Earthquake: ಬಾಂಗ್ಲಾ ನೆಲದಲ್ಲಿ ಭೀಕರ ಭೂಕಂಪನ, 6 ಜನರ ಸಾವು...
ಪ್ರಕೃತಿ ಮೇಲೆ ಮನುಷ್ಯರ ದೌರ್ಜನ್ಯ ಹೆಚ್ಚಾದಂತೆ, ಪ್ರಕೃತಿ ಮಾತೆ ಕೂಡ ತಿರುಗಿ ಪೆಟ್ಟು ಕೊಟ್ಟು ಬುದ್ಧಿ ಕಲಿಸುತ್ತಿದ್ದಾರೆ. ಸುನಾಮಿ, ಚಂಡಮಾರುತ, ಅಕಾಲಿಕ ಮಳೆ, ಇಷ್ಟೆಲ್ಲದರ ನಡುವೆ ಈಗ ಭೀಕರ ಭೂಕಂಪನ ಸಂಭವಿಸಿದೆ. ಬಾಂಗ್ಲಾ ನೆಲದಲ್ಲಿ ಭೀಕರ ಭೂಕಂಪನ ಸಂಭವಿಸಿದ ಪರಿಣಾಮ ಇದೀಗ 6 ಜನ ಮೃತಪಟ್ಟಿದ್ದು, ನೂರಾರು ಗಾಯಾಳುಗಳು ಆಸ್ಪತ್ರೆ ಸೇರಿದ್ದಾರೆ. ಅಲ್ಲದೆ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಇದ್ದು, ಬಾಂಗ್ಲಾ ನೆಲದಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಅಲ್ಲದೆ ಭಾರತದಲ್ಲೂ ಇದೀಗ ಆತಂಕ ಮನೆಮಾಡಿದೆ...
ಅಂದಹಾಗೆ ಬಾಂಗ್ಲಾ ದೇಶದಲ್ಲಿ ಇಂದು ಬೆಳಗ್ಗೆ ಭೀಕರವಾಗಿ ಭೂಮಿ ನಡುಗಿ ಹೋಗಿದ್ದು, ಹೀಗೆ ಭೂಮಿ ನಡುಗಿದ ಪರಿಣಾಮ ಹಲವಾರು ಅವಾಂತರ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದ್ದು, ಭಾರತದ ಭೂಭಾಗ ಕೋಲ್ಕತ್ತಾ ಸೇರಿದಂತೆ ಪೂರ್ವ ಭಾರತದಲ್ಲಿ ಕೂಡ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ. ಇಂದು ಬೆಳಗ್ಗೆ 10.08ಕ್ಕೆ ಭೂಮಿ ಕಂಪಿಸಿ ಆತಂಕ ಉಂಟಾಗಿತ್ತು, ಇನ್ನು ಭೂಕಂಪನದ ಕೇಂದ್ರ ಬಿಂದು ಬಾಂಗ್ಲಾ ರಾಜಧಾನಿ ಢಾಕಾದಿಂದ ಪೂರ್ವ-ಆಗ್ನೇಯಕ್ಕೆ 10 ಕಿಲೋ ಮೀಟರ್ ದೂರದಲ್ಲಿ ಪತ್ತೆಯಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಕ್ಷಣ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದು, ಪರಿಸ್ಥಿತಿ ಈಗಲೂ ಸೂಕ್ಷ್ಮವಾಗಿದೆ.

ಕುಸಿದು ಬಿದ್ದ ಕಟ್ಟಡಗಳು...
ಬಾಂಗ್ಲಾ ನೆಲದಲ್ಲಿ ಭೂಕಂಪನ ಸಂಭವಿಸಿದ ನಂತರ ಹಲವು ಕಟ್ಟಡಗಳು ಅಲ್ಲಾಡಿ ಹೋಗಿವೆ. ಆ ನಂತರ ಹಲವು ಕಟ್ಟಡಗಳ ಗೋಡೆಗಳು ಕೂಡ ಕುಸಿದು ಬಿದ್ದಿವೆ. ಈ ದುರಂತದ ಪರಿಣಾಮ ತಕ್ಷಣ 3 ಜನ ಮೃತಪಟ್ಟಿದ್ದಾರೆ. ಮತ್ತೊಂದು ಕಡೆ ಢಾಕಾದಲ್ಲಿ ಕಟ್ಟಡಗಳ ರೇಲಿಂಗ್ ಬಿದ್ದಿದ್ದರಿಂದ ಮೂವರು ಪಾದಚಾರಿಗಳ ಜೀವ ಹೋಗಿದೆ. ಹಾಗೇ ಫ್ಯಾನ್, ಚಾವಣಿಗೆ ನೇತು ಬಿಟ್ಟಿರುವ ಲೈಟ್ ಸೇರಿದಂತೆ ಕುರ್ಚಿ, ಬೆಂಚ್‌ಗಳು ಅಲ್ಲಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಹಾಗೇ ಈಗಲೂ ಸೂಕ್ಷ್ಮ ಪರಿಸ್ಥಿತಿ ಇರುವ ಕಾರಣ ಮುನ್ನೆಚ್ಚರಿಕೆ ಕೈಗೊಂಡು ಸೂಕ್ಷ್ಮ ಪ್ರದೇಶಗಳ ಜನರಿಗೆ ಸ್ಥಳಾಂತರವಾಗಲು ಸೂಚಿಸಲಾಗಿದೆ.
ಭಾರತದಲ್ಲೂ ಭಾರಿ ಮುನ್ನೆಚ್ಚರಿಕೆ
ಬಾಂಗ್ಲಾದೇಶ ಭಾರತಕ್ಕೆ ಸಮೀಪವೇ ಇರುವ ಕಾರಣ, ಭಾರತದಲ್ಲಿ ಭೂಕಂಪನ ಪರಿಣಾಮ ಕಂಡು ಬಂದಿದೆ. ಈಗಾಗಲೇ ಕೋಲ್ಕತ್ತಾ ಸೇರಿದಂತೆ ದಕ್ಷಿಣ & ಉತ್ತರ ದಿನಾಜ್‌ಪುರ, ಕೋಚ್ ಬೆಹಾರ್ ಸೇರಿ ಪಶ್ಚಿಮ ಬಂಗಾಳದ ಇತರ ಭಾಗಗಳಲ್ಲೂ ಕಂಪನದ ಅನುಭವವಾಗಿದೆ. ಮೇಘಾಲಯ, ತ್ರಿಪುರ ಮತ್ತು ಮಿಜೋರಾಂ ರಾಜ್ಯಗಳಲ್ಲೂ ಕಂಪನದ ಅನುಭವ ಆಗಿದೆ. ಆದರೆ ಭೂಕಂಪನ ಹಿನ್ನೆಲೆ ಭಾರತದಲ್ಲಿ ಯಾವುದೇ ಗಾಯ ಅಥವಾ ಸಾವುನೋವು ವರದಿಯಾಗಿಲ್ಲ. ಹೀಗಿದ್ದರು ಕೂಡ ಸದ್ಯಕ್ಕೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ ಅಧಿಕಾರಿಗಳು.












Click it and Unblock the Notifications