Imran Khan: ಪಾಕಿಸ್ತಾನ ಧಗಧಗ, ಚೀನಾ ಹದ್ದಿನ ಕಣ್ಣು!
ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ ಸರಿದಾರಿಗೆ ಬರುವ ಲಕ್ಷಣ ಕಾಣುತ್ತಿಲ್ಲ. ಇತ್ತೀಚೆಗೆ ಜೈಲು ಸೇರಿ ಬೇಲ್ ಪಡೆದು ಹೊರ ಬಂದಿರುವ ಇಮ್ರಾನ್ ಖಾನ್ ಇನ್ನೊಮ್ಮೆ ಕಂಬಿ ಎಣಿಸೋದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ. ಖುದ್ದು ಪಾಕಿಸ್ತಾನ ಸರ್ಕಾರವೇ ಇಮ್ರಾನ್ ಖಾನ್‌ನ ಒಳಗೆ ಹಾಕಲು ಸಕಲ ಸಿದ್ಧತೆ ನಡೆಸಿದ್ದು, ಪಾಕಿಸ್ತಾನ ಇನ್ನೊಮ್ಮೆ ಹೊತ್ತಿ ಉರಿಯುವ ಸಾಧ್ಯತೆ ದಟ್ಟವಾಗಿದೆ.
ಇಮ್ರಾನ್ ವಿರುದ್ಧ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ಗುಪ್ತಚರ ಸಂಸ್ಥೆ ಐಎಸ್‌ಐ ಮಸಲತ್ತು ನಡೆಸುತ್ತಿರುವ ಆರೋಪವಿದೆ. ಈ ಸಂದರ್ಭದಲ್ಲಿ ಪಾಕ್ ಸರ್ಕಾರ ಕೂಡ ಇವರ ಜೊತೆ ಕೈಜೋಡಿಸಿದ ಗಂಭೀರ ಆರೋಪ ಈಗ ಕೇಳಿಬರುತ್ತಿದೆ. ಮೇ 9ರ ನಂತರ ಇಮ್ರಾನ್ ಖಾನ್ ಬೆಂಬಲಿಗರು ನಡೆಸಿರುವ ಹಿಂಸೆಗೆ ಅವರನ್ನೇ ಹೊಣೆ ಮಾಡೋಕೆ ಎಲ್ಲಾ ತಯಾರಿ ನಡೆಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಾಮೀನು ಪಡೆಯೋದಕ್ಕೆ ಇಮ್ರಾನ್ ಖಾನ್ ಇಸ್ಲಾಮಾಬಾದ್ ಹೈಕೋರ್ಟ್‌ಗೆ ಬಂದಿದ್ದು, ಇನ್ನೊಮ್ಮೆ ಬಂಧನದ ಭೀತಿ ಎದುರಿಸುತ್ತಿದ್ದಾರೆ.

ಪಾಕಿಸ್ತಾನ ಸೇನೆ VS ಇಮ್ರಾನ್ ಖಾನ್!
ಅತ್ತ ಇಮ್ರಾನ್ ಬೆಂಬಲಿಗರು ಪಾಕಿಸ್ತಾನ ಸೇನೆ ವಿರುದ್ಧ ತಿರುಗಿಬಿದ್ದಿದ್ದಾರೆ, ಇತ್ತ ಪಾಕಿಸ್ತಾನದ ಆಡಳಿ ಪಕ್ಷವು ಇಮ್ರಾನ್ ಬೆಂಬಲಿಗರ ವಿರುದ್ಧ ಬೇರೆಯದ್ದೇ ಮಸಲತ್ತು ಮಾಡಿದೆ. ಪಾಕ್‌ನ ಸೇನೆ ವಿರುದ್ಧ ಇಮ್ರಾನ್ ಖಾನ್ ಬೆಂಬಲಿಗರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸುವ ಸಂದರ್ಭದಲ್ಲೇ, ಪಾಕಿಸ್ತಾನ ಸೇನೆ ಪರವಾಗಿ ಪಾಕ್ ಸರ್ಕಾರವೇ ಬ್ಯಾನರ್ ಪ್ರಿಂಟ್ ಮಾಡಿ ಬ್ಯಾನರ್ ಪಾಲಿಟಿಕ್ಸ್ ಶುರು ಮಾಡಿದೆ. ಸೇನೆಗೆ ಸ್ಥಳೀಯ ಜನ ಬೆಂಬಲ ನೀಡುತ್ತಿದ್ದಾರೆ ಎನ್ನುವ ರೀತಿ ಬ್ಯಾನರ್ ಪ್ರಿಂಟ್ ಮಾಡಿ ಪಾಕಿಸ್ತಾನದ ಬೀದಿ ಬೀದಿಗಳಲ್ಲಿ ಅಂಟಿಸಲಾಗುತ್ತಿದೆ.
ಪಾಕಿಸ್ತಾನದ ಮೇಲೆ ಚೀನಾ ಕಣ್ಣು
ಹೌದು, ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬೆಂಬಲಿಗರು ನಡೆಸುತ್ತಿರುವ ಪ್ರತಿಭಟನೆಯಿಂದ ಹಿಡಿದು ಇಮ್ರಾನ್ ಬಂಧನದ ತನಕ ಪ್ರತಿ ಅಪ್‌ಡೇಟ್ ಬಗ್ಗೆ ಚೀನಾ ಹದ್ದಿನ ಕಣ್ಣಿಟ್ಟು ಕೂತಿದೆ. ಯಾಕಂದ್ರೆ ಈಗಾಗಲೇ ಪಾಕ್‌ನ ಅಭಿವೃದ್ಧಿಗೆ ಲಕ್ಷಾಂತರ ಕೋಟಿ ಸುರಿದಿರುವ ಚೀನಾ ಸರ್ಕಾರ, ತನ್ನ ಹಣವನ್ನ ರಕ್ಷಿಸಿಕೊಳ್ಳಲು ಪಾಕಿಸ್ತಾನದ ಮೇಲೆ ಹದ್ದಿನ ಕಣ್ಣಿಟ್ಟು ಕೂತಿದೆ. ಕ್ಷಣಕ್ಷಣದ ಮಾಹಿತಿ ತರಿಸಿಕೊಳ್ಳುತ್ತಾ, ಯಾವಾಗ ಏನಾಗುತ್ತೋ? ಎಂಬ ಬಗ್ಗೆ ಎಚ್ಚೆತ್ತುಕೊಂಡಿದ್ದಾರೆ ಚೀನಾದ ಅಧಿಕಾರಿಗಳು.
ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವಕ್ಕೆ ಅಪಾಯ?
ಇತ್ತೀಚೆಗೆ ಪಾಕಿಸ್ತಾನದಲ್ಲಿ ಖಾಸಗಿ ಸಂದರ್ಶನ ಒಂದರಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಅಪಾಯಕ್ಕೆ ಸಿಲುಕಿದೆ. ನಮಗಿರುವ ಏಕೈಕ ಭರವಸೆ ನ್ಯಾಯಾಂಗ ಮಾತ್ರ ಎಂದಿದ್ದರು. ಮೊದಲ ಬಾರಿ ಅರೆಸ್ಟ್ ವಾರಂಟ್ ತೋರಿಸಿದ್ದು ಜೈಲಿನಲ್ಲಿ. ಈ ರೀತಿ ವರ್ತನೆ ನಡೆಯುವುದು ಕಾಡಿನಲ್ಲಿ ಮಾತ್ರ. ಹೀಗಾಗಿ ಸೇನೆ ಅಪಹರಣ ಮಾಡಿ ನನ್ನ ಕರೆದೊಯ್ದಿತ್ತು. ಆಗ ಪೊಲೀಸರು ಎಲ್ಲಿದ್ರು? ಇದು ಕಾಡಿನ ಕಾನೂನು ಅಲ್ವಾ? ಎಂದು ಖಾನ್ ಆಕ್ರೋಶ ಹೊರಹಾಕಿದ್ದರು.

ಚುನಾವಣೆಗೆ ಪ್ರಧಾನಿ ಹೆದರಿದ್ದಾರಂತೆ!
ಇದೇ ಸಂದರ್ಶನದಲ್ಲಿ ಮತ್ತೊಂದು ಗಂಭೀರ ಆರೋಪವನ್ನೂ ಇಮ್ರಾನ್ ಮಾಡಿದ್ದರು. ಪಾಕ್ ಪಿಎಂ ಶೆಹಬಾಜ್ ಷರೀಫ್ ಎಲೆಕ್ಷನ್ ಎದುರಿಸಲು ಭಯಗೊಂಡಿದ್ದಾರೆ ಎಂದಿದ್ದರು. ನಮ್ಮ ಪಕ್ಷದ ಎದುರು ಧೂಳೀಪಟವಾಗುತ್ತಾರೆ. ಇದೇ ಕಾರಣಕ್ಕೆ ಪಾಕಿಸ್ತಾನ ಹಾಲಿ ಪ್ರಧಾನಿ ಶೆಹಬಾಜ್ ಷರೀಫ್ ಭಯಪಟ್ಟಿದ್ದಾರೆ. ನನ್ನನ್ನ ತುಳಿಯುವ ಪ್ರಯತ್ನ ನಡೆಯುತ್ತಿದ್ದು, ಹೀಗಾಗಿ ಹೋರಾಟ ಅನಿವಾರ್ಯ ಎಂದಿದ್ದರು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್. ಹೀಗೆ ಇಮ್ರಾನ್ ಖಾನ್ ಹೇಳಿಕೆ ಕೊಟ್ಟು ಕೆಲವೇ ದಿನದಲ್ಲಿ ದೊಡ್ಡ ಕಂಟಕ ಎದುರಾಗಿದೆ.
ಒಟ್ನಲ್ಲಿ ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನ ತಾನೇ ಹರಾಜು ಹಾಕಿಕೊಳ್ಳುತ್ತಿದೆ. ಜಗತ್ತಿನಾದ್ಯಂತ ಇದು ಭಯೋತ್ಪಾದಕರ ದೇಶ ಎಂಬ ಕೆಟ್ಟ ಹೆಸರನ್ನು ಗಳಿಸಿರುವ ಪಾಕಿಸ್ತಾನಕ್ಕೆ ಈಗಲೂ ಸರಿಯಾದ ನೆಲೆ ಸಿಕ್ಕಿಲ್ಲ. ಅದರಲ್ಲೂ ಇಲ್ಲಿನ ರಾಜಕೀಯ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಹೀಗಾಗಿ ಅಲ್ಲಿನ ಪ್ರಜೆಗಳು ಕೂಡ ಪಾಕಿಸ್ತಾನ ಸೇನೆ ಮತ್ತು ISI ವಿರುದ್ಧ ತಿರುಗಿಬಿದ್ದಾರೆ. ಹೀಗಾಗಿ ಪ್ರಜೆಗಳ ಹೋರಾಟ ಅಡಗಿಸಲು ಪಾಕ್ ಸರ್ಕಾರ ಅಡ್ಡ ದಾರಿ ಹಿಡಿಯುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.












Click it and Unblock the Notifications