PM Narendra Modi: ಹೊಸ ಕುವೈತ್ ನಿರ್ಮಾಣಕ್ಕೆ ಭಾರತದ ಕೌಶಲ್ಯ ಸಹಾಯ; ಪ್ರಧಾನಿ ನರೇಂದ್ರ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ಕುವೈತ್ ನಗರಕ್ಕೆ ಭೇಟಿ ಕೊಟ್ಟಿದ್ದಾರೆ. 43 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡಿದ ಹೆಗ್ಗಳಿಕೆ ನರೇಂದ್ರ ಮೋದಿಯವರದ್ದಾಗಿದೆ. ಕುವೈತ್ ಎಮಿರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ನೀಡಿದ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಕುವೈತ್‌ಗೆ ಭೇಟಿ ನೀಡಿದ್ದು, ಭಾರತೀಯ ಸಮುದಾಯವನ್ನು ಭೇಟಿ ಮಾಡಿ, ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
'ಹಾಲಾ ಮೋದಿ' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕುವೈತ್ ಅಭಿವೃದ್ಧಿಯಲ್ಲಿ ಭಾರತೀಯರ ಕೊಡುಗೆಯನ್ನು ಕೊಂಡಾಡಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಕುವೈತ್ ನಿರ್ಮಾಣಕ್ಕೆ ಬೇಕಾದ ಮಾನವ ಶಕ್ತಿ, ಕೌಶಲ್ಯ ಮತ್ತು ತಂತ್ರಜ್ಞಾನವನ್ನು ಭಾರತ ಪೂರೈಸುತ್ತದೆ ಎಂದು ಭರವಸೆ ನೀಡಿದ್ದಾರೆ.

ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ ಅವರು, "ಭಾರತದಿಂದ ಕುವೈತ್‌ಗೆ ಪ್ರಯಾಣಿಸಲು ನಾಲ್ಕು ಗಂಟೆ ಸಾಕಾಗುತ್ತದೆ ಆದರೆ ಭಾರತೀಯ ಪ್ರಧಾನಿಯೊಬ್ಬರು ಕುವೈತ್‌ಗೆ ಬರಲು ನಾಲ್ಕು ದಶಕಗಳು ಬೇಕಾಯಿತು" ಎಂದು ಹೇಳಿದರು.
ಶುಭಾಶಯ ಕೋರಿದ ಮೋದಿ
ಮುಂದಿನ ವಾರದಲ್ಲಿ ಬರುವ ಹಬ್ಬಗಳಿಗೆ ಮುಂಚಿತವಾಗಿಯೇ ಶುಭಾಶಯ ಕೋರಿದ ನರೇಂದ್ರ ಮೋದಿ, "ನೀವೆಲ್ಲರೂ ಭಾರತದ ವಿವಿಧ ಭಾಗಗಳಿಂದ ಬಂದಿದ್ದೀರಾ. ನಿಮ್ಮನ್ನು ಒಟ್ಟಾಗಿ ನೋಡಿದರೆ ಮಿನಿ ಭಾರತವನ್ನು ನೋಡಿದಂತೆ ಆಗುತ್ತಿದೆ. ಪ್ರತಿ ವರ್ಷ ನೂರಾರು ಭಾರತೀಯರು ಕುವೈತ್‌ಗೆ ಬರುತ್ತಾರೆ. ಕುವೈತ್ ಸಮಾಜಕ್ಕೆ ಭಾರತೀಯ ಸ್ಪರ್ಶ ಸಿಕ್ಕಿದೆ. ಕುವೈತ್‌ನ ಸುಂದರ ಚಿತ್ರದಲ್ಲಿ ಭಾರತೀಯರು ಕೌಶಲ್ಯದ ಬಣ್ಣಗಳನ್ನು ತುಂಬಿದ್ದಾರೆ." ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕುವೈತ್ ದೇಶಕ್ಕೆ ನೀಡಿದ ಸಹಾಯವನ್ನು ನೆನಪಿಸಿಕೊಂಡರು. ಕುವೈತ್‌ಗೆ ಏನಾದರೂ ಕಷ್ಟ ಬಂದರೆ ಭಾರತವನ್ನು ನೆನಪಿಸಿಕೊಳ್ಳಬಹುದು ಎಂದು ಕುವೈತ್ ಎಮಿರ್ ಶೇಖ್‌ಗೆ ಭರವಸೆ ನೀಡಿದರು.
ಎರಡೂ ದೇಶಗಳ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ ಮೋದಿ, ಸ್ವಾತಂತ್ರ್ಯದ ನಂತರ ಕುವೈತ್ ಅನ್ನು ಗುರುತಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದು. ಹಲವು ನೆನಪುಗಳನ್ನು ಹೊಂದಿರುವ ದೇಶಕ್ಕೆ, ಸಮಾಜಕ್ಕೆ ಭೇಟಿ ಕೊಡುವುದು ನನಗೆ ಇಷ್ಟವಾಗುತ್ತದೆ. ಕುವೈತ್ ಸರ್ಕಾರ ಮತ್ತು ಜನತೆಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದರು.
ಬಾಲಿವುಡ್ ನಟ ನಟ ದಿಲೀಪ್ ಕುಮಾರ್ ಕುವೈತ್‌ನಲ್ಲಿ ಮೊದಲ ಭಾರತೀಯ ರೆಸ್ಟೋರೆಂಟ್ ಉದ್ಘಾಟಿಸಿದ ಘಟನೆಯನ್ನು ಕೂಡ ಮೋದಿ ಪ್ರಸ್ತಾಪಿಸಿದರು. ಕುವೈತ್ ಜನರನ್ನು ಭಾರತಕ್ಕೆ ಆಹ್ವಾನಿಸಿದ ನರೇಂದ್ರ ಮೋದಿ ನಿಮ್ಮ ಸ್ನೇಹಿತರನ್ನು ಭಾರತದ ಆಹಾರದ ಅನುಭವ ಪಡೆಯಲು ಕರೆತನ್ನಿ ಎಂದರು.
ಕುವೈತ್‌ನ ಗಾಯಕ ಮುಬಾರಕ್ ಅಲ್ ರಶೇದ್ 'ಹಾಲಾ ಮೋದಿ' ಕಾರ್ಯಕ್ರಮದಲ್ಲಿ 'ಸಾರೆ ಜಹಾನ್ ಸೆ ಅಚ್ಚಾ' ಹಾಡು ಹಾಡುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಭಾರತದ ಪ್ರಧಾನಿ ಮೋದಿಯವರ ಮಾತನ್ನು ಕೇಳಿದ ನಂತರ ನಾನು ಕುವೈತ್ ದೇಶದವನು ಎಂದು ಹೆಮ್ಮೆಯಾಗುತ್ತಿದೆ ಎಂದು ಹೇಳಿದರು.












Click it and Unblock the Notifications