ಸಿಡ್ನಿ ಫೆಸ್ಟಿವಲ್ ನಲ್ಲಿ ಶ್ರೀಕೃಷ್ಣನ ಅವಹೇಳನ ಕಲಾಕೃತಿ: ಹಿಂದೂಗಳು ಗರಂ
ಸಿಡ್ನಿ, ಮಾರ್ಚ್ 9: ಇಲ್ಲಿ ನಡೆಯುತ್ತಿರುವ ಸಿಡ್ನಿ ಫೆಸ್ಟಿವಲ್ ನಲ್ಲಿ ಇಡಲಾಗಿರುವ ಕಲಾವಿದರ ಚಿತ್ರ ಫಲಕಗಳ ಪ್ರದರ್ಶನ ಗ್ಯಾಲರಿಯಲ್ಲಿ ಹಿಂದೂ ದೇವರಾದ ಶ್ರೀ ಕೃಷ್ಣನನ್ನು ಧೂಮಪಾನ ಮಾಡುತ್ತಿರುವಂತೆ ಅಪಮಾನಕವಾಗಿ ಚಿತ್ರಿಸುವ ಚಿತ್ರವೊಂದನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇದು ಹಿಂದೂಗಳ ಕಣ್ಣು ಕಂಪಾಗಿಸಿದೆ.
ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ 'ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ' ಸಂಸ್ಥೆ ತಕ್ಷಣವೇ ಪ್ರದರ್ಶನದಿಂದ ಕೃಷ್ಣನ ಚಿತ್ರವನ್ನು ಹಿಂಪಡೆಯುವಂತೆ ಸಿಡ್ನಿ ಫೆಸ್ಟಿವಲ್ ಆಯೋಜಕರನ್ನು ಆಗ್ರಹಿಸಿದೆ.
ಸಾಮಾನ್ಯವಾಗಿ ನಾವು ನೋಡಿರುವ ಶ್ರೀ ಕೃಷ್ಣ ಕೊಳಲು ಊದುವ ಚಿತ್ರವನ್ನು ಇಲ್ಲಿ ಬದಲಿಸಲಾಗಿದೆ. ಕೊಳಲಿನ ಬದಲಿಗೆ ಆತ ಪೈಪ್ (ಮಿತ್ ಪೈಪ್) ಸೇದುತ್ತಿರುವಂತೆ ಬಿಂಬಿಸಲಾಗಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ಇದಲ್ಲದೆ, ಕೆಲವಾರು ಸ್ಥಳೀಯ ವೆಬ್ ಸೈಟ್ ಗಳು ಈ ಚಿತ್ರವನ್ನು ಆಧುನಿಕತೆಯ ಸ್ಪರ್ಶವೆಂದು ಬಣ್ಣಿಸಿರುವುದು ಹಿಂದೂಗಳ ಕೋಪವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇಲ್ಲಿನ ಮಾರ್ಡಿ ಗ್ರಾಸ್ ಎಂಬ ವೆಬ್ ಸೈಟ್, ಈ ಕಲಾಕೃತಿಯನ್ನು ಕೆಟ್ಟದಾಗಿ ಬಣ್ಣಿಸಿದೆ. ''ಶ್ರೀ ಕೃಷ್ಣನು ಪ್ರೇಮ, ಕಾಮದ ದೇವರು. ಅಷ್ಟೇ ಜ್ಞಾನ, ಸೌಂದರ್ಯಗಳ ಪ್ರತಿನಿಧಿ. ಈತ ಒಬ್ಬ ಮಾದರಿ ಪ್ರೇಮಿ'' ಎಂದು ಹೇಳಿದೆ.