ಭಾರತದ ಗಣ್ಯರೊಬ್ಬರ ಹತ್ಯೆಗೆ ಮುಂದಾಗಿದ್ದ ಐಸಿಸ್ ಉಗ್ರ ರಷ್ಯಾದಲ್ಲಿ ಬಂಧನ
ಮಾಸ್ಕೋ, ಆಗಸ್ಟ್ 22: ಭಾರತದ ನಾಯಕರೊಬ್ಬರ ವಿರುದ್ಧ ಭಯೋತ್ಪಾದಕ ದಾಳಿಗೆ ಸಂಚು ರೂಪಿಸುತ್ತಿದ್ದ ಐಸಿಸ್ ಭಯೋತ್ಪಾದಕ ಗುಂಪಿನ ಸದಸ್ಯ ಆತ್ಮಹತ್ಯಾ ಬಾಂಬರ್ ಅನ್ನು ತನ್ನ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವಿಸ್ (ಎಫ್‌ಎಸ್‌ಬಿ) ಸೋಮವಾರ ಹೇಳಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ರಷ್ಯಾದ ಫೆಡರಲ್ ಸೆಕ್ಯೂರಿಟಿ ಸರ್ವಿಸ್ (ಎಫ್‌ಎಸ್‌ಬಿ) ರಷ್ಯಾದಲ್ಲಿ ನಿಷೇಧಿತ ಇಸ್ಲಾಮಿಕ್ ಸ್ಟೇಟ್ ಅಂತರಾಷ್ಟ್ರೀಯ ಭಯೋತ್ಪಾದಕ ಸಂಘಟನೆಯ ಸದಸ್ಯರನ್ನು ಗುರುತಿಸಿ ಬಂಧಿಸಿದೆ. ಅವರು ಮಧ್ಯ ಏಷ್ಯಾ ಪ್ರದೇಶದ ದೇಶವೊಂದರ ಸ್ಥಳೀಯರು ಎನ್ನಲಾಗಿದೆ. ಆದರೆ ಎಲ್ಲಿಯವರು ಎಂದು ನಿಖರವಾಗಿ ಗೊತ್ತಾಗಿಲ್ಲ. ಅವರು ಭಾರತದ ಉನ್ನತ ಮೂಲದ ಪ್ರತಿನಿಧಿಗಳ ವಿರುದ್ಧ ಆತ್ಮಾಹುತಿ ದಾಳಿಗೆ ಮುಂದಾಗಿದ್ದರು, ಭಯೋತ್ಪಾದಕ ಕೃತ್ಯವನ್ನು ಎಸಗಲು ಯೋಜಿಸಿದ್ದರು ಎಂದು ಎಫ್‌ಎಸ್‌ಬಿ ಪ್ರಾಧಿಕಾರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ರಷ್ಯಾದಲ್ಲಿ ಬಂಧಿತರನ್ನು ಐಸಿಸ್ ಟರ್ಕಿಯಲ್ಲಿ ಆತ್ಮಹತ್ಯಾ ಬಾಂಬರ್ ಆಗಿ ನೇಮಿಸಿಕೊಂಡಿತ್ತು. ಈ ಪ್ರಕರಣವು ಇನ್ನೂ ಹೆಚ್ಚಿನ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ. ISIS ಮತ್ತು ಅದರ ಎಲ್ಲಾ ಸಂಬಂಧಿತ ಸಂಘಗಳನ್ನು ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲಾಗಿದೆ. ಇದನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಮೊದಲ ಪಟ್ಟಿಯಲ್ಲೇ ಕೇಂದ್ರ ಸರ್ಕಾರವು ಸೇರಿಸಿದೆ.

ಕೇಂದ್ರ ಗೃಹ ಸಚಿವಾಲಯದ ಪ್ರಕಾರ, ಐಸಿಸ್ ತನ್ನ ಸಿದ್ಧಾಂತವನ್ನು ಪ್ರಚಾರ ಮಾಡಲು ವಿವಿಧ ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸುತ್ತಿದೆ. ಈ ನಿಟ್ಟಿನಲ್ಲಿ ಸೈಬರ್ ಸ್ಪೇಸ್ ಅನ್ನು ಸಂಬಂಧಪಟ್ಟ ಏಜೆನ್ಸಿಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಮತ್ತು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.












Click it and Unblock the Notifications