Vladimir Putin: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹತ್ಯೆಗೆ ಸ್ಕೆಚ್?
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೀವಕ್ಕೆ ಪದೇ ಪದೇ ಆಪತ್ತು ಎದುರಾಗುತ್ತಿದೆ. ಈ ಹಿಂದೆ ಕೂಡ ಹಲವು ಬಾರಿ ವ್ಲಾದಿಮಿರ್ ಪುಟಿನ್ ಅವರ ಕೊಲೆಗೆ ಸ್ಕೆಚ್ ಹಾಕಿ ವಿಫಲವಾಗಿದ್ದ ಶತ್ರು ಪಡೆ ಇದೀಗ, ಪುಟಿನ್ ಅವರ ಅಧಿಕೃತ ಸರ್ಕಾರಿ ಕಾರನ್ನೇ ಸ್ಫೋಟ ಮಾಡಿತಾ? ಈ ಅನುಮಾನ ಮೂಡಲು ಕಾರಣವಾಗಿರುವುದು ರಷ್ಯಾ ರಾಜಧಾನಿಯಲ್ಲಿ ಸಂಭವಿಸಿರುವ ಕಾರು ಸ್ಫೋಟದ ವಿಡಿಯೋ ತುಣುಕು. ಹಾಗಾದ್ರೆ ವ್ಲಾದಿಮಿರ್ ಪುಟಿನ್ ಈಗ ಎಲ್ಲಿದ್ದಾರೆ? & ಹೇಗಿದ್ದಾರೆ?
ರಷ್ಯಾ & ಉಕ್ರೇನ್ ಯುದ್ಧವು ನಡೆಯುತ್ತಿರುವ ಸಮಯದಲ್ಲಿ, ಪದೇ ಪದೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಜೀವಕ್ಕೆ ಕಂಟಕ ಎದುರಾಗುತ್ತಿದೆ. ವ್ಲಾದಿಮಿರ್ ಪುಟಿನ್ ಅವರ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮೇಲೆ ಕೂಡ, 2023ರ ಸಮಯದಲ್ಲಿ ಡೆಡ್ಲಿ ಡ್ರೋನ್ ಅಟ್ಯಾಕ್ ಮಾಡಲಾಗಿತ್ತು. ಉಕ್ರೇನ್ ಈ ರೀತಿಯ ಕುತಂತ್ರ ಮಾಡಿದೆ ಎಂಬ ಆರೋಪ ಆಗಿನ ಸಮಯದಲ್ಲಿ ಕಿಚ್ಚು ಹೊತ್ತಿಸಿತ್ತು. ಹೀಗಿದ್ದಾಗ ಇಂದು ಮತ್ತೊಮ್ಮೆ ವ್ಲಾದಿಮಿರ್ ಪುಟಿನ್‌ರ ಕೊಲೆಗೆ ಸ್ಕೆಚ್ ಹಾಕಿ ವಿಫಲ ಯತ್ನ ಮಾಡಿರುವ ಆರೋಪ ಕೇಳಿಬಂದಿದೆ.

ವ್ಲಾದಿಮಿರ್ ಪುಟಿನ್ ಜೀವಕ್ಕೆ ಕಂಟಕ?
ಅಂದಹಾಗೆ ಈಗ ಸ್ಫೋಟಗೊಂಡಿರುವ ವ್ಲಾಡಿಮಿರ್ ಪುಟಿನ್ ಅವರ ಅಧಿಕೃತ ಕಾರು ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಲುಬಿಯಾಂಕದಲ್ಲಿ ಇರುವ ಮಾಸ್ಕೋದ ಎಫ್‌ಎಸ್‌ಬಿ ರಹಸ್ಯ ಸೇವೆ ಪ್ರಧಾನ ಕಚೇರಿ ಬಳಿಯೇ ಈ ಸ್ಫೋಟ ಸಂಭವಿಸಿದೆ. ಮಾರ್ಚ್ 29 ರಂದು ಈ ರೀತಿ ರಷ್ಯಾ ಅಧ್ಯಕ್ಷರ ಕಾರು ಸ್ಫೋಟವಾಗಿದ್ದು, ದಿಢೀರ್ ಈ ರೀತಿ ಕಾರು ಸ್ಫೋಟಕ್ಕೆ ಕಾರಣ ಏನು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ಯಾರಿಗೂ ಪ್ರಾಣಹಾನಿ ಆಗಿಲ್ಲ & ಈ ಬಗ್ಗೆ ತನಿಖೆ ಆರಂಭವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿ ಹಲ್‌ಚಲ್ ಎಬ್ಬಿಸಿದೆ. ಈ ನಡುವೆ ರಷ್ಯಾ ಅಧ್ಯಕ್ಷರ ಭದ್ರತೆ ಮತ್ತಷ್ಟು ಹೆಚ್ಚಿಸಲಾಗಿದೆ.
ಉಕ್ರೇನ್ ವಿರುದ್ಧ ರಷ್ಯಾ ಡ್ರೋನ್ ಅಟ್ಯಾಕ್
ರಷ್ಯಾ & ಉಕ್ರೇನ್‌ನ ನಡುವೆ ಸಂಧಾನ ಮಾತುಕತೆ ನಡೆಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ತಮ್ಮ ಸರ್ಕಾರದ ಅಧಿಕಾರಿಗಳ ತಂಡವನ್ನು ಸೌದಿ ಅರೇಬಿಯಾದಲ್ಲಿ ನಿಯೋಜನೆ ಮಾಡಿದ್ದಾರೆ ಡೊನಾಲ್ಡ್ ಟ್ರಂಪ್. ಹೀಗೆ ಒಂದು ಕಡೆ ಅಮೆರಿಕದ ಸರ್ಕಾರ ಈ ಯುದ್ಧವನ್ನು ನಿಲ್ಲಿಸಲು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ಆದರೆ ರಷ್ಯಾ & ಉಕ್ರೇನ್ ಮಾತ್ರ ಟ್ರಂಪ್ ಪಡುತ್ತಿರುವ ಶ್ರಮಕ್ಕೆ ಬೆಲೆಯನ್ನೇ ನೀಡದವರಂತೆ ಯುದ್ಧ ಮಾಡುತ್ತಿವೆ. ಅದೇ ರೀತಿ ದಿಢೀರ್ ರಷ್ಯಾ ಸೇನೆಯಿಂದ ಭೀಕರವಾದ ಡ್ರೋನ್ ದಾಳಿ ಕೂಡ ನಡೆದಿದೆ.












Click it and Unblock the Notifications