ಭಾರತ & ಕೆನಡಾ ಸಂಬಂಧ ಹಾಳಾಗಿ ಹೋಯ್ತಾ? ಮುಂದಿನ ಪರಿಸ್ಥಿತಿ ಏನು?
ಭಾರತ & ಕೆನಡಾ ನಡುವೆ ಎಲ್ಲವೂ ಸರಿಯಾಗಿ ಇಲ್ಲ ಅನ್ನೋದು ಮತ್ತೊಮ್ಮೆ ಇದೀಗ ನಿಜ ಆಗುತ್ತಿದೆ. ಅದರಲ್ಲೂ, ಖಲಿಸ್ತಾನಿಗಳ ವಿಚಾರಕ್ಕೆ ಶುರುವಾಗಿದ್ದ ಭಾರತ & ಕೆನಡಾ ಕಿರಿಕ್ ಇದೀಗ ದೊಡ್ಡ ಮಟ್ಟಕ್ಕೆ ಹೋಗಿ ನಿಲ್ಲುತ್ತಿದೆ. ಒಂದು ಕಡೆ ಕೆನಡಾ ಪದೇ ಪದೇ ಭಾರತದ ಬಗ್ಗೆ ಮಾತನಾಡುತ್ತಿದೆ ಅಂತಾ ಎಚ್ಚರಿಕೆ ನೀಡುತ್ತಿದ್ದ ಭಾರತ ಇದೀಗ ಮಹತ್ವದ ಕ್ರಮವನ್ನ ಕೂಡ ಕೈಗೊಂಡಿದೆ. ಈ ಮೂಲಕ ಇದೀಗ ಭಾರತ ಹಾಗೂ ಕೆನಡಾ ಸಂಬಂಧ ಹಳ್ಳವನ್ನೇ ಹಿಡಿದು ಹೋಗಿದ್ದು, ಎರಡೂ ದೇಶಗಳು ರಾಜತಾಂತ್ರಿಕರ ಉಚ್ಛಾಟನೆಗೆ ಮುಂದಾಗಿವೆ.
ಕೆನಡಾ ದೇಶದ ರಾಜಕಾರಣಿಗಳಿಗೆ ಇದೀಗ ನೆಮ್ಮದಿ ಬೇಡ ಅಂತಾ ಕಾಣುತ್ತದೆ. ಯಾಕಂದ್ರೆ ಪದೇ ಪದೇ ಕಿರಿಕ್ ಮಾಡುವ ಕೆನಡಾ ಸರ್ಕಾರ, ಇದೀಗ ಭಾರತದ ವಿರುದ್ಧ ಮತ್ತೊಂದು ಗಂಭೀರ ಆರೋಪ ಹೊರಿಸಲು ಮುಂದೆ ಬಂದಿತ್ತು. ಈ ಬೆನ್ನಲ್ಲೇ ಭಾರತ ಕೂಡ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದು ಈಗ ಭಾರತದಲ್ಲಿ ಇರುವ ಒಟ್ಟು 06 ಕೆನಡಾ ರಾಜತಾಂತ್ರಿಕ ಅಧಿಕಾರಿಗಳು ಭಾರತ ಬಿಟ್ಟು ತೊಲಗಲು ಸೂಚನೆ ನೀಡಿದೆ.

ಕೆನಡಾ ರಾಜತಾಂತ್ರಿಕ ಅಧಿಕಾರಿಗಳಿಗೆ ಅಕ್ಟೋಬರ್ 19ರ ಶನಿವಾರ ರಾತ್ರಿಗೆ ಡೆಡ್‌ಲೈನ್ ಫಿಕ್ಸ್ ಮಾಡಿದ್ದು, ಅಕ್ಟೋಬರ್ 19ರ ರಾತ್ರಿ 11:59ರ ಒಳಗೆ ಅಥವಾ ಅದಕ್ಕಿಂತಲೂ ಮುಂಚಿತವಾಗಿ ಭಾರತ ಬಿಟ್ಟು ಹೋಗಿ ಎಂದು ಖಡಕ್ ಸೂಚನೆ ನೀಡಿದೆ. ಇದರ ಜೊತೆಯಲ್ಲಿ ಮತ್ತೊಂದು ಮಹತ್ವದ ನಿರ್ಧಾರವನ್ನ ಕೂಡ ಭಾರತ ಇದೀಗ ಕೈಗೊಂಡಿದೆ. ಆ ಬಗ್ಗೆ ತಿಳಿಯಲು ಮುಂದೆ ಓದಿ.
ಕೆನಡಾಗೆ ಆಘಾತ ನೀಡಿದ ಭಾರತ
ಖಾಲಿಸ್ತಾನಿಗಳ ವಿಚಾರ ಮುಂದೆ ಇಟ್ಟುಕೊಂಡು ಭಾರತದ ಬಗ್ಗೆ ಮಾತನಾಡುವ ಕೆನಡಾದ ವರ್ತನೆ ಮುಂದುವರಿದಿದೆ. ಅಂದಹಾಗೆ ಖಾಲಿಸ್ತಾನಿ ಉಗ್ರನಾಗಿದ್ದ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕೇಸ್ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಆದರೆ ಇದೀಗ ಹರ್ದೀಪ್ ಸಿಂಗ್ ನಿಜ್ಜರ್ ಕೊಲೆ ಕೇಸ್‌ನಲ್ಲಿ ಭಾರತದ ಹೈಕಮಿಷನರ್‌ನ ಕೂಡ ಕೆನಡಾ ತನಿಖೆಗೆ ಗುರಿಪಡಿಸುವ ಬಗ್ಗೆ ಚಿಂತನೆ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರ ಭಾರತವನ್ನು ಕೆರಳಿಸಿದ್ದು, ಕೂಡಲೇ ಕೆನಡಾ ನೆಲದಿಂದ ಭಾರತದ ಹೈಕಮಿಷನರ್ ಅವರನ್ನ ಮರಳಿ ದೇಶಕ್ಕೆ ಕರೆಸಿಕೊಳ್ಳಲು ಈಗ ನಿರ್ಧರಿಸಿದೆ. ಅಲ್ಲದೆ ರಾಜತಾಂತ್ರಿಕರು ಮತ್ತು ಅಧಿಕಾರಿಗಳನ್ನು ಕೂಡ ಭಾರತ ಈಗ ವಾಪಸ್ ಕರೆಸಿಕೊಳ್ಳುತ್ತಿದೆ.
ಭಾರತ & ಕೆನಡಾ ಸಂಬಂಧ...
ಒಟ್ನಲ್ಲಿ ಖಲಿಸ್ತಾನಿಗಳು ಇಟ್ಟ ಬತ್ತಿಗೆ ಕೆನಡಾ & ಭಾರತದ ನಡುವೆ ಸಂಬಂಧ ಹಾಳಾಗಿದ್ದು ಮತ್ತಷ್ಟು ಹಳಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಮಯದಲ್ಲಿ ಒಂದಷ್ಟು ತಾಳ್ಮೆ ಹಾಗೂ ಭವಿಷ್ಯದ ದೃಷ್ಟಿಯಿಂದ ಯೋಚನೆ ಮಾಡಬೇಕಿದ್ದ ಕೆನಡಾ ಸರ್ಕಾರ ಕೂಡ ಭಾರಿ ಎಡವಟ್ಟು ಮಾಡಿಕೊಳ್ಳುತ್ತಿದೆ. ಹೀಗಾಗಿ ಪರಿಸ್ಥಿತಿ ಕೂಡ ಕೈಮೀರಿ ಹೋಗಿದ್ದು, ಭಾರತ & ಕೆನಡಾ ಸಂಬಂಧ ಇನ್ನಷ್ಟು ಹಾಳಾಗುವ ಆತಂಕ ಆವರಿಸಿದೆ.











Click it and Unblock the Notifications