Hindu Temple: ಕೆನಡಾದಲ್ಲಿ ಮುಂದುವರಿದ ಖಲಿಸ್ತಾನಿಗಳ ಕಿರಿಕ್!
ಟೊರಾಂಟೊ: ಭಾರತದ ಜೊತೆಗೆ ಖಲಿಸ್ತಾನಿಗಳ ಕಿರಿಕ್ ಮುಂದುವರಿದಿದ್ದು, ಇದೀಗ ಈ ತಿಕ್ಕಾಟ ಬೇರೆಯದ್ದೇ ರೂಪ ಪಡೆದಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ಹಿಂದೂ ದೇವಾಲಯವನ್ನ ಖಾಲಿಸ್ತಾನಿ ಬೆಂಬಲಿಗರು ಧ್ವಂಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ಖಾಲಿಸ್ತಾನಿ ಬೆಂಬಲಿಗರ ಮೇಲಿರುವ ಕೋಪವನ್ನ ಡಬಲ್ ಮಾಡಿದೆ.
ಅಂದಹಾಗೆ ಕೆನಡಾದಲ್ಲಿ ಭಾರತೀಯರು ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಅಲ್ಲಿ ಹೋಗಿ ನೆಲೆಸಿರುವ ವಿದೇಶಿಯರ ಪೈಕಿ ಭಾರತಿಯರ ಪ್ರಮಾಣವು ಬಹು ದೊಡ್ಡದಾಗಿದೆ. ಹಿಂದೂ ದೇಗುಲಗಳ ಸಂಖ್ಯೆ ಕೂಡ ಹೆಚ್ಚಾಗೇ ಇದೆ. ಹೀಗೆ ಕೆನಡಾದ ಸರ್ರೆಯ ಲಕ್ಷ್ಮಿ ನಾರಾಯಣ ಮಂದಿರದ ಮೇಲೆ ಇದೀಗ ದಾಳಿ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ದೇವಾಲಯದ ಫೇಸ್‌ಬುಕ್ ಪುಟದ ಪ್ರಕಾರ, ಆಗಸ್ಟ್ 12 ರಂದು ತಡರಾತ್ರಿ 12.29ಕ್ಕೆ ದೇಗುಲದ ಗೋಡೆ ಹಾರಿ ಒಬ್ಬ ಪುರುಷ & ಮಹಿಳೆ ಬಂದು #Khalistanreferendum ಪೋಸ್ಟರ್‌ಗಳನ್ನು ಮಂದಿರದ ಮುಖ್ಯ ಪ್ರವೇಶ ದ್ವಾರದಲ್ಲಿ ಅಂಟಿಸಿದ್ದಾರೆ ಎಂದು ಪೋಸ್ಟ್‌ನಲ್ಲಿ ಆರೋಪ ಮಾಡಲಾಗಿದೆ.

ಭಾರತದಿಂದ ಖಡಕ್ ರಿಯಾಕ್ಷನ್!
ಕಳೆದ ಕೆಲವು ತಿಂಗಳಿಂದ ಖಲಿಸ್ತಾನಿಗಳ ಕಿರಿಕ್ ಬಲು ಜೋರಾಗಿದೆ. ಇದೀಗ ಕೆನಡಾದಲ್ಲಿ ಖಾಲಿಸ್ತಾನ್ ಬೆಂಬಲಿಗರು ಹಿಂದೂ ದೇಗುಲದ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿರುವ ಭಾರತ, ಕೃತ್ಯ ಎಸಗಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ನ್ಯಾಯ ಬೇಕಿದ್ದರೆ ಕಾನೂನು ಮಾರ್ಗ ಅನುಸರಿಸಬೇಕು. ಪವಿತ್ರ ಸ್ಥಳವನ್ನು ಅವಮಾನಿಸುವುದು ಸರಿಯಲ್ಲ ಎಂದು ದೇಗುಲದ ವೆಬ್‌ಸೈಟ್ ಸೂಕ್ತ ರೀತಿಯಲ್ಲಿ ಉತ್ತರ ನೀಡಿದೆ.
ಏನಿದು ಖಲಿಸ್ತಾನಿ ಬೆಂಬಲಿಗರ ಉಪಟಳ?
ಇದೆಲ್ಲಾ ಹಾಗಿರಲಿ, ಇನ್ನೊಂದ್ಕಡೆ ದೇಗುಲದ ಬಳಿ ನಡೆದ ಘಟನೆ ಕೆನಡಾದ ಭಾರತೀಯ ಸಮುದಾಯದ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ಟೊರಾಂಟೊದ ಭಾರತದ ಕಾನ್ಸಲ್ ಜನರಲ್ ತಿಳಿಸಿದ್ದಾರೆ. ಹೀಗೆ ಭಾರತದ ವಿರುದ್ಧ ಪದೇ ಪದೆ ಇಂತಹ ಕಿಡಿಗೇಡಿ ಕೆಲಸ ಮಾಡುತ್ತಿರುವವರ ಬಗ್ಗೆ ಆಕ್ರೋಶ ಕೂಡ ವ್ಯಕ್ತವಾಗಿದೆ. ಆದರೂ ತಮ್ಮ ಬುದ್ಧಿ ಬಿಡದ ಖಲಿಸ್ತಾನಿಗಳು ಭಾರತದ ವಿರುದ್ಧ ಕೆಂಡ ಕಾರುತ್ತಿದ್ದಾರೆ. ಅದರಲ್ಲೂ ಭಾರತೀಯ ಸಮುದಾಯದ ಪ್ರದೇಶಗಳನ್ನ & ಭಾರತದ ರಾಯಭಾರ ಕಚೇರಿಗಳನ್ನೇ ಟಾರ್ಗೆಟ್ ಮಾಡಿ ಪ್ರತಿಭಟನೆ ಹಾಗೂ ದಾಳಿ ನಡೆಸುತ್ತಿರುವ ಆರೋಪ ಕೇಳಿಬರುತ್ತಿದೆ.

ಖಲಿಸ್ತಾನಿಗಳ ಬಲ ಎಲ್ಲೆಲ್ಲಿ ಹೆಚ್ಚಾಗಿದೆ?
ಹೌದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಬಲ ಹೊಂದಿರುವ ಖಲಿಸ್ತಾನಿ ಬೆಂಬಲಿಗ ಪಡೆ ಈಗ ಭಾರತದ ವಿರುದ್ಧ ಷಡ್ಯಂತ್ರ ಮಾಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಭಾರತದ ವಿರುದ್ಧ ಪದೇ ಪದೆ ಈ ರೀತಿ ಕೃತ್ಯ ನಡೆಯುತ್ತಿದೆ. ಅಮೆರಿಕ ಸೇರಿ ಕೆನಡಾದ ಬಹುಭಾಗದಲ್ಲಿ ಖಲಿಸ್ತಾನಿ ಬೆಂಬಲಿಗರು ವಾಸವಿದ್ದು, ನ್ಯೂಜಿಲ್ಯಾಂಡ್ & ಆಸ್ಟ್ರೇಲಿಯಾದ ಕೆಲ ಭಾಗಗಳಲ್ಲೂ ಖಲಿಸ್ತಾನಿ ಬೆಂಬಲಿಗರು ಭಾರತದ ವಿರುದ್ಧ ಷಡ್ಯಂತ್ರ ನಡೆಸುತ್ತಿರುವ ಆರೋಪವಿದೆ. ಆದರೆ ಈ ಮಧ್ಯೆ ಕೆನಡಾ ಸರ್ಕಾರ ಕೆಲ ತಿಂಗಳ ಹಿಂದಷ್ಟೇ ನೇರವಾಗಿ ಖಲಿಸ್ತಾನಿಗಳ ವಿರುದ್ಧ ಎಚ್ಚರಿಕೆ ಸಂದೇಶ ರವಾನಿಸಿತ್ತು. ಇಷ್ಟಾದರೂ ಪ್ರಯೋಜನ ಆಗುತ್ತಿಲ್ಲ, ದಾಳಿ ನಿಲ್ಲುತ್ತಿಲ್ಲ.
ಕೆನಡಾ ಸರ್ಕಾರ ನೇರ ವಾರ್ನಿಂಗ್ ಕೊಟ್ಟಿದ್ದರೂ ಖಲಿಸ್ತಾನಿ ಬೆಂಬಲಿಗರು ತೆಪ್ಪಗೆ ಕೂರುತ್ತಿಲ್ಲ. ಹೀಗಾಗಿ ಭಾರತೀಯರು ಕೂಡ ಈಗ ಭಾರತದ ಪರವಾಗಿ ಬೆಂಬಲ ನೀಡುತ್ತಾ ಖಲಿಸ್ತಾನಿಗಳ ಕೃತ್ಯ ವಿರೋಧಿಸುತ್ತಿದ್ದಾರೆ. ಆದರೂ ಭಾರತದ ಶತ್ರು ದೇಶಗಳ ಬೆಂಬಲದಿಂದ ಖಲಿಸ್ತಾನಗಳು ಹೀಗೆ ವರ್ತಿಸುತ್ತಿರುವ ಆರೋಪ ಇದೆ. ಕೇಂದ್ರ ಸರ್ಕಾರ ಕೂಡ ಇಂಥ ವಿಚಾರವನ್ನ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ. ಎಷ್ಟೇ ಕ್ರಮ ಜರುಗಿಸಿದ್ದರೂ ಖಲಿಸ್ತಾನಿಗಳ ಕಿರಿಕ್ ಮುಂದುವರಿಯತ್ತಿದೆ. ಹೀಗಾಗಿ ಭಾರತೀಯರು ಕೂಡ ಸರಿಯಾಗೇ ಪ್ರತ್ಯುತ್ತರವನ್ನ ನೀಡುತ್ತಿದ್ದಾರೆ. ಅಂತಿಮವಾಗಿ ಈ ತಿಕ್ಕಾಟ ಎಲ್ಲಿಗೆ ಬಂದು ನಿಲ್ಲುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.












Click it and Unblock the Notifications