Drone Attack: ಸಿರಿಯನ್ ಮಿಲಿಟರಿ ಅಕಾಡೆಮಿಯ ಮೇಲೆ ಡ್ರೋನ್ ದಾಳಿ, 100 ಕ್ಕೂ ಹೆಚ್ಚು ಸಾವು, 200 ಮಂದಿಗೆ ಗಾಯ!
ಸಿರಿಯನ್ ಮಿಲಿಟರಿ ಅಕಾಡೆಮಿಯ ಮೇಲೆ ಡ್ರೋನ್ ದಾಳಿ ನಡೆದು 100ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು 200 ಮಂದಿ ಗಾಯಗೊಂಡಿರುವುದು ವರದಿಯಾಗಿದೆ. ಮೃತರಲ್ಲಿ 14 ನಾಗರಿಕರೂ ಇದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯಲ್ಲಿ ಸಿರಿಯಾದ ರಕ್ಷಣಾ ಸಚಿವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ದಾಳಿಗೂ ಮುನ್ನ ಈ ಸ್ಥಳದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಮುಗಿಸಿ ಸಿರಿಯಾದ ರಕ್ಷಣಾ ಸಚಿವರು ದಾಳಿಗೆ ಕೆಲವೇ ನಿಮಿಷಗಳ ಮೊದಲು ಅಲ್ಲಿಂದ ತೆರಳಿದ್ದರು. ಹೀಗಾಗಿ ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆಯನ್ನು ನಡೆಸಿದ ಭಯೋತ್ಪಾದಕ ಗುಂಪುಗಳು ಡ್ರೋನ್‌ಗಳನ್ನು ಬಳಸಿವೆ. ಆದರೆ ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಈವರೆಗೂ ಹೊತ್ತುಕೊಂಡಿಲ್ಲ.

ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿದ ಸಿರಿಯಾದ ರಕ್ಷಣಾ ಸಚಿವಾಲಯ, ಕೇಂದ್ರ ಪ್ರಾಂತ್ಯದ ಹೋಮ್ಸ್‌ನಲ್ಲಿರುವ ಮಿಲಿಟರಿ ಅಕಾಡೆಮಿಯ ಮೇಲಿನ ದಾಳಿಯಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಿದೆ.
ಸಿರಿಯನ್ ರಕ್ಷಣಾ ಮೂಲಗಳ ಪ್ರಕಾರ, ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಕಾರ್ಯಕ್ರಮವಿತ್ತು. ಇದರಲ್ಲಿ ಭಾಗವಹಿಸಲು ರಕ್ಷಣಾ ಸಚಿವರೂ ಅಲ್ಲಿಗೆ ಆಗಮಿಸಿದ್ದರು. ಅವನ ಅದೃಷ್ಟ ಚೆನ್ನಾಗಿತ್ತು, ಅವರು ಸಮಯಕ್ಕೆ ಸರಿಯಾಗಿ ಸ್ಥಳವನ್ನು ತೊರೆದರು. ಅಲ್ಲಿ ಇದ್ದ ಬೇರೆಯವರು ಪ್ರಾಣ ಕಳೆದುಕೊಂಡಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಕಾರ್ಯಕ್ರಮದ ನಂತರ ಜನರು ಮೈದಾನಕ್ಕೆ ಹೋದರು. ಆಗ ಬಾಂಬ್ ಸ್ಫೋಟ ಸಂಭವಿಸಿದೆ. ಆ ಬಾಂಬ್ ಎಲ್ಲಿಂದ ಬಂತು ಎಂದು ಯಾರಿಗೂ ಅರ್ಥವಾಗಲಿಲ್ಲ. ಸುತ್ತಲೂ ಮೃತದೇಹಗಳು ಮಾತ್ರ ಗೋಚರಿಸಿದವು. ಪ್ರಕರಣದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 125 ಜನರು ಗಾಯಗೊಂಡಿದ್ದಾರೆ ಎಂದು ಮಾನವ ಹಕ್ಕುಗಳ ಸಿರಿಯನ್ ವೀಕ್ಷಣಾಲಯ ತಿಳಿಸಿದೆ. ಆದಾಗ್ಯೂ ಆರೋಗ್ಯ ಸಚಿವ ಹಸನ್ ಅಲ್-ಘೋಬಾಶ್ ಸಾವಿನ ಸಂಖ್ಯೆಯನ್ನು 80 ಎಂದು ಹೇಳಿದ್ದಾರೆ. ಜೊತೆಗೆ ಅವರು ಸುಮಾರು 240 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
2011ರಿಂದ ಹೋರಾಟ
ಸಿರಿಯನ್ ಸಂಘರ್ಷವು 2011 ರಲ್ಲಿ ಅಧ್ಯಕ್ಷ ಬಶರ್ ಅಲ್-ಅಸ್ಸಾದ್ ವಿರುದ್ಧದ ಪ್ರತಿಭಟನೆಯೊಂದಿಗೆ ಪ್ರಾರಂಭವಾಯಿತು. ಇದು ನಂತರ ಯುದ್ಧಕ್ಕೆ ತಿರುಗಿದೆ. ಇಲ್ಲಿಯವರೆಗೆ ಅಲ್ಲಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದರೆ, ಲಕ್ಷಗಟ್ಟಲೆ ಜನರು ನಿರಾಶ್ರಿತರಾಗಿದ್ದಾರೆ.












Click it and Unblock the Notifications