World War: ಇಸ್ರೇಲ್ VS ಹಮಾಸ್ ಬಡಿದಾಟದಲ್ಲಿ ರಷ್ಯಾಗೆ ಲಾಭವೇನು?
ಮನುಷ್ಯನ ಆಸೆಗಳೇ ಹೀಗೆ, ತಾನು ಮಾಡುವ ತಪ್ಪಿಗೆ ಪ್ರಕೃತಿಯನ್ನು ಬಲಿ ಕೊಟ್ಟು ಇಡೀ ಭೂಮಿಯನ್ನೇ ಸಂಕಷ್ಟಕ್ಕೆ ಸಿಲುಕಿಸುತ್ತಾನೆ. ಅದ್ರಲ್ಲೂ ಮನುಷ್ಯನ ದುರಾಸೆಗಳೇ ಯುದ್ಧ ಮತ್ತು ಹಿಂಸಾಚಾರದ ಮೂಲ. ಈಗ ಇಸ್ರೇಲ್ VS ಹಮಾಸ್ ಬಡಿದಾಟದಲ್ಲಿ ಆಗಿರುವುದು ಕೂಡ ಇದೇ. ಆದರೆ ಇಬ್ಬರ ಕಿತ್ತಾಟದಲ್ಲಿ ರಷ್ಯಾಗೆ ಭರ್ಜರಿ ಲಾಭವಾಗುತ್ತಿದೆ. ಅದು ಹೇಗೆ ಗೊತ್ತಾ?
ಅದು 2022ರ ಫೆಬ್ರವರಿ 24, ಇಡೀ ಜಗತ್ತು ಒಂದು ಕ್ಷಣ ಬೆಚ್ಚಿಬಿದ್ದಿತ್ತು. ಯಾಕಂದ್ರೆ ಅಲ್ಲಿ ಯುದ್ಧಕ್ಕೆ ರಣಕಹಳೆ ಮೊಳಗಿತ್ತು 3ನೇ ಮಹಾಯುದ್ಧದ ಭೀತಿ ಆವರಿಸಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಘೋರ ಯುದ್ಧ ಶುರುವಾಗಿತ್ತು. ತಣ್ಣಗೆ ಇದ್ದ ರಷ್ಯಾ ಅಧ್ಯಕ್ಷ ಪುಟಿನ್‌ಗೆ ಉಕ್ರೇನ್ ವಿರುದ್ಧ ಯುದ್ಧ ಮಾಡುವ ಆಕ್ರೋಶ ಬಂದಿತ್ತು. ಹೀಗಾಗಿ ಉಕ್ರೇನ್ ತಪ್ಪುಗಳಿಗೆ ಬೆಲೆ ತೆರಬೇಕು ಅಂತಾ ಪುಟಿನ್ ಯುದ್ಧವನ್ನು ಸಾರಿ ಬಿಟ್ಟರು. ಹೀಗೆ ಕಳೆದ ಒಂದೂವರೆ ವರ್ಷದಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಕಾಳಗ ನಡೆಯುತ್ತಿದೆ. ಆದರೆ ಈಗ ದಿಢೀರ್ ಯುದ್ಧ ನಿಲ್ಲುವ ಮುನ್ಸೂಚನೆ ಸಿಗುತ್ತಿದೆ.

ಇಬ್ಬರ ಜಗಳದಲ್ಲಿ, 3ನೇ ವ್ಯಕ್ತಿಗೆ ಲಾಭ?
ಹೌದು ಇಸ್ರೇಲ್ VS ಹಮಾಸ್ ಬಡಿದಾಡುತ್ತಿರುವ ಸಮಯದಲ್ಲಿ ಮಹತ್ವದ ಬದಲಾವಣೆಗೆ ಜಗತ್ತು ಸಾಕ್ಷಿಯಾಗಿದೆ. ಅದೇ ರೀತಿ, ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಕಾಳಗ ಕೂಡ ನಿಂತು ಹೋಗುವ ಮುನ್ಸೂಚನೆ ಸಿಕ್ಕಿದೆ. ಇಷ್ಟುದಿನ ಸಂಧಾನಕ್ಕೆ ಸಿದ್ಧವಿಲ್ಲ ಎಂಬ ಮಾತು ಹೇಳುತ್ತಿದ್ದ ಉಕ್ರೇನ್ ಇದೀಗ ಯುದ್ಧ ಸಂಧಾನಕ್ಕೆ ಸದ್ದೇ ಇಲ್ಲದೆ ಪಯತ್ನ ಮಾಡುತ್ತಿದೆ ಎಂಬ ಮಾತು ಓಡಾಡುತ್ತಿದೆ. ಅದರಲ್ಲೂ ಇಸ್ರೇಲ್ VS ಹಮಾಸ್ ಬಡಿದಾಟ ಜೋರಾದ ನಂತರ ಈ ಬೆಳವಣಿಗೆ ನಡೆದಿದೆ. ಈ ಮೂಲಕ ಇಸ್ರೇಲ್ VS ಹಮಾಸ್ ಜಗಳ, ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪರೋಕ್ಷವಾಗಿ ಪ್ರಭಾವ ಬೀರುತ್ತಿದೆ.
ಯುದ್ಧ ನಿಲ್ಲಿಸುವ ಪ್ರಯತ್ನ ಏಕೆ?
ಇಷ್ಟುದಿನ ಉಕ್ರೇನ್ ಮತ್ತು ರಷ್ಯಾ ಯುದ್ಧದಲ್ಲಿ ಅಮೆರಿಕದ ನಾಯಕರು ಉಕ್ರೇನ್ ಬೆನ್ನಿಗೆ ನಿಂತಿದ್ದರು. ಆದ್ರೆ ಈಗ ಕಾಲ ಬದಲಾಗಿದೆ, ಮೊದಲೇ ಕೈಯಲ್ಲಿ ಕಾಸು ಇಲ್ಲದೆ ಅಮೆರಿಕ ಪರದಾಡುತ್ತಿದೆ. ಅಮೆರಿಕದ ಆರ್ಥಿಕ ಸ್ಥಿತಿಗತಿ ಮಣ್ಣುಪಾಲಾಗಿದೆ ಎಂಬ ಮಾತು ಶತ್ರುಗಳ ಬಾಯಲ್ಲಿ ಬರುತ್ತಿದೆ. ಹೀಗಿದ್ದಾಗ ಉಕ್ರೇನ್ ಕೂಡ ಬುದ್ಧಿ ಓಡಿಸಿ, ಯುದ್ಧದಿಂದ ಬಚಾವ್ ಆಗುವ ಮುನ್ಸೂಚನೆ ನೀಡಿದೆ. ಏಕೆಂದರೆ ಇಸ್ರೇಲ್ VS ಹಮಾಸ್ ಯುದ್ಧದಲ್ಲಿ ಅಮೆರಿಕದ ಸರ್ಕಾರ ಇಸ್ರೇಲ್‌ಗೆ ಹಣ ಕೊಡುತ್ತಿದೆ. ಇದರ ಜೊತೆಗೆ ಉಕ್ರೇನ್‌ಗೂ ದುಡ್ಡು ಕೊಡುವುದು ಕಷ್ಟ ಕಷ್ಟ. ಹೀಗಾಗಿ ಉಕ್ರೇನ್ ಸಂಧಾನ ಮಾರ್ಗ ಹುಡುಕಿ ರಷ್ಯಾ ಸೇನೆಯಿಂದ ಬಚಾವ್ ಆಗುವ ತಂತ್ರ ಹೂಡಿದೆ ಎಂಬ ಮಾತುಗಳು ಹರಿದಾಡುತ್ತಿವೆ.
ವರ್ಕೌಟ್ ಆಯ್ತಾ ಪುಟಿನ್ ರಣತಂತ್ರ?
ಉಕ್ರೇನ್ ವಿರುದ್ಧ ಯುದ್ಧ ಸಾರುವ ಸಮಯದಲ್ಲೇ ಪುಟಿನ್ ಸಖತ್ ಐಡಿಯಾ ಮಾಡಿದ್ರು. ಅದ್ರಲ್ಲೂ ಈ ಯುದ್ಧದ ಮೂಲಕ ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳ ಆರ್ಥಿಕತೆಗೆ ಸರಿಯಾಗೇ ಪೆಟ್ಟು ಕೊಡಲು ಯೋಜಿಸಿದ್ದರು. ಇನ್ನು ಜಗತ್ತಿನಲ್ಲಿ ಬಲಿಷ್ಠ ಸೇನಾ ಒಕ್ಕೂಟ ಎಂದು ಕರೆಸಿಕೊಳ್ಳುವ 'ನ್ಯಾಟೋ'ಗೆ ಶಾಕ್ ಕೊಡುವ ಪ್ಲ್ಯಾನ್ ಕೂಡ ಇದರಲ್ಲಿ ಇತ್ತಂತೆ. ಈ ಎಲ್ಲಾ ಕಾರಣದಿಂದ ಭಾರಿ ಐಡಿಯಾ ಮಾಡಿ ಮುನ್ನುಗ್ಗಿದ್ದರು ಪುಟಿನ್. ಇದರ ಲಾಭ ಇಸ್ರೇಲ್ ಮತ್ತು ಹಮಾಸ್ ಯುದ್ಧದ ನಂತರ ಸಿಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಒಟ್ನಲ್ಲಿ ಜಾಗತಿಕ ಲೆಕ್ಕಾಚಾರಗಳು ಏನೇ ಇರಲಿ, ಆದರೆ ಯುದ್ಧ ನಿಲ್ಲಬೇಕಿದೆ. ಏಕೆಂದರೆ ಇದು ಯುದ್ಧ ಮಾಡುವ ಯುಗ ಅಲ್ಲ. ಇದನ್ನ ಭಾರತವು ಕೂಡ ಒತ್ತಿ ಒತ್ತಿ ಹೇಳುತ್ತಿದ್ದು ಶಾಂತಿ ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬೇಕಿದೆ. ಅದರಲ್ಲೂ ಉಕ್ರೇನ್ & ರಷ್ಯಾ ನಡುವಿನ ಯುದ್ಧ ನಿಂತು, ನಂತರ ಹಮಾಸ್ ಹಾಗೂ ಇಸ್ರೇಲ್ ಯುದ್ಧವೂ ಕೂಡ ನಿಲ್ಲಬೇಕಿದೆ. ಇಲ್ಲವಾದರೆ ಮತ್ತಷ್ಟು ಜನರ ರಕ್ತಪಾತ ಪಕ್ಕಾ.












Click it and Unblock the Notifications