋಗ್ಯ ಮತ್ತು ಬಾಹ್ಯಾಕಾಶ ಪೋಷಣೆಗೆ ಸಂಬಂಧಿಸಿದ ಅನೇಕ ಪ್ರಯೋಗಗಳು ನಡೆದಿವೆ ಎಂದು ತಿಳಿದುಬಂದಿದೆ. ವಿಶೇಷವಾಗಿ ಮೈಕ್ರೊಗ್ರಾವಿಟಿಯಲ್ಲಿ ಮನುಷ್ಯರ ಮೂಳೆ ಮತ್ತು ಮಾಂಸಖಂಡಗಳ ಕುಗ್ಗುವಿಕೆ ಕುರಿತ ಅಧ್ಯಯನವನ್ನು ಶುಕ್ಲಾ ನಡೆಸಿದ್ದರೆ. ಜೊತೆಗೆ, ದೀರ್ಘಾವಧಿಯ ಬಾಹ್ಯಾಕಾಶ ಪ್ರಯಾಣಗಳಿಗೆ ಪೋಷಕಾಂಶವಾಗಿ ಮೈಕ್ರೋಆಲ್ಗೀ ಬೆಳೆಸುವ ಪ್ರಯೋಗವನ್ನೂ ಅವರು ನಡೆಸಿದ್ದಾರೆ ಎಂದು ನಾಸಾ ಹೇಳಿದೆ.
ಈ ಮಿಷನ್ ಮೂಲಕ ಭಾರತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಹಕಾರದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದೆ. 1984ರಲ್ಲಿ ಭಾರತದ ರಾಕೇಶ್ ಶರ್ಮಾ ಅವರು ಬಾಹ್ಯಾಕಾಶಕ್ಕೆ ತೆರಳಿದ್ದರು. ಆ ನಂತರ ಬಾಹ್ಯಾಕಾಶಕ್ಕೆ ಹೋದ ಎರಡನೇ ಭಾರತೀಯ ಎಂಬ ಖ್ಯಾತಿಗೆ ಶುಕ್ಲಾ ಭಾಜನರಾಗಿದ್ದಾರೆ.
ಈ ಪ್ರಯಾಣದ ವೇಳೆ ಶುಕ್ಲಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತನಾಡಿದ್ದಾರೆ. ಲಖ್ನೋದಲ್ಲಿರುವ ಶುಕ್ಲಾ ಕುಟುಂಬ ಸುರಕ್ಷಿತ ಹಿಂತಿರುಗುವಿಕೆಗೆ ಪ್ರಾರ್ಥನೆ ನಡೆಸುತ್ತಿದೆ. ತಂದೆ ಶಂಭು ದಯಾಲ್ ಶುಕ್ಲಾ ಮತ್ತು ತಾಯಿ ಆಶಾ ದೇವಿ, ಬಾಹ್ಯಾಕಾಶದಲ್ಲಿದ್ದಾಗ ಅವರೊಂದಿಗೆ ಸಂವಾದ ನಡೆಸಿದ ಅನುಭವವನ್ನು ಹಂಚಿಕೊಂಡಿದ್ದಾರೆ.
ಭೂಮಿಗೆ ಮರಳಿದ ನಂತರ, ಶುಕ್ಲಾ ಮತ್ತು ತಂಡವನ್ನು ನಾಸಾ ಜಾನ್ಸನ್ ಸ್ಪೇಸ್ ಸೆಂಟರ್‌ಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ವೈದ್ಯಕೀಯ ಪರೀಕ್ಷೆಗಳು ಮತ್ತು ಮಾನಸಿಕ ಆರೋಗ್ಯ ಪರೀಕ್ಷೆಗಳು ನಡೆಯಲಿವೆ. ದೀರ್ಘಾವಧಿಯ ಮೈಕ್ರೊಗ್ರಾವಿಟಿ ಅನುಭವದಿಂದ ದೇಹ ಪುನಃ ಭೂಮಿಯ ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ. ಈ ಮಿಷನ್ ಯಶಸ್ವಿಗೆ ಭಾರತದಲ್ಲಿ ವಿಜ್ಞಾನ ಸಂಸ್ಥೆಗಳು ಮತ್ತು ಸರ್ಕಾರದಿಂದ ಗೌರವ ಸಿಗಲಿದೆ.
ಶುಭಾಂಶು ಶುಕ್ಲಾ ಅವರ ಈ ಸಾಧನೆ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಮಹತ್ವದ ಮೈಲಿಗಲ್ಲಾಗಿದೆ. ಇಸ್ರೋ ಮತ್ತು ನಾಸಾ ನಡುವಿನ ಸಹಕಾರದ ಭಾಗವಾಗಿ ಈ ಮಿಷನ್ ಯಶಸ್ವಿಯಾಗಿದ್ದು, ಮುಂದಿನ ಗಗನಯಾನ ಯೋಜನೆಗಳಿಗೆ ದಾರಿ ತೋರಿದೆ.












Click it and Unblock the Notifications