ಭಾರತದಿಂದ ರಾಜತಾಂತ್ರಿಕ ಅಧಿಕಾರಿಗಳನ್ನು ಸ್ಥಳಾಂತರ ಮಾಡಿದ ಕೆನಡಾ! ಯಾಕೆ ಗೊತ್ತಾ?
ಭಾರತ ಮತ್ತು ಕೆನಡಾ ಮಧ್ಯೆ ದಿನದಿಂದ ದಿನಕ್ಕೆ ಕಿರಿಕ್ ಜೋರಾಗುತ್ತಿದ್ದು, ರಾಜತಾಂತ್ರಿಕ ಅಧಿಕಾರಿಗಳನ್ನ ಎರಡೂ ದೇಶಗಳು ವಾಪಸ್ ಕರೆಸಿಕೊಳ್ಳುವ ಮಟ್ಟಿಗೆ ಸಂಬಂಧ ಹಳಸಿದೆ. ಹೀಗಿದ್ದಾಗ ಭಾರತದಲ್ಲಿ ಇರುವ ಕೆನಡಾ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿತ್ತು ಭಾರತ. ಈಗ ಭಾರತದ ಎಚ್ಚರಿಕೆಗೆ ಬೆದರಿದ ಕೆನಡಾ ಸರ್ಕಾರ, ಭಾರತದಲ್ಲಿ ಇದ್ದ ರಾಜತಾಂತ್ರಿಕರನ್ನು ಅಕ್ಕಪಕ್ಕದ ದೇಶಗಳಿಗೆ ಶಿಫ್ಟ್ ಮಾಡುತ್ತಿದೆ.
ಇದೀಗ ಸಿಕ್ಕ ಮಾಹಿತಿ ಪ್ರಕಾರ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು ಭಾರತ ನೀಡಿದ್ದ ಗಡುವು ಸಮೀಪ ಆಗ್ತಿರುವ ಕಾರಣ. ತನ್ನ ಬಹುತೇಕ ರಾಜತಾಂತ್ರಿಕರನ್ನ ಸಿಂಗಪುರ ಅಥವಾ ಮಲೇಷ್ಯಾಗೆ ಕೆನಡಾ ಸ್ಥಳಾಂತರಿಸಿದೆ ಎನ್ನಲಾಗಿದೆ. ಇನ್ನು ಈ ನಡುವೆ ರಾಷ್ಟ್ರ ರಾಜಧಾನಿ ದೆಹಲಿ ಬಿಟ್ಟು, ಭಾರತದ ಇತರ ಪ್ರಮುಖ ನಗರದಲ್ಲಿ ಕಾರ್ಯ ನಿರ್ವಹಿಸುವ ರಾಜತಾಂತ್ರಿಕರ ಪೈಕಿ ಬಹುತೇಕರನ್ನು ಈಗಾಗಲೇ ಶಿಫ್ಟ್ ಮಾಡಿದೆ ಕೆನಡಾ ಆಡಳಿತ. ಈ ಎಲ್ಲಾ ಬೆಳವಣಿಗೆ ಬಗ್ಗೆ ಕೆನಡಾದ ಮಾಧ್ಯಮಗಳು ವರದಿ ಮಾಡಿವೆ.

ಕೆನಡಾ & ಭಾರತ ಸಂಬಂಧ ಸರಿಯಾಗಲ್ವಾ?
ಭಾರತದ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಯಾಗಿಸಬೇಕಿದ್ದ ಕೆನಡಾ ಮಾತ್ರ ಇದೀಗ ತನ್ನ ಹಠ ಬಿಡುತ್ತಿಲ್ಲ. ಅದ್ರಲ್ಲೂ ಕೆನಡಾ ಪ್ರಧಾನಿ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದ ಈಗ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತ & ಕೆನಡಾ ಸಂಬಂಧ ಸಂಪೂರ್ಣವಾಗಿ ಹಾಳಾಗಿ ಹೋಗುವ ಹಂತ ತಲುಪಿದ್ದು, ಇದೀಗ ಕೆನಡಾ ತನ್ನ ರಾಜತಾಂತ್ರಿಕ ಅಧಿಕಾರಿಗಳ ಗುಂಪನ್ನೇ ವಾಪಸ್ ಕರೆಸಿಕೊಳ್ಳುತ್ತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಇದು ಜಾಗತಿಕ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗೇ ಭಾರತ ಕೂಡ ಕೆನಡಾಗೆ ಈ ಮೂಲಕ ಸರಿಯಾಗಿ ತಿರುಗೇಟು ನೀಡುತ್ತಿದೆ.
ಕಿರಿಕ್ ಶುರುವಾಗಿದ್ದು ಎಲ್ಲಿಂದ?
ಭಾರತದ ಮೋಸ್ಟ್ ವಾಟೆಂಡ್ ಉಗ್ರ & ಖಲಿಸ್ತಾನಿ ಗ್ಯಾಂಗ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್‌ನ ಈ ವರ್ಷದ ಜೂನ್ 18ರಂದು ಕೆನಡಾದ ಸರ್ರೆಯಲ್ಲಿ ಗುಂಡಿಟ್ಟು ಭೀಕರವಾಗಿ ಹತ್ಯೆ ಮಾಡಿದ್ರು. ಹಿಂಸಾಚಾರ & ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾದ ಆರೋಪ ಹೀಗೆ ಕೊಲೆಯಾಗಿದ್ದ ನಿಜ್ಜರ್ ವಿರುದ್ಧ ಇತ್ತು. ಆದರೆ ಈ ಕೊಲೆಯನ್ನು ಭಾರತದ ಏಜೆಂಟ್‌ಗಳು ಮಾಡಿದ್ದಾರೆ ಎನ್ನುತ್ತಿದ್ದಾರೆ ಕೆನಡಾ ಪ್ರಧಾನಿ. ಸೂಕ್ತ ಸಾಕ್ಷ್ಯವೇ ಇಲ್ಲದೆ ಇಂಥ ಆರೋಪ ಸರಿಯಲ್ಲ ಎಂದು ಭಾರತ ಕೂಡ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿತ್ತು. ಈ ಬೆಳವಣಿಗೆ ಮಧ್ಯೆ ಕಿರಿಕಿರಿ ಕೂಡ ಜೋರಾಗಿದೆ.

ಕೆನಡಾ ಕ್ರಿಯೆಗೆ ಭಾರತದ ಪ್ರತಿಕ್ರಿಯೆ!
ಒಟ್ನಲ್ಲಿ ಕಡ್ಡಿಯನ್ನೇ ಗುಡ್ಡ ಮಾಡಿದಂತೆ ಕೆನಡಾ ಪ್ರಧಾನಿ ಆಧಾರ ಇಲ್ಲದೆ ಆರೋಪವನ್ನ ಮಾಡಿ ಈಗಿನ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂಬ ಆರೋಪ ಇದೆ. ಆದ್ರೆ ಮತ್ತೊಂದ್ಕಡೆ ಕೂತು ಚರ್ಚೆ ನಡೆಸಿ ವಿವಾದ ಬಗೆಹರಿಸಬಹುದು. ಕೆನಡಾ ಇದಕ್ಕೆ ಸಿದ್ಧವಾಗಿಲ್ಲ ಎನ್ನುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿಯೇ ಭಾರತ ಕೂಡ ಕೆನಡಾ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕೆನಡಾ ಹೇಗೆ ವರ್ತನೆ ತೋರುತ್ತಿದೆಯೋ, ಅದೇ ರೀತಿ ಭಾರತ ಕೂಡ ಪ್ರತಿಕ್ರಿಯೆ ನೀಡ್ತಿದೆ.
ಉಕ್ರೇನ್ & ರಷ್ಯಾ ಯುದ್ಧ ನಡೆಯುವಾಗ ಕೆನಡಾ ಹಾಗೂ ಭಾರತದ ಸಂಬಂಧ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಭಾವ ಬೀರಲಿದೆ. ಅದರಲ್ಲೂ ನ್ಯಾಟೋ ಪಡೆಗಳು & ಅಮೆರಿಕಗೆ ಈ ಸಂದರ್ಭದಲ್ಲಿ ಭಾರತದ ಜೊತೆ ಸಂಬಂಧ ಕಾಪಾಡಿಕೊಳ್ಳುವುದು ಮುಖ್ಯ. ಹೀಗಿದ್ದಾಗಲೇ ಹಿಂದೆ, ಮುಂದೆ ಯೋಚನೆ ಮಾಡದ ಕೆನಡಾ ಪ್ರಧಾನಿ ಏನೇನೋ ಆರೋಪ ಮಾಡಿದ್ದು, ಭಾರತ ಕೂಡ ಸರಿಯಾಗೇ ಉತ್ತರ ನೀಡುತ್ತಿದೆ. ಅತ್ತ ರಷ್ಯಾ ಕೂಡ ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದು, ಮುಂದೆ ಏನಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ. ಅಕಸ್ಮಾತ್ ಈ ಘಟನೆಗಳಿಂದ ಭಾರತ & ಕೆನಡಾ ಸಂಬಂಧ ಹಳಸಿದ್ರೆ ಇದರಿಂದ ಕೆನಡಾಗೇ ನಷ್ಟ ಹೆಚ್ಚು.












Click it and Unblock the Notifications