ಮುಳ್ಳನ್ನು ಮುಳ್ಳಿಂದಲೇ ತೆಗೆಯಲು ಮುಂದಾದ ರಷ್ಯಾ ಅಧ್ಯಕ್ಷ?
ರಷ್ಯಾ ಪಾಲಿಗೆ ಉಕ್ರೇನ್ ಮುಳ್ಳಿನ ರೀತಿ ಕಾಟ ಕೊಡುತ್ತಿದೆ. ಒಂದು ಕಡೆ ಅಮೆರಿಕ ಜೊತೆ ಸೇರಿ ನಮಗೆ ಆತಂಕ ಹುಟ್ಟಿಸಿದೆ ಎಂದು ರಷ್ಯಾ ಆರೋಪಿಸುತ್ತಿದೆ. ಇದರ ಜೊತೆ ಯುದ್ಧ ಆರಂಭವಾದ ಬಳಿಕ ಹಲವು ಬಾರಿ ರಷ್ಯಾ ಮೇಲೆ ಉಕ್ರೇನ್ ಡ್ರೋನ್ ದಾಳಿಗೆ ಯತ್ನಿಸಿದೆ. ಹೀಗೆ ರಷ್ಯಾ ಸರಿಯಾಗಿ ಏಟು ಕೊಡುತ್ತಿದ್ದರೂ ಉಕ್ರೇನ್ ಪ್ರತ್ಯುತ್ತರ ನೀಡುತ್ತಿದೆ. ಹೀಗಾಗಿ ಉಕ್ರೇನ್ ವಿರುದ್ಧ ರಷ್ಯಾ ತಂತ್ರ ಹೂಡಿ ಮುಳ್ಳನ್ನ ಮುಳ್ಳಿಂದ ತೆಗೆಯಲು ಮುಂದಾಗಿದೆ.
ರಷ್ಯಾ ಈಗಾಗಲೇ ಉಕ್ರೇನ್‌ನ ಪ್ರಮುಖ ನಗರ ಹಾಗೂ ಪ್ರಮುಖ ರಾಜ್ಯಗಳ ಮೇಲೆ ಹಿಡಿತ ಸಾಧಿಸಿದೆ. ಹೀಗಾಗಿ ತನ್ನ ಹಿಡಿತಕ್ಕೆ ಸಿಕ್ಕಿರುವ ಉಕ್ರೇನ್‌ನ ಜಾಗಗಳಲ್ಲಿ ತಮಗೆ ಬೇಕಾದವರ ಮತ್ತು ಮಾತು ಕೇಳುವವರಿಗೆ ಅಧಿಕಾರ ಕೊಡಿಸಲು ರಷ್ಯಾ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ಕಾರಣಕ್ಕೆ ರಷ್ಯಾ 1 ವರ್ಷದ ಹಿಂದೆ ಅತಿಕ್ರಮಿಸಿಕೊಂಡಿದ್ದ ಉಕ್ರೇನ್‌ನ ವಿವಿಧ ಪ್ರಾಂತ್ಯಗಳಲ್ಲಿ ತನ್ನ ಹಿಡಿತವನ್ನು ಮತ್ತಷ್ಟು ಬಲಗೊಳಿಸಲು ಸಜ್ಜಾಗಿದೆ. ರಷ್ಯಾ ಸೇನೆ ಮತ್ತು ಅಧಿಕಾರಿಗಳು ಸ್ಥಳೀಯ ಚುನಾವಣೆ ಆರಂಭಿಸಿ ಉಕ್ರೇನ್‌ಗೆ ಆಘಾತ ನೀಡಿದ್ದಾರೆ.

ರಷ್ಯಾ ಹೂಡಿರುವ ರಣತಂತ್ರ ಏನು?
ಅಷ್ಟಕ್ಕೂ ಉಕ್ರೇನ್ ಚುನಾವಣೆ ಎದುರಿಸಿ ಈಗಾಗಲೇ 4 ವರ್ಷ ಕಳೆದಿದೆ ಮುಂದಿನ ವರ್ಷ 5 ವರ್ಷ ಮುಗಿಯಲಿದೆ. ಆಗ ಚುನಾವಣೆ ನಡೆಸಬೇಕಿದ್ದು, ಈ ಬಗ್ಗೆ ಈಗಾಗಲೇ ಉಕ್ರೇನ್ ಅಧ್ಯಕ್ಷ ಕೂಡ ಮಾತನಾಡಿದ್ದರು. ಆದರೆ ಥಟ್ ಅಂತಾ ಅಲರ್ಟ್ ಆಗಿರುವ ರಷ್ಯಾ ಸೇನೆ, ರಷ್ಯಾ ಅಧ್ಯಕ್ಷ ಪುಟಿನ್ ಹೊಸ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ರಷ್ಯಾ ತನ್ನ ಹಿಡಿತಕ್ಕೆ ತೆಗೆದುಕೊಂಡಿರುವ ಡೊನೆಟ್ಸ್ಕ್, ಲುಹಾನ್ಸಕ್, ಕೆರ್ಸಾನ್ & ಝಪೊರಿಝಿಯಾ ಪ್ರದೇಶದಲ್ಲಿ ಚುನಾವಣೆ ಪ್ರಕ್ರಿಯೆ ಆರಂಭಿಸಿದೆ. ಇಂದಿನಿಂದ ಮತದಾನ ಆರಂಭ ಆಗಿದ್ದು, ಭಾನುವಾರ ಮತದಾನ ಪ್ರಕ್ರಿಯೆ ಕೂಡ ಕೊನೆಯಾಗಲಿದೆ.
ಚುನಾವಣೆ ಮಾಡಿದ್ದಕ್ಕೆ ಬಾಂಬ್ ಬೀಳುತ್ತಾ?
ಮತ್ತೊಂದು ಕಡೆ ರಷ್ಯಾ ಹೀಗೆ ಚುನಾವಣೆ ನಡೆಸುತ್ತಿರುವ ಬಗ್ಗೆ ಉಕ್ರೇನ್ ಸರ್ಕಾರ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಆಕ್ರೋಶ ಹೊರಹಾಕಿವೆ. ಏಕೆಂದರೆ ಚುನಾವಣೆ ನಡೆಯುತ್ತಿರುವ ಪ್ರದೇಶಗಳು ಇನ್ನೂ ಸಂಪೂರ್ಣವಾಗಿ ರಷ್ಯಾದ ಹಿಡಿತಕ್ಕೆ ಒಳಪಟ್ಟಿಲ್ಲ. ಆದರೆ ಚುನಾವಣಾ ಪ್ರಕ್ರಿಯೆ ನಡೆಸುತ್ತಿರುವ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿವೆ. ಇದು 'ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ. ರಷ್ಯಾ ಇದನ್ನು ನಿರಂತರವಾಗಿ ಕಡೆಗಣಿಸುತ್ತಾ ಬರುತ್ತಿದೆ' ಎಂದು ಕೌನ್ಸಿಲ್ ಆಫ್ ಯುರೋಪ್ ಆರೋಪಿಸಿದೆ. ಹಾಗೇ 'ಯುದ್ಧ ಪೀಡಿತ ಪ್ರದೇಶದಲ್ಲಿ ಮತದಾನ ನಡೆಸುವುದು ಉಕ್ರೇನ್ ಜನರ ಜೀವಕ್ಕೆ ಅಪಾಯ ತರುತ್ತಿದೆ' ಎಂದು ಉಕ್ರೇನ್‌ನ ಆಡಳಿತ ಆರೋಪಿಸಿದೆ.

ಉಕ್ರೇನ್ ಪರ ನಿಂತಿರುವ ಅಮೆರಿಕ
ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡುತ್ತಿದೆ. ಇದೇ ಕಾರಣಕ್ಕೆ ರಷ್ಯಾ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿ ಉಕ್ರೇನ್‌ನ ಹೃದಯ ಭಾಗಗಳಿಗೆ ಆಘಾತ ನೀಡುತ್ತಿದೆ. ಇದು ಸಾಲದು ಎಂಬಂತೆ ದಿಢೀರ್ ರಷ್ಯಾ ಅಧಿಕಾರಿಗಳು ಉಕ್ರೇನ್‌ನ, ರಷ್ಯಾ ವಶದಲ್ಲಿ ಇರುವ ಪ್ರಾಂತ್ಯಗಳಲ್ಲಿ ಚುನಾವಣೆ ಆರಂಭಿಸಿದ್ದಾರೆ. ಈ ಮೂಲಕ ಮತ್ತೆ ಯುದ್ಧದಲ್ಲಿ ರಷ್ಯಾ ಸೇನೆ ಉಕ್ರೇನ್‌ಗೆ ಶಾಕ್ ಕೊಟ್ಟಿದೆ.
ಒಟ್ನಲ್ಲಿ ರಷ್ಯಾ ಮತ್ತು ಅಮೆರಿಕದ ಪರೋಕ್ಷ ತಿಕ್ಕಾಟದ ನಡುವೆ ಉಕ್ರೇನ್ ಅಪ್ಪಚ್ಚಿ ಆಗಿ, ಇನ್ನೇನು ವಿನಾಶವಾಗುವ ಹಂತಕ್ಕೆ ಬಂದಿದೆ ಎಂಬ ಆರೋಪ ಕೇಳಿಬರುತ್ತಿದೆ. ಅದರಲ್ಲೂ ರಷ್ಯಾ ಈಗ ಜಿದ್ದಿಗೆ ಬಿದ್ದು, ಯುದ್ಧದಲ್ಲಿ ನರಳಿರುವ ಪ್ರದೇಶಗಳಲ್ಲಿ ಮತದಾನ ನಡೆಸಿದೆ. ಇದು ಉಕ್ರೇನ್ ಪಿತ್ತ ನೆತ್ತಿಗೇರಿಸಿದ್ದು, ಮುಂದೆ ಈ ವಿಚಾರವಾಗಿ ಎರಡೂ ದೇಶಗಳ ಮಧ್ಯೆ ತಿಕ್ಕಾಟ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ. ಇದನ್ನೆಲ್ಲಾ ಬಿಡಿ ಈಗ ಚುನಾವಣೆ ಶುರುವಾದ ಹಿನ್ನೆಲೆ ಉಕ್ರೇನ್ ಜನರು ಜೀವ ಕೈಯಲ್ಲಿ ಹಿಡಿದು ಮತ ಹಾಕುವ ಸ್ಥಿತಿ ಎದುರಾಗಿದೆ.












Click it and Unblock the Notifications