Donald Trump: ಕೆನಡಾ ವಿರುದ್ಧ ಮತ್ತೆ ಗುಡುಗಿದ ಡೊನಾಲ್ಡ್ ಟ್ರಂಪ್, ಚೀನಾ ವಿಚಾರ ಪ್ರಸ್ತಾಪ ಮಾಡಿದ್ದು ಏಕೆ?
ಅಮೆರಿಕ ಅಧ್ಯಕ್ಷರ ಕೋಪ ಕೆನಡಾ ಮೇಲೆ ನೆಟ್ಟಿದ್ದು, ಪದೇ ಪದೇ ಅಮೆರಿಕದ ನೇರೆ ದೇಶದ ನಿರ್ಧಾರಗಳ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ. ಹಲವು ದಿನಗಳಿಂದ ಡೊನಾಲ್ಡ್ ಟ್ರಂಪ್ ಮತ್ತು ಕೆನಡಾ ಮಧ್ಯೆ ಕಿರಿಕ್ ನಡೆಯುತ್ತಲೇ ಇದೆ. ಯಾವಾಗ ಟ್ರಂಪ್ ಅವರು ಕೆನಡಾ ಕೂಡ ಅಮೆರಿಕದ ಭಾಗ ಎನ್ನುತ್ತಾ, ಅದನ್ನು ಬಿಂಬಿಸುವ ರೀತಿ ನಕ್ಷೆ ಪ್ರದರ್ಶನ ಮಾಡಿದರೋ ಅಲ್ಲಿಂದ ಮುಂದಕ್ಕೆ ಪದೇ ಪದೇ ಕಿರಿಕಿರಿ ನಡೆಯುತ್ತಲೇ ಇದೆ. ಈಗ ಗ್ರೀನ್‌ಲ್ಯಾಂಡ್ ನೆಲವನ್ನು ರಕ್ಷಣೆ ಮಾಡುವ ವಿಚಾರವಾಗಿ ಟ್ರಂಪ್ ಮತ್ತು ಕೆನಡಾ ಮಧ್ಯೆ ಕಿಚ್ಚು ಹೊತ್ತಿಕೊಂಡಿದೆ.
ಕೆನಡಾ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಗ್ರೀನ್‌ಲ್ಯಾಂಡ್‌ನ ನೆಲದಲ್ಲಿ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಗೋಲ್ಡನ್ ಡೋಮ್ ಸ್ಥಾಪನೆ ಮಾಡುವ ಪಸ್ತಾಪಕ್ಕೆ ಕೆನಡಾ ಈಗ ಅಡ್ಡಗಾಲು ಹಾಕಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಮತ್ತೊಂದು ಗಂಭೀರ ಆರೋಪ ಕೂಡ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಚೀನಾ ಜೊತೆ ಆರ್ಥಿಕ ಸಂಬಂಧಗಳ ಸುಧಾರಣೆಗೆ ಕೆನಡಾ ಈ ರೀತಿ ಆಡುತ್ತಿದೆ ಎಂದಿದ್ದಾರೆ.

ಕೆನಡಾ ಮತ್ತು ಚೀನಾ ದೋಸ್ತಿಗೆ ಟೀಕೆ
ಟ್ರೂತ್ ಸೋಷಿಯಲ್ ಮೀಡಿಯಾ ಮೂಲಕ ಈ ಕುರಿತು ಪ್ರತಿಕ್ರಿಯೆ ನೀಡಿ, ಕೆನಡಾ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ ಡೊನಾಲ್ಡ್ ಟ್ರಂಪ್. ಗೋಲ್ಡನ್ ಡೋಮ್ ಕೆನಡಾ ನೆಲವನ್ನ ರಕ್ಷಿಸುತ್ತದೆಯಾದರೂ, ಗ್ರೀನ್‌ಲ್ಯಾಂಡ್ ನೆಲದಲ್ಲಿ ಗೋಲ್ಡನ್ ಡೋಮ್ ನಿರ್ಮಿಸುವ ಕುರಿತು ಕೆನಡಾ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಹಾಗೇ ಕೆನಡಾ ಮತ್ತು ಚೀನಾ ನಡುವಿನ ವ್ಯಾಪಾರ ಒಪ್ಪಂದವನ್ನೂ ಪ್ರಸ್ತಾಪಿಸಿ, ಮೊದಲ ವರ್ಷದಲ್ಲೇ ಚೀನಾ ಅದನ್ನು ತಿಂದುಬಿಡುತ್ತದೆ ಎಂದು ಕೆನಡಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಶಾಂತಿ ಮಂಡಳಿ ವಿಚಾರದಲ್ಲೂ ಕಿರಿಕ್ ಆಗಿತ್ತು
ಕೆಲವು ದಿನಗಳ ಹಿಂದಷ್ಟೇ ಅಮೆರಿಕ ಮತ್ತು ಕೆನಡಾ ನಡುವೆ ಗಾಜಾ ಶಾಂತಿ ಮಂಡಳಿ ವಿಚಾರವಾಗಿ ದೊಡ್ಡ ಕಿರಿಕ್ ನಡೆದಿತ್ತು. ಶಾಂತಿ ಮಂಡಳಿ ಸೇರಲು ಕೆನಡಾಗೆ ನೀಡಿದ್ದ ಆಹ್ವಾನವನ್ನೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಾಪಸ್ ಪಡೆಯುವ ಮೂಲಕ ಕೆನಡಾಗೆ ಸೆಡ್ಡು ಹೊಡೆದಿದ್ದರು. ಗಾಜಾ ಪಟ್ಟಿಯಲ್ಲಿ 20 ಅಂಶಗಳ ಯೋಜನೆ ಮೂಲಕ ಶಾಂತಿ ನೆಲೆಸುವಂತೆ ಮಾಡಲು ಟ್ರಂಪ್ ಅವರು ರೂಪಿಸಿರುವ ಯೋಜನೆಗೆ, ಕೆನಡಾ ಹಣ ನೀಡುವುದಿಲ್ಲ ಎಂದು ಕಾರ್ನಿ ನೇತೃತ್ವದ ಕೆನಡಾ ಸರ್ಕಾರ ತಿಳಿಸಿದ ನಂತರ ಈ ರೀತಿಯಾಗಿ ಆಹ್ವಾನ ವಾಪಸ್ ಪಡೆಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಕೆನಡಾ ವಿಚಾರವಾಗಿ ಪದೇ ಪದೇ ಟ್ರಂಪ್ ಅವರು ವಿವಾದ ಸೃಷ್ಟಿಸುವ ಹೇಳಿಕೆ ನೀಡುತ್ತಾ ಬಂದಿದ್ದರು. ಅಲ್ಲದೆ ಕೆನಡಾ ನೆಲವನ್ನು ಅಮೆರಿಕದ ಜೊತೆಗೆ ವಿಲೀನ ಮಾಡಿ ಎಂದೆಲ್ಲಾ ಆಗ್ರಹ ಮಾಡಿದ್ದರು.
ಅಮೆರಿಕದಲ್ಲೇ ಟ್ರಂಪ್ ನಡೆಗೆ ಅಪಸ್ವರ
ದಾವೋಸ್ ಆರ್ಥಿಕ ಸಮ್ಮೇಳನದ ಸಮಯದಲ್ಲಿ ಕೂಡ, ಟ್ರಂಪ್ ಹಾಗೂ ಕೆನಡಾ ಪ್ರಧಾನಿ ನಡುವೆ, ಭಾರಿ ದೊಡ್ಡ ತಿಕ್ಕಾಟವೇ ನಡೆದಿತ್ತು. ಹೀಗಿದ್ದಾಗ ದಿಢೀರ್ ಅಮೆರಿಕ ಕೈಗೊಂಡಿರುವ ಕ್ರಮದ ಕುರಿತು ದೊಡ್ಡ ಚರ್ಚೆ ಶುರುವಾಗಿದೆ. ಮತ್ತೊಂದು ಕಡೆ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಕೆನಡಾ ಯುರೋಪ್‌ನ ಪರವಾಗಿದ್ದು, ಅಕ್ಕಪಕ್ಕದ ದೇಶಗಳ ನಡುವೆ ಇದೀಗ ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಕಿರಿಕ್ ಜೋರಾಗಿ ಪಾಶ್ಚಿಮಾತ್ಯ ದೇಶಗಳ ನಡುವೆಯೇ ಕಿಚ್ಚು ಹೊತ್ತಿಕೊಳ್ಳುವಂತೆ ಮಾಡಿದೆ. ಸ್ವತಃ ಅಮೆರಿಕದಲ್ಲೇ ಈ ರೀತಿಯ ಟ್ರಂಪ್ ವರ್ತನೆಗೆ ಬೇಸರ ಇದ್ದು, ಭವಿಷ್ಯದಲ್ಲಿ ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳ ಸಂಬಂಧ ಹಳಸುವ ಮುನ್ಸೂಚನೆ ಸಿಕ್ಕಂತೆ ಆಗುತ್ತಿದೆ.












Click it and Unblock the Notifications