'ಅಪ್ಪಾ, ಕ್ಷಮಿಸು' ಎಂದು ಬೇಡಿದರೂ ಮಕ್ಕಳ ಕತ್ತು ಕತ್ತರಿಸಿದ ಕಟುಕ
ಟೆಕ್ಸಾಸ್, ಆಗಸ್ಟ್ 10: ಶನಿವಾರದ ಆ ದಿನ ಸಬೀನ್ ಟೊಂಗೊಗೆ ಕಚೇರಿಯಲ್ಲಿ ಬಿಡುವಿಲ್ಲದ ಕೆಲಸ. ಹ್ಯೂಸ್ಟನ್‌ನಲ್ಲಿ ಕೂದಲು ಹೆಣೆಯುವ ಕೆಲಸ ಮಾಡುವ ಆಕೆಯ ಫೋನ್ ಗಂಟೆಗಳಿಂದ ಹೊಡೆದುಕೊಳ್ಳುತ್ತಿದ್ದರೂ, ಆಕೆಗೆ ಅದನ್ನು ಸ್ವೀಕರಿಸುವಷ್ಟು ಪುರುಸೊತ್ತಿರಲಿಲ್ಲ.
ಕೆಲಸಕ್ಕೆ ಹೊರಡುವ ಮುನ್ನ ಆಕೆ ತನ್ನ ಇಬ್ಬರು ಮಕ್ಕಳಾದ ಅನ್ನಾ ಬೆಲ್ಲೆ (1) ಮತ್ತು ಮಾರ್ಸೆಲ್ (8) ಇಬ್ಬರನ್ನು ಪತಿ ಜೀನ್ ಪಿಯರ್ ಎನ್‌ಡೊಸೊಕಾ ಬಳಿ ಬಿಟ್ಟುಬಂದಿದ್ದಳು. ಆಫ್ರಿಕಾದ ಕಾಂಗೋದವರಾದ ಈ ದಂಪತಿ ಅಮೆರಿಕಕ್ಕೆ ಬಂದು ನೆಲೆಸಿದ್ದರು. ಇಬ್ಬರ ನಡುವೆ ವೈವಾಹಿಕ ನಂಟು ಉಳಿದಿರಲಿಲ್ಲ. ಆದರೆ, ಎನ್‌ಡೊಸೊಕಾ ಪ್ರತಿ ದಿನ ಮಕ್ಕಳನ್ನು ನೋಡಲು ಮನೆಗೆ ಬರುತ್ತಿದ್ದ.
ಕೊನೆಗೂ ಆಕೆ ಕರೆ ಸ್ವೀಕರಿಸಿದಾಗ ಕೇಳಿಸಿದ್ದು, ಎನ್‌ಡೊಸೊಕಾನ ಧ್ವನಿ. 'ನಿನಗೊಂದು ಉಡುಗೊರೆ ಬಿಟ್ಟುಹೋಗುತ್ತಿದ್ದೇನೆ' ಎಂದ ಎನ್‌ಡೊಸೊಕಾ, ಮಕ್ಕಳನ್ನು ಕೊಲೆ ಮಾಡಿರುವುದಾಗಿ ಹೇಳಿದ. ಮನೆಯ ಕೀಯನ್ನು ಕಾಲೊರೆಸಿನ ಅಡಿ ಇರಿಸಿರುವುದಾಗಿ ತಿಳಿಸಿದ.

ಕೂಡಲೇ ಪೊಲೀಸರಿಗೆ ಕರೆ ಮಾಡಿದ ಟೊಂಗೊ ಮನೆಗೆ ಧಾವಿಸಿದಳು. ಬಾಗಿಲು ತೆರೆದು ನೋಡಿದಾಗ ಕಂಡಿದ್ದು, ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯ ಪುಟ್ಟಮಕ್ಕಳ ದೇಹಗಳು. ಎರಡೂ ಮಕ್ಕಳ ಕತ್ತನ್ನು ಸೀಳಿಹಾಕಲಾಗಿತ್ತು. ರಕ್ತಸಿಕ್ತ ಚಾಕು ನೆಲದ ಮೇಲೆ ಬಿದ್ದಿತ್ತು.
ಅಲ್ಲೊಂದು ಹಾಳೆಯಲ್ಲಿ ಎನ್‌ಡೊಸೊಕಾ ಆಕೆಗೆ ಸಂದೇಶವನ್ನು ಬಿಟ್ಟುಹೋಗಿದ್ದ. 'ನನ್ನ ಮತ್ತು ನನ್ನ ಎರಡು ಮಕ್ಕಳ ಆತ್ಮಗಳ ಹೊರೆಯನ್ನು ಹೊತ್ತುಕೋ' ಎಂದು ಫ್ರೆಂಚ್ ಭಾಷೆಯಲ್ಲಿ ಬರೆದಿತ್ತು. ಕೊನೆಯಲ್ಲಿ 'ನಾನು ನನ್ನ ಮಕ್ಕಳ ಜತೆ ಸಾಯುತ್ತಿದ್ದೇನೆ' ಎಂದು ಆತ ಬರೆದಿದ್ದ.
ಆದರೆ ಎನ್‌ಡೊಸೊಕಾ ನಾಪತ್ತೆಯಾಗಿದ್ದ. ಮರುದಿನ ಆತನ ಟ್ರಕ್ ಹ್ಯೂಸ್ಟನ್‌ನ ಪ್ಯಾಸಡೆನಾದಲ್ಲಿ ಸಿಕ್ಕಿತು. ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದ ಆತ ಗಾಯದಿಂದ ನರಳಾಡುತ್ತಿದ್ದ. ಆತನನ್ನು ಆಸ್ಪತ್ರೆಗೆ ಸಾಗಿಸಿ ಉಳಿಸಲಾಯಿತು.
ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿದ್ದ ಆತ, ಅಪಾರ್ಟ್‌ಮೆಂಟ್‌ನಲ್ಲಿ ಏನು ನಡೆಯಿತು ಎನ್ನುವುದು ತನಗೆ ನೆನಪಿಲ್ಲ ಎಂದು ಹೇಳಿಕೊಂಡಿದ್ದ. ಕೊನೆಗೆ ವಿಚಾರಣೆ ತೀವ್ರಗೊಳಿಸಿದಾಗ ಎಲ್ಲವನ್ನೂ ಬಾಯ್ಬಿಟ್ಟ.
Booking photo of suspect Jean Pierre Ndosska (with injuries sustained during attempted suicide) attached. Suspect was released from the hospital today and direct booked into the @HCSOTexas jail. pic.twitter.com/wXozJvaHOy
— Houston Police (@houstonpolice) 8 August 2018
ಚಾಕುವಿನಿಂದ ಕತ್ತು ಸೀಳಲು ಮುಂದಾದಾಗ ಪುಟಾಣಿ ಅನ್ನ ಬೆಲ್ಲೆ ಅಳುತ್ತಿದ್ದಳು. ಮಗ ಮಾರ್ಸೆಲ್ ಅಪ್ಪನನ್ನು ಬೇಡ ಎಂದು ಬೇಡಿಕೊಂಡ. 'ಡ್ಯಾಡಿ, ನನ್ನನ್ನು ಕ್ಷಮಿಸು' ಎಂದು ಬಿಕ್ಕುತ್ತಿದ್ದ. ಆದರೆ ಹೃದಯಹೀನ ಎನ್‌ಡೊಸೊಕಾ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಮಕ್ಕಳಿಬ್ಬರ ಜೀವವನ್ನೂ ಕಿತ್ತುಕೊಂಡಿದ್ದ.
ಪೊಲೀಸರು ಆತನ ಎಲ್ಲ ಹೇಳಿಕೆಗಳನ್ನು ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆತನ ಮೇಲೆ ಎರಡು ಕೊಲೆ ಪ್ರಕರಣಗಳು ದಾಖಲಾಗಿವೆ.
ಈ ದಂಪತಿ ನಡುವಿನ ಸಂಬಂಧ ಹಲವು ವರ್ಷಗಳಿಂದ ಸರಿಯಿರಲಿಲ್ಲ. ಇಬ್ಬರೂ ಪರಸ್ಪರ ದೂರವಾಗಿದ್ದರು. ಆದರೆ, ಮಕ್ಕಳಿಗಾಗಿ ಆತ ಯಾವಾಗಲೂ ಪತ್ನಿಯ ಮನೆಗೆ ಬಂದು ಹೋಗುತ್ತಿದ್ದ ಎಂದು ಸಂಬಂಧಿಕರು ತಿಳಿಸಿದ್ದಾರೆ.












Click it and Unblock the Notifications