75 ವರ್ಷಗಳ ಹಿಂದೆ ಹಿಮದಲ್ಲಿ ಹುದುಗಿ ಹೋಗಿದ್ದ ದಂಪತಿ ಶವ ಪತ್ತೆ
ಸ್ವಿಜರ್ಲೆಂಡ್ ನಲ್ಲಿ 75 ವರ್ಷದ ಹಿಂದೆ ನಾಪತ್ತೆಯಾಗಿದ್ದ ದಂಪತಿ ಶವ ಪತ್ತೆ. ಸ್ವಿಜರ್ಲೆಂಡ್ ಮಾಧ್ಯಮಗಳ ವರದಿ. 1942ರಲ್ಲಿ ಕಾಣೆಯಾಗಿದ್ದ ಡುಮುಲಿನ್ ದಂಪತಿ. ಇದೀಗ, ಹಿಮಬಂಡೆಗಳ ಕೆಳಗೆ ಕಪ್ಪಿಟ್ಟ ಶವಗಳಾಗಿ ಪತ್ತೆ.
ಜಿನಿವಾ (ಸ್ವಿಜರ್ಲೆಂಡ್), ಜು.19: ಎಪ್ಪತ್ತೈದು ವರ್ಷಗಳ ಹಿಂದೆ ಇಲ್ಲಿನ ಹಿಮಪರ್ವತಗಳಲ್ಲಿ ಕಾರ್ಯ ನಿಮಿತ್ತ ಹೋಗಿ ಕಾಣೆಯಾಗಿದ್ದ ಸ್ಥಳೀಯ ದಂಪತಿಗಳ ಶವಗಳು ಇಲ್ಲಿನ ಹಿಮಬಂಡೆಯ ಕೆಳಗೆ ಪತ್ತೆಯಾಗಿದೆ ಎಂದು ಸ್ವಿಜರ್ಲೆಂಡ್ ಮಾಧ್ಯಮಗಳು ವರದಿ ಮಾಡಿವೆ.
ಮರ್ಸಿಲಿನ್ ಡುಮುಲಿನ್ ಹಾಗೂ ಅವರ ಪತ್ನಿ ಫ್ರಾನ್ಸೆಸ್ ನೈನ್ ಡುಮುಲಿನ್ ದಂಪತಿಯು 1942ರ ಆಗಸ್ಟ್ 15ರಂದು ಕಾರ್ಯ ನಿಮಿತ್ತ ಇಲ್ಲಿನ ಹಿಮ ಪರ್ವತದ ಕಡೆಗೆ ಹೋಗಿದ್ದರು. ಆದರೆ, ದಿನಗಳೇ ಉರುಳಿದರೂ ಅವರು ಹಿಂದಿರುಗಿರಲಿಲ್ಲ. ಈವರೆಗೆ ಅವರು ಎಲ್ಲಿ ಹೋದರೆಂದು ಯಾರಿಗೂ ತಿಳಿದಿರಲಿಲ್ಲ. ಡುಮುಲಿನ್ ದಂಪತಿ ಕಾಣೆಯಾದ ನಂತರ ಕೆಲ ದಿನಗಳ ಕಾಲ ಅವರ ಮಕ್ಕಳು ಅಲ್ಲಿನ ಸ್ಥಳೀಯ ಸರ್ಕಾರಗಳ ಮೊರೆ ಹೋಗಿ, ಅವರನ್ನು ಹುಡುಕಲು ಏನೆಲ್ಲಾ ಪ್ರಯತ್ನಪಟ್ಟರೂ ಅದು ಫಲ ನೀಡಿರಲಿಲ್ಲ.

ಆದರೆ, ಕಳೆದ ವಾರ ಇಲ್ಲಿನ ಸ್ಥಳೀಯ ಕಾರ್ಮಿಕರೊಬ್ಬರು ಸಾನ್ ಪ್ರೋರನ್ ಪ್ರಾಂತ್ಯದಲ್ಲಿನ ಕಾಮಗಾರಿಯೊಂದನ್ನು ಕೈಗೊಂಡಿದ್ದಾಗ, ಇದ್ದಕ್ಕಿದ್ದಂತೆ ಹಿಮದ ನೆಲ ಕುಸಿತ ಕಂಡಿತು. ಆಗ, ಅಲ್ಲಿ ಶೋಧಿಸಲಾಗಿ, ಸುಮಾರು ಎರಡೂವರೆ ಸಾವಿರ ಅಡಿಗಳ ಕೆಳಗೆ ಜೋಡಿ ಮೃತದೇಹ ಕಂಡಿತು.
ಇದೀಗ, ಆ ಶವಗಳನ್ನು ಹೊರತೆಗೆದು ಪರೀಕ್ಷಿಸಲಾಗಿದ್ದು, ಅವು 75 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಡುಮುಲಿನ್ ಅವರ ಮೃತದೇಹಗಳೆಂದು ನಿರ್ಧರಿಸಲಾಗಿದೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಆದರೆ, ಇದಿನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದೂ ಕೆಲ ವರದಿಗಳಲ್ಲಿ ಹೇಳಲಾಗಿದೆ.












Click it and Unblock the Notifications