3ನೇ ಮಹಾಯುದ್ಧ: ರಷ್ಯಾದಲ್ಲಿ ಈವರೆಗೆ 20,000 ಮಂದಿ ಸಾವು?
ರಷ್ಯಾ: ನ್ಯಾಟೋ ಪಡೆಗಳ ವಿರುದ್ಧದ ಸೇಡಿಗೆ ಶುರುವಾದ ರಷ್ಯಾ ಮತ್ತು ಉಕ್ರೇನ್ ಯುದ್ಧದಲ್ಲಿ ಲಕ್ಷಾಂತರ ಜನ ಜೀವ ಕಳೆದುಕೊಂಡಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಆದರೆ ಈಗ ಅಮೆರಿಕದ ಶ್ವೇತಭವನ ರಷ್ಯಾದಲ್ಲಿ ಸತ್ತವರ ಸಂಖ್ಯೆ ಅಂದಾಜು ಮಾಡಿದ್ದು, ಅದರ ಲೆಕ್ಕ ತಲೆತಿರುಗಿಸುತ್ತಿದೆ. 20,000ಕ್ಕೂ ಹೆಚ್ಚು ಜನ ರಷ್ಯಾದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಕಂಪ್ಲೀಟ್ ಮಾಹಿತಿ ಇಲ್ಲಿದೆ.
ರಷ್ಯಾ & ಉಕ್ರೇನ್ ಜಗಳ ಇನ್ನಷ್ಟು ಹೆಣಗಳನ್ನು ನೋಡದೆ ತಣ್ಣಗಾಗುವ ಲಕ್ಷಣ ಕಾಣಿಸುತ್ತಿಲ್ಲ. ಇದೇ ಸಂದರ್ಭದಲ್ಲಿ ಸೇಡಿಗೆ ಸೇಡು ತೀರಿಸಿಕೊಳ್ಳಲು ಉಕ್ರೇನ್ ಅಖಾಡಕ್ಕೆ ಇಳಿದಿದೆ. ರಷ್ಯಾ ಗಡಿಯಲ್ಲಿ ಭೀಕರ ದಾಳಿ ನಡೆಸುತ್ತಿದೆ ಉಕ್ರೇನ್ ಸೇನೆ. ಹೀಗೆ ಉಕ್ರೇನ್ ನಡೆಸಿದ ಶೆಲ್ ದಾಳಿ ಮತ್ತು ಮಿಸೈಲ್ ಅಟ್ಯಾಕ್ ಪರಿಣಾಮ ರಷ್ಯಾ ಗಡಿ ಭಾಗದಲ್ಲಿ ರೈಲು ಹಳಿ ತಪ್ಪಿದೆ ಎನ್ನಲಾಗಿದೆ. ಈ ಘಟನೆಯಲ್ಲಿ 35 ಜನ ಗಂಭೀರವಾಗಿ ಗಾಯಗೊಂಡಿದ್ದು, ಸಾವಿನ ಸಂಖ್ಯೆ ವರದಿಯಾಗಿಲ್ಲ. ಆದರೆ ಅದಕ್ಕಿಂತಲೂ ಭಯಾನಕ ಮಾಹಿತಿಯನ್ನ ಹೊರಹಾಕಿದೆ ದೊಡ್ಡಣ್ಣ ಅಮೆರಿಕ.

ರಷ್ಯಾದಲ್ಲಿ 20 ಸಾವಿರ ಜನ ಮೃತ್ಯು?
ಹೌದು, ಕಳೆದ 1 ವರ್ಷದಿಂದ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ನಡೆಯುತ್ತಲೇ ಇದೆ. ಯುದ್ಧ ಇಂದು ನಿಲ್ಲುತ್ತೆ, ನಾಳೆ ನಿಲ್ಲುತ್ತೆ ಅಂತಾನೆ ಎಲ್ಲರೂ ಅಂದುಕೊಳ್ಳುತ್ತಿದ್ದಾರೆ. ಆದರೆ 1 ವರ್ಷ ಕಳೆದು 2ನೇ ವರ್ಷಕ್ಕೆ ರಷ್ಯಾ & ಉಕ್ರೇನ್ ಯುದ್ಧ ಕಾಲಿಟ್ಟಿದೆ. ಆದ್ರೂ ಎರಡೂ ರಾಷ್ಟ್ರಗಳು ಸಂಧಾನ ನಡೆಸಿ ಯುದ್ಧ ನಿಲ್ಲಿಸ್ತಿಲ್ಲ. ಪರಿಣಾಮ ಎರಡೂ ಕಡೆ ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಈವರೆಗೆ ಎರಡೂ ಕಡೆ ಲಕ್ಷಾಂತರ ಜನರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅದರಲ್ಲೂ ರಷ್ಯಾ ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ ಎನ್ನುತ್ತಿದೆ ಅಮೆರಿಕ. ಹಾಗೇ 1 ಲಕ್ಷಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ರಷ್ಯಾ ಗಡಿಯಲ್ಲಿ ಭೀಕರ ದಾಳಿ
ಉಕ್ರೇನ್ ತನ್ನ ಬಳಿ ಉಳಿದುಕೊಂಡಿರುವ ಅಲ್ಪಸ್ವಲ್ಪ ಶಸ್ತ್ರಾಸ್ತ್ರ ಬಳಸಿ ರಷ್ಯಾ ವಿರುದ್ಧ ಹೋರಾಟ ನಡೆಸುತ್ತಿದೆ. ರಷ್ಯಾ ವಿರುದ್ಧ ಶೆಲ್ ದಾಳಿ ಆರಂಭಿಸಿರುವ ಉಕ್ರೇನ್, ರಷ್ಯಾದ ಗಡಿ ಭಾಗದಲ್ಲಿರುವ ಹಳ್ಳಿಗಳ ಮೇಲೆ ಭೀಕರ ದಾಳಿ ನಡೆಸಿದೆ. ಉಕ್ರೇನ್ ದಾಳಿ ಅದೆಷ್ಟು ಪ್ರಬಲವಾಗಿ ಇದೆ ಎಂದರೆ, ರಷ್ಯಾ ಗಡಿಯಲ್ಲಿರುವ ಹಲವು ಹಳ್ಳಿಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಂದು ಕೂಡ ಅದೇ ರೀತಿಯ ಭೀಕರ ದಾಳಿ ನಡೆಸಿ, ರೈಲು ಹಳಿ ಉಡಾಯಿಸಿದೆ ಉಕ್ರೇನ್. ಆದರೆ ದುರಾದೃಷ್ಟಕ್ಕೆ ಅದೇ ಮಾರ್ಗವಾಗಿ ಬರುತ್ತಿದ್ದ ರಷ್ಯಾದ ಗಡಿ ಭಾಗದಲ್ಲಿನ ರೈಲು ಹಳಿತಪ್ಪಿದೆ.

ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ
ಕಳೆದ 1 ವರ್ಷದಿಂದ ರಷ್ಯಾ ಗಡಿಯಲ್ಲಿ ನೆಮ್ಮದಿಯೇ ಇಲ್ಲ. ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಮರುಕ್ಷಣವೇ ಇಲ್ಲಿನ ಜನರ ನೆಮ್ಮದಿ ಹಾರಿಹೋಗಿದೆ. ಪರಿಣಾಮ ಅಲ್ಲಿನ ಜನರು ಕಣ್ಣುಮುಚ್ಚಲು ಹಿಂದೆ-ಮುಂದೆ ಯೋಚಿಸುವ ಪರಿಸ್ಥಿತಿ ಇದೆ. ಯಾವ ಕ್ಷಣದಲ್ಲಿ ಏನಾಗುತ್ತೋ, ಯಾವ ಮಿಸೈಲ್ ಬಂದು ಬಡಿಯುತ್ತೋ ಎಂಬ ಭಯ ಕಾಡುತ್ತಿದೆ. ಈ ಹೊತ್ತಲ್ಲೇ ರಷ್ಯಾ ನೆಲದ ಮೇಲೆ ಭೀಕರ ದಾಳಿ ನಡೆಸಲಾಗುತ್ತಿದೆ. ರಷ್ಯಾ ಸೇನೆ ಕೂಡ ಈಗ ಮತ್ತೆ ಉಕ್ರೇನ್ ವಿರುದ್ಧ ಪ್ರತಿದಾಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಈ ಮೂಲಕ ಇನ್ನಷ್ಟು ಅಮಾಯಕರ ಸಾವು ಗ್ಯಾರಂಟಿ.
ಕ್ಷಿಪಣಿಗಳ ಮಳೆ ಸುರಿಸಿದ ರಷ್ಯಾ
ಮೊನ್ನೆ ಮತ್ತೊಂದು ರೌಂಡ್ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಲು ರಷ್ಯಾ ಮುಂದಾಗಿತ್ತು. ಅದರಲ್ಲೂ ರಷ್ಯಾ ಟಾರ್ಗೆಟ್ ಉಕ್ರೇನ್ ರಾಜಧಾನಿ. ಹೀಗೆ ರಷ್ಯಾ ಉಡಾಯಿಸಿರುವ ಕ್ಷಿಪಣಿಗಳ ಪೈಕಿ ಎರಡು ಕ್ಷಿಪಣಿಗಳು ಕೀವ್‌ನ ದಕ್ಷಿಣ ಉಮಾನ್ ನಗರದ ಮೇಲೆ ಬಿದ್ದಿದೆ. ಅಲ್ಲಿರುವ 9 ಮಹಡಿ ಅಪಾರ್ಟ್‌ಮೆಂಟ್‌ಗೆ ತಗುಲಿ ಸುಮಾರು 25ಕ್ಕೂ ಹೆಚ್ಚು ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ರಷ್ಯಾ ದಾಳಿ ನಡೆದ ಮರುದಿನವೇ ಉಕ್ರೇನ್ ಪ್ರತಿದಾಳಿ ಆರಂಭಿಸಿತ್ತು. ಅದರ ಮುಂದವರಿದ ಕ್ರಮವಾಗಿ ಮತ್ತೆ ರಷ್ಯಾದ ಗಡಿಯಲ್ಲಿ ದಾಳಿ ಮಾಡುತ್ತಿದೆ ಉಕ್ರೇನ್ ಸೇನೆ.












Click it and Unblock the Notifications