Donald Trump: ಡೊನಾಲ್ಡ್ ಟ್ರಂಪ್ ಹಾಗೂ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಭೇಟಿ ಗ್ಯಾರಂಟಿ, ಕಾರಣ ಇಲ್ಲಿದೆ...
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೇರವಾದ ನಿರ್ಧಾರಗಳ ಮೂಲಕ ಭಾರಿ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ. ಅದರಲ್ಲೂ ನೂರಾರು ವರ್ಷಗಳಿಂದ ಅಮೆರಿಕದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ದೇಶಗಳು ಕೂಡ ಅಮೆರಿಕ ವಿರುದ್ಧ ಕೋಪಗೊಳ್ಳುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಹೀಗಿದ್ದಾಗ ಸಾಲು ಸಾಲು ದೇಶಗಳು ಟ್ರಂಪ್ ಅವರ ನಿರ್ಧಾರಗಳನ್ನು ವಿರೋಧ ಮಾಡುತ್ತಾ ಇದ್ದು, ಜಾಗತಿಕ ಮಟ್ಟದಲ್ಲಿ ಇದು ಸದ್ದು ಮಾಡುತ್ತಿದೆ. ಇಷ್ಟೆಲ್ಲದರ ನಡುವೆ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಕೂಡ ಟ್ರಂಪ್ ಅವರ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಇದೀಗ ಬ್ರೆಜಿಲ್ ಅಧ್ಯಕ್ಷರು ಮತ್ತು ಅಮೆರಿಕ ಅಧ್ಯಕ್ಷರ ನಡುವೆ ಮಹತ್ವದ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.
ಟ್ರಂಪ್ ಅವರ ಗಾಜಾ ಶಾಂತಿ ಮಂಡಳಿ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಕೆಲ ದಿನಗಳ ಹಿಂದಷ್ಟೇ ಬೇಸರ ಹೊರ ಹಾಕಿದ್ದರು. ಅಲ್ಲದೆ, ವಿಶ್ವಸಂಸ್ಥೆಗೆ ಪರ್ಯಾಯವಾಗಿ ಈ ಮಂಡಳಿ ರಚನೆ ಆಗಿದೆಯಾ? ಎನ್ನುವ ಮೂಲಕ, ಟ್ರಂಪ್ ಅವರ ಮಹತ್ವದ ಮಂಡಳಿ ರಚನೆ ಬಗ್ಗೆ ಅಸಮಾಧಾನ ಕೂಡ ಹೊರ ಹಾಕಿದ್ದರು ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ. ಆದರೆ ಇದೀಗ ಬ್ರೆಜಿಲ್ ಅಧ್ಯಕ್ಷರ ಕೋಪ ತಣಿಸಲು & ಆ ಮೂಲಕ ಗಾಜಾ ಶಾಂತಿ ಮಂಡಳಿಗೆ ಸೇರುವಂತೆ ಮನವೊಲಿಸಲು ಅಮೆರಿಕ ಮಹತ್ವದ ಕ್ರಮವನ್ನ ಕೈಗೊಂಡಿದೆ. ಇದರ ಭಾಗವಾಗಿ ಇದೀಗ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಹಾಗೂ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಅಮೆರಿಕದಲ್ಲೇ ಭೇಟಿ ಮಾಡಿ ಸಭೆ ನಡೆಸಲಿದ್ದಾರಂತೆ.

50 ನಿಮಿಷಗಳ ಫೋನ್ ಕಾಲ್ ಚರ್ಚೆ
ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಗಾಜಾ ಶಾಂತಿ ಮಂಡಳಿ ರಚನೆ ವಿರುದ್ಧ ಮಾತನಾಡಿದ್ದ ಕಾರಣಕ್ಕೆ, ನೇರವಾಗಿ ಟ್ರಂಪ್ ಅವರು ಹಾಗೂ ಲುಲಾ ಡ ಸಿಲ್ವಾ ನಡುವೆ ಫೋನ್ ಸಂಭಾಷಣೆ ನಡೆದಿದೆ. ಇದೇ ವೇಳೆ ಶೀಘ್ರದಲ್ಲೇ ವಾಷಿಂಗ್ಟನ್‌ಗೆ ಭೇಟಿ ನೀಡಲು ಬ್ರೆಜಿಲ್ ಅಧ್ಯಕ್ಷರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಈ ಬಗ್ಗೆ ಬ್ರೆಜಿಲ್ ಸರ್ಕಾರ ಹೇಳಿಕೆಯೊಂದನ್ನು ರಿಲೀಸ್ ಮಾಡಿದ್ದು, ಬ್ರೆಜಿಲ್ ಅಧ್ಯಕ್ಷ ಅಮೆರಿಕಗೆ ಹೋಗಿ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಸಭೆ ನಡೆಸುವುದನ್ನು ಕನ್ಫರ್ಮ್ ಮಾಡಿದೆ. ಸುಮಾರು 50 ನಿಮಿಷಗಳ ಕಾಲ ಇಬ್ಬರೂ ನಾಯಕರು ಫೋನ್ ಮೂಲಕ ಸಂಭಾಷಣೆ ನಡೆಸಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ಮಹತ್ವದ ಸಭೆಗೆ ಆಹ್ವಾನಿಸಲಾಗಿದೆ.
ಶಾಂತಿ ಮಾರ್ಗದಲ್ಲಿ ಅಮೆರಿಕದ ಹೆಜ್ಜೆ
ಹಾಗೇ ಗಾಜಾ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವ ಬಗ್ಗೆ ಕೂಡ ಲುಲಾ ಡ ಸಿಲ್ವಾ ಪ್ರಸ್ತಾಪ ಮಾಡಿದ್ದು, ಜೊತೆಗೆ ಅಲ್ಲಿ ಕೈಗೊಳ್ಳಲಾಗುವ ಮುಂದಿನ ಕ್ರಮಗಳ ಬಗ್ಗೆ ಕೂಡ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನೊಂದೆಡೆ ಬ್ರೆಜಿಲ್‌ಗೆ ಹತ್ತಿರದ ದೇಶವಾಗಿರುವ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಬಂಧನದ ಬಗ್ಗೆ ಕೂಡ ಬ್ರೆಜಿಲ್ ಅಧ್ಯಕ್ಷ ಸಿಲ್ವಾ ವಿರೋಧ ವ್ಯಕ್ತಪಡಿಸಿ, ಸ್ವೀಕಾರಾರ್ಹವಲ್ಲದ ರೇಖೆ ದಾಟಿದ್ದೀರಿ ಎಂದು ಅಮೆರಿಕದ ನಡೆಯನ್ನು ಖಂಡಿಸಿದ್ದರು. ಆ ನಂತರ ಗಾಜಾ ಶಾಂತಿ ಮಂಡಳಿ ವಿಚಾರವಾಗಿ ಕೂಡ ಲುಲಾ ಡ ಸಿಲ್ವಾ ಮಾತನಾಡಿದ್ದು ಅಮೆರಿಕಗೆ ತಲೆನೋವು ತರಿಸಿತ್ತು. ಹೀಗಾಗಿಯೇ ಇದೀಗ ಒಂದು ಶಾಂತಿ ಮಾತುಕತೆಗೆ ಎರಡೂ ದೇಶಗಳು ಸಜ್ಜಾಗಿವೆ.
ಈ ಮೂಲಕ ಲ್ಯಾಟಿನ್ ಅಮೆರಿಕದ ಅತಿದೊಡ್ಡ ದೇಶವಾದ ಬ್ರೆಜಿಲ್ ಜೊತೆಗೆ ಶಾಂತಿ ಮಾರ್ಗದಲ್ಲೇ ಸಾಗಲು ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ನಿರ್ಧಾರ ಮಾಡಿದಂತೆ ಕಾಣುತ್ತಿದೆ. ಬ್ರೆಜಿಲ್ ಕೂಡ ಬಲಿಷ್ಠ ದೇಶವಾಗಿದ್ದು, ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನೈಸರ್ಗಿಕ ಸಂಪತ್ತು ಈ ದೇಶದಲ್ಲಿ ಅಡಗಿದೆ. ಈ ಹಿನ್ನೆಲೆ ಬ್ರೆಜಿಲ್ ಜೊತೆಗಿನ ಸಂಬಂಧ ಹಾಗೂ ಸ್ನೇಹ ಅಮೆರಿಕಗೆ ಬಹುಮುಖ್ಯವಾಗಿದೆ.












Click it and Unblock the Notifications