ಭಾರತದ ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಜರ್ಮನಿ ಬೆಂಬಲ
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸುವ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿದ್ದ 9 ಭಯೋತ್ಪಾದಕ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿತ್ತು. ಆಪರೇಷನ್ ಸಿಂಧೂರದ ಬಳಿಕ ಭಾರತ ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಹಲವು ದೇಶಗಳು ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ, ಹೆಚ್ಚಿನ ದೇಶಗಳು ಭಾರತದ ಪರವಾಗಿ ನಿಂತಿದ್ದವು.
ಇದೀಗ ಜರ್ಮನಿ ಕೂಡ ಭಾರತದ ಪರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಜರ್ಮನ್ ವಿದೇಶಾಂಗ ಸಚಿವ ಜೋಹಾನ್ ವಾಡೆಫುಲ್ ಪಹಲ್ಗಾಮ್ ದಾಳಿಯನ್ನು ಖಂಡಿಸಿದ್ದು, ಭಯೋತ್ಪಾದನೆ ವಿರುದ್ಧ ಭಾರತಕ್ಕೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಅಧಿಕಾರವಿದೆ ಎಂದು ಹೇಳಿದ್ದಾರೆ.

ಬರ್ಲಿನ್‌ನಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರ ಜೊತೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜರ್ಮನ್ ಸಚಿವ ಜೋಹಾನ್ ವಾಡೆಫುಲ್, ಭಾರತ ಮತ್ತು ಪಾಕಿಸ್ತಾನದ ನಡುವಿನ ಪ್ರಸ್ತುತ ತಿಳುವಳಿಕೆಯನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು ಮತ್ತು ದ್ವಿಪಕ್ಷೀಯವಾಗಿ ಸಂಘರ್ಷಗಳನ್ನು ಪರಿಹರಿಸಲು ಚರ್ಚೆ ನಡೆಸಬೇಕು ಎಂದು ಕರೆ ನೀಡಿದರು.
"ಎರಡೂ ಕಡೆಯ ಮಿಲಿಟರಿ ದಾಳಿಗಳ ನಂತರ, ಭಾರತವು ಭಯೋತ್ಪಾದನೆಯ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಎಲ್ಲ ಹಕ್ಕನ್ನು ಹೊಂದಿದೆ. ಈಗ ಕದನ ವಿರಾಮ ಜಾರಿಯಲ್ಲಿದೆ ಎನ್ನುವ ವಿಚಾರ ನಮಗೆ ಮೆಚ್ಚುಗೆಯಾಗಿದೆ" ಎಂದು ವಾಡೆಫುಲ್ ಹೇಳಿದರು.
ಪಾಕಿಸ್ತಾನಕ್ಕೆ ಜೈಶಂಕರ್ ಎಚ್ಚರಿಕೆ
ಮೂರು ರಾಷ್ಟ್ರಗಳ ಯುರೋಪ್ ಭೇಟಿಯ ಭಾಗವಾಗಿ ಜರ್ಮನಿಯಲ್ಲಿರುವ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪತ್ರಿಕಾಗೋಷ್ಠಿಯಲ್ಲಿ ಭಯೋತ್ಪಾದನೆಯ ಬಗ್ಗೆ ಭಾರತದ ದೃಢ ನಿಲುವನ್ನು ಪುನರುಚ್ಚರಿಸಿದರು. ಭಾರತ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಎಂದಿಗೂ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ" ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಭಾರತವು ಪಾಕಿಸ್ತಾನದೊಂದಿಗೆ ದ್ವಿಪಕ್ಷೀಯ ಮಾರ್ಗಗಳ ಮೂಲಕ ಮಾತ್ರ ಮಾತುಕತೆ ನಡೆಸುತ್ತದೆ ಎಂದು ಎಸ್ ಜೈಶಂಕರ್ ಸ್ಪಷ್ಟಪಡಿಸಿದ್ದಾರೆ. ಆ ವಿಷಯದಲ್ಲಿ ಯಾವುದೇ ಭಾಗದಲ್ಲಿ ಯಾವುದೇ ಗೊಂದಲ ಇರಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತದ ನಿಲುವಿನ ಬಗ್ಗೆ ಜರ್ಮನಿಯ ಪ್ರತಿಕ್ರಿಯೆಯನ್ನು ಜೈಶಂಕರ್ ಸ್ವಾಗತಿಸಿದರು. ಪ್ರತಿಯೊಂದು ರಾಷ್ಟ್ರಕ್ಕೂ ಭಯೋತ್ಪಾದನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕಿದೆ ಎಂಬ ಜರ್ಮನಿಯ ಹೇಳಿಕೆಯನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು.
ಏಪ್ರಿಲ್ 22 ರಂದು 26 ಜನರನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ರಾಜತಾಂತ್ರಿಕ ಸಂಪರ್ಕವನ್ನು ಪ್ರಾರಂಭಿಸಿದೆ, ಕೇಂದ್ರ ಸರ್ಕಾರ ಭಾರತದಲ್ಲಿ ನಡೆಯುವ ಭಯೋತ್ಪದನಾ ದಾಳಿಯನ್ನು ಯುದ್ಧ ಕೃತ್ಯ ಎಂದು ಪರಿಗಣಿಸುವುದಾಗಿ ಹೇಳಿದೆ.












Click it and Unblock the Notifications