ಅಮೆರಿಕದಲ್ಲಿ 3 ವರ್ಷದ ನಂತರ ಕೊರೊನಾ ಕಂಟಕ ಕೊನೆ!
ವಾಷಿಂಗ್ಟನ್: ದೊಡ್ಡಣ್ಣನ ಪಟ್ಟ ಕಟ್ಟಿಕೊಂಡಿದ್ದ ಅಮೆರಿಕ (America) 3 ವರ್ಷದ ಹಿಂದೆ ಕೊರೊನಾ (Covid) ಕಾಟಕ್ಕೆ ನಲುಗಿತ್ತು. 11 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಡೆಡ್ಲಿ ವೈರಸ್‌ಗೆ ಬಲಿಯಾಗಿದ್ದಾರೆ. 10 ಕೋಟಿ 60 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ ಕೊರೊನಾ ತಗುಲಿತ್ತು. 33 ಕೋಟಿ ಜನರನ್ನು 3 ವರ್ಷ ಕಾಡಿದ ಕೊರೊನಾ ಕಡೆಗೂ ಕಂಟ್ರೋಲ್‌ಗೆ ಬಂದಿದ್ದು, ದೊಡ್ಡಣ್ಣ ನಿರಾಳನಾಗಿದ್ದಾನೆ.
ಅಮೆರಿಕದ ಆಧುನಿಕ ಅಧ್ಯಾಯದಲ್ಲಿ ಕೊರೊನಾ ಬರೋದಕ್ಕೂ ಮೊದಲು ಒಂದು ಲೆಕ್ಕ. ಕೊರೊನಾ ಬಂದ ನಂತರ ಮತ್ತೊಂದು ಲೆಕ್ಕ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಕೊರೊನಾ ವೈರಸ್ ಕೊಟ್ಟ ಪೆಟ್ಟು ಹಂಗಿತ್ತು. ಆರ್ಥಿಕವಾಗಿ, ಸಾಮಾಜಿಕವಾಗಿ ಇದೆಲ್ಲವನ್ನೂ ಮೀರಿ ಜೀವ ಉಳಿಸಿಕೊಂಡರೆ ಸಾಕಪ್ಪಾ ಅನ್ನುವಂತಹ ಪರಿಸ್ಥಿತಿ ಅಮೆರಿಕದಲ್ಲಿ ನಿರ್ಮಾಣ ಆಗಿತ್ತು. ಇದೀಗ ಅಧಿಕೃತವಾಗಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಕೊರೊನಾ ತುರ್ತು ಪರಿಸ್ಥಿತಿಯನ್ನು ಅಮೆರಿಕದಲ್ಲಿ ಅಂತ್ಯಗೊಳಿಸಿದ್ದಾರೆ.

ಚೀನಾದಿಂದ ವಕ್ಕರಿಸಿತ್ತು ಮಹಾಮಾರಿ!
ಕೊರೊನಾ ವೈರಸ್ ಪತ್ತೆಯಾದ ಆರಂಭದಲ್ಲಿ ಅಮೆರಿಕ ಯಾವುದೇ ಚಿಂತೆಯಿಲ್ಲದೆ ಹಾಯಾಗಿತ್ತು. ಆದರೆ ಕೊರೊನಾ ಕುರಿತು ಒಂದಷ್ಟು ಭಯಾನಕ ಅಧ್ಯಯನ ವರದಿಗಳು ಹೊರಬೀಳುತ್ತಲೇ ಅಮೆರಿಕದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿತ್ತು. ಆಗಲೇ ತಿಳಿದಿದ್ದು ಅಮೆರಿಕದಲ್ಲಿ ಅದಾಗಲೇ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿದೆ ಎಂದು. ಲಕ್ಷಾಂತರ ಸೋಂಕಿತರು ಚೀನಾ ಮತ್ತು ಇತರ ಭಾಗಗಳಿಂದ ಅಮೆರಿಕದ ಮೂಲೆ ಮೂಲೆಗೂ ಸೇರಿದ್ದರು ಎಂಬುದು ಅಮೆರಿಕದ ಆರೋಪ. ಪರಿಣಾಮ 3 ವರ್ಷದಲ್ಲಿ ಬರೋಬ್ಬರಿ 10 ಕೋಟಿ ಅಮೆರಿಕನ್ನರಿಗೆ ಕೊರೊನಾ ಸೋಂಕು ತಗುಲಿಬಿಟ್ಟಿತು.
ತುರ್ತು ಪರಿಸ್ಥಿತಿ ಘೋಷಿಸಿದ್ದ ಅಮೆರಿಕ
ಇನ್ನು ಕೊರೊನಾ ಕಂಟ್ರೋಲ್ ಮಾಡಲು ಹರಸಾಹಸ ಮುಂದುವರಿದ ಸಂದರ್ಭದಲ್ಲೇ, ಸಾಂಕ್ರಾಮಿಕ ತುರ್ತು ಪರಿಸ್ಥಿತಿಯ ಘೋಷಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಕೂಡಲೇ ಅಂದಿನ ಟ್ರಂಪ್ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇನ್ನು ಇದೀಗ COVID-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕೊನೆಗೊಳಿಸುವ ಕಾಂಗ್ರೆಸ್ ಅಂಗೀಕರಿಸಿದ ಕಾನೂನಿಗೆ ಅಧ್ಯಕ್ಷ ಜೋ ಬೈಡನ್ ಸಹಿ ಹಾಕಿದ್ದಾರೆ. ಈ ಮೂಲಕ 3 ವರ್ಷಗಳ ಕರಾಳ ಅಧ್ಯಾಯ ಕೊನೆಗೂ ಅಂತ್ಯವಾದಂತಾಗಿದೆ.

ಆರ್ಥಿಕವಾಗಿ ಹಿನ್ನಡೆ ಕಂಡ ಅಮೆರಿಕ
ಕೊರೊನಾ ಅಪ್ಪಳಿಸಿದ ಬಳಿಕ ಅನಿವಾರ್ಯ ಕಾರಣಗಳಿಂದ ಅಮೆರಿಕದಲ್ಲಿ ಉದ್ದಿಮೆಗಳು ಬಂದ್ ಆದವು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ಅದೆಷ್ಟೋ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಕೂಡ ಅಮೆರಿಕದ ಸರ್ಕಾರಕ್ಕೆ ಕಷ್ಟವಾಗಿತ್ತು. ಇದೆಲ್ಲದರ ಪರಿಣಾಮ ಅಮೆರಿಕದ ಆರ್ಥಿಕತೆ ಕುಸಿದಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ರಾಷ್ಟ್ರಕ್ಕೆ ಭೀಕರ ಪರಿಸ್ಥಿತಿ ಎದುರಾಗಿದೆ. ಈ ಹೊತ್ತಲ್ಲೇ ಹೊಸ ಹುರುಪಿನೊಂದಿಗೆ ಅಮೆರಿಕ ತುರ್ತು ಪರಿಸ್ಥಿತಿ ಕೊನೆಗೊಳಿಸಿ ಮುನ್ನುಗ್ಗಲು ಸಿದ್ಧವಾಗಿದೆ.
ಸೋಂಕಿತರ ಪಟ್ಟಿಯಲ್ಲಿ ನಂ.1 ಅಮೆರಿಕ!
ಎಲ್ಲದರಲ್ಲೂ ತಾನೇ ನಂಬರ್ 1 ಅಂತಾ ಬಿಲ್ಡಪ್ ಕೊಡೋದು ಅಮೆರಿಕ ಮತ್ತು ಅಮೆರಿಕನ್ನರಿಗೆ ರೂಢಿ. ಇದೇ ರೀತಿ ಕೊರೊನಾ ಕೂಪದಲ್ಲಿ ಬಿದ್ದಾಗ ಅಮೆರಿಕ ಬೇಡ ಎಂದರೂ ನಂಬರ್ 1 ಆಗಿತ್ತು. ಸುಮಾರು 10 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ ಕಾರಣ, ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನ ಅಲಂಕರಿಸಿತ್ತು. ಆದರೆ ಹೆಮ್ಮಾರಿ ಕಟ್ಟಿಹಾಕಲು ಅಲ್ಲಿನ ಸರ್ಕಾರ ಕೈಗೊಂಡ ಕಾರ್ಯ ಹಾಗೂ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ವಹಿಸಿದ ಶ್ರಮದ ಫಲವಾಗಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ. ಈಗ ತುರ್ತು ಪರಿಸ್ಥಿತಿ ಅಂತ್ಯವಾಗಿದ್ದರೂ, ಕೊರೊನಾ ಭೀತಿ ಸಂಪೂರ್ಣವಾಗಿ ಮಾಯವಾಗಿಲ್ಲ.












Click it and Unblock the Notifications