ತನ್ನ ಹೆಸರಿಲ್ಲದ ಚುನಾವಣೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭವಿಷ್ಯ ಪರೀಕ್ಷೆ
ಅಮೆರಿಕನ್ನರು ಮತ ಚಲಾಯಿಸಲು (election) ಇಂದು ಚುನಾವಣಾ ಬೂತ್ಗಳಿಗೆ ತೆರಳಲಿದ್ದು, ಬ್ಯಾಲಟ್ ಪೇಪರ್ನಲ್ಲೂ ನಮೂದಾಗಿರದ ವ್ಯಕ್ತಿಯ ಕುರಿತು ಈ ಚುನಾವಣೆಯಲ್ಲಿ ತೀರ್ಪು ನೀಡಲಿದ್ದಾರೆ. ಈ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಸ್ಪರ್ಧಿಸುತ್ತಿಲ್ಲ. ಫಲಿತಾಂಶ ಏನೇ ಆದರೂ ಅವರು ಅಮೆರಿಕದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಆದರೆ, ಟ್ರಂಪ್ ಬಹಿರಂಗವಾಗಿಯೇ ಈ ಚುನಾವಣೆಯನ್ನು ತನ್ನ ಕುರಿತ ಜನಮತ ಸಂಗ್ರಹವಾಗಿ ರೂಪಿಸಿಕೊಂಡಿರುವುದರಿಂದ, ಮುಂದಿನ ಎರಡು ವರ್ಷಗಳ ಅಧ್ಯಕ್ಷೀಯ ಅವಧಿಯಲ್ಲಿ ಟ್ರಂಪ್ ನಿಜಕ್ಕೂ ಆಡಳಿತ ನಡೆಸುತ್ತಾರೆಯೇ, ಅಥವಾ ಕೇವಲ ಅಧ್ಯಕ್ಷರಾಗಿ ಉಳಿದುಕೊಳ್ಳುವುದಕ್ಕಷ್ಟೇ ಸೀಮಿತವಾಗುತ್ತಾರೆಯೇ ಎನ್ನುವುದನ್ನು ಈ ಅಮೆರಿಕ ಚುನಾವಣೆ ನಿರ್ಧರಿಸಲಿದೆ.

ಚುನಾವಣೆಯ ಫಲಿತಾಂಶದಲ್ಲಿ ಮೂರು ಸ್ಪಷ್ಟ ಸಾಧ್ಯತೆಗಳು ಎದುರಾಗಬಹುದು. ಮೊದಲನೆಯದಾಗಿ, ರಿಪಬ್ಲಿಕನ್ನರು ಕಾಂಗ್ರೆಸ್ನ ಎರಡೂ ಸದನಗಳನ್ನು ಉಳಿಸಿಕೊಳ್ಳಬಹುದು, ಟ್ರಂಪ್ ತನ್ನ ಬಹುಮತ ಕಾಯ್ದುಕೊಂಡು, ತಾವಂದು ಕೊಂಡಂತೆಯೇ ಆಡಳಿತ ಮುಂದುವರಿಸಬಹುದು. ಆದರೆ, ಡೊನಾಲ್ಡ್ ಟ್ರಂಪ್ ಆಡಳಿತ ನೋಡಿದ ಯಾರು ಬೇಕಾದರೂ ಅವರ ಪರ ಫಲಿತಾಂಶ ಬರೋದು ಆಸಾಧ್ಯ ಎಂಬುದನ್ನು ಸುಲಭವಾಗಿಯೇ ಹೇಳುತ್ತಾರೆ. ಇನ್ನು ಎರಡನೇ ಸಾಧ್ಯತೆಯಲ್ಲಿ, ಡೆಮಾಕ್ರಟಿಕ್ ಪಕ್ಷ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆದ್ದುಕೊಂಡು, ರಿಪಬ್ಲಿಕನ್ ಪಕ್ಷ ಸೆನೆಟ್ನವ್ವಿ ಬಹುಮತ ಪಡೆಯಬಹುದು. ಇದು ನಿಜಕ್ಕೂ ದೊಡ್ಡ ಸೋಲು. ಹಾಗಾದರೆ, ನೈಜ ತನಿಖಾ ಕೆಲಸಗಳನ್ನು ನಿರ್ವಹಿಸುವ ಹೌಸ್ ಕಮಿಟಿಗಳು ಎನ್ನುವ ಸಮಿತಿಗಳನ್ನು ಡೆಮಾಕ್ರಟಿಕ್ ಪಕ್ಷ ನಿಯಂತ್ರಿಸಲಾರಂಭಿಸುತ್ತದೆ. ಅವರು ತನಿಖೆಗಳನ್ನು ಆರಂಭಿಸಬಹುದು, ಸಾಕ್ಷಿಗಳನ್ನು ಕರೆಸಬಹುದು, ಮತ್ತು ಟ್ರಂಪ್ ಅವರ ಆಡಳಿತಾತ್ಮಕ ಯೋಜನೆಗಳಿಗೆ ತಡೆ ಒಡ್ಡಬಹುದು. ಹೀಗಾದರೆ ಇನ್ನುಳಿದ ಎರಡು ವರ್ಷಗಳ ಅವಧಿಗೆ ಟ್ರಂಪ್ ಆಡಳಿತ ರಕ್ಷಣಾತ್ಮಕ ವಿಧಾನವನ್ನೇ ಅನುಸರಿಸಬೇಕಾಗುತ್ತದೆ. ಇನ್ನು ಮೂರನೇ ಸಾಧ್ಯತೆ ಎಂದರೆ ಡೆಮಾಕ್ರಟಿಕ್ ಪಕ್ಷ ಎರಡೂ ಸದನಗಳನ್ನು ಗೆದ್ದುಕೊಳ್ಳುವುದು. ಇದು ಟ್ರಂಪ್ ಪಾಲಿಗೆ ಅತಿದೊಡ್ಡ ಹಿನ್ನಡೆಯಾಗಲಿದ್ದು, ಟ್ರಂಪ್ ವಿರುದ್ಧವಿರುವ ಕಾಂಗ್ರೆಸ್ ಅವರ ಆಡಳಿತದ ಮುಡಿಯಿಂದ ಅಡಿಯ ತನಕ ತನಿಖೆ ನಡೆಸಬಹುದು. ಇದು ಸಾಲದೆಂಬಂತೆ, ಹಿಂದೆ ನಡೆದಿರುವಂತೆ ಟ್ರಂಪ್ ವಿರುದ್ಧ ಮತ್ತೆ ಮಹಾಭಿಯೋಗ ಪ್ರಕ್ರಿಯೆಗೂ ಪ್ರಯತ್ನ ನಡೆಸಬಹುದು. ಪರಿಸ್ಥಿತಿ ಹೀಗಾದರೆ, ಅಮೆರಿಕನ್ನರು 'ಲೇಮ್ ಡಕ್' ಎಂದು ಕರೆಯುವ ಅಸಹಾಯಕ ಪರಿಸ್ಥಿತಿ ಟ್ರಂಪ್ಗೆ ಎದುರಾಗಬಹುದು. ಅಂದರೆ, ಟ್ರಂಪ್ ಅಧ್ಯಕ್ಷರಾಗಿ ಮುಂದುವರಿದರೂ, ತನಗೆ ಬೇಕಾದಂತೆ ಆಡಳಿತ ನಡೆಸುವ ಸಾಮರ್ಥ್ಯ ಕಳೆದುಕೊಂಡಿರುತ್ತಾರೆ.
ಈ ಅಮೆರಿಕ ಚುನಾವಣೆಗೆ ಯಾಕಿಷ್ಟು ಮಹತ್ವ?
ಈ ಒಂದು ಚುನಾವಣೆ ಯಾಕೆ ಇಷ್ಟೊಂದು ಮಹತ್ವ ಪಡೆದಿದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು, ಲೋಕಸಭೆ ಮತ್ತು ರಾಜ್ಯಸಭೆಗಳನ್ನು ಒಳಗೊಂಡಿರುವ ನಮ್ಮ ಸಂಸತ್ತನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಇದೇ ರೀತಿಯಲ್ಲಿ ಅಮೆರಿಕದ ಕಾಂಗ್ರೆಸ್ ಸಹ ಎರಡು ಸದನಗಳನ್ನು ಹೊಂದಿದೆ. ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡು ವರ್ಷದ ಅವಧಿಯ 435 ಸ್ಥಾನಗಳನ್ನು ಹೊಂದಿದ್ದು, ಈಗ ಎಲ್ಲ 435 ಸ್ಥಾನಗಳಿಗೂ ಚುನಾವಣೆ ನಡೆಯುತ್ತಿದೆ. ಇನ್ನು ಸೆನೆಟ್ 100 ಸದಸ್ಯರನ್ನು ಹೊಂದಿದ್ದು, ಅವರು ಆರು ವರ್ಷಗಳ ಅಧಿಕಾರವಧಿ ಹೊಂದಿರುತ್ತಾರೆ. ಆದ್ದರಿಂದ, ಪ್ರತಿಬಾರಿಯೂ ಸೆನೆಟ್ನ ಒಂದು ಭಾಗವಷ್ಟೇ ಚುನಾವಣೆ ಎದುರಿಸುತ್ತದೆ. ಈ ಚುನಾವಣೆ ಓರ್ವ ಅಧ್ಯಕ್ಷರು ತಮ್ಮ ಅವಧಿಯನ್ನು ಅರ್ಧ ಪೂರೈಸಿದ ಸಮಯದಲ್ಲೇ ಬರುವುದರಿಂದ, ಇದನ್ನು ಮಧ್ಯಂತರ ಚುನಾವಣೆ ಎಂದು ಕರೆಯಲಾಗುತ್ತದೆ. ಯಾರು ಕಾಂಗ್ರೆಸ್ ಮೇಲೆ ನಿಯಂತ್ರಣ ಹೊಂದಿರುತ್ತಾರೋ, ಅವರೇ ಯಾವ ಕಾನೂನುಗಳು ಅನುಮೋದನೆ ಪಡೆಯುತ್ತವೆ ಎನ್ನುವುದನ್ನು ನಿರ್ಧರಿಸುತ್ತಾರೆ. ಹಣದ ವೆಚ್ಚಕ್ಕೆ ಅವರೇ ಅನುಮತಿ ನೀಡುತ್ತಾರೆ. ಕಾಂಗ್ರೆಸ್ನಲ್ಲಿ ಬಹುಮತ ಹೊಂದಿರುವವರು ಅಧ್ಯಕ್ಷರು ನೀಡುವ ಪ್ರಸ್ತಾವನೆಗಳನ್ನು ತಳ್ಳಿಹಾಕಿ, ಅವರ ಆದೇಶಗಳ ತನಿಖೆಯನ್ನೂ ನಡೆಸಬಹುದು. ಎರಡು ವರ್ಷಗಳ ಕಾಲ ರಿಪಬ್ಲಿಕನ್ ಹಿಡಿತದಲ್ಲಿದ್ದ ಕಾಂಗ್ರೆಸ್ ಟ್ರಂಪ್ ತನ್ನ ಯೋಜನೆಯಂತೆ ಮುಂದುವರಿಯಲು ಅವಕಾಶ ಮಾಡಿಕೊಟ್ಟಿತ್ತು. ಆದರೆ, ಬಹುಮತ ಕಳೆದುಕೊಂಡರೆ ಇದೆಲ್ಲವೂ ಬದಲಾಗಲಿದೆ.
ಇತಿಹಾಸವು Donald Trump ವಿರುದ್ಧವೇ ಇದೆ
ಇತಿಹಾಸವೂ ಟ್ರಂಪ್ (donald trump) ವಿರುದ್ಧವೇ ಇದ್ದಂತಿದೆ. ಏಕೆಂದರೆ, ಪ್ರತಿ ಬಾರಿಯೂ ಮಧ್ಯಂತರ ಚುನಾವಣೆಯಲ್ಲಿ ಅಧ್ಯಕ್ಷರ ಪಕ್ಷ ತನ್ನ ಸ್ಥಾನಗಳನ್ನು ಕಳೆದುಕೊಳ್ಳುತ್ತದೆ. ಮತದಾರರು ಒಂದು ಸಂದೇಶ ನೀಡುವ ಸಲುವಾಗಿ ಮತ ಚಲಾಯಿಸುವುದು ಇದಕ್ಕೆ ಕಾರಣವಾಗಿರುತ್ತದೆ. ಸದ್ಯಕ್ಕಂತೂ ಜನರು ರವಾನಿಸಲಿರುವ ಸಂದೇಶ ಬಹಳ ತೀಕ್ಷ್ಣವೇ ಆಗಿದೆ. ಅಮೆರಿಕನ್ನರು ಈಗಾಗಲೇ ಬೆಲೆ ಏರಿಕೆಯಿಂದ ಸಂಕಷ್ಟಕ್ಕೊಳಗಾಗಿದ್ದು, ದುಬಾರಿ ಇಂಧನ ಮತ್ತು ಮನೆಗಳ ದರ ಕೈಗೆಟುಕದಂತಿರುವುದು ಅವರನ್ನು ಹೈರಾಣಾಗಿಸಿದೆ. ಟ್ರಂಪ್ ಜಾರಿಗೊಳಿಸಿದ ಸುಂಕಗಳು ಮತ್ತು ಇರಾನ್ ಜೊತೆ ಮುಂದುವರಿದ ಯುದ್ಧ ತೀವ್ರ ಟೀಕೆಯನ್ನು ಎದುರಿಸುತ್ತಿದೆ. ಇತ್ತೀಚಿನ ರಾಯಿಟರ್ಸ್ ಇಪ್ಸೋಸ್ ಸಮೀಕ್ಷೆಯ ಪ್ರಕಾರ, ಟ್ರಂಪ್ ಜನಬೆಂಬಲ ದರ ಕೇವಲ 31% ಇದ್ದು, ಇದು ಅವರ ಸಾರ್ವಕಾಲಿಕ ಕನಿಷ್ಠ ಪ್ರಮಾಣವಾಗಿದೆ. ಆದ್ದರಿಂದಲೇ ಟ್ರಂಪ್ ತೀವ್ರ ಎಚ್ಚರಿಕೆಗಳನ್ನು ನೀಡುವುದರೊಡನೆ ತನ್ನ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಫ್ರಾನ್ಸ್ನಲ್ಲಿ ಉರಿದ ಚರ್ಚ್ಗಳು ಮತ್ತು ಹಬ್ಬಿದ ಬೆಂಕಿಯನ್ನು ಪ್ರಸ್ತಾಪಿಸಿದ ಟ್ರಂಪ್, ಅಮೆರಿಕದಲ್ಲೂ ಅದೇ ಪರಿಸ್ಥಿತಿ ಎದುರಾಗಬೇಕೆಂದು ಡೆಮಾಕ್ರಟಿಕ್ ಪಕ್ಷ ಬಯಸುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ, ಅಮೆರಿಕದಲ್ಲಿ ಎಂದಿಗೂ ಅಂತಹ ಪರಿಸ್ಥಿತಿ ಬರುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಈಗಾಗಲೇ ಜಾರಿಯಲ್ಲಿರುವ ಯೋಜನೆಗಳ ಬದಲು, ಒಂದು ವಿಚಿತ್ರ ಚುನಾವಣಾ ಭರವಸೆಯನ್ನೂ ಟ್ರಂಪ್ ನೀಡಿದ್ದಾರೆ. ರಿಪಬ್ಲಿಕನ್ ಪಕ್ಷ ಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡನ್ನೂ ಗೆದ್ದರೆ, ಮತದಾರರಿಗೆ 5,000 ಡಾಲರ್ ನೀಡಲಾಗುತ್ತದೆ. ರಿಪಬ್ಲಿಕನ್ನರು ಸೋತರೆ ಮತದಾರರಿಗೆ ಏನೂ ಲಭಿಸುವುದಿಲ್ಲ ಎನ್ನುವುದು ಟ್ರಂಪ್ ಗ್ಯಾರಂಟಿ ಘೋಷಣೆ.
ಉಭಯ ಪಕ್ಷಗಳ ನಡುವೆ ಚುನಾವಣಾ ಪೈಪೋಟಿ
ಸೆನೆಟ್ನ ಎರಡು ಕ್ಷೇತ್ರಗಳ ಸ್ಪರ್ಧೆ ಈ ಚುನಾವಣಾ ಪೈಪೋಟಿಯನ್ನು ಸ್ಪಷ್ಟವಾಗಿ ತೋರಿಸುತ್ತಿವೆ. ಟೆಕ್ಸಾಸ್ ದಶಕಗಳಿಂದ ರಿಪಬ್ಲಿಕನ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ, ಡೆಮಾಕ್ರಟಿಕ್ ಅಭ್ಯರ್ಥಿ ಜೇಮ್ಸ್ ಟಲಾರಿಕೊ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕೆನ್ ಪಾಕ್ಸ್ಟನ್ ನಡುವೆ ತೀವ್ರ ಸ್ಪರ್ಧೆ ಎದುರಾಗಿದೆ. ಇಲ್ಲಿನ ಅಚ್ಚರಿಯ ಬೆಳವಣಿಗೆಯಲ್ಲಿ, ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಸಹೋದರ, ಮಾಜಿ ಅಧ್ಯಕ್ಷ ಜಾರ್ಜ್ ಎಚ್ ಡಬ್ಲ್ಯು ಬುಷ್ ಪುತ್ರ ನೀಲ್ ಬುಷ್ ಅವರು ಡೆಮಾಕ್ರಟಿಕ್ ಅಭ್ಯರ್ಥಿ ಟಲಾರಿಕೊ ಅವರಿಗೆ ಬೆಂಬಲ ಘೋಷಿಸಿದ್ದಾರೆ. ತಲೆಮಾರುಗಳ ಕಾಲ ರಿಪಬ್ಲಿಕನ್ ಪಕ್ಷವನ್ನು ಬೆಂಬಲಿಸಿದ್ದ ಬುಷ್ ಕುಟುಂಬದ ಸದಸ್ಯರೊಬ್ಬರು ಬಹಿರಂಗವಾಗಿ ಡೆಮಾಕ್ರಟಿಕ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿರುವುದು ರಿಪಬ್ಲಿಕನ್ ಪಕ್ಷ ಅಭ್ಯರ್ಥಿ ಆಯ್ಕೆಯ ಕುರಿತು ಎಷ್ಟು ಆಂತರಿಕ ಭಿನ್ನಮತ ಹೊಂದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಒಂದು ವೇಳೆ ಟೆಕ್ಸಾಸ್ ಫಲಿತಾಂಶ ಎಂದಿಗಿಂತ ವ್ಯತಿರಿಕ್ತವಾಗಿ ಹೊರಹೊಮ್ಮಿದರೆ, ಡೆಮಾಕ್ರಟಿಕ್ ಪಕ್ಷ ಸೆನೇಟನ್ನು ನಿಯಂತ್ರಿಸುವತ್ತ ಒಂದು ಹೆಜ್ಜೆ ಸನಿಹಕ್ಕೆ ಸಾಗಲಿದ್ದಾರೆ.
ಮೊದಲ ಮುಸ್ಲಿಂ ಸೆನೆಟರ್ ಆಗ್ತಾರಾ ಅಬ್ದುಲ್ ಎಲ್ ಸಯ್ಯದ್
ಇನ್ನು ಮಿಚಿಗನ್ನಲ್ಲಿ ವೃತ್ತಿಯಿಂದ ವೈದ್ಯರಾಗಿರುವ, ಪ್ರಗತಿಪರ ಧೋರಣೆ ಹೊಂದಿರುವ ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿಯಾದ ಅಬ್ದುಲ್ ಎಲ್ ಸಯ್ಯದ್ ಅವರು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದು, ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಎದುರು ಸ್ಪರ್ಧಿಸುತ್ತಿದ್ದಾರೆ. ಅಬ್ದುಲ್ ಗೆಲುವು ಸಾಧಿಸಿದರೆ, ಅವರು ಅಮೆರಿಕದ ಮೊದಲ ಮುಸ್ಲಿಂ ಸೆನೇಟರ್ ಎನಿಸಿಕೊಳ್ಳಲಿದ್ದಾರೆ. ಆದರೆ, ಇತ್ತೀಚೆಗೆ ಅವರು ಇಸ್ರೇಲನ್ನು ಟೀಕಿಸಿರುವುದು ಅವರನ್ನು ವಿವಾದಕ್ಕೆ ಸಿಲುಕಿಸಿದೆ. ಚರ್ಚೆಯೊಂದರ ಸಂದರ್ಭದಲ್ಲಿ, ರೋಜರ್ಸ್ ಅವರು ಎಲ್ ಸಯ್ಯದ್ ಮುಸ್ಲಿಂ ಬ್ರದರ್ಹುಡ್ ಜೊತೆ ಸಂಪರ್ಕ ಹೊಂದಿದ್ದಾರೆ, ಹಮಾಸ್ ಮತ್ತು ಹೆಜ್ಬೊಲ್ಲಾ ಬೆಂಬಲಿಗರಿಂದ ದೇಣಿಗೆ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಎಲ್ ಸಯ್ಯದ್ ಅಮೆರಿಕದ ಪರ ನಿಲ್ಲುವವರೋ, ಅಥವಾ ವಿದೇಶೀ ಗುಂಪುಗಳ ಪರವೋ ಎಂದೂ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಲ್ ಸಯ್ಯದ್, ಇಂತಹ ಆರೋಪಗಳು ರೋಜರ್ಸ್ ಘನತೆಗೆ ತಕ್ಕುದಲ್ಲ ಎಂದಿದ್ದು, ತಾನು ಇಂತಹ ಯಾವುದೇ ಸಂಘಟನೆಯೊಡನೆ ಸಂಪರ್ಕ, ಸಂಬಂಧ ಹೊಂದಿಲ್ಲ. ಪ್ರತಿಯೊಬ್ಬ ಪ್ರಜೆಗೂ ತನ್ನ ಇಚ್ಛೆಯಂತೆ ಪ್ರಾರ್ಥಿಸುವ ಸಮಾನ ಸ್ವಾತಂತ್ರ್ಯ ನೀಡುವ ಅಮೆರಿಕದ ಸಂವಿಧಾನದ ಕುರಿತು ತನಗೆ ಅಪಾರ ಹೆಮ್ಮೆಯಿದೆ ಎಂದು ಘೋಷಿಸಿದ್ದರು.
ಚುನಾವಣೆಯಲ್ಲಿ ವಿದೇಶ ಹಸ್ತಕ್ಷೇಪದ ಆರೋಪ
ಚುನಾವಣೆಯಲ್ಲಿ ವಿದೇಶೀ ಹಸ್ತಕ್ಷೇಪದ ಕುರಿತ ಹಳೆಯ ಆರೋಪಗಳು ಈಗ ಹೊಸ ರೂಪ ಪಡೆದುಕೊಂಡಿವೆ. ಕೆನಡಾದ ಅಧಿಕಾರಿಗಳು ಅಮೆರಿಕದ ಡೆಮಾಕ್ರಟಿಕ್ ನಾಯಕರನ್ನು ಭೇಟಿಯಾಗಿದ್ದು, ಅವರು ಅಮೆರಿಕದ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂದು ಒಟ್ಟಾವಾದಲ್ಲಿನ ಅಮೆರಿಕದ ರಾಯಭಾರ ಕಚೇರಿ ಆರೋಪಿಸಿದೆ. ಕೆನಡಾ ಈ ಆರೋಪಗಳನ್ನು ತಳ್ಳಿ ಹಾಕಿದ್ದರೂ, ಈ ಬೆಳವಣಿಗೆ ಪ್ರಸ್ತುತ ಚುನಾವಣೆ ಎಷ್ಟು ತೀವ್ರ ಮತ್ತು ಗಂಭೀರ ಸ್ಪರ್ಧೆಯನ್ನು ಎದುರಿಸುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.
ನವೆಂಬರ್ ಚುನಾವಣೆಯ ಬಳಿಕ, 2028ರ ರಾಜಕಾರಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಈಗಿರುವ ನಿಯಮಗಳ ಪ್ರಕಾರ, ಟ್ರಂಪ್ ಮೂರನೇ ಬಾರಿಗಂತೂ ಚುನಾವಣೆ ಸ್ಪರ್ಧಿಸಲು ಸಾಧ್ಯವಿಲ್ಲ. ಆದ್ದರಿಂದ ತನ್ನ ಛಾಪು ಉಳಿಸಿ ಹೋಗಲು ಟ್ರಂಪ್ ಮುಂದೆ ಎರಡು ವರ್ಷಗಳಷ್ಟೇ ಉಳಿದಿವೆ. ರಿಪಬ್ಲಿಕನ್ ಪಕ್ಷ ಬಹುಮತ ಸಂಪಾದಿಸಿದರೆ, ಅದು ಪಕ್ಷವನ್ನು ಬಲಪಡಿಸಲಿದೆ. ಒಂದು ವೇಳೆ ಸೋತರೆ, ಯಾವೆಲ್ಲ ನೀತಿಗಳು ಸೋಲಿಗೆ ಕಾರಣವಾದವು, ಯಾರಿಂದ ಮತದಾರರು ದೂರಾದರು ಎನ್ನುವ ಚರ್ಚೆಗಳು ಆರಂಭಗೊಳ್ಳಲಿವೆ. ಮುಂದೆ ಪಕ್ಷದ ನೇತೃತ್ವ ಯಾರು ವಹಿಸಬೇಕು ಎನ್ನುವ ವಿಚಾರವೂ ಮುನ್ನಲೆಗೆ ಬರಲಿದೆ. ಇನ್ನು ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದರೆ, ಅದಕ್ಕೆ ಉತ್ತೇಜನ ಲಭಿಸಲಿದೆ. ಆದರೆ, ಕಾಂಗ್ರೆಸ್ನಲ್ಲಿ ಬಹುಮತ ಹೊಂದುವುದು ಮತ್ತು ಶ್ವೇತ ಭವನದಲ್ಲಿ ಆಡಳಿತ ನಡೆಸುವುದು ಎರಡೂ ಒಂದೇ ಅಲ್ಲವಲ್ಲ. ಅದಕ್ಕಾಗಿ ಅವರಿಗೆ ಓರ್ವ ಅಧ್ಯಕ್ಷೀಯ ಅಭ್ಯರ್ಥಿ ಬೇಕು. ಮಧ್ಯಂತರ ಚುನಾವಣೆಗಳು ಅಧ್ಯಕ್ಷರನ್ನು ಆರಿಸುವ ಚುನಾವಣೆಯಲ್ಲ. ಆದರೆ, ಮುಂದಿನ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶದ ಗಾಳಿ ಯಾವ ದಿಕ್ಕಿನಲ್ಲಿ ಬೀಸಲಿದೆ ಎನ್ನುವ ಸಂದೇಶವನ್ನು ಈ ಚುನಾವಣೆ ನೀಡಲಿದೆ.
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])


Click it and Unblock the Notifications
