Israel VS Hamas: ‘ಪವರ್’ ಕಳೆದುಕೊಂಡ ಗಾಜಾಪಟ್ಟಿ ಪರಿಸ್ಥಿತಿ ಹೇಗಿದೆ?
ಹಮಾಸ್ ಉಗ್ರರು ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಘೋರ ಯುದ್ಧದ ಪರಿಣಾಮ ಎರಡೂ ದೇಶಗಳ ಸಾಮಾನ್ಯ ಜನರು ನರಳುತ್ತಿದ್ದಾರೆ. ಅದ್ರಲ್ಲೂ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ನಡೆಸುತ್ತಿರುವ ಕಾರ್ಯಾಚರಣೆಗೆ ಗಾಜಾಪಟ್ಟಿ ಛಿದ್ರವಾಗಿ ಹೋಗಿದೆ. ಹೀಗೆ ಮೊದಲೇ ಸಂಕಷ್ಟಕ್ಕೆ ಸಿಲುಕಿ ನರಳುತ್ತಿರುವ ಗಾಜಾಪಟ್ಟಿಗೆ ಗಾಯದ ಮೇಲೆ ಬರೆ ಎಳೆದಿದೆ ಇಸ್ರೇಲ್.
ಗಾಜಾಪಟ್ಟಿ ಮೊದಲೇ ಬಡತನ ಹಾಗೂ ಹಸಿವಿನಿಂದ ಬಳಲುತ್ತಿದೆ. ಈ ನಡುವೆ ಹಮಾಸ್ ಉಗ್ರರ ಕಾಟ ಬೇರೆ. ಹೀಗೆ ಉಗ್ರರು & ಬಡತನ ನಡುವೆ ನರಳುತ್ತಾ ತಮ್ಮ ತಮ್ಮ ಬದುಕು ಕಟ್ಟಿಕೊಂಡಿದ್ದ ಗಾಜಾಪಟ್ಟಿ ಜನ ಈಗ ಬೀದಿಗೆ ಬಿದ್ದಿದ್ದಾರೆ. ಅದರಲ್ಲೂ ಇಸ್ರೇಲ್ ಸೇನೆಯ ಭೀಕರ ದಾಳಿಗೆ ಭಾಗಶಃ ಗಾಜಾಪಟ್ಟಿ ಛಿದ್ರವಾಗಿ ಹೋಗಿದೆ. ಅನ್ನ, ನೀರು ಮತ್ತು ನೆರಳಿಗೆ ಅಲ್ಲಿನ ಜನ ಪರಿತಪಿಸುವಾಗ ಕರೆಂಟ್ ಕೂಡ ಕೈಕೊಟ್ಟಿದೆ. ಗಾಜಾಪಟ್ಟಿ ಏಕೈಕ ವಿದ್ಯುತ್ ಕೇಂದ್ರ ಇದೀಗ ಬಂದ್ ಆಗಿದ್ದು, ಇಡೀ ನಗರ ಕತ್ತಲೆಯಲ್ಲಿ ಮುಳುಗಿದೆ.

ಹೇಳಿದಂತೆ ಮಾಡಿದ ಇಸ್ರೇಲ್ ಸೇನೆ!
ಇನ್ನು ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ ಬಳಿಕ ಖುದ್ದು ಇಸ್ರೇಲ್ ಪಿಎಂ ಎಚ್ಚರಿಕೆ ಸಂದೇಶ ರವಾನಿಸಿದ್ದರು. ಆ ಪ್ರಕಾರ, ಇಸ್ರೇಲ್ ಮೇಲೆ ಕೈಯಿಟ್ಟ ಉಗ್ರರಿಗೆ ತಕ್ಕ ಪಾಠ ಗ್ಯಾರಂಟಿ ಅಂತಾ ಘೋಷಿಸಿದ್ದರು. ಇಸ್ರೇಲ್ ಪ್ರಧಾನಿ ಹೇಳಿದಂತೆ ಇದೀಗ ನಡೆದಿದ್ದು ಗಾಜಾಪಟ್ಟಿಗೆ ಅನ್ನ, ನೀರು, ನೆರಳಿನ ಜತೆಗೆ ಕೊನೆಯದಾಗಿ ವಿದ್ಯುತ್ ಕೂಡ ಕೈಕೊಟ್ಟಿದೆ. ವಿದ್ಯುತ್ ಅಭಾವದ ಕಾರಣ ಗಾಜಾಪಟ್ಟಿಯ ಏಕೈಕ ವಿದ್ಯುತ್ ಕೇಂದ್ರ ಮುಚ್ಚುವ ಕುರಿತು ಗಾಜಾಪಟ್ಟಿ ಇಂಧನ ಸಚಿವ ಮಾಹಿತಿ ನೀಡಿದ್ದಾರೆ. ಈ ಮೂಲಕ ಯುದ್ಧ ಪೀಡಿತ ಗಾಜಾ ಕತ್ತಲೆಯಲ್ಲಿ ಮುಳುಗಿ ಹೋಗಿದೆ.
ಆಸ್ಪತ್ರೆಯಲ್ಲೂ ಕೈಕೊಟ್ಟ ಕರೆಂಟ್
ಇದೀಗ ಇಸ್ರೇಲ್ ತನ್ನ ಶತ್ರು ಹಮಾಸ್ ಉಗ್ರರ ವಿರುದ್ಧ ಕ್ಷಿಪಣಿಗಳ ಮಳೆಯನ್ನೇ ಸುರಿಸಿ, ಆಕ್ರೋಶ ಹೊರಹಾಕುತ್ತಿದೆ. ಹೀಗಾಗಿ ಗಾಜಾಪಟ್ಟಿ ಭಾಗದಲ್ಲಿ ನೂರಾರು ಕಟ್ಟಡಗಳು ಪೀಸ್ ಪೀಸ್ ಆಗಿವೆ. ಅದರಲ್ಲೂ ಸಾವಿರಾರು ಗಾಯಾಳುಗಳು ಆಸ್ಪತ್ರೆ ಸೇರಿದ್ದಾರೆ. ಆದರೆ ಇವರಿಗೆ ಚಿಕಿತ್ಸೆ ನೀಡಲು ಕೂಡ ಈಗ ಕರೆಂಟ್ ಇಲ್ಲ. ಹೀಗಾಗಿ ಮುಂದೆ ಏನಪ್ಪಾ ಮಾಡೋದು..? ಅಂತಾ ವೈದ್ಯರು ನರಳುವಂತಾಗಿದೆ. ಇನ್ನು ತಮ್ಮವರ ಜೀವ ಉಳಿಸಿಕೊಳ್ಳಲು ಗಾಯಾಳು ಕುಟುಂಬಸ್ಥರು ಪರದಾಡುತ್ತಿದ್ದಾರೆ.
ಎಲ್ಲವನ್ನೂ ಕತ್ತರಿಸುತ್ತೇವೆ ಎಂದಿದ್ದ ಇಸ್ರೇಲ್!
ಮತ್ತೊಂದು ಕಡೆ ಮೊನ್ನೆಯಷ್ಟೇ ಇಸ್ರೇಲ್ ತನ್ನ ಯುದ್ಧ ತಂತ್ರದ ಭಾಗವಾಗಿ ಗಾಜಾಪಟ್ಟಿ ಎಲ್ಲವನ್ನೂ ಕಳೆದುಕೊಳ್ಳಲಿದೆ ಎಂದಿತ್ತು. ಈ ಮೂಲಕ ಗಾಜಾಪಟ್ಟಿಗೆ ದಿಗ್ಬಂಧನ ಹಾಕುವ ಬಗ್ಗೆ ಎಚ್ಚರಿಕೆ ನೀಡಿತ್ತು. ತಾನು ಹೇಳಿದಂತೆ ಇದೀಗ ಅನ್ನ, ನೀರು, ಆಹಾರ ಸೇರಿದಂತೆ ವಿದ್ಯುತ್ ಕೂಡ ಸಿಗದಂತೆ ಮಾಡಿದೆ. ಇದು ಪರಿಸ್ಥಿತಿ ಕೈಮೀರಿ ಹೋಗುವಂತೆ ಮಾಡಿದ್ದು, ಕನಿಷ್ಠ ಮಾನವೀಯ ನೆಲೆಯಲ್ಲಿ ಸಾಮಾನ್ಯ ಜನರ ರಕ್ಷಣೆಗೆ ಇಸ್ರೇಲ್ ಮುಂದಾಗಬೇಕಿದೆ ಎಂಬ ಒತ್ತಾಯ ಕೇಳಿಬರುತ್ತಿದೆ.

ಒಟ್ನಲ್ಲಿ ಕಳೆದ ಶನಿವಾರ ಶುರುವಾದ ಇಸ್ರೇಲ್ & ಹಮಾಸ್ ಉಗ್ರರ ಯುದ್ಧ ಈಗ ಕ್ಷಣಕ್ಷಣಕ್ಕೂ ಭೀಕರವಾಗುತ್ತಿದೆ. ಇಸ್ರೇಲ್ ಒಳಗೆ ನುಗ್ಗಿದ್ದ ಹಮಾಸ್ ಗ್ಯಾಂಗ್ ನೂರಾರು ಇಸ್ರೇಲ್ ಜನರನ್ನು ಕೊಂದು ಹಾಕಿದೆ. ಪ್ರತಿಕಾರ ಎಂಬಂತೆ ಇಸ್ರೇಲ್ ಕೂಡ ಭೀಕರ ದಾಳಿ ನಡೆಸುತ್ತಿದ್ದು, ಈ ಹೊತ್ತಲ್ಲೇ ಗಾಜಾಪಟ್ಟಿಯಲ್ಲಿ ಕರೆಂಟ್ ಕೈಟ್ಟಿದೆ. ಈಗಾಗಲೇ ಸಾಕಷ್ಟು ಜನ ತಮ್ಮ ತಮ್ಮ ಮನೆ ಬಿಟ್ಟು ಸುರಕ್ಷಿತ ಜಾಗಗಳಿಗೆ ಓಡಿ ಹೋಗಿದ್ದಾರೆ. ಆದರೂ ಸಾವಿನ ಸಂಖ್ಯೆಯ ಏರಿಕೆ ಗಾಜಾಪಟ್ಟಿ ಜನರಿಗೆ ಭಯ ಹುಟ್ಟಿಸಿದೆ. ಹಮಾಸ್ ಉಗ್ರರ ನಾಶ ಮಾಡುವವರೆಗೂ ಯುದ್ಧ ನಿಲ್ಲಲ್ಲ ಎಂದು ಇಸ್ರೇಲ್ ಹೇಳಿರುವುದು ಗಾಜಾ ಜನರಿಗೆ ಭಯ ಮೂಡುವಂತೆ ಮಾಡಿದೆ.












Click it and Unblock the Notifications