Myanmar Coup: ಆಂಗ್ ಸಾನ್ ಸೂಕಿ ಬಿಡುಗಡೆಗೆ ಮುಹೂರ್ತ ಫಿಕ್ಸ್?
ಜಗತ್ತಿನ ಗಮನ ಸೆಳೆದಿದ್ದ ಮ್ಯಾನ್ಮಾರ್ ಸೇನಾ ದಂಗೆ ಈಗ ಮತ್ತೊಮ್ಮೆ ಸೌಂಡ್ ಮಾಡ್ತಿದೆ. 2021ರ ಸೇನಾ ದಂಗೆ ಬಳಿಕ ಜೈಲು ಸೇರಿದ್ದ ಮ್ಯಾನ್ಮಾರ್‌ನ ಉಚ್ಚಾಟಿತ ಪ್ರಧಾನಿ ಆಂಗ್ ಸಾನ್ ಸೂಕಿಗೆ ಬಿಗ್ ರಿಲೀಫ್ ಸಿಕ್ಕಿದೆ. ಇತ್ತೀಚೆಗೆ 33 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸೂಕಿ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ. ಹಾಗಾದ್ರೆ ಏನದು ರಿಲೀಫ್? ಮ್ಯಾನ್ಮಾರ್ ಹಿಂಸಾಚಾರ ಕೊನೆಯಾಗುತ್ತಾ? ಮ್ಯಾನ್ಮಾರ್ ಬೆಳವಣಿಗೆಯ ಇಂಚಿಂಚು ಮಾಹಿತಿ ಇಲ್ಲಿದೆ ಓದಿ.
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆದಿದ್ದ ಆಂಗ್ ಸಾನ್ ಸೂಕಿ 2021ರ ಸೇನಾ ದಂಗೆಯ ನಂತರ ಜೈಲು ಸೇರಿದ್ದರು. ಮ್ಯಾನ್ಮಾರ್‌ನಲ್ಲಿ 2020ರ ನವೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಸೂಕಿ ನೇತೃತ್ವದಲ್ಲಿ ಭರ್ಜರಿ ಜಯ ಸಾಧಿಸಿತ್ತು ಅವರ ಪಕ್ಷ. ಮ್ಯಾನ್ಮಾರ್ ಸಂಸತ್ತಿನ ಒಟ್ಟಾರೆ 642 ಸ್ಥಾನಗಳ ಪೈಕಿ ಸೂಕಿ ನೇತೃತ್ವದ ಎನ್‌ಎಲ್‌ಡಿ ಪಕ್ಷ 396 ಸ್ಥಾನ ಪಡೆದಿತ್ತು. ಆದರೆ ಅದೇ ವರ್ಷ ಸೂಕಿ ವಿರುದ್ಧ ಹಲವು ಆರೋಪ ಮಾಡಲಾಗಿತ್ತು. ಕೊನೆಗೂ 2021ರ ಸೇನಾ ದಂಗೆ ಮ್ಯಾನ್ಮಾರ್ ದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಆ ನಂತರ ಸೂಕಿಯು ಅಧಿಕಾರ ಕಳೆದುಕೊಂಡಿದ್ದರು. 19 ಪ್ರಕರಣಗಳಲ್ಲಿ ಸೂಕಿ ಶಿಕ್ಷೆ ಅನುಭವಿಸುತ್ತಿರುವ ಸಂದರ್ಭದಲ್ಲೇ ಗುಡ್ ನ್ಯೂಸ್ ಸಿಕ್ಕಿದೆ.

33 ವರ್ಷ ಶಿಕ್ಷೆಗೆ ಬಿತ್ತಾ ಬ್ರೇಕ್?
ಆಂಗ್ ಸಾನ್ ಸೂಕಿ ವಿರುದ್ಧ ಚುನಾವಣಾ ಅಕ್ರಮ ಹಾಗೂ ಭ್ರಷ್ಟಾಚಾರ ಸೇರಿದಂತೆ ಹಲವು ಕೇಸ್‌ಗಳು ಇವೆ. ಹೀಗೆ 19 ಪ್ರಕರಣಗಳ ಪೈಕಿ 5 ಕೇಸ್‌ಗಳಲ್ಲಿ ರಿಲೀಫ್ ನೀಡಿದೆ ಮ್ಯಾನ್ಮಾರ್ ಜುಂಟಾ. ಆದರೆ ಇನ್ನುಳಿದ 14 ಪ್ರಕರಣಗಳು ಹಾಗೇ ಉಳಿಯಲಿದ್ದು, ಸದ್ಯಕ್ಕೆ ಸೂಕಿಯ ಬಿಡುಗಡೆ ಅನುಮಾನವೇ ಆಗಿದೆ. ಮತ್ತೊಂದ್ಕಡೆ ಕೆಲವು ದಿನಗಳ ಹಿಂದಷ್ಟೇ ಜೈಲಿನಲ್ಲಿದ್ದ ಆಂಗ್ ಸಾನ್ ಸೂಕಿಯನ್ನ ಮನೆಗೆ ಶಿಫ್ಟ್ ಮಾಡಿತ್ತು ಮ್ಯಾನ್ಮಾರ್ ಮಿಲಿಟರಿ. ಇದೀಗ ಸೂಕಿ ತಮ್ಮ ಮನೆಯಲ್ಲೇ ಬಂಧನದಲ್ಲಿದ್ದು, ಬಿಡುಗಡೆ ಭಾಗ್ಯ ಸದ್ಯಕ್ಕೆ ಅನುಮಾನ. ಆದರೆ ಈ ಎಲ್ಲಾ ಬೆಳವಣಿಗೆ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನ ಮ್ಯಾನ್ಮಾರ್ ಸೇನೆ ನೀಡಿಲ್ಲ.
ಸಾವಿರ ಸಾವಿರ ಜನರ ಹತ್ಯೆ
2 ವರ್ಷಗಳ ಹಿಂದೆ ಮ್ಯಾನ್ಮಾರ್ ಅಕ್ಷರಶಃ ನರಕವಾಗಿತ್ತು. ಸಾವಿರಾರು ಜನರು ಪ್ರತಿಭಟನೆ ವೇಳೆ ಹತ್ಯೆಯಾಗಿದ್ರು. ಮ್ಯಾನ್ಮಾರ್ ಸೇನೆ ಪ್ರತಿಭಟನೆ ನಡೆಸುತ್ತಿದ್ದವರನ್ನು ಕೊಂದು ಹಾಕಿದ್ದ ಆರೋಪ ಕೇಳಿಬಂದಿತ್ತು. ಈ ರಿವೇಂಜ್‌ಗೆ ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ಬೆಂಕಿ ಇಟ್ಟು 13 ಭದ್ರತಾ ಸಿಬ್ಬಂದಿಯನ್ನ ಕೊಂದಿದ್ದರು. ಸಾವಿರಾರು ಪೊಲೀಸರು ಮ್ಯಾನ್ಮಾರ್‌ನಿಂದ ಓಡಿ ಹೋಗಿದ್ದ ಘಟನೆಯೂ ನಡೆದಿತ್ತು. 1 ಲಕ್ಷಕ್ಕೂ ಹೆಚ್ಚು ಶಿಕ್ಷಕರನ್ನ ಸಸ್ಪೆಂಡ್ ಮಾಡಿ ಅಂದಿನ ಸಮಯಕ್ಕೆ ಮ್ಯಾನ್ಮಾರ್ ಸೇನಾ ಸರ್ಕಾರ ಸದ್ದು ಮಾಡಿತ್ತು. ಇಷ್ಟೆಲ್ಲಾ ಘಟನೆ ಮಧ್ಯೆ ಇದೀಗ ಸೂಕಿಗೆ ಕ್ಷಮಾದಾನ ನೀಡಲಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ತುರ್ತು ಪರಿಸ್ಥಿತಿ ಅವಧಿ ವಿಸ್ತರಣೆ
ಅತ್ತ ಆಂಗ್ ಸಾನ್ ಸೂಕಿಗೆ ಕ್ಷಮಾದಾನ ಸಿಕ್ಕಿರುವ ವಿಚಾರದ ನಡುವೆ ಮ್ಯಾನ್ಮಾರ್‌ನ ಸೇನಾ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಅವಧಿ ವಿಸ್ತರಿಸಿದೆ. ಈ ಮೂಲಕ ಚುನಾವಣೆ ನಡೆಸಿ ಪ್ರಜಾಪ್ರಭುತ್ವ ಸರ್ಕಾರ ಮರುಸ್ಥಾಪಿಸುವ ಕಾರ್ಯ ವಿಳಂಬವಾಗಲಿದೆ ಎಂಬ ಸೂಚನೆ ಕೂಡ ಕೊಟ್ಟಿದೆ. ವಿಶೇಷ ಎಂಬಂತೆ ಇದೇ ಹೊತ್ತಲ್ಲಿ ಆಂಗ್ ಸಾನ್ ಸೂಕಿ ವಿಚಾರದಲ್ಲಿ ಮೃದು ನಿಲುವು ತಳೆದಿರುವ ಸೇನಾ ಸರ್ಕಾರ, ಬೇರೆ ಏನೋ ರಣತಂತ್ರ ರೂಪಿಸಿದಂತೆ ಕಾಣುತ್ತಿದೆ. ಎರಡೂವರೆ ವರ್ಷದ ಹಿಂದೆ ಚುನಾಯಿತ ಸರ್ಕಾರವನ್ನು ಪದಚ್ಯುತಗೊಳಿಸಿ ಸೇನೆ ಅಧಿಕಾರ ಕೈವಶ ಮಾಡಿಕೊಂಡಿತ್ತು.

ಹೀಗೆ ಸ್ಥಳೀಯ ಸುದ್ದಿವಾಹಿನಿಗಳು ವರದಿ ಪ್ರಕಟಿಸಿರುವ ಪ್ರಕಾರ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಮಂಡಳಿಯ ಸಭೆ ಬಳಿಕ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣೆಗಾಗಿ ಸಿದ್ಧತೆ ನಡೆಸಲು ಸಮಯ ಬೇಕಿರುವ ಕಾರಣ ಅವಧಿ ವಿಸ್ತರಿಸಲಾಗುತ್ತಿದೆ ಎಂದು ಕಾರಣವನ್ನು ನೀಡಿದೆ ಸೇನಾ ಸರ್ಕಾರ. ಈ ಮೂಲಕ ಮ್ಯಾನ್ಮಾರ್ ಚುನಾವಣೆ ಮತ್ತಷ್ಟು ವಿಳಂಬವಾಗಿ, ಆಂಗ್ ಸಾನ್ ಸೂಕಿ ಬಿಡುಗಡೆಯೂ ಮತ್ತಷ್ಟು ತಡವಾಗಬಹುದು. ಈ ಎರಡೂ ಬೆಳವಣಿಗೆ ಜಗತ್ತಿನ ಗಮನ ಸೆಳೆಯುತ್ತಿದೆ.












Click it and Unblock the Notifications