G20 Summit: ಜಿ20 ಶೃಂಗಸಭೆಯಲ್ಲಿ ಭಾಗವಹಿಸದ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್
ದೆಹಲಿ ಸೆಪ್ಟೆಂಬರ್ 8: ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ (Pedro Sanchez) ಅವರಿಗೆ ಕೋವಿಡ್-19 ದೃಢಪಟ್ಟಿದೆ. ಹೀಗಾಗಿ ಅವರು ಭಾರತದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಸ್ಪೇನ್ ಅಧ್ಯಕ್ಷ ಪೆಡ್ರೊ ಸ್ಯಾಂಚೆಜ್ X (ಹಿಂದೆ ಟ್ವಿಟ್ಟರ್) ಮಾಡಿದ್ದಾರೆ. "ಈ ಮಧ್ಯಾಹ್ನ ನನಗೆ ಕೋವಿಡ್ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ ನಾನು G20 ಶೃಂಗಸಭೆಗಾಗಿ ನವದೆಹಲಿಗೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ನನ್ನ ಆರೋಗ್ಯ ಚೆನ್ನಾಗಿದೆ" ಎಂದು X (ಹಿಂದೆ ಟ್ವಿಟ್ಟರ್)ನಲ್ಲಿ ಬರೆದಿದ್ದಾರೆ.

ಜಿ 20 ಶೃಂಗಸಭೆಯಲ್ಲಿ ಸ್ಪೇನ್ ಅನ್ನು ಉಪಾಧ್ಯಕ್ಷ ನಾಡಿಯಾ ಕ್ಯಾಲ್ವಿನೊ ಮತ್ತು ಆರ್ಥಿಕ ವ್ಯವಹಾರಗಳ ಸಚಿವರು, ಇಯು ಮತ್ತು ಸಹಕಾರ ಸಚಿವರು ಪ್ರತಿನಿಧಿಸುತ್ತಾರೆ ಎಂದು ಅವರು ಹೇಳಿದರು. G20 ಶೃಂಗಸಭೆಯಿಂದ ಹಿಂದೆ ಸರಿದ ಮೂವರು ವಿಶ್ವ ನಾಯಕರಲ್ಲಿ ಸ್ಯಾಂಚೆಜ್ ಸೇರಿದ್ದಾರೆ. ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜಿ20 ಶೃಂಗಸಭೆಗೆ ದೆಹಲಿಗೆ ಭೇಟಿ ನೀಡದ ಇತರ ಇಬ್ಬರು ನಾಯಕರು.
ಭಾರತ ರಾಷ್ಟ್ರ ರಾಜಧಾನಿಯಲ್ಲಿ ಹೊಸದಾಗಿ ಉದ್ಘಾಟನೆಗೊಂಡ ಮಂಡಪಂ ಕನ್ವೆನ್ಷನ್ ಸೆಂಟರ್ನಲ್ಲಿ ಜಿ 20 ಶೃಂಗಸಭೆಗೆ ವೇದಿಕೆ ಸಿದ್ಧವಾಗಿದೆ. ಭಾರತದ ಅಧ್ಯಕ್ಷತೆಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವುದು ಇದೇ ಮೊದಲು. ಈವೆಂಟ್ ಅನ್ನು ಅನೇಕ ಜಾಗತಿಕ ನಾಯಕರು ಮತ್ತು ಪ್ರತಿನಿಧಿಗಳು ಅಲಂಕರಿಸಲಿದ್ದಾರೆ.

ಜಿ 20 ಶೃಂಗಸಭೆ
G20 ಅಥವಾ ಗ್ರೂಪ್ ಆಫ್ ಟ್ವೆಂಟಿ, 19 ದೇಶಗಳನ್ನು ಮತ್ತು ಒಂದು ಒಕ್ಕೂಟವನ್ನು ಒಳಗೊಂಡಿದೆ. ಅವು ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ. ಮತ್ತು ಯುರೋಪಿಯನ್ ಯೂನಿಯನ್. ಈ ಸದಸ್ಯರು ಜಾಗತಿಕ ಜಿಡಿಪಿಯ ಸುಮಾರು 85 ಪ್ರತಿಶತವನ್ನು ಪ್ರತಿನಿಧಿಸುತ್ತಾರೆ. ಜಾಗತಿಕ ವ್ಯಾಪಾರದ ಶೇಕಡಾ 75ಕ್ಕಿಂತ ಹೆಚ್ಚು ಮತ್ತು ವಿಶ್ವದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಪ್ರತಿನಿಧಿಸುತ್ತಾರೆ.
ಈ ಸಲದ ಜಿ20 ಅಧ್ಯಕ್ಷತೆ ಭಾರತದ್ದು. ಒಂದು ವರ್ಷ ಅವಧಿಯ ಈ ಅಧ್ಯಕ್ಷತೆ ಈ ಶೃಂಗಸಭೆಯ ಕೊನೆಯಲ್ಲಿ ಜಿ20 ನಾಯಕರ ಘೋಷಣೆಯನ್ನು ಅಂಗೀಕರಿಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ.
ಜಿ20ಯ ಪ್ರಮುಖ ಉದ್ದೇಶಗಳು
ಅಂತಾರಾಷ್ಟ್ರೀಯ ಆರ್ಥಿಕ ಸಹಕಾರದ ವೇದಿಕೆಯಾಗಿ, ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ಆರ್ಥಿಕ ಸಮಸ್ಯೆಗಳ ಮೇಲೆ ಜಾಗತಿಕ ಅಭಿಪ್ರಾಯ, ಆಡಳಿತ ರೂಪಿಸುವಲ್ಲಿ ಮತ್ತು ಬಲಪಡಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.
ಜಾಗತಿಕ ಆರ್ಥಿಕ ಸ್ಥಿರತೆ, ಸುಸ್ಥಿರ ಬೆಳವಣಿಗೆಯನ್ನು ಸಾಧಿಸುವ ಸಲುವಾಗಿ ಸದಸ್ಯರ ನಡುವೆ ನೀತಿ ಸಮನ್ವಯ.
ಅಪಾಯಗಳನ್ನು ಕಡಿಮೆ ಮಾಡುವ ಮತ್ತು ಭವಿಷ್ಯದ ಆರ್ಥಿಕ ಬಿಕ್ಕಟ್ಟುಗಳನ್ನು ತಡೆಗಟ್ಟುವ ಹಣಕಾಸಿನ ನಿಯಮಗಳನ್ನು ಉತ್ತೇಜಿಸುವ, ಹೊಸ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆ ರಚಿಸುವ ಉಪಕ್ರಮಗಳ ಚಿಂತನೆ.












Click it and Unblock the Notifications