ಪತ್ನಿಗೆ ಕರೆ ಮಾಡಿದ ಯಾಸಿನ್ ಭಟ್ಕಳ ಇನ್ ಟ್ರಬಲ್!
ನವದೆಹಲಿ, ಜುಲೈ, 04: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ ಹೈದರಾಬಾದಿನ ಜೈಲಿನಲ್ಲಿದ್ದುಕೊಂಡೇ ತನ್ನ ಪತ್ನಿಗೆ ಫೋನ್ ಕರೆ ಮಾಡಿ ಸಿಕ್ಕಿಬಿದ್ದಿದ್ದಾನೆ. ಪತ್ನಿಗೆ ಕರೆ ಮಾಡಿ ಸಮಸ್ಯೆಯಲ್ಲಿ ಮತ್ತೊಮ್ಮೆ ಸಿಲುಕಿದ್ದಾನೆ.
ಯಾಸಿನ್ ಭಟ್ಕಳ ಕರೆ ಮಾಡಿದ ನಂಬರ್ ಐಎಸ್ ಐಎಸ್ ಉಗ್ರರಿಗೆ ಸಂಪರ್ಕ ಸಾಧಿಸುತ್ತಿರುವುದು ಕಂಡು ಬಂದಿದೆ ಎಂದು ಸಿಬಿಐಗೆ ತಿಳಿದು ಬಂದಿದೆ. ಡಮಾಸ್ಕಸ್ ನಿಂದ ನೆರವು ಪಡೆದುಕೊಂಡು ಜೈಲಿನಿಂದ ಹೊರಬರಲು ಸಂಚು ರೂಪಿಸಲಾಗಿದೆ ಎಂದು ಪತ್ನಿ ಜೊತೆ ಮಾತನಾಡಿರುವುದು ಪತ್ತೆಯಾಗಿದೆ. ಎಸ್ಕೇಪ್ ಯೋಜನೆ ಬಗ್ಗೆ ಸ್ವತಃ ಯಾಸಿನ್ ಬಾಯಿಬಿಟ್ಟಿದ್ದಾನೆ.
ಈ ಹಿಂದೆ ದೆಹಲಿಯ ಜೈಲಿನಲ್ಲಿದ್ದಾಗಲೂ ಇದೇ ರೀತಿ ಪ್ರಕರಣ ನಡೆದಿತ್ತು. ಯಾಸಿನ್ ಅವರ ಗೆಳೆಯರು ಹೈಜಾಕ್ ಯೋಜನೆ ರೂಪಿಸಿದ್ದಾರೆ, ಜೈಲಿನಿಂದ ಎಸ್ಕೇಪ್ ಆಗುತ್ತಾನೆ ಎಂಬ ಸಂಚು ಹೊರಬಿದ್ದಿತ್ತು. ನಂತರ ಯಾಸಿನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.

ಯಾಸಿನ್ ಗೆ ಮುಳುವಾದ ಪತ್ನಿ ಜತೆ ಸಂಭಾಷಣೆ
ಪತ್ನಿ ಮೇಲಿನ ಮೋಹ ಯಾಸಿನ್ ಗೆ ಈಗ ಮುಳುವಾಗಿದೆ. ಜೈಲಿನಲ್ಲಿದ್ದುಕೊಂಡೇ ಪತ್ನಿ ಜೊತೆ ಫೋನ್ ಮೂಲಕ ಮಾತನಾಡಿರುವು ಯಾಸಿನ್ ಗೆ ಭಾರಿ ಹೊಡೆತ ನೀಡಬಹುದು. ಕಳೆದ ಬಾರಿ ಕೂಡಾ ನೇಪಾಳದಲ್ಲಿದ್ದುಕೊಂಡು ಪತ್ನಿಗೆ ಕರೆ ಮಾಡಿದ್ದು ಮುಳುವಾಗಿತ್ತು.
ಯಾಸಿನ್ ಇದ್ದ ಪ್ರದೇಶವನ್ನು ಟ್ರ್ಯಾಕ್ ಮಾಡಿ ಚೇಸ್ ಮಾಡಿ ಹಿಡಿಯಲು ಸಾಧ್ಯವಾಗಿತ್ತು. ಪಾಕಿಸ್ತಾನ ಗಡಿ ಸೇರುವ ಆಸೆ ಹೊಂದಿದ್ದ ಯಾಸಿನ್, ನೇಪಾಳದ ಗಡಿಯಿಂದ ದೆಹಲಿಯಲ್ಲಿದ್ದ ಪತ್ನಿಗೆ ಕರೆ ಮಾಡಿ ಹಣದ ವಿಷಯ ಹೇಳಿದ್ದ. ಸಾಮಾನ್ಯವಾಗಿ ತಂತ್ರಜ್ಞಾನ ಬಳಕೆಯಲ್ಲಿ ದಡ್ಡನಾದ ಯಾಸಿನ್ ಗೆ ಫೋನ್ ಕರೆ ಮತ್ತೆ ಮತ್ತೆ ತೊಂದರೆಗೆ ಸಿಲುಕಿಸುತ್ತಿದೆ.
ಐಎಸ್ಐಎಸ್ ನೆರವಿನ ಬಗ್ಗೆ ಸುಳಿವು
ಡಮಾಸ್ಕಸ್ ನಲ್ಲಿರುವ ಗೆಳೆಯರು ನನಗೆ ಸಹಾಯ ಹಸ್ತ ಚಾಚಿದ್ದಾರೆ ಎಂದು ಯಾಸಿನ್ ಹೇಳಿದ್ದಾನೆ. ಐಎಸ್ ಐಎಸ್ ಬಗ್ಗೆ ಈ ಮೂಲಕ ತಿಳಿಸಿದ್ದಾನೆ. ಹೈದರಾಬಾದಿನ ಚೆರ್ಲಪಲ್ಲಿ ಸೆಂಟ್ರಲ್ ಜೈಲಿನಿಂದ ಆದಷ್ಟು ಬೇಗ ಹೊರಬರಲು ಯೋಜನೆ ಸಿದ್ಧವಾಗಿದೆ ಎಂದು ಪತ್ನಿ ಜೊತೆ ಮಾತನಾಡುವಾಗ ಯಾಸಿನ್ ಹೇಳಿದ್ದಾನೆ ಎನ್ನಲಾಗಿದೆ. ಇದರಿಂದ ಇರಾಕಿ ಉಗ್ರರ ಜೊತೆ ಯಾಸಿನ್ ಸಂಪರ್ಕ ಸಾಧಿಸಿರುವುದು ಸ್ಪಷ್ಟವಾಗಿದೆ.
ಸಿರಿಯಾದಲ್ಲಿ ಐಎಎಸ್ಐಎಸ್ ಉಗ್ರರ ಕದನ ನಡೆಯುವ ಸಂದರ್ಭದಲ್ಲೇ ಜೈಲಿನಿಂದ ಹೊರ ಬರುವ ಬಗ್ಗೆ ಯಾಸಿನ್ ಉತ್ಸುಕನಾಗಿದ್ದ. ಇರಾಕಿ ಉಗ್ರರಿಗೆ ನೆರವಾಗುವ ವಿಷಯದಲ್ಲಿ ಇಂಡಿಯನ್ ಮುಜಾಹಿದ್ದೀನ್ ನಲ್ಲಿ ಎರಡು ಬಣಗಳು ಸೃಷ್ಟಿಯಾಗಿದ್ದು,ಅನ್ಸಾರ್ ಉತ್ ತಾವ್ಹಿಂದ್ ಸ್ಥಾಪಿಸಿದ ಸುಲ್ತಾನ್ ಅರ್ಮಾರ್ ಬಣದ ಬೆಂಬಲಕ್ಕೆ ಯಾಸಿನ್ ನಿಂತಿದ್ದಾನೆ.












Click it and Unblock the Notifications