ಕಪಿಲ್ ಕಾಮಿಡಿ ಶೋನಲ್ಲಿ ಸಿಧು ಬದಲು ಇಮ್ರಾನ್ ಬರಬಹುದು ಎಂದ ಮಾಜಿ ಪತ್ನಿ!
ಇಸ್ಲಾಮಾಬಾದ್, ಏಪ್ರಿಲ್ 14: ತನ್ನ ಮಾಜಿ ಪತಿ ಇಮ್ರಾನ್ ಖಾನ್‌ಗೆ ಭ್ರಮೆ ಎಂದು ಹೇಳಿದ ರೆಹಮ್ ಖಾನ್ ಈಗ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಸ್ಯದ ವಿಷಯದಲ್ಲಿ ಪ್ರತಿಭಾವಂತರು ಎಂದಿದ್ದಾರೆ. "ಇಮ್ರಾನ್ ಖಾನ್ ಹಾಸ್ಯದಲ್ಲಿ ಪ್ರತಿಭಾವಂತರು. ಅವರನ್ನು ಕಪಿಲ್ ಶರ್ಮಾ ಶೋನಲ್ಲಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಬದಲಿಗೆ ಕೂರಿಸಬಹುದು," ಎಂದು ಹೇಳಿದ್ದಾರೆ.
"ಇಮ್ರಾನ್ ಖಾನ್‌ಗೆ ಬಾಲಿವುಡ್‌ನಲ್ಲಿ ಅವಕಾಶ ನೀಡಬೇಕು. ಇಮ್ರಾನ್ ಖಾನ್ ಕಾಮಿಡಿಯಲ್ಲಿ ಪ್ರತಿಭಾವಂತರು. ಕಪಿಲ್ ಶರ್ಮಾ ಶೋನಲ್ಲಿ ಪಾಜಿ (ನವಜೋತ್ ಸಿಂಗ್ ಸಿಧು) ಸ್ಥಾನ ಖಾಲಿಯಾಗಿರುವುದರಿಂದ, ಇಮ್ರಾನ್ ಖಾನ್ ಅವರನ್ನು ಅಲ್ಲಿ ಕೂರಿಸಬಹುದು," ಎಂದಿದ್ದರು.
ಹಾಗೆಯೇ "ಪಾಜಿ ( ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು) ಜೊತೆ ಇಮ್ರಾನ್ ಖಾನ್‌ಗೆ ಉತ್ತಮ ಸಂಬಂಧ ಇದೆ, ಅವರ ನಡುವೆ ಉತ್ತಮ ಸ್ನೇಹವಿದೆ. ಇಮ್ರಾನ್ ಕವಿತೆಯನ್ನು ಕೂಡಾ ಆರಂಭ ಮಾಡಿದ್ದಾರೆ," ಎಂದು ತಿಳಿಸಿದ್ದಾರೆ.

ಇಮ್ರಾನ್ ಖಾನ್ ಭ್ರಮೆಯಲ್ಲಿದ್ದಾರೆ ಎಂದಿದ್ದ ರೆಹಮ್ ಖಾನ್
ಇದಕ್ಕೂ ಮುನ್ನ ಇಂಡಿಯಾ ಟುಡೇಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರೆಹಮ್ ಖಾನ್, "ಇಮ್ರಾನ್ ಖಾನ್ ಭ್ರಮೆಯಲ್ಲಿದ್ದಾರೆ. ಅವರು ಸಲಹೆಯನ್ನು ಕೇಳುವುದಿಲ್ಲ. ಅವರು (ನನ್ನ) ಸಲಹೆಯನ್ನು ಕೇಳಿದ್ದರೆ, ಬಹುಶಃ ನಾನು ಅವರನ್ನು ಮತ್ತೆ ಮದುವೆ ಆಗುತ್ತಿದೆ. ಹಾಗೆಯೇ ಬಹುಶಃ ಇತರರು ಕೂಡಾ ಇಮ್ರಾನ್ ಖಾನ್ ಅನ್ನು ಬಿಟ್ಟು ಹೋಗುತ್ತಿರಲಿಲ್ಲ," ಎಂದಿದ್ದಾರೆ.
"ನೀವು ನೋಡಿ, ಅವರು ಓರ್ವ ದಿವಾ (ಪ್ರಚಾರ ಬಯಸುವ ವ್ಯಕ್ತಿ ). ಅವನು ಕೇವಲ ಮುಖಸ್ತುತಿಯನ್ನು ಕೇಳಲು ಬಯಸುವ ಪ್ರಸಿದ್ಧ ವ್ಯಕ್ತಿ. ಅವರು ವಿಶಿಷ್ಟವಾದ ದಿವಾ ವ್ಯಕ್ತಿತ್ವವನ್ನು ಹೊಂದಿದ್ದು, ನೀವು ಪ್ರಚಾರ ಮಾಡಿ ಅವರ ಅಹಂಕಾರವನ್ನು ಹೆಚ್ಚು ಮಾಡಬೇಕು. ಅವರ ಹೆಸರನ್ನು ಕೂಗಬೇಕು, ಚಪ್ಪಾಳೆ ತಟ್ಟಬೇಕು," ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.
ಪಾಕಿಸ್ತಾನ ರಾಜಕೀಯ ಬೆಳವಣಿಗೆ
ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಪಟ್ಟ ಕಳೆದುಕೊಂಡ ಇಮ್ರಾನ್ ಖಾನ್ ಅವಿಶ್ವಾಸ ನಿರ್ಣಯದ ಮೂಲಕ ಪ್ರಧಾನಿ ಪಟ್ಟ ಕಳೆದುಕೊಂಡ ಮೊಟ್ಟ ಮೊದಲ ಪ್ರಧಾನಿ ಎಂದೆನಿಸಿಕೊಂಡಿದ್ದಾರೆ. ಇಮ್ರಾನ್ ವಿರುದ್ದ ನಿಂತು, ಸರ್ಕಾರದ ಪತನಕ್ಕೆ ಸಮಾಜವಾದಿ, ಉದಾರವಾದಿ ಮತ್ತು ಧಾರ್ಮಿಕ ಪಕ್ಷಗಳ ಒಕ್ಕೂಟದ ನೇತೃತ್ವ ವಹಿಸಿಕೊಂಡಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್- ಎನ್) ಕಾರಣವಾಗಿದೆ. ಅವಿಶ್ವಾಸ ನಿರ್ಣಯ ಪ್ರಕ್ರಿಯೆ ಆರಂಭಕ್ಕೂ ಮುನ್ನ ಸಂಸತ್ ಸಭಾಪತಿ ಅಸದ್ ಕೈಸರ್ ಹಾಗೂ ಉಪ ಸಭಾಪತಿ ಖಾಸಿಂ ಇಬ್ಬರೂ ಇಮ್ರಾನ್ ಖಾನ್ ಪರ ತಮ್ಮ ನಿಷ್ಠೆ ಪ್ರದರ್ಶಿಸಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಪಕ್ಷ ನಾಯಕ ಅಯಾಜ್ ಸಾದಿಕ್ ಅವರು ಸಂಸತ್ ಕಲಾಪ ಮುನ್ನಡೆಸಿದರು.

342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 174 ಸದಸ್ಯರು ಸರ್ಕಾರದ ವಿರುದ್ಧ ಮತ ಹಾಕಿದ್ದು, ಪ್ರಧಾನ ಮಂತ್ರಿಯನ್ನು ಪದಚ್ಯುತಗೊಳಿಸಲು ಅಗತ್ಯವಿದ್ದ 172 ಮತಗಳನ್ನು ಪಿಟಿಐ ಪಡೆಯುವುದಿಲ್ಲ ಎಂಬುದನ್ನು ಖಾತ್ರಿ ಪಡಿಸಿದವು. ಶನಿವಾರ ತಡರಾತ್ರಿ ಹೈಡ್ರಾಮಾ ನಂತರ ಇಮ್ರಾನ್ ಖಾನ್ ಪ್ರಧಾನಿ ಪಟ್ಟ ಕಳೆದುಕೊಂಡರು. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯ ಪ್ರಕ್ರಿಯೆ ನಡೆಯುವುದಕ್ಕೂ ಮುಂಚಿತವಾಗಿಯೇ ಪ್ರಧಾನಿ ಕಚೇರಿಯನ್ನು ಇಮ್ರಾನ್ ತೊರೆದು ಹೊರ ನಡೆದಿದ್ದರು.
ಮಾರ್ಚ್ 8ರಂದು ಪಾಕಿಸ್ತಾನದ ವಿಪಕ್ಷಗಳ ಪರವಾಗಿ ಶೆಹಬಾಜ್ ಶರೀಫ್ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಏಪ್ರಿಲ್ 3ರಂದು ಅವಿಶ್ವಾಸ ನಿರ್ಣಯ ಮತದಾನ ಎಂದು ನಿಗದಿಯಾಗಿತ್ತು. ಆದರೆ, ಡೆಪ್ಯುಟಿ ಸ್ಪೀಕರ್ ಖಾಸಿಂ ಸುರಿ ಅವರು ಈ ಅವಿಶ್ವಾಸಮತವನ್ನು ಅಸಾಂವಿಧಾನಿಕ ಎಂದು ತೀರ್ಮಾನಿಸಿ ತಿರಸ್ಕರಿಸಿದರು. ಅದಾದ ಬಳಿಕ ಇಮ್ರಾನ್ ಖಾನ್ ಅವರು ಅಲ್ಲಿನ ಲೋಕಸಭೆಯನ್ನೇ ವಿಸರ್ಜಿಸಿ ಚುನಾವಣೆಗೆ ಹೋಗುವ ಪ್ರಯತ್ನ ಮಾಡಿದರು.
ಐದು ಸದಸ್ಯರ ನ್ಯಾಯಪೀಠವು ಮಹತ್ವದ ತೀರ್ಪು ನೀಡಿ, ಅವಿಶ್ವಾಸಮತ ತಿರಸ್ಕರಿಸಿದ್ದು ಮತ್ತು ಲೋಕಸಭೆ ವಿಸರ್ಜನೆ ಮಾಡಿದ್ದು ಅಸಿಂಧು ಎಂದು ತೀರ್ಮಾನಿಸಿತು. ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಇಮ್ರಾನ್ ಖಾನ್ ಅವರು ಅವಿಶ್ವಾಸ ಮತ ಎದುರಿಸಿದ್ದಾರೆ.












Click it and Unblock the Notifications