Canada suspends visa: ಭಾರತೀಯರಿಗೆ ವೀಸಾ ಸೇವೆ ತಡೆಹಿಡಿದ ಕೆನಡಾ- ಅಪಾಯದಲ್ಲಿವೆ 17,500 ವೀಸಾ ಅರ್ಜಿಗಳು
ಒಟ್ಟಾವ್, ಅಕ್ಟೋಬರ್ 20: ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷ ಮುಂದುವರಿದಿದೆ. ಭಾರತದಿಂದ 41 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ಕೆನಡಾ ತೆಗೆದುಕೊಂಡಿದೆ. ಅದೇ ರೀತಿ ಚಂಡೀಗಢ, ಮುಂಬೈ ಮತ್ತು ಬೆಂಗಳೂರಿನಲ್ಲಿ ವೀಸಾ ಮತ್ತು ಕಾನ್ಸುಲರ್ ( ದೂತಾವಾಸ ) ಸೇವೆಗಳ ಕಾರ್ಯಾಚರಣೆಗಳಿಗೆ ತಡೆ ನೀಡಿದೆ.
ಕೆನಡಾ ಸರ್ಕಾರದ ಈ ನಿರ್ಧಾರವು ವಲಸೆ ಮತ್ತು ವೀಸಾ ಅರ್ಜಿ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಬಹುದು ಎಂದು ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ, '41 ಕೆನಡಾದ ರಾಜತಾಂತ್ರಿಕರನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.
'ಇದರ ಪರಿಣಾಮವಾಗಿ ಕೆನಡಾದ 21 ರಾಜತಾಂತ್ರಿಕರು ಮಾತ್ರ ಭಾರತದಲ್ಲಿ ಉಳಿಯಲಿದ್ದಾರೆ. ವಾಪಸ್ಸು ಕರೆಸಿಕೊಂಡಿರುವ ರಾಜತಾಂತ್ರಿಕರಲ್ಲಿ 27 ವಲಸೆ ಇಲಾಖೆಯ ಸಿಬ್ಬಂದಿಗಳು ಸೇರಿದ್ದಾರೆ' ಎಂದು ಜೋಲಿ ಹೇಳಿದ್ದಾರೆ.
ಸಿಬ್ಬಂದಿಯನ್ನು ಕಡಿಮೆ ಮಾಡುವುದರಿಂದ ಭಾರತದ ವೀಸಾ ಸೇವೆಗಳ ಮೇಲೆ ಪರಿಣಾಮ ಬೀರಲಿದೆ. 17,500 ವೀಸಾ ಅರ್ಜಿಗಳು ಅಪಾಯದಲ್ಲಿ ನಿಲುಕಬಹುದು ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಕೆನಡಾ ವಲಸೆ ವಕೀಲ ರಿಚರ್ಡ್ ಕುರ್ಲ್ಯಾಂಡ್, ವೀಸಾ ವಿಚಾರವಾಗಿ ಕೆನಡಾವು ಪರ್ಯಾಯ ಪರಿಹಾರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಕೆನಡಾ ವೀಸಾ ಸೇವೇ ಆನ್‌ಲೈನ್ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದು ಇತರ ದೇಶಗಳಲ್ಲಿನ ಕೆನಡಾದ ಅಧಿಕಾರಿಗಳಿಗೆ ಸೇವೆಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದ್ದಾರೆ.
'ಭಾರತದ ಸಹಕಾರದ ಕೊರತೆಗೆ ಕೆನಡಾವು ಪರಿಹಾರವನ್ನು ಹೊಂದಿದೆ. ಕೆನಡಾ ಫೈಲ್‌ಗಳು ಅಥವಾ ಪಾಸ್‌ಪೋರ್ಟ್‌ಗಳನ್ನು ಪ್ರಕ್ರಿಯೆಗಾಗಿ ಪರ್ಯಾಯ ಸ್ಥಳಗಳಿಗೆ ರವಾನಿಸಬಹುದು' ಎಂದು ತಿಳಿಸಿದ್ದಾರೆ.
ಕೆನಡಾ ರಾಜತಾಂತ್ರಿಕರನ್ನು ಭಾರತದಿಂದ ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಭಾರತ ಸರ್ಕಾರ ಹೇಳಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ 41 ರಾಜತಾಂತ್ರಿಕರನ್ನು ಕೆನಡಾ ವಾಪಸ್ ಕರೆಸಿಕೊಂಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಗುರುವಾರ ಈ ಬೆಳವಣಿಗೆಯನ್ನು ಬಹಿರಂಗಪಡಿಸಿದ್ದಾರೆ. ಕೆನಡಾದ ರಾಜತಾಂತ್ರಿಕ ಸಿಬ್ಬಂದಿಯನ್ನು ಕಡಿತಗೊಳಿಸುವಂತೆ ಭಾರತವು ಒತ್ತಡ ಹೇರಿತ್ತು. ಆದರೆ, ನಾವು ಇಲ್ಲಿರುವ ಭಾರತೀಯ ರಾಜತಾಂತ್ರಿಕರಿಗೆ ಯಾವುದೇ ಒತ್ತಡ ಹೇರುವುದಿಲ್ಲವೆಂದು ಅವರು ಹೇಳಿದ್ದಾರೆ.
ಸಿಖ್ ಉಗ್ರವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಆರೋಪಿಸಿದ್ದರು. ಇದಕ್ಕೆ ಆಕ್ರೋಶಗೊಂಡಿರುವ ಭಾರತ ಸರ್ಕಾರ ಕೆನಡಾ ವಿರುದ್ಧ ಹರಿಹಾಯ್ದಿದೆ.
ಜಸ್ಟಿನ್ ಟ್ರುಡೊ ಅವರದ್ದು ಅಸಂಬದ್ಧ ಹೇಳಿಕೆ ಎಂದು ಟೀಕಿಸಿದೆ. ಅಕ್ಟೋಬರ್ ಮುಗಿಯುದರೊಳಗೆ ಕೆನಡಾ ತನ್ನ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಬೇಕು. ಇಲ್ಲದೇ ಹೋದರೆ, ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದಾಗಿ ಭಾರತ ತಿಳಿಸಿತ್ತು.












Click it and Unblock the Notifications