ಐಎಎಫ್ ಪೈಲಟ್ ಅಭಿನಂದನ್ ಗೆ ಸಂಬಂಧಿಸಿದ 11 ವಿಡಿಯೋ ಬಂದ್
ಬೆಂಗಳೂರು, ಮಾರ್ಚ್ 01: ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್, ಪೈಲಟ್ ಅಭಿನಂದನ್ ವರ್ತಮಾನ್ ಅವರಿಗೆ ಸಂಬಂಧಿಸಿದ 11 ಆಕ್ಷೇಪಾರ್ಹ ವಿಡಿಯೋಗಳನ್ನು ಗೂಗಲ್ ಸ್ವಾಮ್ಯದ ಯೂಟ್ಯೂಬಿನಿಂದ ತೆಗೆದು ಹಾಕಲಾಗಿದೆ.
ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯಿಂದ ಈ ವಿಡಿಯೋಗಳನ್ನು ತೆಗೆದು ಹಾಕುವಂತೆ ಮನವಿ ಬಂದಿತ್ತು. ಆಯಾ ನೆಲದ ಕಾನೂನಾತ್ಮಕ ವಿಷಯಗಳಿಗೆ ನಾವು ಬೆಲೆ ನೀಡುತ್ತೇವೆ. ತಕ್ಷಣವೇ ಮನವಿಯನ್ನು ಪುರಸ್ಕರಿಸಿ, ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ ಎಂದು ಗೂಗಲ್ ಸಂಸ್ಥೆ ವಕ್ತಾರರು ಹೇಳಿದ್ದಾರೆ.
ಪಾಕಿಸ್ತಾನದ ಎಫ್ 16 ವಿಮಾನವನ್ನು ಹೊಡೆದುರುಳಿಸುವ ಭರದಲ್ಲಿ ಮಿಗ್ 21ರಲ್ಲಿದ್ದ ಪೈಲಟ್ ಅಭಿನಂದನ್ ಅವರು ಪಾಕ್ ಗಡಿ ಪ್ರವೇಶಿಸಿದ್ದಾರೆ. ಯುದ್ಧ ವಿಮಾನದಿಂದ ಪ್ಯಾರಚ್ಯೂಟ್ ಬಳಸಿ ನೆಲಕ್ಕೆ ಬಿದ್ದ ಅಭಿನಂದನ್ ಅವರನ್ನು ಪಾಕಿಸ್ತಾನಿ ಸೇನೆ ಸೆರೆ ಹಿಡಿದಿತ್ತು.

ಅಭಿನಂದನ್ ಅವರು ಸೆರೆ ಸಿಕ್ಕಾಗ ಅವರ ಮೇಲೆ ಹಲ್ಲೆಯಾಗಿದೆ. ಮುಖ ರಕ್ತಮಯವಾಗಿದೆ. ಪಾಕ್ ಸೈನಿಕರು ಹಲ್ಲೆ ಮಾಡಿದ್ದಾರೆ. ಕಣ್ಣುಪಟ್ಟಿ ಕಟ್ಟಿ ಹಿಂಸೆ ನೀಡಿದ್ದಾರೆ ಎಂಬ ವಿಡಿಯೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ಬುಧವಾರದಿಂದಲೆ ಹರಿದಾಡುತ್ತಿದ್ದವು. ಜಿನೀವಾ ಒಪ್ಪಂದ ಹಾಗೂ ಅಂತಾರಾಷ್ಟ್ರೀಯ ಮಾನವತಾವಾದ ಕಾನೂನಿನ ಪ್ರಕಾರ ಈ ರೀತಿ ಯಾವುದೇ ದೇಶದ ಯುದ್ಧ ಕೈದಿಯ ಕುರಿತ ಮಾಹಿತಿ, ಚಿತ್ರ ಹಾಗೂ ವಿಡಿಯೋಗಳನ್ನು ಯಾವ ದೇಶ ಕೂಡಾ ಪ್ರಸಾರ ಮಾಡುವಂತಿಲ್ಲ.
ಜಾಗತಿಕ ಮಟ್ಟದಲ್ಲಿ ಭಾರಿ ಒತ್ತಡ ಕಂಡು ಬಂದಿದ್ದರಿಂದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಜಂಟಿ ಸಂಸತ್ ಅಧಿವೇಶನದಲ್ಲಿ, ಐಎಎಫ್ ಪೈಲಟ್ ಅಭಿನಂದನ್ ಅವರನ್ನು ಶುಕ್ರವಾರ ಮಧ್ಯಾಹ್ನ ಬಿಡುಗಡೆ ಮಾಡುವುದಾಗಿ ಘೋಷಿಸಿದರು.












Click it and Unblock the Notifications