ಕೊಲಂಬಿಯಾ ವಿಮಾನ ಅಪಘಾತ: ದಟ್ಟ ಕಾಡಿನಲ್ಲಿ ಬದುಕುಳಿದ 4 ಮಕ್ಕಳು
ಬೊಗೊಟ್, ಕೊಲಂಬಿಯಾ ಮೇ 18: ಮೇ 1 ರಂದು ಸಂಭವಿಸಿದ ವಿಮಾನ ಅಪಘಾತದಲ್ಲಿ ಪವಾಡ ಎಂಬಂತೆ ನಾಲ್ಕು ಮಕ್ಕಳು ಬದುಕುಳಿದಿದ್ದಾರೆ. ಕೊಲಂಬಿಯಾದ ಅಮೆಜಾನ್‌ನ ದಟ್ಟ ಕಾಡಿನಲ್ಲಿ ಈ ಮಕ್ಕಳು ಪತ್ತೆಯಾಗಿದ್ದಾರೆ.
ಎರಡು ವಾರಗಳ ಹಿಂದೆ ವಿಮಾನ ಅಪಘಾತ ನಡೆದಿತ್ತು. ಕೊಲಂಬಿಯಾದ ಅಮೆಜಾನ್‌ನ ದಟ್ಟವಾದ ಕಾಡಿನಲ್ಲಿ 11 ತಿಂಗಳ ಮಗು ಸೇರಿದಂತೆ ನಾಲ್ಕು ಮಕ್ಕಳು ಕಾಣೆಯಾಗಿದ್ದರು. ಸದ್ಯ ಈ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಧ್ಯಕ್ಷ ಗುಸ್ಟಾವೊ ಪೆಟ್ರೋ ಬುಧವಾರ ಹೇಳಿದ್ದಾರೆ. ಜೊತೆಗೆ ಇದು ದೇಶಕ್ಕೆ ಸಂತೋಷದ ವಿಷಯ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪೆಟ್ರೋ ಅವರು ಟ್ವಿಟರ್‌ನಲ್ಲಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ, ಮಿಲಿಟರಿಯಿಂದ ಕಠಿಣ ಹುಡುಕಾಟ ಪ್ರಯತ್ನಗಳ ನಂತರ ಮಕ್ಕಳನ್ನು ಪತ್ತೆ ಮಾಡಲಾಗಿದೆ ಎಂದು ಅವರು ಬರೆದಿದ್ದಾರೆ.
ಮೇ 1 ರಂದು ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಮತ್ತು ಮಕ್ಕಳ ತಾಯಿ ಸೇರಿದಂತೆ ಮೂವರು ವಯಸ್ಕರು ಸಾವನ್ನಪ್ಪಿದ್ದರು. ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ನಾಲ್ಕು ಜನ ಮಕ್ಕಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ವಿಮಾನ ಪತನಗೊಂಡಾಗ ಮಕ್ಕಳ ದೇಹವೂ ಸಿಕ್ಕಿರಲಿಲ್ಲ. ಹೀಗಾಗಿ ಮಕ್ಕಳನ್ನು ಹುಡುಕಲು ಅಧಿಕಾರಿಗಳು ಸ್ನಿಫರ್ ಡಾಗ್‌ಗಳೊಂದಿಗೆ 100 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ್ದರು.

11 ತಿಂಗಳ ಮಗು ಸೇರಿದಂತೆ 13, 9 ಮತ್ತು 4 ವರ್ಷ ವಯಸ್ಸಿನ ಮಕ್ಕಳು ಅಪಘಾತದ ನಂತರ ದಕ್ಷಿಣ ಕ್ಯಾಕ್ವೆಟಾ ವಿಭಾಗದಲ್ಲಿ ಕಾಡಿನಲ್ಲಿ ಕಾಣೆಯಾಗಿದ್ದಾರೆಂದು ತಿಳಿದು ಬಂದಿತ್ತು. ಇದರ ಆಧಾರದ ಮೇಲೆ ಸಶಸ್ತ್ರ ಪಡೆಯ ರಕ್ಷಕರು ಶೋಧ ಪ್ರಯತ್ನಗಳನ್ನು ತೀವ್ರಗೊಳಿಸಿದರು.
ಆರಂಭದಲ್ಲಿ ಸಶಸ್ತ್ರ ಪಡೆಗಳು ಬಿಡುಗಡೆ ಮಾಡಿದ ಛಾಯಾಚಿತ್ರಗಳಲ್ಲಿ, ಕಾಡಿನ ನೆಲದ ಮೇಲೆ ಕೂದಲಿನ ಬ್ಯಾಂಡ್ ಪತ್ತೆಯಾಗಿತ್ತು. ಈ ಹಿಂದೆ ಮಗುವಿನ ಕುಡಿಯುವ ಬಾಟಲಿ ಹಾಗೂ ಅರ್ಧ ತಿಂದಿದ್ದ ಹಣ್ಣಿನ ತುಂಡು ಪತ್ತೆಯಾಗಿತ್ತು.

ಸೋಮವಾರ ಮತ್ತು ಮಂಗಳವಾರ ಸೈನಿಕರು, ಪೈಲಟ್ ಮತ್ತು ಇಬ್ಬರು ವಯಸ್ಕರ ಮೃತದೇಹಗಳನ್ನು ಕಂಡುಕೊಂಡರು. ಇವರು ಕಾಡಿನ ಸ್ಥಳದಿಂದ ಕೊಲಂಬಿಯಾದ ಅಮೆಜಾನ್ ಮಳೆಕಾಡಿನ ಪ್ರಮುಖ ನಗರಗಳಲ್ಲಿ ಒಂದಾದ ಸ್ಯಾನ್ ಜೋಸ್ ಡೆಲ್ ಗುವಿಯಾರ್‌ಗೆ ತೆರಳುತ್ತಿದ್ದರು. ಮೃತ ಪ್ರಯಾಣಿಕರಲ್ಲಿ ಒಬ್ಬರಾದ ರಾನೋಕ್ ಹಾಗು ಪತ್ನಿ ಮುಕುಟುಯ್ ಅವರು ಹ್ಯುಟೊಟೊ ಜನಾಂಗದ ನಾಲ್ಕು ಮಕ್ಕಳ ತಾಯಿಯಾಗಿದ್ದಾರೆ.
40 ಮೀಟರ್ ಎತ್ತರದವರೆಗೆ ಬೆಳೆದ ದೈತ್ಯ ಮರಗಳು, ಕಾಡು ಪ್ರಾಣಿಗಳು ಮತ್ತು ಭಾರೀ ಮಳೆಯ ನಡುವೆ ಮಕ್ಕಳಿಗಾಗಿ ನಡೆದ "ಆಪರೇಷನ್ ಹೋಪ್" ಹುಡುಕಾಟ ಕಷ್ಟಕರವಾಗಿತ್ತು. ಸಹಾಯಕ್ಕಾಗಿ ಮೂರು ಹೆಲಿಕಾಪ್ಟರ್‌ಗಳನ್ನು ಬಳಸಲಾಗಿತ್ತು. ಅವುಗಳಲ್ಲಿ ಒಂದು ಮಗು ಹ್ಯುಟೊಟೊ ಭಾಷೆಯಲ್ಲಿ ಕಾಡಿನ ಮೂಲಕ ಚಲಿಸುವ ವಿಮಾನವನ್ನು ನಿಲ್ಲಿಸುವಂತೆ ಹೇಳುವ ಧ್ವನಿ ಸಂದೇಶ ಸಿಕ್ಕಿತ್ತು.
ಹ್ಯುಟೊಟೊ ಸಮುದಾಯ ಕಾಡಿನೊಂದಿಗೆ ಸಾಮರಸ್ಯದಿಂದ ಬದುಕಲು ಹೆಸರುವಾಸಿಯಾಗಿದೆ. ಅವರು ಬೇಟೆ, ಮೀನುಗಾರಿಕೆ ಮತ್ತು ಪ್ರಾಣಿಗಳೊಂದಿಗೆ ತಪ್ಪಿಸಿಕೊಳ್ಳುವ ಕೌಶಲ್ಯಗಳಿಗೆ ಹೆಸರಾಗಿದ್ದಾರೆ. ಇದು ಮಕ್ಕಳು ಬದುಕಲು ಸಹಾಯ ಮಾಡಿರಬಹುದು ಎನ್ನಲಾಗಿದೆ.
ವಿಮಾನ ಪತನಕ್ಕೆ ಕಾರಣವೇನು ಎಂಬುದನ್ನು ಅಧಿಕಾರಿಗಳು ಸೂಚಿಸಿಲ್ಲ. ರಾಡಾರ್‌ಗಳಿಂದ ವಿಮಾನವು ಕಣ್ಮರೆಯಾಗುವ ಕೆಲವೇ ನಿಮಿಷಗಳ ಮೊದಲು ಪೈಲಟ್ ಎಂಜಿನ್‌ನಲ್ಲಿ ಸಮಸ್ಯೆಗಳನ್ನು ವರದಿ ಮಾಡಿದ್ದಾರೆ ಎಂದು ಕೊಲಂಬಿಯಾದ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ.












Click it and Unblock the Notifications