Donald Trump: ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ: ದಿನಾಂಕ, ಸಮಯ, ವೇಳಾಪಟ್ಟಿ
ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲು ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದಾರೆ. ಟ್ರಂಪ್ ಜೊತೆ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇಡೀ ಜಗತ್ತೇ ಇದೀಗ ಅಮೆರಿಕದತ್ತ ನೋಡುತ್ತಿದೆ. ಜನವರಿ 20ರ ಸೋಮವಾರ ಡೊನಾಲ್ಡ್ ಟ್ರಂಪ್, ವಾಷಿಂಗ್ಟನ್ ಡಿಸಿಯಲ್ಲಿರುವ ಯುಎಸ್ ಕ್ಯಾಪಿಟಲ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ಮೆರವಣಿಗೆ ನಡೆಯಲಿದ್ದು, ವಾಷಿಂಗ್ಟನ್, ಡಿ.ಸಿ.ಯಿಂದ ಸುಮಾರು 7,500 ಜನರು ಭಾಗವಹಿಸಲಿದ್ದಾರೆ. ಭಾನುವಾರವಾಗಿದ್ದರೂ ಸಂವಿಧಾನದ 20ನೇ ತಿದ್ದುಪಡಿಯ ಪ್ರಕಾರ ಅಧ್ಯಕ್ಷರ ಪ್ರಮಾಣವಚನಕ್ಕೆ ಸಾಂಪ್ರದಾಯಿಕ ದಿನ ಎಂದು ಪರಿಗಣಿಸಲಾಗಿದೆ. ಈ ಶತಮಾನದಲ್ಲಿ ಇದೇ ಮೊದಲ ಬಾರಿಗೆ ಫೆಡರಲ್ ರಜಾ ದಿನದಂದು ಅಧ್ಯಕ್ಷರೊಬ್ಬರು ಪ್ರಮಾಣ ವಚನ ಸ್ವೀಕರಿಸುತ್ತಿರುವುದು ವಿಶೇಷ.

ಮೂರು ದಿನದ ಕಾರ್ಯಕ್ರಮ
ಯುಎಸ್ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪ್ರಮಾಣ ವಚನ ಕಾರ್ಯಕ್ರಮ ಮೂರು ದಿನ ನಡೆಯುತ್ತದೆ. ಈಗಾಗಲೇ ಕಾರ್ಯಕ್ರಮಗಳು ಆರಂಭವಾಗಿದೆ. ಜನವರಿ 18ರ ಶನಿವಾರ ವರ್ಜೀನಿಯಾದ ಸ್ಟರ್ಲಿಂಗ್‌ನಲ್ಲಿರುವ ಟ್ರಂಪ್ ನ್ಯಾಷನಲ್ ಗಾಲ್ಫ್ ಕ್ಲಬ್‌ನಲ್ಲಿ ಸ್ವಾಗತ ಮತ್ತು ಪಟಾಕಿ ಪ್ರದರ್ಶನದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಜನವರಿ 19ರಂದು ಭಾನುವಾರ
ಎರಡನೇ ದಿನ ಭಾನುವಾರ, ಆರ್ಲಿಂಗ್ಟನ್ ರಾಷ್ಟ್ರೀಯ ಸ್ಮಶಾನ ಸಮಾರಂಭ ಅಂದರೆ ಸೈನಿಕರ ಸಮಾಧಿಗೆ ಮಾಲಾರ್ಪಣೆ ಮಾಡಲಾಗುತ್ತದೆ. ಇದು ದೇಶಕ್ಕಾಗಿ ಮಡಿದವರಿಗೆ ಗೌರವ ಸಲ್ಲಿಸುವ ಸಂಪ್ರದಾಯವಾಗಿದೆ. ಟ್ರಂಪ್ ವಾಷಿಂಗ್ಟನ್ ಡಿ.ಸಿ ಯ ಕ್ಯಾಪಿಟಲ್ ಒನ್ ಅರೆನಾದಲ್ಲಿ ಮಧ್ಯಾಹ್ನ 3 ಗಂಟೆಗೆ ರ್‍ಯಾಲಿ ಆಯೋಜಿಸಲಿದ್ದು, ಮೊದಲು ಬಂದವರಿಗೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತದೆ. ಸಂಜೆ ಟ್ರಂಪ್ ಭಾಷಣ ಮಾಡುವ ನಿರೀಕ್ಷೆ ಇದ್ದು ಬಳಿಕ ಭೋಜನ ವ್ಯವಸ್ಥೆ ಇರಲಿದೆ.
ಸೋಮವಾರ ಪ್ರಮಾಣ ವಚನ
ಡೊನಾಲ್ಡ್ ಮತ್ತು ಮೆಲಾನಿಯಾ ಟ್ರಂಪ್ ಶ್ವೇತಭವನದಲ್ಲಿ ಚಹಾ ಕಾರ್ಯಕ್ರಮಕ್ಕಾಗಿ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರನ್ನು ಭೇಟಿಯಾಗಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬಳಿಕ ಅವರು ಅಧ್ಯಕ್ಷರಾಗಿ ಮೊದಲ ಭಾಷಣ ಮಾಡಲಿದ್ದಾರೆ.
ಪ್ರಮಾಣ ವಚನ ಸಮಾರಂಭದ ಬಳಿಕ ನಿರ್ಗಮಿತ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಗೌರವಪೂರ್ವಕವಾಗಿ ಬೀಳ್ಕೊಡುಗೆ ನೀಡಲಾಗುತ್ತದೆ. ಸೆನೆಟ್ ಕೊಠಡಿಯಲ್ಲಿ ಸಹಿ ಸಮಾರಂಭ ನಡೆಯಲಿದ್ದು ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಟ್ರಂಪ್ ಪ್ರಮುಖ ದಾಖಲೆಗಳಿಗೆ ಸಹಿ ಹಾಕುತ್ತಾರೆ. ಮಧ್ಯಾಹ್ನ 3 ಗಂಟೆಗೆ ಅಧ್ಯಕ್ಷೀಯ ಮೆರವಣಿಗೆ ಪೆನ್ಸಿಲ್ವೇನಿಯಾ ಅವೆನ್ಯೂ ಮೂಲಕ ಶ್ವೇತಭವನಕ್ಕೆ ಮುಂದುವರಿಯುತ್ತದೆ.
ಜನವರಿ 21ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ವಾಷಿಂಗ್ಟನ್ ರಾಷ್ಟ್ರೀಯ ಕ್ಯಾಥೆಡ್ರಲ್‌ನಲ್ಲಿ ರಾಷ್ಟ್ರೀಯ ಪ್ರಾರ್ಥನಾ ಸೇವೆಯೊಂದಿಗೆ ಕಾರ್ಯಕ್ರಮ ಮುಗಿಯಲಿದೆ.
ಉದ್ಘಾಟನಾ ಸಮಾರಂಭವನ್ನು ಎಲ್ಲಾ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳು ನೇರಪ್ರಸಾರ ಮಾಡಲಿವೆ. ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ಕೂಡ ನೇರಪ್ರಸಾರದಲ್ಲಿ ನೋಡಬಹುದಾಗಿದೆ.












Click it and Unblock the Notifications