ಅಮೆರಿಕ ಹಿಂದೆಂದೂ ಕಂಡಿರದ ರಾಜಕೀಯ ಗೆಲುವು.. ವಿಜಯದ ಬಳಿಕ ಡೊನಾಲ್ಡ್ ಟ್ರಂಪ್ ಮೊದಲ ಭಾಷಣ
Donald Trump: ಇದು ಅಮೆರಿಕ ಹಿಂದೆಂದೂ ಕಂಡಿರದ ರಾಜಕೀಯ ಗೆಲುವು. ನಾನು ನಿಮಗಾಗಿ ಪ್ರತಿ ದಿನ, ಪ್ರತಿ ಕ್ಷಣ ಹೋರಾಡುತ್ತೇನೆ. ನಾನು ಎಂದಿಗೂ ವಿಶ್ರಾಂತಿಯನ್ನು ಪಡೆಯುವುದಿಲ್ಲವೆಂದು ಡೊನಾಲ್ಡ್ ಟ್ರಂಪ್ ತಿಳಿಸಿದರು. ಎರಡನೇ ಬಾರಿಗೆ ಅಮೆರಿಕದ ಅಧ್ಯಕ್ಷ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ಡೊನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರು ಹಾಗೂ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಫ್ಲೋರಿಡಾದಲ್ಲಿ ಭಾಷಣ ಮಾಡಿದರು.
ಅಮೆರಿಕದ ಚುನಾವಣೆಯಲ್ಲಿ ಪ್ರಮುಖ ಸ್ವಿಂಗ್ ರಾಜ್ಯಗಳಾದ ನಾರ್ತ್ ಕೆರೊಲಿನಾ ಮತ್ತು ಜಾರ್ಜಿಯಾದಲ್ಲಿ ಗೆಲುವು ಸಾಧಿಸಿದ ನಂತರ ಡೊನಾಲ್ಡ್ ಟ್ರಂಪ್ ಅವರು ಫ್ಲೋರಿಡಾದಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು.

ಫ್ಲೋರಿಡಾದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರ ಹರ್ಷೋದ್ಗಾರದ ನಡುವೆ ಭಾಷಣ ಆರಂಭಿಸಿದ ಡೊನಾಲ್ಡ್ ಟ್ರಂಪ್, 'ಈ ಗೆಲುವು ಅಮೆರಿಕದ ಇತಿಹಾಸದಲ್ಲೇ ಮಹತ್ವದ ಚಳುವಳಿಯಾಗಿದೆ. ಇದು ಸಾರ್ವಕಾಲಿಕ ಶ್ರೇಷ್ಠ ರಾಜಕೀಯ ಚಳುವಳಿಯಾಗಿ ಹೊರಹೊಮ್ಮಿದೆ. ನಾನು ನಮ್ಮ ದೇಶವನ್ನು ಸರಿಪಡಿಸಲು ಪ್ರತಿಕ್ಷಣವೂ ದುಡಿಯುತ್ತೇನೆ. ನನ್ನ ದೇಶಕ್ಕೆ ಸಹಾಯದ ಅವಶ್ಯಕತೆ ಇದೆ. ನಾವು ಎಲ್ಲವನ್ನೂ ಸರಿಪಡಿಸಿ ಮುನ್ನುಗ್ಗಲಿದ್ದೇವೆ' ಎಂದು ಅವರು ಹೇಳಿದರು.
'ಪ್ರತಿದಿನ ನಾನು ನಿಮಗಾಗಿ ದುಡಿಯುತ್ತೇನೆ. ಅಗತ್ಯ ಬಿದ್ದರೆ ಹೋರಾಡುತ್ತೇನೆ' ಎಂದು ಟ್ರಂಪ್ ಭರವಸೆ ನೀಡಿದರು. ಇದು ಅಮೆರಿಕದ ಸುವರ್ಣಯುಗವೆಂದು ಟ್ರಂಪ್ ಬಣ್ಣಿಸಿದರು.
ಒಂದು ದಿನ ನಮ್ಮ ವಿರೋಧಿಗಳು ಸಹ ನಮ್ಮನ್ನು ಹಿಂತಿರುಗಿ ನೋಡುತ್ತಾರೆ. ಅದು ನಮ್ಮ ಜೀವನದ ಪ್ರಮುಖ ಕ್ಷಣಗಳಲ್ಲಿ ಒಂದಾಗಲಿದೆ. ವಿರೋಧಿಗಳ ಸಹ ನಮ್ಮನ್ನು ಗಂಭೀರವಾಗಿ ಪರಿಗಣಿಸಲಿದ್ದಾರೆ. ಆ ದಿನಗಳು ಬಂದೇಬರಲಿವೆ ಎಂದು ಟ್ರಂಪ್ ಅಭಿಪ್ರಾಯಪಟ್ಟರು.
ಇದೇ ವೇಳೆ ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿರುವ ಉದ್ಯಮಿ ಎಲಾನ್ ಮಾಸ್ಕ್ ಅವರನ್ನು ಹಾಡಿಹೊಗಳಿದ ಡೊನಾಲ್ಡ್ ಟ್ರಂಪ್. ಶ್ರೇಷ್ಠ ಮತ್ತು ಅದ್ಭುತ ವ್ಯಕ್ತಿ ಎಂದು ಕೊಂಡಾಡಿದರು. ಎಲಾನ್ ಮಾಸ್ಕ್ ಅವರು ಟ್ರಂಪ್ ಪರ ಬಹಿರಂಗವಾಗಿಯೇ ಪ್ರಚಾರ ಮಾಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಟ್ರಂಪ್ ಅವರು ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಎದುರಿಸಿ ಜಯಗಳಿಸಿದ್ದಾರೆ. ಸ್ಪಷ್ಟ ಬಹುಮತ ಗಳಿಸಿ ಎರಡನೇ ಭಾರಿಗೆ ಅಮೆರಿಕದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ವೇದಿಕೆಯ ಮೇಲೆ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್, ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಮತ್ತು ಸ್ಪೀಕರ್ ಮೈಕ್ ಜಾನ್ಸನ್ ಸೇರಿದಂತೆ ಅವರ ಕುಟುಂಬ ಸದಸ್ಯರು ಇದ್ದರು.












Click it and Unblock the Notifications