ಬಾಂಗ್ಲಾದೇಶದ ಮತ್ತೆ ಪ್ರಕ್ಷುಬ್ಧ: ಭಾರತ ವಿರೋಧಿ ನಾಯಕ ಸಾವಿನ ಬೆನ್ನಲ್ಲೇ ಢಾಕಾದಲ್ಲಿ ಹಿಂಸಾಚಾರ,ಹಲ್ಲೆ!
ಢಾಕಾ: ಬಾಂಗ್ಲಾದೇಶಕ್ಕೂ ಶಾಂತಿಗೂ ಎಣ್ಣೆ-ಸೀಗೆಕಾಯಿ ಸಂಬಂಧ. ದಿನಕ್ಕೊಂದು ವಿವಾದ, ದಿನಕ್ಕೊಂದು ಸಂಘರ್ಷ, ದಿನಕ್ಕೊಂದು ಹಿಂಸಾಚಾರ ಬಾಂಗ್ಲಾದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಇದೀಗ ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವು, ಹೊಸ ಹಿಂಸಾತ್ಮಕ ಸಂಘರ್ಷಕ್ಕೆ ದಾರಿಮಾಡಿಕೊಟ್ಟಿದೆ. ರಾಜಧಾನಿ ಢಾಕಾದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿದ್ದು, ಎಲ್ಲೆಡೆ ಆಕ್ರೋಶ ಕಂಡುಬರುತ್ತಿದೆ.
ಬಾಂಗ್ಲಾದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಆಡಳಿತದ ವಿರುದ್ಧ ಚಳವಳಿಯಲ್ಲಿ ಹಾಗೂ ಭಾರತದ ವಿರೋಧಿ ವಾಕ್ಚಾತುರ್ಯಕ್ಕೆ ಹೆಸರುವಾಸಿಯಾಗಿದ್ದ ಇಂಕ್ವಿಲಾಬ್ ಮಂಚ್ ಸಂಚಾಲಕ ಷರೀಫ್ ಉಸ್ಮಾನ್ ಸಿಂಗಾಪುರದಲ್ಲಿ ಸಾವನ್ನಪ್ಪಿದ್ದು, ಸಾವಿನ ಬಳಿಕ ಇದೀಗ ಮತ್ತೆ ಬಾಂಗ್ಲಾದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. 2024ರ ಡಿ.12ರಂದು ಬಾಂಗ್ಲಾದೇಶ ವಿದ್ಯಾರ್ಥಿ ದಂಗೆಯ ನೇತೃತ್ವವಹಿಸಿದ್ದ ಷರೀಫ್ ಉಸ್ಮಾನ್ ಹಾದಿ ಅವರ ಮೇಲೆ, ಕಳೆದ ವಾರ ಮುಸುಕುಧಾರಿಗಳ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು. ಷರೀಫ್ ಉಸ್ಮಾನ್ ಹಾದಿಅವರಿಗೆ ಸಿಂಗಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಸಿಂಗಾಪುರ ಸರ್ಕಾರದ ಮೂಲಗಳು ಖಚಿತಪಡಿಸಿವೆ.

32 ವರ್ಷದ ಯುವ ನಾಯಕನ ಸಾವಿನ ಸುದ್ದಿ ತಿಳಿದ ಕೂಡಲೇ, ಅವರ ಹಂತಕರನ್ನು ಬಂಧಿಸಬೇಕೆಂದು ಒತ್ತಾಯಿಸಿ ಸಾವಿರಾರು ಪ್ರತಿಭಟನಾಕಾರರು ಢಾಕಾ ಮತ್ತು ಬಾಂಗ್ಲಾದೇಶದ ಇತರ ಭಾಗಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಕಳೆದ ವರ್ಷದ ಜುಲೈನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಹಾದಿ ಮುಂಚೂಣಿಯ ನಾಯಕರಾಗಿದ್ದರು.
ಇನ್ನೂ ಪ್ರತಿಭಟನಾಕಾರರು ಪ್ರಥಮ್ ಅಲೋ (ದೇಶದ ಅತಿದೊಡ್ಡ ಬಂಗಾಳಿ ಪತ್ರಿಕೆ) ಮತ್ತು ಡೈಲಿ ಸ್ಟಾರ್ ಕಚೇರಿಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದ್ದಾರೆ. ಅಷ್ಟೇ ಅಲ್ಲದೇ ರಾಜ್‌ಶಾಹಿಯಲ್ಲಿರುವ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಕಚೇರಿಗೂ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ ಹಿಂಸಾಚಾರ ಹತ್ತಿಕ್ಕಲು ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಢಾಕಾದಲ್ಲಿ ರಾಜ್ಯಮಟ್ಟದ ಸಭೆ ಕರೆದಿದ್ದಾರೆ ಎಂದು ತಿಳಿದು ಬಂದಿದೆ.
ಷರೀಫ್ ಉಸ್ಮಾನ್ ಹಾದಿ ಅವರು ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವಿದ್ಯಾರ್ಥಿ ಹೋರಾಟಕ್ಕೆ ನಾಯಕತ್ವ ನೀಡಿದ್ದ ಅವರು, ತಮ್ಮ ಅನೇಕ ಭಾಷಣಗಳಲಿ ಭಾರತವನ್ನ ಕುಟುವಾಗಿ ಟೀಕಿಸುತ್ತಿದ್ದರು. ಇನ್ನೂ ನಿನ್ನೆ ತಡರಾತ್ರಿ ಚಿತ್ತಗಾಂಗ್‌ನಲ್ಲಿ ನಡೆದ ಹಿಂಸಾಚಾರದ ವೇಳೆ ಭಾರತ ಹಾಗೂ ಅವಾಮಿ ಲೀಗ್ ವಿರೋಧಿ ಘೋಷಣೆಗಳು ಕೇಳಿಬಂದವು. ಭಾರತೀಯ ಹೈಕಮಿಷನ್ ಕಚೇರಿಯ ಹೊರಗೂ ಪ್ರತಿಭಟಿಸಿ ಕಲ್ಲು ತೂರಾಟ ನಡೆಸಿದ್ದರು.
ಬೆಂಕಿಗೆ ಆಹುತಿಯಾದ ಕಚೇರಿಯಿಂದ 30 ಪತ್ರಕರ್ತರ ರಕ್ಷಣೆ
ಬಾಂಗ್ಲಾದೇಶದ ಯುವ ನಾಯಕ 32 ವರ್ಷದ ಶರೀಫ್ ಉಸ್ಮಾನ್ ಹಾದಿ ಅವರ ಸಾವು ದೇಶದಲ್ಲಿ ಹೊಸ ಪ್ರತಿಭಟನೆಗಳಿಗೆ ನಾಂದಿ ಹಾಡಿದೆ. ರಾಜಧಾನಿಯ ಚೌಕದಲ್ಲಿ ನೂರಾರು ಹಾದಿ ಬೆಂಬಲಿಗರು ಜಮಾಯಿಸಿ ಪ್ರತಿಭಟಿಸಿದರು, ಕೆಲವರು ಬಾಂಗ್ಲಾದೇಶದ ಪತ್ರಿಕೆಗಳಾದ 'ಪ್ರೋಥೋಮ್ ಅಲೋ' ಮತ್ತು 'ದಿ ಡೈಲಿ ಸ್ಟಾರ್' ಕಚೇರಿಗಳನ್ನು ಧ್ವಂಸಗೊಳಿಸಿದರು. ಬಂಗಾಳಿ ಭಾಷೆಯ ದಿನಪತ್ರಿಕೆ ಪ್ರೋಥೋಮ್ ಅಲೋ ಮೇಲೆ ದಾಳಿಯೊಂದಿಗೆ ಇದು ಪ್ರಾರಂಭವಾಯಿತು .
ನೂರು ಪ್ರತಿಭಟನಾಕಾರರು ರಾತ್ರಿ 11 ಗಂಟೆ ಸುಮಾರಿಗೆ ಪ್ರೋಥೋಮ್ ಅಲೋ ಕಚೇರಿಯನ್ನು ತಲುಪಿದರು ಮತ್ತು ನಂತರ ಕಟ್ಟಡವನ್ನು ಸುತ್ತುವರೆದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು, ಪ್ರೋಥೋಮ್ ಅಲೋ ಕಟ್ಟಡದ ಧ್ವಂಸವನ್ನು ಅನುಸರಿಸಿ ಪ್ರತಿಭಟನಾಕಾರರು ದಿ ಡೈಲಿ ಸ್ಟಾರ್ ಕಚೇರಿಗೆ ಬೆಂಕಿ ಹಚ್ಚಿದರು ಎಂದು ಹೇಳಿದರು. ಹೊರಗಿನಿಂದ ಬಂದ ಫೋನ್ ಕರೆಯು ಸಿಬ್ಬಂದಿಗೆ ದಿ ಡೈಲಿ ಸ್ಟಾರ್ ಆವರಣದ ಕಡೆಗೆ ಜನಸಮೂಹ ಚಲಿಸುತ್ತಿದೆ ಎಂದು ಎಚ್ಚರಿಸಿದೆ ಎಂದು ಪತ್ರಕರ್ತರೊಬ್ಬರು ತಿಳಿಸಿದರು. ಸುದ್ದಿ ಕೊಠಡಿಯ ಸಿಬ್ಬಂದಿ ಕೆಳಗಡೆಗೆ ಸ್ಥಳಾಂತರಗೊಳ್ಳಲು ಪ್ರಯತ್ನಿಸಿದರು ಆದರೆ ಗುಂಪು ಕಚೇರಿ ಕಟ್ಟಡದ ನೆಲ ಮತ್ತು ಮೊದಲ ಮಹಡಿಗಳನ್ನು ಧ್ವಂಸಗೊಳಿಸಲು ಪ್ರಾರಂಭಿಸಿತು, ನಂತರ ಅದಕ್ಕೆ ಬೆಂಕಿ ಹಚ್ಚಿತು.












Click it and Unblock the Notifications