8 ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯಾವೆಲ್ಲಾ ಯುದ್ಧಗಳು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು ಎತ್ತಿದರೆ ಸಾಕು, ನಾನು 8 ಯುದ್ಧ ನಿಲ್ಲಿಸಿದ್ದೇನೆ ಎಂದು ಪದೇ ಪದೇ ಹೇಳುತ್ತಾರೆ. ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆ ಹಲವು ದೇಶಗಳಿಗೆ ಕೋಪ ಕೂಡ ತರಿಸಿದೆ. ಭಾರತ ಮತ್ತು ಪಾಕಿಸ್ತಾನ ವಿಚಾರದಲ್ಲೂ ಇದೇ ರೀತಿ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಗೆ ಭಾರತ ತಕ್ಕ ತಿರುಗೇಟು ನೀಡಿತ್ತು. ಹೀಗಿದ್ದಾಗ 8 ಯುದ್ಧ ನಿಲ್ಲಿಸಿದ್ದೇನೆ ಎಂದು ಹೇಳುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅದಕ್ಕೆ ಸ್ಪಷ್ಟನೆ ನೀಡುತ್ತಿಲ್ಲ ಎಂಬ ಆರೋಪ ಇದೆ. ಹಾಗಾದರೆ ಟ್ರಂಪ್ ಅವರು ನಿಲ್ಲಿಸಿದ್ದು ಯಾವೆಲ್ಲಾ ಯುದ್ಧಗಳನ್ನು? ನಿಜವಾಗಿಯೂ ಯುದ್ಧ ನಿಂತಿದೆಯಾ ಅಥವಾ ಅಲ್ಲಿ ತಿಕ್ಕಾಟ ಇನ್ನೂ ಹಾಗೇ ಇದೆಯಾ? ಬನ್ನಿ ತಿಳಿಯೋಣ.
ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ಹುದ್ದೆ ಎಂದರೆ ಅದು ಅಮೆರಿಕ ಅಧ್ಯಕ್ಷರ ಸ್ಥಾನ, ಏಕೆಂದರೆ ಅಮೆರಿಕ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದು ನಂಬರ್ 1 ರಾಷ್ಟ್ರವಾಗಿದೆ. ಹೀಗಾಗಿ ಅಮೆರಿಕ ಅಧ್ಯಕ್ಷರ ಸ್ಥಾನಕ್ಕೆ ಅಷ್ಟು ಶಕ್ತಿ ಇದ್ದು, ಅಷ್ಟೇ ಜಾಣ್ಮೆ ಕೂಡ ಈ ಸ್ಥಾನಕ್ಕೆ ಬೇಕಾಗುತ್ತದೆ. 2016 ಚುನಾವಣೆ ಗೆದ್ದು ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ 2020ರ ಚುನಾವಣೆ ಸೋತಿದ್ದರು. ಆ ನಂತರ 2024 ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಬೀಗಿರುವ ಡೊನಾಲ್ಡ್ ಟ್ರಂಪ್ ಅವರು ಪ್ರಪಂಚಕ್ಕೆ ನಾನೇ ಬಾಸ್ ಎಂದು ಪರೋಕ್ಷವಾಗಿ ಘೋಷಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಯುದ್ಧಗಳನ್ನು ನಿಲ್ಲಿಸಿದ ವಿಚಾರವಾಗಿ ಟ್ರಂಪ್ ಹೇಳುತ್ತಿರುವ ಮಾತುಗಳು ಎಷ್ಟು ಸತ್ಯವಾಗಿದೆ? ಬನ್ನಿ ತಿಳಿಯೋಣ.

8 ಯುದ್ಧ ನಿಲ್ಲಿಸಿದ್ದಾರಂತೆ ಟ್ರಂಪ್!
ಭಾರತ ಮತ್ತು ಪಾಕಿಸ್ತಾನ ಯುದ್ಧವೂ ಸೇರಿದಂತೆ ಥೈಲ್ಯಾಂಡ್ ಹಾಗೂ ಕಾಂಬೋಡಿಯಾ, ಕೊಸೊವೊ ಮತ್ತು ಸೆರ್ಬಿಯಾ, ಡಿಆರ್‌ಸಿ ಮತ್ತು ರುವಾಂಡಾ, ಇಸ್ರೇಲ್ ಮತ್ತು ಇರಾನ್, ಇಸ್ರೇಲ್ ಮತ್ತು ಹಮಾಸ್ ಸೇರಿ ಈಜಿಪ್ಟ್ ಮತ್ತು ಇಥಿಯೋಪಿಯಾ, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಯುದ್ಧಗಳನ್ನು ತಾವೇ ನಿಲ್ಲಿಸಿರುವುದಾಗಿ ಪದೇ ಪದೇ ಡೊನಾಲ್ಡ್ ಟ್ರಂಪ್ ಹೇಳುತ್ತಿದ್ದಾರೆ. ಆದರೆ ಈ ಪೈಕಿ ಕೆಲವು ದೇಶಗಳ ಪರಿಸ್ಥಿತಿ ಇನ್ನೂ ಬದಲಾಗಿಲ್ಲ. ಅಲ್ಲಿನ ಹಿಂಸಾಚಾರ ಹಾಗೇ ಮುಂದುವರಿದಿದ್ದು, ಯುದ್ಧ ನಿಂತಿದ್ದಕ್ಕೆ ಸಾಕ್ಷ್ಯ ಸಿಗುತ್ತಿಲ್ಲ ಎಂಬ ಆರೋಪ ಇದೆ. ಹೀಗಾಗಿ ಟ್ರಂಪ್ ಅವರ ಹೇಳಿಕೆ ವಿಚಾರ ದೊಡ್ಡ ಚರ್ಚೆಗೆ ದಾರಿ ಮಾಡಿಕೊಡುತ್ತಿದೆ.
ಆ 8 ಯುದ್ಧಗಳ ಪ್ರಸ್ತುತ ಪರಿಸ್ಥಿತಿ ಹೇಗಿದೆ?
ಡೊನಾಲ್ಡ್ ಟ್ರಂಪ್ ತಾವು ನಿಲ್ಲಿಸಿದ್ದೀವಿ ಎಂದು ಹೇಳುತ್ತಿರುವ ಆ 8 ಯುದ್ಧಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂಬುದನ್ನ ನೋಡುವುದಾದರೆ, ವಾಸ್ತವ ಬೇರೆಯದ್ದೇ ಕಥೆ ಹೇಳುತ್ತದೆ. ಇಸ್ರೇಲ್ & ಹಮಾಸ್ ಯುದ್ಧ ನಿಲ್ಲಿಸಿರುವ ಬಗ್ಗೆ ಪ್ರಸ್ತಾಪ ಮಾಡಿರುವ ಟ್ರಂಪ್ ಅವರ ಹೇಳಿಕೆಗೆ ಪೂರಕ ವಾತಾವರಣ ಗಾಜಾದಲ್ಲಿ ಇಲ್ಲ. ಏಕೆಂದರೆ ಕದನ ವಿರಾಮ ಹಾಗೂ ಒತ್ತೆಯಾಳು ಒಪ್ಪಂದ ಬಿಟ್ಟರೆ ಗಾಜಾದಲ್ಲಿ ಯುದ್ಧಕ್ಕೆ ಇನ್ನೂ ಅಂತ್ಯವಿಲ್ಲ. ಇಸ್ರೇಲ್ ಮತ್ತು ಇರಾನ್ ಪರಿಸ್ಥಿತಿ ಕೂಡ ಭಾಗಶಃ ಅದೇ ರೀತಿ ಇದ್ದು, ಯಾವಾಗ ಈ ಎರಡೂ ದೇಶಗಳು ಮತ್ತೆ ಯುದ್ಧ ಶುರು ಮಾಡುತ್ತವೋ ಗೊತ್ತಿಲ್ಲ ಎನ್ನುವ ವಾತಾವರಣ ನಿರ್ಮಾಣ ಆಗುತ್ತಿದೆ.
ಇಥಿಯೋಪಿಯಾ & ಈಜಿಪ್ಟ್ ಒಪ್ಪಂದ ಪೂರ್ಣ ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದಿಲ್ಲ ಎಂಬ ವಾದವೂ ಇದ್ದು, ಭಾರತ ಹಾಗೂ ಪಾಕಿಸ್ತಾನ ಯುದ್ಧದ ವಿಚಾರದಲ್ಲಿ ಕೂಡ ಟ್ರಂಪ್ ಅವರ ಹೇಳಿಕೆ ವಾಸ್ತವ ಅಲ್ಲ ಎಂದು ಈಗಾಗಲೇ ತಿರಸ್ಕರಿಸಲಾಗಿದೆ. ಹೀಗಿದ್ದಾಗ ಟ್ರಂಪ್ ಅವರು ಮಾತ್ರ 8 ಯುದ್ಧಗಳನ್ನು ನಿಲ್ಲಿಸಿದ್ದಾಗಿ ಹೇಳುತ್ತಲೇ ಬಂದಿದ್ದಾರೆ. ಹೀಗಾಗಿ ಪದೇ ಪದೇ ಟ್ರಂಪ್ ಅವರ ಹೇಳಿಕೆಗಳು ಚರ್ಚೆಗೂ ಮತ್ತು ಟೀಕೆಗೂ ಗುರಿಯಾಗುತ್ತಿದೆ. ನೊಬೆಲ್ ಶಾಂತಿ ಪ್ರಶಸ್ತಿ ವಿಚಾರದಲ್ಲಿ ಕೂಡ ಯುದ್ಧ ನಿಲ್ಲಿಸಿದ್ದನ್ನೇ ಮುಂದೆ ಇಟ್ಟುಕೊಂಡು ಟ್ರಂಪ್ ವಾದ ಮಾಡಿದ್ದರು, ಆದರೆ ಈ ಬಾರಿ ನೊಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಅವರ ಬದಲು ಬೇರೆಯವರಿಗೆ ಸಿಕ್ಕಿತ್ತು.












Click it and Unblock the Notifications