ಮೊಸಳೆ ಬಂತು ಮೊಸಳೆ: ಚಂಡಮಾರುತದ ನಂತರ ಶುರುವಾಯ್ತು ಹೊಸ ಭಯ!
ಮೊಸಳೆ ದಿಢೀರ್ ನಿಮ್ಮ ಮನೆಗೆ ಬಂದರೆ ಏನಾಬಹುದು ಹೇಳಿ? ಒಂದೋ ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಳ್ಳಬೇಕು, ಇಲ್ಲ ಮೊಸಳೆಯನ್ನ ಹಿಡಿದು ಹಾಕಿ ಧೈರ್ಯ ತೋರಿಸಿ ಧೀರ ಅನ್ನಿಸಿಕೊಳ್ಳಬೇಕು. ಆದರೆ ಇಡೀ ಊರಿಗೆ ಊರೇ ಮೊಸಳೆ ಮಯ ಆಗಿ, ಮೊಸಳೆಗಳ ಹಿಂಡು ಮನೆಗೆ ನುಗ್ಗಿದರೆ ಮುಂದಿನ ಕಥೆ ಏನು? ಅಷ್ಟಕ್ಕೂ ಇದು ಯಾವುದೋ ಸಿನಿಮಾ ಸೀನ್ ಅಲ್ಲ, ಅಮೆರಿಕದ ಕರಾವಳಿ ರಾಜ್ಯ ಅಂತಾನೆ ಕರೆಯಲ್ಪಡುವ ಫ್ಲೊರಿಡಾದ ಪರಿಸ್ಥಿತಿ!
ಫ್ಲೊರಿಡಾ ರಾಜ್ಯದಲ್ಲಿ 2 ದಿನಗಳ ಹಿಂದಷ್ಟೇ, 'ಮಿಲ್ಟನ್' ಮಹಾ ಚಂಡಮಾರುತ ಬಂದು ಅಪ್ಪಳಿಸಿತ್ತು. ಈ ರೀತಿ, ಭೀಕರ ಚಂಡಮಾರುತ ನೂರಾರು ಕಿಲೋ ಮೀಟರ್ ಸ್ಪೀಡ್ ಆಗಿ ಬಂದು ಅಪ್ಪಳಿಸಿದ್ದ ಪರಿಣಾಮ ಹಲವು ತೊಂದರೆ ಎದುರಾಗಿವೆ. ಅದರಲ್ಲೂ ಚಂಡಮಾರುತ ಅಪ್ಪಳಿಸಿದ್ದ ಕಾರಣಕ್ಕೆ ಭಾರಿ ಪ್ರಮಾಣದ ಮಳೆ ಕೂಡ ಫ್ಲೊರಿಡಾ ರಾಜ್ಯದಲ್ಲಿ ಸುರಿದಿದ್ದು, ಈ ಹಿನ್ನೆಲೆಯಲ್ಲಿ ಪ್ರವಾಹ ಕೂಡ ಉಂಟಾಗಿದೆ. ಇಷ್ಟೆಲ್ಲಾ ಸಮಸ್ಯೆ ನಡುವೆ ಮೊಸಳೆಗಳು ಕೂಡ ಮನೆಗಳಿಗೆ ದಾಳಿ ಮಾಡುತ್ತಿವೆಯಂತೆ! ಅಲ್ಲದೆ ಹಾವುಗಳ ಕಾಟ ಕೂಡ ಹೆಚ್ಚಾಗಿದೆ.

ಮೊಸಳೆ & ಹಾವುಗಳ ಹಾವಳಿ ಜೋರು!
ಫ್ಲೊರಿಡಾ ರಾಜ್ಯದಲ್ಲಿ 'ಮಿಲ್ಟನ್' ಮಹಾ ಚಂಡಮಾರುತಕ್ಕೆ ಹೆದರಿ ಜನರು ಓಡಿ ಹೋಗಿ ಜೀವ ಉಳಿಸಿಕೊಂಡಿದ್ದರು. ಇದೀಗ ಚಂಡಮಾರುತ ಕಾಣೆಯಾದ ನಂತರ ಜನರು ತಮ್ಮ, ತಮ್ಮ ಮನೆಗಳಿಗೆ ವಾಪಸ್ ಬರುತ್ತಿದ್ದಾರೆ. ಇಂತಹ ಸಮಯದಲ್ಲೇ ಹೊಸ ಸಮಸ್ಯೆ ಕೂಡ ಶುರುವಾಗಿದೆ. ಅದು ಏನಂದ್ರೆ ಫ್ಲೊರಿಡಾ ರಾಜ್ಯದಲ್ಲಿ ಮನೆಗಳಿಗೆ ಮೊಸಳೆ & ಹಾವುಗಳು ಈಗ ನುಗ್ಗುತ್ತಿವೆ ಎನ್ನಲಾಗಿದೆ. ಹೀಗಾಗಿ ಜನರಿಗೆ ಕೂಡ ಈ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದು, ಈಗ ಜನರು ತಮ್ಮ ತಮ್ಮ ಮನೆಗಳ ಒಳಗೆ ಮೊಸಳೆ & ಹಾವುಗಳನ್ನ ಹುಡುಕುವ ಕೆಲಸಕ್ಕೆ ಕೂಡ ಕೈಹಾಕಿದ್ದಾರೆ.
ಮೊಸಳೆ ಹಿಡಿಯಲು ಕಾರ್ಯಾಚರಣೆ
ಈಗ 'ಮಿಲ್ಟನ್' ಚಂಡಮಾರುತದ ಅಬ್ಬರದ ಕಾರಣಕ್ಕೆ ಸಾವಿನ ಸಂಖ್ಯೆ ಕೂಡ ಹೆಚ್ಚುತ್ತಿದೆ. 'ಮಿಲ್ಟನ್' ಮಹಾ ಚಂಡಮಾರುತ ಫ್ಲೊರಿಡಾ ರಾಜ್ಯಕ್ಕೆ ಅಪ್ಪಳಿಸುವ ಬಗ್ಗೆ ಅಮೆರಿಕದಲ್ಲಿ ಭಾರಿ ಮುನ್ನೆಚ್ಚರಿಕೆ ಕೈಗೊಳ್ಳಲಾಗಿತ್ತು. ಅಮೆರಿಕದ ಸರ್ಕಾರ ಹಾಗೂ ಫ್ಲೊರಿಡಾ ರಾಜ್ಯದ ಆಡಳಿತ ಕ್ರಮ ಕೈಗೊಂಡಿದ್ದರೂ ಈವರೆಗೂ ಸುಮಾರು 12 ಜನರನ್ನು ಬಲಿ ಪಡೆದಿದೆ ಈ 'ಮಿಲ್ಟನ್' ಮಹಾ ಚಂಡಮಾರುತ ಎನ್ನಲಾಗಿದೆ. ಮತ್ತೊಂದು ಕಡೆ ಭೀಕರ ಗಾಳಿಯಲ್ಲಿ ನಾಪತ್ತೆಯಾದ ಜನರ ಸಂಖ್ಯೆ ಕೂಡ ಹೆಚ್ಚಾಗಿದೆ. ಹೀಗಾಗಿ ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗುವ ಭಯ ಕಾಡುತ್ತಿದೆ. ಈಗಾಗಲೇ ಈ ವಿಚಾರದಲ್ಲಿ ಸ್ಥಳೀಯ ಆಡಳಿತ ಅಲರ್ಟ್ ಆಗಿದ್ದು ಮೊಸಳೆಗಳನ್ನ ಹಿಡಿಯಲು ಮುಂದಾಗಿದೆ.












Click it and Unblock the Notifications