Congo floods: ಕಾಂಗೋ ಪ್ರವಾಹದಿಂದ ಸಾವಿನ ಸಂಖ್ಯೆ 200ಕ್ಕೆ ಏರಿಕೆ, ಅನೇಕರು ನಾಪತ್ತೆ!
ಪೂರ್ವ ಕಾಂಗೋದಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ಸಾವಿನ ಸಂಖ್ಯೆ 203ಕ್ಕೆ ಏರಿಕೆಯಾಗಿದ್ದು ಅನೇಕ ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಇದುವರೆಗೆ 203 ಶವಗಳನ್ನು ಪತ್ತೆ ಹಚ್ಚಲಾಗಿದ್ದು ಇತರರನ್ನು ಹುಡುಕುವ ಪ್ರಯತ್ನಗಳು ಮುಂದುವರೆದಿದೆ ಎಂದು ಕಲೆಹೆ ಪ್ರದೇಶದ ನಿರ್ವಾಹಕ ಥಾಮಸ್ ಬಾಕೆ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುರುವಾರ ಕಿವು ಸರೋವರದ ತೀರಕ್ಕೆ ಸಮೀಪವಿರುವ ಕಲೆಹೆ ಪ್ರದೇಶದಲ್ಲಿ ಪ್ರವಾಹ ಹಾಗೂ ಭೂಕುಸಿತಕ್ಕೆ ಹಳ್ಳಿಗಳು ಕೊಚ್ಚಿ ಹೋಗಿವೆ. ಇದು ಹಲವರ ಪ್ರಾಣ ಬಲಿತೆಗೆದುಕೊಂಡಿದೆ. ಮಾತ್ರವಲ್ಲದೆ ಹಲವರು ಗಾಯಗೊಂಡಿದ್ದು ಕಾಣೆಯಾದವರ ಪತ್ತೆ ಕಾರ್ಯ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಲೆಹೆಯಲ್ಲಿ ಸಂಭವಿಸಿದ ಪ್ರವಾಹ ಎಷ್ಟು ಭೀಕರವಾಗಿತ್ತು ಅಂದರೆ ಬದುಕುಳಿದವರಿಗೆ ಅವರ ಮನೆ ಎಲ್ಲಿತ್ತು ಎನ್ನುವುದನ್ನು ಪತ್ತೆ ಹಚ್ಚಲು ಸಾಧ್ಯವಾಗದಷ್ಟು ಭೀಕರವಾಗಿದೆ.

ಏಕಾಏಕಿ ಉಂಟಾದ ಪ್ರವಾಹಕ್ಕೆ ನೂರಾರು ಮನೆಗಳು ಕೊಚ್ಚಿಹೋಗಿವೆ. ನ್ಯಾಮುಕುಬಿ ಗ್ರಾಮದಲ್ಲಿ ರಕ್ಷಣಾ ಕಾರ್ಯಕರ್ತರು ಮತ್ತು ಬದುಕುಳಿದವರು ಶನಿವಾರ ಅವಶೇಷಗಳ ಮೂಲಕ ಅಗೆದು ಕೆಸರಿನಲ್ಲಿ ಹೆಚ್ಚಿನ ದೇಹಗಳನ್ನು ಹುಡುಕುತ್ತಿರುವ ದೃಶ್ಯಗಳು ಕಂಡು ಬಂದಿವೆ. ಮಳೆಯಿಂದಾಗಿ ಸಂತ್ರಸ್ತ ಪ್ರದೇಶದ ಹಲವು ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು, ಪರಿಹಾರ ಕಾರ್ಯಕ್ಕೆ ಅಡ್ಡಿಯಾಗಿದೆ.
ಇಡೀ ಗ್ರಾಮವೇ ಪಾಳುಭೂಮಿಯಾಗಿ ಮಾರ್ಪಟ್ಟಿದೆ. ಕಲ್ಲುಗಳು ಮಣ್ಣು ಮಾತ್ರ ಪ್ರದೇಶದಲ್ಲಿ ಉಳಿದಿವೆ. ನಮ್ಮ ಮನೆ ಎಲ್ಲಿತ್ತು ಎಂದು ನಮಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿಕೊಂಡಿದ್ದಾರೆ.
ಮೃತರನ್ನು ಹುಡುಕಲು ಮತ್ತು ಕಾಣೆಯಾದವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ಕಾರ್ಯಕರ್ತ ಮಿಚಾಕ್ ನ್ತಮಾನಾ ಮಾತನಾಡಿ, ಗ್ರಾಮಸ್ಥರು ಇಲ್ಲಿಯವರೆಗೆ ಪತ್ತೆಯಾದ ತಮ್ಮ ಸಂಬಂಧಿಕರ ದೇಹಗಳನ್ನು ಗುರುತಿಸಲು ಮತ್ತು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ. ಬೆಟ್ಟಗಳ ಮೇಲಿನ ಹಳ್ಳಿಗಳಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದ ಕೆಲವು ದೇಹಗಳನ್ನು ಮರಗಳ ಎಲೆಗಳಲ್ಲಿ ಮುಚ್ಚಿ ಹೂತುಹೋಗಿದ್ದವು ಎಂದು ಅವರು ಹೇಳಿದರು. "ಇದು ನಿಜವಾಗಿಯೂ ದುಃಖಕರವಾಗಿದೆ. ಏಕೆಂದರೆ ನಮಗೆ ಇಲ್ಲಿ ಶವಗಳ ಹೊರತಾಗಿ ಬೇರೆ ಏನೂ ಕಾಣುತ್ತಿಲ್ಲ" ಎಂದು ಅವರು ಹೇಳಿದ್ದಾರೆ.

ದಕ್ಷಿಣ ಕಿವು ಗವರ್ನರ್ ಥಿಯೊ ನ್ಗ್ವಾಬಿಡ್ಜೆ ಅವರು ಸ್ವತಃ ವಿನಾಶವನ್ನು ವೀಕ್ಷಿಸಲು ಪ್ರದೇಶಕ್ಕೆ ಭೇಟಿ ನೀಡಿದರು. ಬಳಿಕ ಅವರು ಪ್ರಾಂತೀಯ ಸರ್ಕಾರ ಸಂತ್ರಸ್ತರಿಗಾಗಿ ವೈದ್ಯಕೀಯ, ಆಶ್ರಯ ಮತ್ತು ಆಹಾರ ಸರಬರಾಜುಗಳನ್ನು ರವಾನಿಸುತ್ತಿದೆ ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂತ್ರಸ್ತರನ್ನು ಗೌರವಿಸಲು ಅಧ್ಯಕ್ಷ ಫೆಲಿಕ್ಸ್ ತ್ಶಿಸೆಕೆಡಿ ಸೋಮವಾರ ರಾಷ್ಟ್ರೀಯ ಶೋಕಾಚರಣೆಯ ದಿನವನ್ನು ಘೋಷಿಸಿದ್ದಾರೆ ಮತ್ತು ಪ್ರಾಂತೀಯ ಸರ್ಕಾರವನ್ನು ಬೆಂಬಲಿಸಲು ಕೇಂದ್ರ ಸರ್ಕಾರವು ದಕ್ಷಿಣ ಕಿವುಗೆ ಬಿಕ್ಕಟ್ಟು ನಿರ್ವಹಣಾ ತಂಡವನ್ನು ಕಳುಹಿಸುತ್ತಿದೆ.
ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯು ಪೂರ್ವ ಆಫ್ರಿಕಾದಲ್ಲಿ ಸಾವಿರಾರು ಜನರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ. ಉಗಾಂಡಾ ಮತ್ತು ಕೀನ್ಯಾದ ಕೆಲವು ಭಾಗಗಳು ಸಹ ಭಾರೀ ಮಳೆಯನ್ನು ಕಾಣುತ್ತಿವೆ. ಕಾಂಗೋ ಗಡಿಯಲ್ಲಿರುವ ರುವಾಂಡಾದಲ್ಲಿ ಪ್ರವಾಹ ಮತ್ತು ಭೂಕುಸಿತದಲ್ಲಿ ಈ ವಾರದ ಆರಂಭದಲ್ಲಿ 129 ಜನರು ಸಾವನ್ನಪ್ಪಿದರು.












Click it and Unblock the Notifications