Myanmar Earthquake: ಮ್ಯಾನ್ಮಾರ್ ಬೆಂಬಲಕ್ಕೆ ನಿಂತ ಭಾರತ, ಮೊದಲ ನೆರವು ರವಾನೆ
ಭೀಕರ ಭೂಕಂಪದ ಪರಿಣಾಮ ನಲುಗಿ ಹೋಗಿರುವ ಮ್ಯಾನ್ಮಾರ್ ದೇಶಕ್ಕೆ ಬೆಂಬಲ ಅತ್ಯಗತ್ಯ. ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪನಕ್ಕೆ ನಲುಗಿ ಹೋಗಿರುವ ಮ್ಯಾನ್ಮಾರ್ ದೇಶ ಈಗ ಶವಗಳ ರಾಶಿಯಿಂದ ತುಂಬಿ ಹೋಗಿದ್ದು, ಎಲ್ಲಿ ನೋಡಿದರೂ ಬರೀ ಕುಸಿದು ಬಿದ್ದ ಕಟ್ಟಡಗಳೇ ಕಾಣುತ್ತಿವೆ. ಇಂತಹ ಸಮಯದಲ್ಲಿ ಮ್ಯಾನ್ಮಾರ್ ಬೆಂಬಲಕ್ಕೆ ನಿಂತಿರುವ ಭಾರತ, ಮೊದಲ ನೆರವು ರವಾನೆ ಮಾಡಿದೆ.
ಭಾರತದ ನೆರೆಯ ದೇಶವಾಗಿರುವ ಮ್ಯಾನ್ಮಾರ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಳ್ಳುವ ಅಗತ್ಯತೆ ಭಾರತಕ್ಕೆ ಇದೆ. ಅದರಲ್ಲೂ ಹಲವು ವಿಚಾರಗಳಲ್ಲಿ ಭಾರತಕ್ಕೆ ಇದೇ ಮ್ಯಾನ್ಮಾರ್ ದೇಶ ಸಹಾಯ ಮಾಡಿದೆ. ಹೀಗಿದ್ದಾಗ ಭಾರತ ಸರ್ಕಾರ ಇದೀಗ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಭೂಕಂಪ ಪೀಡಿತ ಮ್ಯಾನ್ಮಾರ್‌ನಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಅಗತ್ಯ ಸಾಮಾಗ್ರಿ ರವಾನೆ ಮಾಡಿದೆ. ಇದರ ಜೊತೆಗೆ 80 NDRF ತುಕಡಿ ನಿಯೋಜನೆ ಮಾಡಿ ಮ್ಯಾನ್ಮಾರ್‌ಗೆ ಬೆನ್ನೆಲುಬಾಗಿ ನಿಂತಿದೆ. ಕಾರ್ಯಾಚರಣೆ ಕೂಡ ವೇಗ ಪಡೆದಿದ್ದು, ಈಗಾಗಲೇ ಹಲವು ಕಟ್ಟಡಗಳ ಅವಶೇಷ ತೆರವು ಮಾಡುವ ಕೆಲಸ ಮುಗಿದಿದೆ.

ಸಾವಿನ ಸಂಖ್ಯೆ 1000ಕ್ಕೂ ಹೆಚ್ಚು?
1000ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಮಾಹಿತಿ ಓಡಾಡುತ್ತಿದ್ದು, ನೂರಾರು ಜನ ಇನ್ನೂ ನಾಪತ್ತೆಯಾಗಿದ್ದಾರೆ. ಈಗಿರುವ ಸ್ಥಿತಿ ನೋಡಿದರೆ ಸಾವಿನ ಸಂಖ್ಯೆ ಇನ್ನೂ ಭಾರಿ ಹೆಚ್ಚಾಗುವ ಭಯ ಕಾಡುತ್ತಿದೆ. ಮತ್ತೊಂದು ಕಡೆ ಬಹುಮಹಡಿ ಕಟ್ಟಡಗಳಲ್ಲಿ ಬಿರುಕು ಕೂಡ ಕಾಣಿಸಿದ್ದು, ಈ ಬಗ್ಗೆ ಮ್ಯಾನ್ಮಾರ್ ದೇಶದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮತ್ತೆ ಭೂಮಿಯು ಕಂಪಿಸುವ ಭಯ ಅಲ್ಲಿನ ಜನರಿಗೆ ಕಾಡುತ್ತಿದೆ. ಹೀಗಾಗಿ ಮ್ಯಾನ್ಮಾರ್ ದೇಶದ ಪ್ರಜೆಗಳಿಗೆ ಈಗ ನೆಮ್ಮದಿಯಾಗಿ ನಿದ್ದೆ ಕೂಡ ಬರುತ್ತಿಲ್ಲ. ಇಂತಹ ಸಮಯದಲ್ಲಿ ಭಾರತ ಸುಮಾರು 15 ಟನ್ ಪರಿಹಾರ ಸಾಮಗ್ರಿ ರವಾನೆ ಮಾಡಿದೆ.
ಥಾಯ್‌ಲ್ಯಾಂಡ್ ರಾಜಧಾನಿ ಪರಿಸ್ಥಿತಿ ಗಂಭೀರ
ಬ್ಯಾಂಕಾಕ್ ನಗರದಲ್ಲಿ ಕೂಡ ಭಾರಿ ದೊಡ್ಡ ಹಾನಿ ಭೂಕಂಪನ ಪರಿಣಾಮ ಉಂಟಾಗಿದೆ. ಹೀಗಿದ್ದಾಗ ಸಾಕಷ್ಟು ಗಾಯಾಳುಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದು, ಅವರಿಗೆ ಟ್ರೀಟ್‌ಮೆಂಟ್ ಕೊಡುವ ಕೆಲಸ ಸಾಗಿದೆ. ಮತ್ತೊಂದು ಕಡೆ ಕುಸಿದು ಬಿದ್ದಿರುವ ಕಟ್ಟಡಗಳ ಕೆಳಗೆ ನೂರಾರು ಜನರು ಸಿಲುಕಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಭಯ ಕಾಡುತ್ತಿದೆ. ಆಸ್ಪತ್ರೆಗಳಲ್ಲಿ ಇದೀಗ ಗಾಯಾಳುಗಳ ನರಳಾಟ ಕರುಳು ಹಿಂಡುವಂತಿದೆ. ಈ ಎಲ್ಲಾ ಕಾರಣಕ್ಕೆ ಈಗ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಸ್ಥಳೀಯರು ಭಯದಲ್ಲೇ ಬದುಕುತ್ತಿದ್ದಾರೆ.












Click it and Unblock the Notifications