Chinese Walking: ರಾತ್ರಿ 8 ಗಂಟೆಯ ಈ ಸರಳ ಅಭ್ಯಾಸ ಚೀನಿಯರ ದೀರ್ಘಾಯುಷ್ಯದ ಗುಟ್ಟಂತೆ!

Chinese Walking: ಚೀನಾದ ಯಾವುದೇ ನಗರದಲ್ಲಿ ರಾತ್ರಿ 8 ಗಂಟೆಯ ಸುಮಾರಿಗೆ ರಸ್ತೆಗಳಲ್ಲಿ ಸುತ್ತಾಡಿದರೆ ನಿಮಗೆ ಒಂದು ವಿಶೇಷ ದೃಶ್ಯ ಕಾಣಿಸುತ್ತದೆ. ದಂಪತಿಗಳು, ಕುಟುಂಬಗಳು, ಮಕ್ಕಳು ಹೀಗೆ ಎಲ್ಲ ವಯೋಮಾನದವರೂ ರಸ್ತೆಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿರುತ್ತಾರೆ. ಯಾರೂ ಓಡುವುದಿಲ್ಲ, ಅವಸರ ಮಾಡುವುದಿಲ್ಲ. ಪರಿಚಯದವರೊಂದಿಗೆ ಮಾತನಾಡುತ್ತಾ, ಹರಟೆ ಹೊಡೆಯುತ್ತಾ ಆರಾಮವಾಗಿ ಹೆಜ್ಜೆ ಹಾಕುತ್ತಿರುತ್ತಾರೆ.

Chinese Walking The 8 PM Chinese Ritual That May Help You Live Longer The Secret of Post-Dinner Walks

ಇದು ಇತ್ತೀಚೆಗೆ ಶುರುವಾದ ಅಭ್ಯಾಸವಲ್ಲ. ಚೀನಿಯರು ಹಲವು ದಶಕಗಳಿಂದ ಪಾಲಿಸಿಕೊಂಡು ಬಂದಿರುವ ಜೀವನಶೈಲಿ. ಅಷ್ಟೇ ಅಲ್ಲ, ಈ ಸರಳ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂಬುದನ್ನು ಆಧುನಿಕ ವಿಜ್ಞಾನವೂ ಈಗ ಗುರುತಿಸುತ್ತಿದೆ.

ಶಾಂಘೈನಲ್ಲಿ ನೆಲೆಸಿರುವ ಲಿಯಾನ್ ಎಂಬ ಕಂಟೆಂಟ್ ಕ್ರಿಯೇಟರ್ ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ (instagram) ಈ ವಿಶೇಷ ಅಭ್ಯಾಸದ ಬಗ್ಗೆ ವಿಡಿಯೊ ಹಂಚಿಕೊಂಡಿದ್ದಾರೆ. ರಾತ್ರಿ ಊಟದ ಬಳಿಕ ಚೀನಿಯರು ಬೀದಿಗಳಲ್ಲಿ ನಡೆಯುವ ದೃಶ್ಯಗಳನ್ನು ತೋರಿಸಿರುವ ಅವರು, ಈ ಅಭ್ಯಾಸದ ಹಿಂದಿನ ಕಾರಣಗಳನ್ನು ವಿವರಿಸಿದ್ದಾರೆ.

ಚೀನಿಯರು ಈ ಅಭ್ಯಾಸವನ್ನು 'ಕ್ಸಿಯಾವೋಹುವಾ ಶಿವು' (Xiāohuà shíwù) ಎಂದು ಕರೆಯುತ್ತಾರೆ. ಇದರ ಅರ್ಥ ಆಹಾರ ಜೀರ್ಣಿಸಿಕೊಳ್ಳುವುದು ಎಂದಾಗಿದೆ. ಊಟದ ಬಳಿಕ ನಡೆಯುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳನ್ನು ಆಧುನಿಕ ವಿಜ್ಞಾನ ಇತ್ತೀಚಿನ ವರ್ಷಗಳಲ್ಲಿ ಗುರುತಿಸಿದ್ದರೂ, ಚೀನಿಯರು ತಲೆಮಾರುಗಳಿಂದ ಈ ಅಭ್ಯಾಸವನ್ನು ಅನುಸರಿಸುತ್ತಿದ್ದಾರೆ.

"ಊಟ ಮಾಡಿದ ತಕ್ಷಣ ಕುಳಿತುಕೊಳ್ಳಬಾರದು, ಅದರಲ್ಲೂ ಮಲಗಲೇಬಾರದು ಎಂಬುದು ಚೀನಿಯರ ನಂಬಿಕೆ. ಊಟದ ಬಳಿಕ ಹೊರಗೆ ಹೋಗಿ ಸ್ವಲ್ಪ ನಡೆದಾಡಬೇಕು. ಇದರಿಂದ ದೇಹ ಹಗುರವಾಗುತ್ತದೆ ಮತ್ತು ಆರಾಮದಾಯಕವೆನಿಸುತ್ತದೆ. ಇದು ನಮ್ಮ ಜೀವನಶೈಲಿಯಲ್ಲಿ ಆಳವಾಗಿ ಬೇರೂರಿರುವ ಅಭ್ಯಾಸ" ಎಂದು ಲಿಯಾನ್ ವಿವರಿಸಿದ್ದಾರೆ.

ಊಟವಾದ ಮೇಲೆ ನಡೆದರೇನು ಲಾಭ?

ಹೊಟ್ಟೆ ತುಂಬ ಊಟ ಮಾಡಿದ ಬಳಿಕ ನಿಧಾನವಾಗಿ ನಡೆಯುವುದರಿಂದ ದೇಹಕ್ಕೆ ಹೆಚ್ಚಿನ ಆಯಾಸವಾಗುವುದಿಲ್ಲ. ಬದಲಿಗೆ ಜೀರ್ಣಾಂಗ ವ್ಯವಸ್ಥೆಯ ಸಹಜ ಚಟುವಟಿಕೆಗೆ ನೆರವಾಗುತ್ತದೆ. ಹೆಚ್ಚು ವೇಗವಾಗಿ ನಡೆಯುವ ಅಗತ್ಯವೂ ಇಲ್ಲ. ಆರಾಮವಾಗಿ ಹೆಜ್ಜೆ ಹಾಕುವುದೇ ಮುಖ್ಯ.

ಚೀನಾದಲ್ಲಿ ಹಳೆಯದೊಂದು ಗಾದೆಯಿದೆ. "ಊಟದ ಬಳಿಕ ನೂರು ಹೆಜ್ಜೆ ನಡೆದರೆ 99 ವರ್ಷ ಬದುಕಬಹುದು" ಎಂಬುದು ಆ ಗಾದೆಯ ಅರ್ಥ. ಚೀನಾದ ಕುಟುಂಬಗಳಲ್ಲಿ ತಲೆಮಾರುಗಳಿಂದ ಪಾಲಿಸಿಕೊಂಡು ಬಂದಿರುವ ಈ ಸರಳ ಅಭ್ಯಾಸಕ್ಕೆ ಈಗ ಕೆಲವು ವೈಜ್ಞಾನಿಕ ಅಧ್ಯಯನಗಳೂ ಬೆಂಬಲ ನೀಡಿವೆ.

ಸಿಗುವ ಪ್ರಯೋಜನಗಳೇನು?

2021ರಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ಪ್ರತಿ ಊಟದ ಬಳಿಕ 10ರಿಂದ 15 ನಿಮಿಷಗಳ ಕಾಲ ನಾಲ್ಕು ವಾರಗಳವರೆಗೆ ನಡೆದಾಡುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಡಿಮೆಯಾಗಲು ನೆರವಾಗಿದೆ. ಹೊಟ್ಟೆಯಲ್ಲಿ ಅತಿಯಾದ ಗ್ಯಾಸ್, ಹೊಟ್ಟೆ ಉಬ್ಬರ (health) ಮತ್ತು ತೇಗು ಮುಂತಾದ ಸಮಸ್ಯೆಗಳಲ್ಲಿ ಸುಧಾರಣೆ ಕಂಡುಬಂದಿದೆ.

2011ರಲ್ಲಿ ಪ್ರಕಟವಾದ ಮತ್ತೊಂದು ಅಧ್ಯಯನವು ಊಟದ ಬಳಿಕ ನಡೆಯುವುದಕ್ಕೂ ತೂಕ ಇಳಿಕೆಗೂ ಇರುವ ಸಂಬಂಧವನ್ನು ಪರಿಶೀಲಿಸಿದೆ. ಮಧ್ಯಾಹ್ನದ ಊಟ ಮತ್ತು ರಾತ್ರಿ ಊಟದ ತಕ್ಷಣವೇ 30 ನಿಮಿಷಗಳ ಕಾಲ ವೇಗವಾಗಿ ನಡೆಯುವುದರಿಂದ, ಊಟ ಮಾಡಿದ ಒಂದು ಗಂಟೆಯ ಬಳಿಕ 30 ನಿಮಿಷ ನಡೆಯುವುದಕ್ಕಿಂತ ಹೆಚ್ಚು ತೂಕ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದಕ್ಕೂ ಊಟದ ಬಳಿಕದ ನಡಿಗೆ ಸಹಾಯ ಮಾಡಬಹುದು. 2023ರಲ್ಲಿ ಪ್ರಕಟವಾದ ಅಧ್ಯಯನಗಳ ವಿಮರ್ಶೆಯ ಪ್ರಕಾರ, ಊಟ ಮಾಡಿದ 30 ನಿಮಿಷಗಳ ಒಳಗೆ ನಡೆಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಹೆಚ್ಚು ಪರಿಣಾಮಕಾರಿ ಫಲಿತಾಂಶ ಕಂಡುಬಂದಿದೆ.

ಹೀಗಾಗಿ ಊಟದ ಬಳಿಕ ಸ್ವಲ್ಪ ಹೊತ್ತು ನಡೆಯುವುದು ಕೇವಲ ಜೀರ್ಣಕ್ರಿಯೆಗೆ ಮಾತ್ರವಲ್ಲ, ತೂಕ ನಿರ್ವಹಣೆ ಮತ್ತು ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೂ ನೆರವಾಗುವ ಅಭ್ಯಾಸವಾಗಿರಬಹುದು.

ಚೀನಿಯರ ಸಂಸ್ಕೃತಿಯ ಭಾಗವೇ Chinese Walking

ಚೀನಾದಲ್ಲಿ ಊಟದ ಬಳಿಕ ನಡೆಯುವುದು ಕೇವಲ ಆರೋಗ್ಯದ ದೃಷ್ಟಿಯಿಂದ ಅನುಸರಿಸುವ ಅಭ್ಯಾಸವಲ್ಲ. ಅದು ಅವರ ದೈನಂದಿನ ಜೀವನದ ಭಾಗವಾಗಿದೆ. ಕುಟುಂಬದವರು ಒಟ್ಟಿಗೆ ಸಮಯ ಕಳೆಯಲು, ಸ್ನೇಹಿತರೊಂದಿಗೆ ಮಾತನಾಡಲು ಮತ್ತು ಸಾಮಾಜಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲು ಇದು ಒಂದು ಅವಕಾಶವೂ ಹೌದು.

ವಿಶೇಷವಾಗಿ ವಯಸ್ಸಾದ ಚೀನಿಯರು ಈ ಅಭ್ಯಾಸವನ್ನು ತಪ್ಪಿಸುವುದಿಲ್ಲ. ಲಿಯಾನ್ ತಮ್ಮ ಕುಟುಂಬದ ಉದಾಹರಣೆಯನ್ನೂ ನೀಡಿದ್ದಾರೆ. "ಚೀನಿಯರ ಸಂಸ್ಕೃತಿಯಲ್ಲಿ ಊಟದ ಬಳಿಕದ ನಡಿಗೆ ಕೇವಲ ಜೀರ್ಣಕ್ರಿಯೆಗೆ ಸಂಬಂಧಿಸಿದ್ದಲ್ಲ. ಇದು ಕುಟುಂಬದವರೊಂದಿಗೆ ಸಮಯ ಕಳೆಯುವ ಮತ್ತು ಸಾಮಾಜಿಕವಾಗಿ ಬೆರೆಯುವ ಒಂದು ವಿಧಾನ. ನನ್ನ ತಂದೆ-ತಾಯಿ ಮತ್ತು ನನ್ನ ಪತ್ನಿಯ ತಂದೆ-ತಾಯಿ ಪ್ರತಿದಿನ ರಾತ್ರಿ ಊಟದ ಬಳಿಕ ಕನಿಷ್ಠ 5,000 ಹೆಜ್ಜೆ ನಡೆಯುತ್ತಾರೆ. ದೊಡ್ಡ ನಗರವಿರಲಿ, ಸಣ್ಣ ಪಟ್ಟಣವಿರಲಿ, ಚೀನಾದ ಎಲ್ಲ ಕಡೆಗಳಲ್ಲೂ ಈ ಅಭ್ಯಾಸವನ್ನು ಕಾಣಬಹುದು. ಅಲ್ಲಿನ ಜನರಿಗೆ ಎಲ್ಲೆಡೆ ಸುರಕ್ಷಿತವಾಗಿ ನಡೆಯಲು ಸಾಧ್ಯವಾಗಿರುವುದೂ ಇದಕ್ಕೆ ಒಂದು ಕಾರಣ" ಎಂದು ಅವರು ಹೇಳಿದ್ದಾರೆ.

ಇಂದಿನ ದಿನಗಳಲ್ಲಿ ಎಲ್ಲರಿಗೂ ಜಿಮ್‌ಗೆ ಹೋಗಲು ಸಮಯ ಸಿಗುವುದಿಲ್ಲ. ಕೆಲವರಿಗೆ ನಿಯಮಿತ ವ್ಯಾಯಾಮ ಮಾಡಲು ಅವಕಾಶವೂ ಇರುವುದಿಲ್ಲ. ಆದರೆ ಊಟದ ಬಳಿಕ ಹತ್ತು ನಿಮಿಷ ನಡೆಯಲು ಹೆಚ್ಚಿನ ಸೌಲಭ್ಯಗಳೇನೂ ಬೇಕಾಗಿಲ್ಲ. ಮನೆಯ ಸುತ್ತಮುತ್ತಲಿನ ರಸ್ತೆ ಅಥವಾ ಕಾಲುದಾರಿಯೇ ಸಾಕು. ದೀರ್ಘಕಾಲ ಆರೋಗ್ಯದಿಂದ ಬದುಕಲು ದುಬಾರಿ ವ್ಯಾಯಾಮ ಸಾಧನಗಳು ಅಥವಾ ಕಠಿಣ ಜೀವನಶೈಲಿಯೇ ಬೇಕೆಂದಿಲ್ಲ. ಪ್ರತಿದಿನದ ಜೀವನದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದೂ ಪ್ರಯೋಜನಕಾರಿ. ಊಟದ ಬಳಿಕ ಸ್ವಲ್ಪ ಹೊತ್ತು ನಡೆಯುವುದು ಅಂಥದ್ದೇ ಒಂದು ಸರಳ ಅಭ್ಯಾಸ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+